ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ ವಿವಿಧೆಡೆಗಳಲ್ಲಿ ಹೆಚ್ಚಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಮತ್ತು ದೊಡ್ಡ ಸಂಖ್ಯೆಯ ಶಿಕ್ಷಕ ವೃಂದವನ್ನು ಹೊಂದಿದ್ದರು.
ಶಿಕ್ಷಕ ಎಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದರ(ಸ) ಜೀವನದಿಂದ ನಾವು ಗಳಿಸಬೇಕಾದ ಪಾಠಗಳು ಸಾಕಷ್ಟಿವೆ. ಇವುಗಳ ಪೈಕಿ ಮೊದಲನೆಯದು ಅವರ ಮಾದರಿ ಜೀವನ. ಪ್ರವಾದಿ ಮುಹಮ್ಮದರು(ಸ) ಸದಾ ಹೇಳುತ್ತಿದ್ದುದನ್ನು ಜೀವನದಲ್ಲಿಯೂ ಪಾಲಿಸಿ ತೋರಿಸುತ್ತಿದ್ದರು. ಇದರಿಂದಾಗಿ ಜನರಿಗೆ ಅವರನ್ನು ಅನುಸರಿಸಲು ಸುಲಭವಾಯಿತು. ಇತರರಿಗೆ ಬೋಧಿಸುತ್ತಾ ಎಲ್ಲ ವಿಷಯಗಳನ್ನು ಚಾಚು ತಪ್ಪದೆ ಸ್ವಂತ ಪಾಲಿಸಿದಾಗ ಜನರಿಗೆ ಅವರ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುತ್ತದೆ. ಇದರ ಕಾರಣದಿಂದಾಗಿ ಅವರಿಂದ ಶಿಕ್ಷಣವನ್ನು ಗಳಿಸಿದವರ ಜೀವನದಲ್ಲಿಯೂ ಅವರ ಶಿಕ್ಷಣ ತರಬೇತಿಯ ಪ್ರತಿಫಲನವು ಕಂಡುಬರುತ್ತಿತ್ತು. ನಮ್ಮ ಶಿಕ್ಷಕ ವೃಂದವು ಈ ಆದರ್ಶವನ್ನು ಅಳವಡಿಸಿಕೊಂಡರೆ ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಖಂಡಿತ ಸಹಾಯಕವಾಗಬಹುದು.
ಯಾರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರೋ ಅವರೊಂದಿಗೆ ಪ್ರವಾದಿಯವರು(ಸ) ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು. ಪ್ರವಾದಿಯವರ ಒಡನಾಟದಿಂದಾಗಿ ಅನೇಕ ಜನರು ಶೂನ್ಯದಿಂದ ಎತ್ತರಕ್ಕೆ ಬೆಳೆದರು. ಜೀತದಾಳು ಆಗಿದ್ದ ಬಿಲಾಲ್ ಆಪ್ತ ಸಂಗಾತಿಯಾಗಿ ಮಾರ್ಪಟ್ಟರು. ಜಗಳಗಂಟಿಯಾಗಿದ್ದ ಝುಬೇರ್ ಸೇನಾನಿಯಾಗಿ ಮಾರ್ಪಟ್ಟರು. ಮಿತಬಾಷಿಯಾಗಿದ್ದ ಮಿಸ್ಅಬ್ ಬಿನ್ ಉಮೈರ್ ಪ್ರವಚನಕಾರರಾದರು. ಬೇಟೆಗಾರರಾಗಿದ್ದ ಹಂಝ ಸೇನಾ ಪಡೆಯ ನಾಯಕರಾದರು. ಮುಂಗೋಪಿಯಾಗಿದ್ದ ಉಮರ್ ನಾಯಕರಾಗಿ ಮಾರ್ಪಟ್ಟರು. ಗೃಹಿಣಿ ಯಾಗಿದ್ದ ಆಯಿಷ ಉಪದೇಶಕಿ ,ವೈದ್ಯಕೀಯ ಮತ್ತು ಸಂಖ್ಯಾಶಾಸ್ತ್ರದ ತಜ್ಞೆಯಾಗಿ ಬೆಳೆದು ನಿಂತರು. ನಮ್ಮ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅವರ ಆಗುಹೋಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರೊಂದಿಗೆ ಒಡನಾಡಿದ್ದೆ ಆದರೆ ಖಂಡಿತವಾಗಿಯೂ ಮಕ್ಕಳ ಪ್ರತಿಭೆಗಳನ್ನು ಸಕಾರಾತ್ಮಕಾಗಿ ಬೆಳೆಸಬಹುದಾಗಿದೆ.
ಪ್ರವಾದಿಯವರು(ಸ) ಶಿಕ್ಷಣ ನೀಡುತ್ತಿದ್ದ ವಿಧಾನವೇ ಬಹಳ ಸುಂದರ .ವಿವಿಧ ರೀತಿಯ ಪರಿಕಲ್ಪನೆಗಳನ್ನು ವಿವರಿಸಲು ಹಲವಾರು ಉದಾಹರಣೆಗಳನ್ನು ಅವರು ಬಳಸುತ್ತಿದ್ದರು. ಸಾಮಾನ್ಯ ಮನುಷ್ಯನ ಮೆದುಳು ವಿಷಯವನ್ನು ಅರ್ಥಮಾಡಿಕೊಳ್ಳಲು ಹಲವಾರು ಮಿತಿಗಳನ್ನು ಹೊಂದಿರುತ್ತದೆ .ಆದುದರಿಂದ ಉದಾಹರಣೆಗಳ ಮೂಲಕ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಡಬಹುದಾಗಿದೆ.
ಪ್ರವಾದಿ ಮುಹಮ್ಮದರು(ಸ) ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮ ಇದೆಯೋ ಅವನ ಆಣೆ .ಸತ್ಯ ವಿಶ್ವಾಸಿಯ ಉದಾಹರಣೆಯು ಜೇನುನೊಣದಂತಿದೆ. ಅದು ಶುದ್ಧ ಮತ್ತು ಆರೋಗ್ಯಕರವಾದದನ್ನು ಮಾತ್ರ ತಿನ್ನುತ್ತದೆ. ಶುದ್ಧವಾದದನ್ನು ಮತ್ತು ಉಪಯುಕ್ತವಾದದ್ದನ್ನೇ ನೀಡುತ್ತದೆ.”
“ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡು ವ್ಯಥೆಪಡುವಂತಹ ವ್ಯಕ್ತಿಗೆ ಅನಿರೀಕ್ಷಿತವಾಗಿ ಆ ಒಂಟೆ ಮರಳಿ ಸಿಗುವಾಗ ಆಗುವ ಖುಷಿಗಿಂತಲೂ ತನ್ನ ಪಾಪಗಳಿಗೆ ಪ್ರಾಯಶ್ಚಿತಪಟ್ಟು ಮರಳುವ ದಾಸನ ಬಗ್ಗೆ ದೇವನು ಹೆಚ್ಚು ಸಂತೋಷಗೊಳ್ಳುತ್ತಾನೆ” ಈ ರೀತಿಯ ಮನಮುಟ್ಟುವ ಉದಾಹರಣೆಗಳನ್ನು ಯಾರು ಸುಲಭದಲ್ಲಿ ಮರೆತುಬಿಡುವುದಿಲ್ಲ .ನಮ್ಮ ಶಿಕ್ಷಕರು ಈ ಉದಾಹರಣೆಗಳ ಮೂಲಕ ಮಕ್ಕಳಿಗೆ ಪಾಠ ಮನದಟ್ಟು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.
ಕೆಲವರಿಗೆ ತಮ್ಮ ವಿದ್ವತ್ತನ್ನು ಅತಿಯಾಗಿ ಪ್ರದರ್ಶಿಸುವ ಅಭ್ಯಾಸವಿರುತ್ತದೆ. ಅಂತಹವರು ಕಠಿಣ ಪದಗಳನ್ನು ಬಳಸುವ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವ್ಯಕ್ತಿಗೆ ವಿಷಯ ಅರ್ಥವಾಗಬೇಕೆಂದರೆ ಅದು ಸರಳವಾಗಿರಬೇಕು. ಸಂಕ್ಷಿಪ್ತವಾಗಿರಬೇಕು ಮತ್ತು ನೇರವಾದ ನುಡಿಯಾಗಿರಬೇಕು. ಪ್ರವಾದಿ ಮುಹಮ್ಮದರ(ಸ) ಜೀವನದುದ್ದಕ್ಕೂ ಅವರು ಬಳಸಿದಂತಹ ಕೆಲವು ವಚನಗಳು ನಮ್ಮ ಗಮನವನ್ನು ಸೆಳೆಯುತ್ತದೆ. ಎಷ್ಟು ಸಣ್ಣ ಮತ್ತು ನೇರವಾದ ನುಡಿಗಳ ಮೂಲಕ ಒಂದು ದೊಡ್ಡ ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬ ಕಲೆಯನ್ನು ನಾವು ಪ್ರವಾದಿಯವರ ಶಿಕ್ಷಣ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸ್ವಚ್ಛತೆಯು ವಿಶ್ವಾಸದ ಅರ್ಧಾಂಶವಾಗಿದೆ. ಕುಡಿಯುವ ನೀರನ್ನು ಮೊದಲು ಗಮನಿಸಿ ನೋಡಿ. ವಿನಮ್ರತೆಯು ವಿಶ್ವಾಸದ ಒಂದು ಭಾಗವಾಗಿದೆ .ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ. ನಿಮ್ಮ ನೆರೆಹೊರೆಯವರಿಗೂ ನಿಮ್ಮ ಮೇಲೆ ಹಕ್ಕಿದೆ. ಸಭ್ಯತೆ ವಿಶ್ವಾಸದ ಅರ್ಧಾಂಶವಾಗಿದೆ. ಅನುಚಿತ ವರ್ತನೆಯು ಅನ್ಯಾಯವಾಗಿದೆ. ಈ ರೀತಿಯ ಸುಲಭವಾದ ನೇರವಾದ ಸಂದೇಶಗಳು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆನಪಿಟ್ಟುಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾಗುತ್ತದೆ.
ಕಲಿಕೆಯ ಮಧ್ಯೆ ವಿರಾಮ ನೀಡುವುದು ಬಹಳ ಮುಖ್ಯ. ಪ್ರವಾದಿಯವರು ಇದನ್ನು ಚೆನ್ನಾಗಿ ಬಳಸುತ್ತಿದ್ದರು. ಜನರಿಗೆ ಬೇಸರವಾಗದಂತೆ ಸೂಕ್ತ ಸಮಯವನ್ನು ಉಪದೇಶ ನೀಡಲು ಆರಿಸಿಕೊಳ್ಳುತ್ತಿದ್ದರು. ಧರ್ಮೋಪದೇಶ ಮತ್ತು ಜ್ಞಾನ ಸಂಪಾದನೆ ಸಹಚರರಿಗೆ ಬೇಸರ ಮತ್ತು ಹೊರೆಯಾಗದಂತೆ ನೋಡಿಕೊಂಡರು. ಕೆಲವೊಮ್ಮೆ ಅವರು ಸಹಚರರಿಗೆ ಹೊಸದಾಗಿ ಏನನ್ನು ಕಲಿಸುತ್ತಿರಲಿಲ್ಲ. ಅದಕ್ಕೆ ಅವರೊಡನೆ ಕಾರಣವನ್ನು ಕೇಳಿದಾಗ ಹೆಚ್ಚು ಹೊರೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು. ಪ್ರವಾದಿಯವರು ತರಬೇತಿಗಳ ನಡುವೆ ಮನಸ್ಸನ್ನು ಉಲ್ಲಾಸಗೊಳಿಸುವಂತೆ ವಿರಾಮ ನೀಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದರು. ಆಧುನಿಕ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಿಗಳ ಸುತ್ತ ಗಿರಕಿ ಹೊಡೆಯುತ್ತಿರುವುದರಿಂದ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಶಾಲೆಗಳು ಮರೆತಿವೆ. ಪಠ್ಯೇತರ ಚಟುವಟಿಕೆಗಳಿಗಾಗಿ ಆ ತೋಟಗಳಿಗಾಗಿ ಮೀಸಲಾಗಿರುವ ತರಗತಿಗಳನ್ನು ಇತರ ವಿಷಯಗಳನ್ನು ಕಲಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ವಿರಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುವ ಅವಕಾಶದಿಂದಲೂ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ವಿಶೇಷ ಗಮನವನ್ನು ಹರಿಸಬೇಕು.
ಪ್ರವಾದಿಯವರು(ಸ) ಎಂದೂ ಸುದೀರ್ಘವಾಗಿ ವಿಷಯ ಮಂಡನೆ ಮಾಡುತ್ತಿರಲಿಲ್ಲ. ಕೇಳುಗರು ಆಲಿಸಲು ಬಯಸಿದ್ದಾರೆ ಎಂಬAತಹ ಪರಿಸ್ಥಿತಿ ಇದ್ದ ಸ್ಥಳದಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಕೇಳುಗರನ್ನು ದಣಿಯುವಂತೆ ಮಾಡುವುದು ಪ್ರವಾದಿಯವರಿಗೆ ಇಷ್ಟವಿರಲಿಲ್ಲ .ಆದುದರಿಂದ ಕಲಿಯುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಹಂತ ತಲುಪದ ಹಾಗೆ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಕಲಿಕೆಯನ್ನು ಮಕ್ಕಳು ಆಸ್ವಾದಿಸಿ ಕಲಿಯುವಂತಹ ವಾತಾವರಣವನ್ನು ತರಗತಿಯಲ್ಲಿ ಉಂಟು ಮಾಡಬೇಕು.
ಪ್ರವಾದಿಯವರು(ಸ) ಯಾವುದಾದರೂ ಪ್ರಮುಖ ವಿಷಯವನ್ನು ಪ್ರಸ್ತಾಪಿಸುವಾಗ ಅದನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದರು. ಇದರಿಂದ ವಿಷಯವು ಸರಿಯಾಗಿ ಅರ್ಥವಾಗುತ್ತಿತ್ತು. ವಿವರಣೆಗಾಗಿ ಚಿತ್ರಗಳನ್ನು ಬಳಸುವುದು ಪ್ರವಾದಿಯವರ ಶಿಕ್ಷಣದ ಒಂದು ಪ್ರಮುಖ ಮಾಧ್ಯಮವಾಗಿತ್ತು. ಚಿಕ್ಕ ಆಕೃತಿಯ ಮೂಲಕ ವಿಷಯಕ್ಕೆ ಯಾವ ರೀತಿಯಲ್ಲಿ ಅದನ್ನು ಜೋಡಿಸಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ರಸಪ್ರಶ್ನೆಗಳನ್ನು ಕೇಳುವುದು ಪ್ರವಾದಿಯವರಿಗೆ ಇಷ್ಟವಾದಂತಹ ಒಂದು ವಿಧಾನವಾಗಿತ್ತು. ಜನರಿಗೆ ಪ್ರಶ್ನೆಯನ್ನು ಕೇಳಿ, ಅವರು ಯೋಚಿಸುವಂತೆ ಮಾಡಿ ಜೀವನಕ್ಕೆ ಸಂಬAಧಿಸಿದ ವಿವಿಧ ಅಂಶಗಳನ್ನು ಅವರು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಇದೇ ವಿಧಾನವನ್ನು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬಹುದು.
ಕಥೆಗಳಿಗೆ ಎಲ್ಲ ಕಾಲಗಳಲ್ಲೂ ತನ್ನದೇ ಆದ ಮಹತ್ವವಿರುತ್ತದೆ.
ಪ್ರವಾದಿಯವರು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಸಂಗಾತಿಗಳಲ್ಲಿ ಜ್ಞಾನದ ಹಣತೆಯನ್ನು ಹಚ್ಚುತ್ತಿದ್ದರು. ಪ್ರವಾದಿಯವರು(ಸ) ಹೇಳಿದ ಕಥೆಯೊಂದು ಹೀಗಿದೆ: ನಾಯಿಯೊಂದು ಬಾವಿಯ ಸುತ್ತಲೂ ಓಡಾಡುತ್ತಿತ್ತು. ಅದು ಬಾಯಾರಿಕೆಯಿಂದ ಬಳಲಿತ್ತು. ಬನೀ ಇಸ್ರಾಈಲರಿಗೆ ಸೇರಿದ್ದ ದುರಾಚಾರಿ ಒಬ್ಬಳು ಈ ಸ್ಥಿತಿಯಲ್ಲಿ ನಾಯಿಯನ್ನು ನೋಡಿದಳು. ಅವಳು ತನ್ನ ಚರ್ಮದ ಕಾಲು ಚೀಲವನ್ನು ತೆಗೆದು ತಾನು ಧರಿಸಿದ್ದ ಮೇಲು ಹೊದಿಕೆಗೆ ಕಟ್ಟಿದಳು. ಅದನ್ನು ಇಳಿಬಿಟ್ಟು ಬಿಟ್ಟು ಬಾವಿಯಿಂದ ನೀರು ಸೇರಿದಳು. ನಂತರ ಅದನ್ನು ನಾಯಿಗೆ ಕುಡಿಯಲು ಕೊಟ್ಟಳು. ಈ ಕೃತ್ಯದಿಂದಾಗಿ ಆಕೆಯ ಹಿಂದಿನ ಪಾಪಗಳನ್ನು ಕ್ಷಮಿಸಲಾಯಿತು.
ಆಧುನಿಕ ತಂತ್ರಜ್ಞಾನದ ಮಧ್ಯೆ ಬೆಳೆಯುತ್ತಿರುವ ಮಕ್ಕಳೂ, ನಮ್ಮ ಶಿಕ್ಷಕರ ಬಾಯಿಂದ ಕಥೆಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ಆದುದರಿಂದ ನೀತಿ ಬೋಧಕ ಕಥೆಗಳನ್ನು ಮಕ್ಕಳಿಗೆ ಹೇಳಲು ಶಿಕ್ಷಕರು ಆಸಕ್ತಿ ತೋರಬೇಕು.
ಇತರರನ್ನು ತೆಗಳದಿರುವುದು ಅವಮಾನಿಸದಿರುವುದು ಪ್ರವಾದಿಯವರ(ಸ) ವಿಶೇಷ ಗುಣವಾಗಿತ್ತು. ತಪ್ಪುಗಳು ಯಾರಿಂದಲೂ ಸಂಭವಿಸಬಹುದು. ಆದರೆ ಸಾರ್ವಜನಿಕವಾಗಿ ವ್ಯಕ್ತಿಯನ್ನು ಅವನ ತಪ್ಪಿಗಾಗಿ ಅವಹೇಳನ ಮಾಡುವುದು ಸರಿಯಲ್ಲ. ಪ್ರವಾದಿಯವರು(ಸ) ಎಂದೂ ಈ ವಿಧಾನವನ್ನು ಬಳಸಲಿಲ್ಲ. ಅವರು ವೈಯಕ್ತಿಕವಾಗಿ ಅವರನ್ನು ಕರೆಸಿ ವಿಷಯವನ್ನು ಮನವರಿಕೆ ಮಾಡಿಸಿ ನಯವಾಗಿ ಇನ್ನು ಮುಂದೆ ಹೀಗೆ ಮಾಡಬಾರದು ಎಂದು ತಿಳಿಸುತ್ತಿದ್ದರು. ಸಹನೆಯಿಂದ ತಪ್ಪನ್ನು ತಿದ್ದಿ ಹೇಳುತ್ತಿದ್ದರು. ಈ ಅಭ್ಯಾಸವನ್ನು ಕೂಡ ನಮ್ಮ ಶಿಕ್ಷಕರು ತಮ್ಮ ಜೀವನದ ಭಾಗವಾಗಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ಜೀವನವನ್ನೇ ಮುಗಿಸಬೇಕು ಎಂಬ ಒತ್ತಡದೊಂದಿಗೆ ಬದುಕುತ್ತಿರುವ ಆಧುನಿಕ ಯುಗದ ಮಕ್ಕಳ ಮಧ್ಯೆ ಅವರಿಗೆ ಶಿಕ್ಷಣವನ್ನು ನೀಡುವ ಶಿಕ್ಷಕರು ಸಹನೆಯ ಮೂರ್ತಿಗಳಾಗಿ ವರ್ತಿಸಬೇಕು .ಎಂದೂ ಯಾವ ಮಕ್ಕಳನ್ನು ಅವಮಾನಿಸುವುದು ತೆಗಳುವುದು ಸಲ್ಲದು. ಒಂದು ವೇಳೆ ಈ ಅಭ್ಯಾಸ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.
ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ತರಬೇತಿ ನೀಡಲು ಪ್ರವಾದಿ ಮುಹಮ್ಮದರು(ಸ) ತಾಕೀತು ಮಾಡಿರುವರು. ನೀವು ನಿಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮವಾದಂತಹ ಉಡುಗೊರೆ ಅದು ಉತ್ತಮ ತರಬೇತಿ ಮತ್ತು ಶಿಕ್ಷಣವಾಗಿದೆ ಎಂಬ ಪ್ರವಾದಿ ವಚನ ಬಹಳ ಮಾರ್ಮಿಕವಾದುದಾಗಿದೆ. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಓಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ವಿಫಲರಾಗುವ ಹೆತ್ತವರು ಜೀವಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ .ಪ್ರವಾದಿ ಮುಹಮ್ಮದರ(ಸ) ಈ ಶಿಕ್ಷಣ ರೀತಿಯನ್ನು ಹೆತ್ತವರು ಮತ್ತು ಶಿಕ್ಷಕರು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ಗೋಚರಿಸಬಹುದು.
ಸಬೀಹ ಫಾತಿಮ, ಮಂಗಳೂರು