“ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.
ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.
“ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
ದಿ ನ್ಯೂಸ್ ಮಿನಿಟ್ನಲ್ಲಿ ವರದಿಯಾಗಿದೆ.
ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
“ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”
ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.
ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)
“ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).
ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.
ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”
ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.
ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಕುಲ್ಸೂಮ್ ಅಬೂಬಕರ್