ಮಬ್ಬು ಬೆಳಕಿನ ನಿಯಂತ್ರಣ ಕೊಠಡಿಗಳಲ್ಲಿ ಕುಳಿತಿದ್ದು, ದಾಳಿಯ ಚಲನ ವಲನಗಳನ್ನು ವಿಶ್ಲೇಷಿಸುತ್ತಾ, ನಿಯಂತ್ರಿಸುತ್ತಾ, ಉಡಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಾ, ಅತ್ಯಂತ ಶಿಸ್ತು ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದದ್ದು ಹಿಜಾಬ್ ಧರಿಸಿದ ಇರಾನಿನ ಮಹಿಳೆಯರು.
ಖತಮ್ ಅಲ್-ಅಂಬಿಯಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ಇರಾನಿನ ಮಹಿಳೆಯರು ಡೇಟಾ ವಿಶ್ಲೇಷಕರು, ಸಿಸ್ಟಂ ಪ್ರೋಗ್ರಾಮರ್ಗಳು ಮತ್ತು ನಿಯಂತ್ರಣ ಕೊಠಡಿಗಳ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಾಫ್ಟ್ವೇರ್ ವ್ಯವಸ್ಥೆಗಳನ್ನು, ಉಪಗ್ರಹ ನಕ್ಷೆಗಳನ್ನು ಮತ್ತು ಉಡಾವಣೆ ಸಮನ್ವಯಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇರಾನಿನ ರಕ್ಷಣಾ ರಚನೆಯೊಳಗೆ ಸಕ್ರಿಯ ಮತ್ತು ಅನಿವಾರ್ಯ ಪಾತ್ರದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸಾರ್ವಜನಿಕವಾಗಿ ಪ್ರದಶಿಸುವುದು, ಪ್ರಶಂಸೆ ಪಡೆಯುವುದು ಮತ್ತು ನಾಯಕತ್ವ ವಹಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕ್ಷಿಪಣಿ ಉಡಾವಣಾ ಕನ್ಸೋಲ್ ಹಿಂದೆ ಹಿಜಾಬ್ ಧರಿಸಿದ ಮಹಿಳೆ ಆದುನಿಕತೆಗೆ ತಕ್ಕವಳಾಗಿ ಕಾಣಿಸದಿರಬಹುದು. ಆದರೆ ಅವಳು ಡೇಟಾ ಮೇಲೆ ಹಿಡಿತವಿಟ್ಟಿದ್ದಾಳೆ, ದೇಶದ ರಕ್ಷಣೆಯಲ್ಲಿ ಕೆಲಸಮಾಡುತ್ತಿದ್ದಾಳೆ ಮತ್ತು ರಾಷ್ಟ್ರಸೇವೆಯ ಕಾರ್ಯನಿರ್ವಹಿಸುತ್ತಿದ್ದಾಳೆ. ಇದು ಫ್ಯಾಶನ್ ಅಥವಾ ಸ್ವಾರ್ಥಕ್ಕಾಗಿ ಅಲ್ಲ. ಇದು ನಂಬಿಕೆ, ಶಿಕ್ಷಣ ಮತ್ತು ಕೌಶಲ್ಯದ ಮೇಲೆ ಆಧಾರಿತವಾದ ನಿಜವಾದ ಶಕ್ತಿ ಮಹಿಳಾ ಶಕ್ತಿಯಾಗಿದೆ.
1979ರ ಕ್ರಾಂತಿಯ ಬಳಿಕ ಇರಾನ್ನಲ್ಲಿ ಮಹಿಳೆಯರ ಶಿಕ್ಷಣ, ವಿಶೇಷವಾಗಿ ಮೆಡಿಕಲ್ ಮತ್ತು ಎಂಜಿನಿಯರಿAಗ್ ಕ್ಷೇತ್ರಗಳಲ್ಲಿ, ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಯುನೆಸ್ಕೋ ಮತ್ತು ವಿಶ್ವ ಬ್ಯಾಂಕ್ ಮಾಹಿತಿಯ ಪ್ರಕಾರ, ಇರಾನ್ನಲ್ಲಿನ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ) ಪದವೀಧರರಲ್ಲಿ 70%ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಇಂದು ಇರಾನಿನ ನಿಲುವು ಮಹಿಳೆಯರೂ ರಾಷ್ಟ್ರದ ಹೆಗ್ಗಳಿಕೆಯ ಗುರುತು ಹಾಗೂ ಏಳಿಗೆಯಲ್ಲಿ ರಾಷ್ಟ್ರದ ಪರವಾಗಿ ಪ್ರತಿರೋಧ ಚಲನೆಯನ್ನು ರೂಪಿಸುವ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಪರಿಗಣಿಸಿದೆ.
ಈ ದೃಷ್ಟಿಕೋನವೇ ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಂತಹ ಅತ್ಯಂತ ವಿಶೇಷ ಹಾಗೂ ಸಂವೇದನಾಶೀಲ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಪ್ರಮುಖವಾಗಿ ಇವರ ಪಾತ್ರಗಳನ್ನು ಪರಂಪರಾಗತವಾಗಿ ಸೌಮ್ಯ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ಬದಲಾಗಿ ಯುದ್ಧತಂತ್ರ ಹಾಗೂ ಉನ್ನತ ತಾಂತ್ರಿಕ ಕಾರ್ಯಾಚರಣೆಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ.
ಇಂದಿನ ಕಾಲದಲ್ಲಿ ಜಾಗತಿಕ ಮಾಧ್ಯಮಗಳು ಮುಸ್ಲಿಂ ಮಹಿಳೆಯರನ್ನು ಬಹುತೇಕ ಸಂದರ್ಭಗಳಲ್ಲಿ ಮೌನವಾಗಿರುವವರು ಅಥವಾ ದಬ್ಬಾಳಿಕೆಗೆ ಒಳಪಡುವವರು ಎಂದು ಚಿತ್ರಿಸಲಾಗುತ್ತದೆ. ಆದರೆ ಇರಾನಿನ ಈ ಒಂದು ಬೆಳವಣಿಗೆಯು ಬೇರೊಂದು ಪರ್ಯಾಯ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.
ಇದು ಧರ್ಮದ ಮೇರೆಯನ್ನು ನಿರಾಕರಿಸುವುದಲ್ಲ ಬದಲಾಗಿ ಅದನ್ನೇ ವೇದಿಕೆಯಾಗಿ ಬಳಸುತ್ತಿದೆ. ಕ್ಷಿಪಣಿ ಕಮಾಂಡ್ ಕೊಠಡಿಗಳಲ್ಲಿ ಈ ಮಹಿಳೆಯರ ಉಪಸ್ಥಿತಿಯು ಧಾಮಿಕತೆಯ ವಿರುದ್ಧವಲ್ಲ ಅದು ನಂಬಿಕೆಯಿAದಲೇ ಹುಟ್ಟಿಕೊಂಡಿರುವುದಾಗಿದೆ.
ಇಸ್ರೇಲ್ನ ಬೆಂಜಮಿನ್ ನೆತನ್ಯಾಹೂ ಸೇರಿದಂತೆ ಪಶ್ಚಿಮಾತ್ಯ ನಾಯಕರು ಇರಾನಿನ ಸೇನಾ ಜಾಲವನ್ನು ನಾಶಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಶಕ್ತಿ ಮತ್ತು ಸ್ಥೈರ್ಯದ ಹಿಂದೆ ಸಮಾನ ಶಿಕ್ಷಣ ಹಾಗೂ ಇರಾನ್ ಹೊಂದಿರುವ ನಿಷ್ಠೆ ಎದ್ದು ಕಾಣುತ್ತಿದೆ. ಈ ನಿಷ್ಠೆಯಲ್ಲಿ ಈಗ ಅಲ್ಲಿಯ ಮಹಿಳೆಯರೂ ಸೇರಿಕೊಂಡಿರುವುದು ಮಹತ್ತರ ಪಾತ್ರವನ್ನು ಹೊಂದಿದೆ.
ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವ ಇರಾನಿನ ಮಹಿಳೆಯರ ಚಿತ್ರಣ ಬಹುತೇಕ ಜನರಿಗೆ ಅಚ್ಚರಿಯಾಗಿ ಕಾಣಬಹುದು. ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ನಿಷ್ಕ್ರಿಯರು, ಮೌನವಾಗಿರುವವರು ಅಥವಾ ಕೇವಲ ಗೃಹ ಬಂಧನದಕ್ಕೆ ಸೀಮಿತವಾಗಿರುವವರು ಎಂದು ತಪ್ಪಾಗಿ ಪರಿಗಣಿಸಲಾಗುತ್ತಿರುವ ಜಾಗತಿಕ ಮಟ್ಟದವರಿಗೆ…!
ಅದರ ರಾಜಕೀಯ ಜಟಿಲತೆಗಳೇನೇ ಇರಲಿ, ಇರಾನ್ನ ನಿಲುವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಧರ್ಮಾಧಾರಿತ ಸಮಾಜಗಳು ಮಹಿಳಾ ನಾಯಕತ್ವಕ್ಕೆ ಸಹಜವಾಗಿ ವಿರೋಧಿಯಾಗಿಲ್ಲ. ಜಗತ್ತಿನ ಅನೇಕ ಮುಸ್ಲಿಂ ದೇಶಗಳು ಈಗಾಗಲೇ ಈ ದಾರಿಗೆ ಬೇಕಾದ ಮಾನವ ಸಂಪತ್ತು, ಶಿಕ್ಷಣ ವ್ಯವಸ್ಥೆ ಮತ್ತು ನೈತಿಕತೆ ಹೊಂದಿವೆ. ಇದೀಗ ಅಗತ್ಯವಿರುವುದು, ಮಹಿಳೆಯರನ್ನು ಕೇವಲ ನೈತಿಕ ಲಾಭಪಡೆಯುವವರಂತೆ ನೋಡದೆ ಅವರನ್ನು ಪ್ರಗತಿಯೆಡೆಗೆ ಮುನ್ನಡೆಸುವ ಧೈರ್ಯವನ್ನು ತುಂಬುವುದು ಕಾಲದ ಬೇಡಿಕೆಯಾಗಿದೆ.
ಇರಾನಿನ ಮಾದರಿಯನ್ನೇ ಅನುಸರಿಸಬೇಕೆಂದಿಲ್ಲ. ಆದರೆ ಅದು ನಮ್ಮ ಕಲ್ಪನೆಗೆ ಆಹ್ವಾನ ನೀಡುತ್ತದೆ. ಇದು ಮುಸ್ಲಿಂ ಜಗತ್ತಿನಾದ್ಯಂತ ಇರುವ ಮಹಿಳೆಯರ ಅಪಾರ ಸಾಮರ್ಥ್ಯಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ತಡೆ ಹಾಕುವ ಅಂಶಗಳನ್ನು ತೊಡೆದು ಹಾಕಬೇಕಾಗಿದೆ.
ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿಯುತ್ತಿರುವಂತೆ, ಕ್ಷಿಪಣಿ ಉಡಾವಣೆ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಚಿತ್ರಗಳು ಪರ್ಯಾಯ ಮಾಧ್ಯಮಗಳಲ್ಲಿ ನಿಧಾನವಾಗಿ ಹರಿದಾಡುತ್ತಿವೆ. ಇದರಿಂದಾಗಿ ಜಗತ್ತು ಈಗ ಒಂದು ಹೊಸ ದೃಷ್ಟಿಕೋನವನ್ನು ಅಂಗೀಕರಿಸಬೇಕಾದ ಅಗತ್ಯತೆ ಎದು ರಾಗಿದೆ.