ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತು ಯುವಕರನ್ನು ನಾಚಿಸುವಂತಿತ್ತು.
ತಮ್ಮ ಯುವ ಪ್ರಾಯದಲ್ಲಿಯೇ ಇಸ್ಲಾಮಿನ ಬಗ್ಗೆ ಸರಿಯಾಗಿ ಅರಿತುಕೊಂಡು ಅದೊಂದು ಜೀವನ ವ್ಯವಸ್ಥೆ ಎಂದು ಒಪ್ಪಿಕೊಂಡು ಪ್ರಾಯೋಗಿಕವಾಗಿ ಜೀವನದುದ್ದಕ್ಕೂ ನಡೆದು ತೋರಿಸಿದ ಮಹಾನುಭಾವರು. ನಮ್ಮ ಕುಟುಂಬದ ಹಿರಿಯ ಸ್ಥಾನದಲ್ಲಿದ್ದ ಅವರಿಗೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ಕಾಳಜಿ ಇತ್ತು. ಕೇವಲ ಕಣ್ಣುಗಳನ್ನು, ಮುಖಭಾವವನ್ನು ನೋಡಿ ವ್ಯಕ್ತಿಯ ಸಮಸ್ಯೆಯನ್ನು ಗುರುತಿಸುವ ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಸೂಚಿಸುವ ಜೊತೆಗೆ ಕೈಲಾದ ಸಹಾಯ ಮಾಡುವ ವಿಶಾಲ ಹೃದಯಿಯಾಗಿದ್ದರು.
ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಗಮನಿಸುತ್ತಿದ್ದರು. ಮಕ್ಕಳ ಸಣ್ಣ ಸಾಧನೆಯನ್ನು ಸಂಭ್ರಮಿಸುತ್ತಿದ್ದರು. ಅವರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಲ್ಲುತ್ತಿದ್ದರು.
ಹೆಣ್ಣು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಕೇರಳಕ್ಕೆ ಮಂಗಳೂರಿನ ಆಸುಪಾಸಿನ ಹೆಣ್ಣು ಮಕ್ಕಳು ಹೋಗುತ್ತಿರುವುದನ್ನು ಕಂಡು ಇಲ್ಲಿಯೇ ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಯೋಜನೆಗೆ 25 ವರ್ಷಗಳ ಹಿಂದೆ ಅಡಿಪಾಯ ಹಾಕಿದರು.
ಗುಡ್ಡದಂತಹ ಸ್ಥಳದಲ್ಲಿ ಹೆಚ್ಚು ಜನವಾಸವಿಲ್ಲದ ಪ್ರದೇಶದಲ್ಲಿ ಒಂದು ವಿಶಾಲ ಭೂಮಿಯನ್ನು ಸಮಾನ ಮನಸ್ಕರ ಜೊತೆಗೂಡಿ ಖರೀದಿಸಿ ಮೊದಲು ಅದರ ಅಡಿಪಾಯವನ್ನು ಹಾಕಿದಾಗ ಅಲ್ಲಿ ನಡೆದ ಒಂದು ಸಮಾರಂಭದಲ್ಲಿ ಗುಡ್ಡದಿಂದ ಕೂಡಿದಂತಹ ಪ್ರದೇಶವನ್ನು ತೋರಿಸಿ ಮುಂದೊAದು ದಿನ ಇಲ್ಲಿ ಹೆಣ್ಣು ಮಕ್ಕಳಿಗೆ ಪಿಯುಸಿ ಡಿಗ್ರಿ ಮತ್ತು ಬಿಎಡ್ ಕಾಲೇಜುಗಳು ಸ್ಥಾಪನೆಯಾಗುತ್ತದೆ. ಇದು ಹೆಣ್ಣು ಮಕ್ಕಳಿಗಾಗಿರುವ ಯುನಿವರ್ಸಿಟಿಯಾಗುತ್ತದೆ ಎಂದು ನಮ್ಮಲ್ಲಿ ಕನಸನ್ನು ಬಿತ್ತಿದ್ದರು. ಆ ಸಮಾರಂಭದಲ್ಲಿ ದೊಡ್ಡಪ್ಪನವರ ಕಣ್ಣುಗಳಲ್ಲಿದ್ದ ಹೊಳಪನ್ನು ನಾನಿಂದು ನೆನಪಿಸುತ್ತಿದ್ದೇನೆ.
ಹಿರಾ ಶಿಕ್ಷಣ ಸಂಸ್ಥೆಯ ಹಿಂದೆ ಹೆಜ್ಜೆ ಹೆಜ್ಜೆಗೂ ಪ್ರಯಾಣಿಸಿದರು. ಇಂದು ಈ ಶಿಕ್ಷಣ ಸಂಸ್ಥೆಯ ಪ್ರತಿಯೊಂದು ಕಲ್ಲುಗಳು ಅವರ ಪರಿಶ್ರಮ ಮತ್ತು ದೂರದರ್ಶತ್ವಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಪಾರ ಸಂಖ್ಯೆ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಾಂತ ರೀತಿಯಲ್ಲಿ ಶಿಕ್ಷಣವನ್ನು ಮುಗಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಪಸರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಹೆಣ್ಣು ಮಕ್ಕಳು ತಲೆಯ ಮೇಲೆ ವಸ್ತç ಹಾಕಿದರೆ ಅದು ಶಾಲಾ ವಸ್ತç ಸಂಹಿತೆಗೆ ಅಪವಾದವಾಗುತ್ತದೆ ಎಂದು ಅಪಪ್ರಚಾರ ನಡೆಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಳ್ಳು ನೀರು ಬಿಡಲು ಬಯಸುತ್ತಿರುವ ಸಮಾಜದಲ್ಲಿ, ಹೆಣ್ಣು ಮಕ್ಕಳ ಪರವಾಗಿ ಸದಾ ತುಡಿಯುತ್ತಿದ್ದ ಒಂದು ಆದರ್ಶ ವ್ಯಕ್ತಿತ್ವ ಕೆ.ಎಂ. ಶರೀಫ್ ಸಾಹೇಬರು. ಅವರ ಅಗಲಿಕೆಯು ಹೆಣ್ಣು ಮಕ್ಕಳ ಪರವಾಗಿ ನಿಂತಿದ್ದ ಓರ್ವ ಮಹಾನುಭಾವರ ನಿರ್ಗಮನವಾಗಿದೆ.
ಅನುಪಮಾ ಮಹಿಳಾ ಮಾಸಿಕದ ಹುಟ್ಟು ಬೆಳವಣಿಗೆಯಲ್ಲಿ ನಮ್ಮೊಂದಿಗೆ ಸದಾ ಬೆಂಗಾವಲಾಗಿ ನಿಂತ ಮಹಾನುಭಾವರವರು. ನಮ್ಮ ಬಳಗದ ಪ್ರತಿಯೊಂದು ಏಳು ಬೀಳುಗಳಲ್ಲಿಯೂ ನಮ್ಮ ಜೊತೆಗಿದ್ದವರು. ನಮ್ಮ ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ಲೇಖನದ ಬಗ್ಗೆಯೂ ಕೂಲಂಕುಶ ಪರಿಶೀಲನೆ ನಡೆಸುವವರು. ಉತ್ತಮ ವಿಮರ್ಶಕರು ಆಗಿದ್ದರು. ತಮ್ಮ ಅದ್ವಿತೀಯ ವರ್ಚಸ್ಸಿನಿಂದ, ಕಂಡ ಕನಸನ್ನು, ಕೈಗೆತ್ತಿಕೊಂಡ ಕೆಲಸವನ್ನು ಅರ್ಪಣಾ ಮನೋಭಾವದೊಂದಿಗೆ ಪೂರ್ತಿ ಗೊಳಿಸುವ ವಿಶಿಷ್ಟ ಛಲಗಾರ.
ಮಂಗಳೂರಿನಲ್ಲಿ ಇಂದು ಇಸ್ಲಾಮಿನ ಕಂಪನ್ನು ಪಸರಿಸುತ್ತಿರುವ ಹತ್ತು ಹಲವು ಕೆಲಸಗಳ ರೂವಾರಿಯವರು. ಅನುಪಮ ಕಚೇರಿ ಇರುವ ಹಿದಾಯತ್ ಸೆಂಟರ್, ವಿಶಾಲವಾದ ಸುಸಜ್ಜಿತ ಶಾಂತಿ ಪ್ರಕಾಶನದ ಕಚೇರಿ, ಇಸ್ಲಾಮಿ ಪುಸ್ತಕಾಲಯ ವಿರಬಹುದು, ಬೋಳಾರದ ಇಸ್ಲಾಮಿಕ್-ಎ-ಎಜುಕೇಶನ್ ಸೆಂಟರ್ ಎಲ್ಲದರಲ್ಲಿಯೂ ಅವರ ಅಹರ್ನಿಸಿ ಪರಿಶ್ರಮವಿದೆ. ಒಂದು ಯೋಜನೆ ಮುಗಿದ ಕೂಡಲೇ ಇನ್ನೊಂದಕ್ಕೆ ಕೈ ಹಾಕುತ್ತಿದ್ದ, ಅದಕ್ಕಾಗಿ ರೂಪವೇಷಗಳನ್ನು ಸಿದ್ಧಪಡಿಸುತಿದ್ದ ಅವರು ಎಲ್ಲ ವಿಷಯಗಳಲ್ಲಿಯೂ ಮೇಧಾವಿ. ಯಾವ ವಸ್ತುಗಳು ಎಲ್ಲಿ ಚೆನ್ನಾಗಿರುತ್ತದೆ ಯಾರ ಬಳಿ ವಿಚಾರಿಸಿದರೆ ತಿಳಿಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಕೆ.ಎಂ. ಶರೀಫ್ ಸಾಹೇಬರು ಯಾವುದೇ ಕೆಲಸದಲ್ಲಿ ಪಾಲ್ಗೊಂಡರು ಅದನ್ನು ಸುಂದರವಾಗಿ ಮತ್ತು ಗುಣಮಟ್ಟದೊಂದಿಗೆ ಮುಗಿಸುವುದರಲ್ಲಿ ಸಿದ್ದ ಹಸ್ತರು.
ಯಾರಿಗೂ ಪುಕ್ಕಟೆ ಸಲಹೆ, ಉಪದೇಶ ನೀಡುವ ಜಾಯಮಾನ ಅವರದಾಗಿರಲಿಲ್ಲ. ಆದರೆ ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದ ಪ್ರತಿಯೊಬ್ಬರ ಪಾಲಿಗೂ ಅವರು ಆಪ್ತ ಸಮಾಲೋಚಕರು. ಉಪದೇಶ ಬಯಸುವವರಿಗೆ ಹಿರಿಯ ಮಾರ್ಗದರ್ಶಿ. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಸುಂದರವಾಗಿ ಪೂರ್ತಿಗೊಳಿಸಿದರೂ ಅದರಲ್ಲಿ ಹೆಚ್ಚಿನ ಪ್ರಯತ್ನ, ಹೋರಾಟ ಕೆ.ಎಂ. ಶರೀಫ್ ಸಾಹೇಬರದ್ದಾಗಿತ್ತು. ಆದರೆ ಎಂದೂ ಅದನ್ನು ಅವರು ಹೇಳಿಕೊಂಡವರಲ್ಲ. ವಿನಯಶೀಲತೆ ಅವರ ಹೆಗ್ಗಳಿಕೆ. ಅಧಿಕಾರ, ಹೆಸರು, ಪದವಿಗಾಗಿ ಯಾವುದೇ ಕೆಲಸವನ್ನು ಮಾಡಲು ಮತ್ತು ತನ್ನನ್ನು ಸಮಾಜ ಗುರುತಿಸಬೇಕೆಂದು ಅವರು ಬಯಸಲಿಲ್ಲ. ನಿಸ್ವಾರ್ಥತೆಯಿಂದ ಕೂಡಿದ ಮಾದರಿ ಯೋಗ್ಯ ಜೀವನವದು.
ಅಲ್ಲಾಹನ ಮೇಲಿನ ಅಪಾರ ಭರವಸೆಯೊಂದಿಗೆ ಸಣ್ಣ ಮೊತ್ತವಿದ್ದರೂ ಸರಿ ಕೆಲಸ ಆರಂಭಿಸಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಉನ್ನತ ಕನಸುಗಳನ್ನು ಹೊಂದಿ ಗುರಿಯಡಿಗೆ ಗಮನಹರಿಸಲು ಯುವ ತಲೆಮಾರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದರು. ಪ್ರತಿಭಾವಂತರನ್ನು ಗುರುತಿಸುವುದು, ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಂದ ಸಮಾಜಕ್ಕೆ ಯಾವ ಪ್ರಯೋಜನವನ್ನು ಪಡೆಯಬಹುದು ಎಂದು ಯೋಚಿಸಿ ಅದಕ್ಕಾಗಿ ಅಹರ್ನಿಶಿ ಕೆಲಸ ಮಾಡುವುದು ಅವರಿಗೆ ಮೀಸಲಾದ ವಿಶೇಷತೆ.
85 ವರ್ಷಗಳ ಜೀವನದುದ್ದಕ್ಕೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅಪಾರ ಪ್ರೀತಿ ಕಾಳಜಿ ಮತ್ತು ನಗು ಮುಖದೊಂದಿಗೆ ಎಲ್ಲರನ್ನು ಭೇಟಿಯಾದ ನನ್ನ ಪ್ರೀತಿಯ ದೊಡ್ಡಪ್ಪನ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ .ವಿಶೇಷವಾಗಿ ಅನುಪಮಾ ಬಳಗ ಹಿರಿಯ ಮಾರ್ಗದರ್ಶಕನನ್ನು, ಕೈಹಿಡಿದು ಮುನ್ನಡೆಸುತ್ತಿದ್ದ ಊರುಗೋಲನ್ನು ಕಳೆದುಕೊಂಡು ತಬ್ಬಲಿಯಾಗಿದೆ.
ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಉಂಟಾಗುವುದರ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದ ಅವರು ಎಲ್ಲ ಧರ್ಮೀಯರೊಂದಿಗೂ ಸ್ನೇಹ ಪ್ರೀತಿಯ ಸಂಬಂಧವನ್ನು ಹೊಂದಿದ್ದರು. ಭಾರತದಂತಹ ಬಹುದರ್ಮಿಯ ಸಮಾಜದಲ್ಲಿ ಓರ್ವ ವ್ಯಕ್ತಿ ಯಾವ ರೀತಿಯಲ್ಲಿ ಬಾಳಬೇಕು ಎಂಬುದಕ್ಕೆ ಮಾದರಿಯಂತಿದ್ದರು. ಅವರ ಮರಣದ ವೇಳೆ ಆಗಮಿಸಿದ ಸುತ್ತಮುತ್ತಲಿನ ದೇಶ ಬಾಂಧವರು ಇಳಿಸಿದ ಕಣ್ಣೀರು ಅವರೊಂದಿಗಿದ್ದ ಪ್ರೀತಿಯ ಸ್ಪಷ್ಟ ನಿದರ್ಶನವಾಗಿತ್ತು. ಸೌಹಾರ್ದದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ಮನುಷ್ಯ ಸಹಜವಾಗಿ ಅವರಿಂದ ಸಂಭವಿಸಿರಬಹುದಾದ ಎಲ್ಲ ತಪ್ಪುಗಳನ್ನು ದೇವನು ಮನ್ನಿಸಲಿ ಮತ್ತು ಅವರನ್ನು ಸ್ವರ್ಗಾನಗಳಲ್ಲಿ ಸೇರಿಸಲಿ ಎಂಬುದಾಗಿ ಹೃದಯವಂತರಾಳದಿಂದ ಪ್ರಾರ್ಥಿಸುತ್ತಿದ್ದೇನೆ.
ಸಬೀಹ ಫಾತಿಮ