2025ರ ಹಜ್ಜ್ ಯಾತ್ರೆ ಪೂರ್ಣಗೊಂಡು ಹಾಜಿಗಳೆಲ್ಲರೂ ತಾಯ್ನಾಡಿಗೆ ಮರಳಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ತೀರ್ಥಯಾತ್ರೆಯನ್ನು ಮುಗಿಸಿ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಜೀವನದ ಜಂಜಾಟಕ್ಕೆ ಪುನಃ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಬಾರಿಯ ಹಜ್ಜ್ ಕರ್ಮವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿದ್ದರಿಂದ ಬಹಳ ಸುಸೂತ್ರವಾಗಿ ನೆರವೇರಿದೆ. ಈ ನಡುವೆ ಆಮಿರ್ ಮನ್ಸೂರ್ ಮಹ್ದಿ ಅಲ್ ಗದ್ದಾಫಿ ಎಂಬ 38 ರ ಹರೆಯದ ಲಿಬಿಯಾದ ಪೌರ ತನ್ನ ಹಜ್ಜ್ ಪ್ರಯಾಣದಲ್ಲಿ ಸಂಚಲವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲೂ ವಾರ್ತಾ ಮಾಧ್ಯಮಗಳಲ್ಲೂ ವೈರಲ್ ಆಗಿದ್ದರು.
ಎಲ್ಲರಂತೆ ಆಮಿರ್ ಕೂಡ ಹಜ್ಜ್ ಯಾತ್ರೆಗಾಗಿ ಲಿಬಿಯಾದ ಸಭಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸೌದಿಗೆ ಹಜ್ಜ್ಗಾಗಿ ತೆರಳುವ ಎಲ್ಲ ಪ್ರಯಾಣಿಕರೂ ಬೋರ್ಡಿಂಗ್ ಪಾಸ್ ಪಡೆದು ವಿಮಾನದೊಳಗೆ ಪ್ರವೇಶಿಸಿದ್ದರು. ಆದರೆ ಆಮಿರ್ರಿಗೆ ಬೋರ್ಡಿಗೆ ಪಾಸ್ ನಿರಾಕರಿಸಲಾಗಿತ್ತು ಅದಕ್ಕೆ ಕಾರಣ ಪಾಸ್ ಪೋರ್ಟ್ನಲ್ಲಿರುವ ಗದ್ದಾಫಿ ಎಂಬ ಹೆಸರಿನಲ್ಲಿರುವ ಸಮಸ್ಯೆ ಎಂದು ಸೂಚಿಸಲಾಗಿತ್ತು. ಆಮಿರ್ನ ಹೊರತಾಗಿ ವಿಮಾನ ಪ್ರಯಾಣ ಹೊರಟಿತು. ಆದರೆ ವಿಧಿಯ ಆಟವನ್ನು ಬಲ್ಲವರಾರು. ವಿಮಾನ ಆಕಾಶದೆತ್ತರಕ್ಕೆ ಹಾರಿ ಸ್ವಲ್ಪದರಲ್ಲೇ ತಾಂತ್ರಿಕ ಸಮಸ್ಯೆಯ ಕಾರಣ ವಿಮಾನವನ್ನು ನಿಲ್ದಾಣಕ್ಕೆ ಮರಳಿಸಬೇಕಾಯಿತು.
ಆದರೆ ವಿಮಾನ ನಿಲ್ದಾಣದಲ್ಲಿರುವ ಆಮಿರ್ ನಾನು ಹಜ್ಜ್ನ ಸಂಕಲ್ಪ ಮಾಡಿ ತಾಯ್ನಾಡಿನಿಂದ ಹೊರಟಿದ್ದೇನೆ ಮತ್ತು ಇನ್ನು ಸೌದಿಗಲ್ಲದೆ ಮರಳಿ ಮನೆಗೆ ಹೋಗಲಾರೆ ಎಂದು ಹಠ ಹಿಡಿದು ಕುಳಿತಿದ್ದಾರೆ. ನಿಲ್ದಾಣಕ್ಕೆ ಮರಳಿದ ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದರೂ ಆಮಿರ್ ನನ್ನು ವಿಮಾನದೊಳಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಲೇ ಇಲ್ಲ. ಪ್ರಯಾಣಕ್ಕೆ ಸಜ್ಜಾದ ವಿಮಾನವು ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಪುನಃ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಾಗ ಗತ್ಯಂತರವಿಲ್ಲದೆ ನಿಲ್ದಾಣಕ್ಕೆ ಮರಳಬೇಕಾಯಿತು. ಆದರೆ ಈ ಬಾರಿ ಪೈಲಟ್ಗೆ ಏನೋ ಸಂಶಯ ಕಾಡತೊಡಗಿತು. ಅವನು ಆಗಲೇ ಸೂಚನೆ ನೀಡಿದ. ಇನ್ನು ವಿಮಾನವು ಲ್ಯಾಂಡಿಗ್ ಮಾಡುವುದಾದರೆ ಆಮಿರ್ ನ ಹೊರತಾಗಿ ವಿಮಾನ ಟೇಕ್ ಆಫ್ ಮಾಡಲಾರದು ಎಂಬ ಸಂಕಲ್ಪದೊAದಿಗೆ ವಿಮಾನವನ್ನು ಕೆಳಗಿಳಿಸಲಾಯಿತು. ಪುನಃ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಆಮಿರ್ನಿಗೆ ಪ್ರವೇಶಾನುಮತಿ ನೀಡಿ ವಿಮಾನವು ಹಾರಾಡಿತು ಮತ್ತು ಜೆದ್ದಾ ವಿಮಾನ ನಿಲ್ದಾಣಕ್ಕೆ ತಲುಪಿತು.
ಆಮಿರ್ ತನ್ನ ಹದಿನಾರನೆಯ ಪ್ರಾಯದಲ್ಲಿ ಹಜ್ಜ್ ಎಂಬ ಪವಿತ್ರ ಕರ್ಮ ನಿರ್ವಹಿಸುವ ಕನಸನ್ನು ಕಂಡಿದ್ದ. ಆದರೆ ಕಾರಣಾಂತರದಿAದ ಅದು ಸಾಧ್ಯವಾಗಲಿಲ್ಲ. ತನ್ನ 38 ನೆಯ ಪ್ರಾಯದಲ್ಲಿ ತನ್ನ ಕನಸು ನೆರವೇರುವ ಸಮಯ ಕೂಡಿ ಬಂದಿತ್ತು. ಅದರ ಸಕಲ ಸಿದ್ಧತೆಗಳನ್ನು ಮಾಡಿ ವಿಮಾನ ನಿಲ್ದಾಣ ತಲುಪಿದಾಗ ಇಂತಹ ಒಂದು ಕಹಿ ಅನುಭವವಾಗಿತ್ತು. ಓರ್ವ ಪ್ರಯಾಣಿಕನು ಪ್ರಯಾಣದ ಸಕಲ ಸಿದ್ಧತೆಗಳನ್ನು ಮಾಡಿ ತನ್ನದಲ್ಲದ ತಪ್ಪಿನಿಂದ ಆ ಪ್ರಯಾಣ ಮೊಟಕುಗೊಳ್ಳುವಾಗ ಅವನು ಅನುಭವಿಸುವ ಮಾನಸಿಕ ಯಾತನೆ, ತಳಮಳ ಮತ್ತು ಸಂಘರ್ಷ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸುವವರಿಗೆ ಅದರ ಸಂಕಷ್ಟದ ಬಗ್ಗೆ ಅರಿವಿರುತ್ತೆ. ಆಮಿರ್ನ ಅನುಭವ ಕೂಡ ಇದಕ್ಕೆ ಭಿನ್ನವಲ್ಲ. ಆದರೆ ಸಾಧಾರಣ ಗತಿಯಲ್ಲಿ ಪ್ರಯಾಣ ಮೊಟಕುಗೊಂಡರೆ ತನ್ನ ವಿಧಿಯನ್ನು ಹಳಿಯುತ್ತಾ ಪ್ರಯಾಣಿಕನು ಮರಳುವುದೇ ಹೆಚ್ಚು. ವಿಮಾನ ನಿಲ್ದಾಣದ ಅಧಿಕಾರಿಗಳು ಆಮಿರ್ ನನ್ನು ಅದೆಷ್ಟೋ ಸಂತೈಸಿರಬಹುದು, ತನ್ನ ಅದೃಷ್ಟ ದಲ್ಲಿ ಈ ಬಾರಿಯ ಹಜ್ಜ್ ಬರೆದಿಲ್ಲ ಎಂಬಿತ್ಯಾದಿ ಮಾತುಗಳಿಂದ ಆಮಿರ್ ನಿಗೆ ಮನವರಿಕೆ ಮಾಡಿಕೊಟ್ಟಿರಲೂಬಹುದು. ಆದರೆ ಆಮಿರ್ ಕುಳಿತಲ್ಲಿಂದ ಕದಲಲೇ ಇಲ್ಲ. ಇಂದಿನ ಹಜ್ಜ್ ವಿಮಾನ ಹೊರಟಿದೆ ಇನ್ನು ಬರುವ ವರ್ಷ ಹೋಗಬಹುದು ಎಂದು ಅವನನ್ನು ಅಧಿಕಾರಿಗಳು ಸಂತೈಸಲು ಪ್ರಯತ್ನಿಸಿದರೂ ಅದ್ಯಾವುದಕ್ಕೂ ಕಿವಿಗೊಡದೆ, ಅಲ್ಲಿ ಸದ್ದು ಗದ್ದಲ ಮಾಡುವುದೋ, ಬೊಬ್ಬೆ ಹೊಡೆಯುವುದೋ ಪ್ರತಿಭಟನೆ ನಡೆಸುವುದೋ ಅಥವಾ ಅಧಿಕಾರಿಗಳನ್ನು ತರಾಟೆಗೆ ತೆಗೆಯುವುದೋ ಇದ್ಯಾವುದರ ಗೋಜಿಗೆ ಹೋಗದೆ ನನ್ನನ್ನು ಬಿಟ್ಟು ಈ ವಿಮಾನ ಹಾರಾಡುವುದಿಲ್ಲ ಎಂದು ಮಾತ್ರ ಹೇಳುತ್ತಾ ಅಲ್ಲಿಯೇ ಉಳಿದುಬಿಡುತ್ತಾನೆ.
ಓರ್ವ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಇದ್ದರೆ ಇನ್ನೊಂದು ವಿಮಾನದಲ್ಲಿ ಬದಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತೆ. ಆದರೆ ಹಜ್ಜ್ ವಿಮಾನದಲ್ಲಿ ಅಂತಹ ಒಂದು ಬದಲು ವ್ಯವಸ್ಥೆ ಇದೆಯೋ ಎಂದು ತಿಳಿದಿಲ್ಲ. ಆದರೂ ತಾನು ಹಜ್ಜ್ಗಲ್ಲದೆ ಮರಳಿ ತಾಯ್ನಾಡಿಗಿಲ್ಲ ಎಂಬ ಆಮಿರ್ನ ದೃಢ ನಿರ್ಧಾರ ಮತ್ತು ಇಚ್ಛಾ ಶಕ್ತಿ ಅದಕ್ಕೂ ಮಿಗಿಲಾದ ದೇವನ ಮೇಲಿರುವ ಭರವಸೆ ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾದುದು. ಏಕೆಂದರೆ ಓರ್ವ ಪ್ರಯಾಣಿಕನನ್ನು ಬಿಟ್ಟು ಹೋದ ಕಾರಣದಿಂದ ವಿಮಾನ ತನ್ನ ನಿರ್ಧೀಷ್ಟ ಸ್ಥಳವನ್ನು ತಲುಪದೆ ತಾಂತ್ರಿಕ ದೋಷ ಕಂಡುಬರುವುದು ಮತ್ತು ಅದಕ್ಕಾಗಿ ಎರಡೆರಡು ಬಾರಿ ಮರಳಿ ಸ್ವನಿಲ್ದಾಣದಲ್ಲಿ ಇಳಿಸುವುದು ಇಂದೊAದು ಅಪರೂಪದ ಘಟನೆಯೇ ಸರಿ. ಇಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಮಧ್ಯಪ್ರವೇಶಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ನಮ್ಮ ಕಾಲದ ಆಧ್ಯಾತ್ಮಿಕ ಶೋಷಣೆ ಮಾಡುವಂತಹ ಪವಾಡವೇನಲ್ಲ. ಮಹಾಪುರುಷರ ಜೀವಂತವಿರುವ ಅಥವಾ ಮೃತಶರೀರದ ಪವಾಡದ ವ್ಯಾಪಾರ ನಡೆಸುವ ಇಂದಿನ ಕಾಲದಲ್ಲಿ ಇದನ್ನೊಂದು ಪವಾಡವಾಗಿ ನೋಡುವವರಿದ್ದರೂ ಅತಿಶಯೋಕ್ತಿಯಲ್ಲ. ಆದರೆ ಇದು ಯಾವುದೇ ಕಟ್ಟು ಕತೆಯ ಪವಾಡವಲ್ಲ. ಇದೊಂದು ಬಲವಾದ ದೃಢ ನಂಬಿಕೆ ಮತ್ತು ಇಚ್ಛಾಶಕ್ತಿಯ ಸಂಕೇತವಷ್ಟೆ.
ಹಿAದೆ ನಾವೆಲ್ಲರೂ ಅಜ್ಜಿ ಕಥೆ ಕೇಳಿದವರಾಗಿದ್ದೇವೆ. ಆ ಕಥೆಗಳಲ್ಲಿ ಒಂದು ಸಂದೇಶ ಇದ್ದೆ ಇರುತ್ತೆ. ಆದರೆ ಇದು ಕಥೆಯಲ್ಲ ವಾಸ್ತವ. ನೂರಾರು ಜನರ ಮುಂದೆಯೇ ನಡೆದ ಘಟನೆ. ಯಾವುದೇ ಒಂದು ಘಟನೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಡೆದದ್ದಾಗಿದ್ದರೆ ಅದು ಕಾಲ್ಪನಿಕ ಕತೆ ಎಂದು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.
ಪ್ರತಿಯೊಂದು ಧರ್ಮಗಳಲ್ಲೂ ವಿಭಿನ್ನ ರೀತಿಯಲ್ಲಿ ಧಾರ್ಮಿಕ ಆರಾಧಾನೆ ಮತ್ತು ಆಧ್ಯಾತ್ಮಿಕ ಚೈತನ್ಯಗಳಿಗೆ ಹೇತುವಾಗಬಲ್ಲ ಆಚಾರಣೆಗಳಿರುತ್ತೆ. ಇವೆಲ್ಲವುಗಳಲ್ಲೂ ಸಂಕಲ್ಪವೆAಬುದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಸಂಕಲ್ಪವಿಲ್ಲದ ಯಾವುದೇ ಆರಾಧನೆಗಳು ಫಲಶೂನ್ಯ. ಇಸ್ಲಾಮಿನಲ್ಲೂ ಆರಾಧನೆಗಳ ಸ್ವೀಕಾರ್ಯಕ್ಕೆ ಸಂಕಲ್ಪವು ಅತಿ ಅಗತ್ಯ. ಮತ್ತು ಪ್ರಾರ್ಥನೆಗಳ ಸ್ವೀಕೃತಕ್ಕೆ ಶುದ್ಧ ಸಂಪಾದನೆ ಮಾನದಂಡ ಎಂದು ಹೇಳುತ್ತೆ. ನಮ್ಮ ಸಂಪಾದನೆ ಶುದ್ಧವಲ್ಲದಿದ್ದಲ್ಲಿ ಮತ್ತು ಅದು ಅಕ್ರಮ ಅನೀತಿ ಮತ್ತು ಅನ್ಯಾಯವಾಗಿ ಸಂಪಾದಿಸಿದ್ದರೆ ದೇವನ ಮುಂದೆ ಎಷ್ಟೇ ಬೇಡಿದರೂ, ಎಷ್ಟೇ ಪ್ರಾರ್ಥನೆ ಮಾಡಿದರೂ ಆ ಪ್ರಾರ್ಥನೆಯನ್ನು ತಡೆಹಿಡಿಯಲಾಗುತ್ತೆ ಅಥವಾ ಸ್ವೀಕೃತವಾಗಲಾರದು ಎಂದು ಹೇಳಲಾಗುತ್ತೆ. ಏಕೆಂದರೆ ಪ್ರಾರ್ಥನೆಗೆ ಉತ್ತರ ಸಿಗಬೇಕಿದ್ದರೆ ನಾವು ಉಣ್ಣುವ ಆಹಾರ ಮತ್ತು ಮಾಡುವ ಸಂಪಾದನೆ ಹಲಾಲ್ ಅಥವಾ ಶುದ್ಧವಾಗಿರಬೇಕಾದುದು ಅತಿ ಅಗತ್ಯ. ಅನ್ಯಾಯವಾಗಿ ಸಂಪಾದಿಸಿ ಪ್ರಾರ್ಥನೆ ಮಾಡಿದರೆ ಅದು ಸ್ವೀಕೃತವಾಗಲಾರದು ಎಂಬುದು ಇಸ್ಲಾಮಿನ ತತ್ವ. ಅದೇ ರೀತಿ ಹಜ್ಜ್ ಎಂಬ ಪವಿತ್ರ ಕರ್ಮವು ಇಸ್ಲಾಮಿನ ಬುನಾದಿ ಅಥವಾ ಪಂಚ ಸ್ಥಂಭಗಳಲ್ಲೊAದು. ಆದ್ದರಿಂದಲೇ ಪವಿತ್ರವಾದ ಕರ್ಮಕ್ಕೆ ಖರ್ಚು ಮಾಡುವ ಹಣ ಪವಿತ್ರವಾಗಬೇಕಿರುವುದು ಅನಿವಾರ್ಯ.
ಓರ್ವ ಹಜ್ಜ್ ಯಾತ್ರಿಕನ ದೇವನ ಮೇಲಿನ ಭರವಸೆ ಮತ್ತು ಸಂಕಲ್ಪವು ವಿಮಾನವನ್ನೇ ಮರಳಿಸುವಷ್ಟರ ಮಟ್ಟಿಗೆ ಪಾತ್ರ ವಹಿಸುತ್ತೆ ಎಂದಾದರೆ ನಾವು ನಮ್ಮ ದೇವ ಭಯ ಮತ್ತು ಸಂಕಲ್ಪ ಶುದ್ಧಿಯನ್ನೊಮ್ಮೆ ಆತ್ಮಾವಲೋಕನಕ್ಕೆ ಒಡ್ಡಬೇಕಿದೆ.
ಪ್ರವಾದಿ ಮುಹಮ್ಮದ್(ಸ)ರವರ ಶಿಕ್ಷಣ ಪ್ರಕಾರ ತಾನು ಉಡುವುದು, ಕುಡಿಯುವುದು ಮತ್ತು ಉಣ್ಣುವುದು ನ್ಯಾಯವಲ್ಲದ ಸಂಪಾದನೆಯಿAದಾದರೆ ಎಷ್ಟೇ ಪ್ರಾರ್ಥಿಸಿದರೂ ಉತ್ತರ ಸಿಗಲಾರದು. ಓರ್ವನ ಸಂಪಾದನೆ ನ್ಯಾಯಯುತವಾಗಿದ್ದರೆ ಮತ್ತು ಅಕ್ರಮದ ಸಂಪಾದನೆಯಿAದ ತನ್ನ ಹೊಟ್ಟೆ ತುಂಬಿಸಲಾರೆ ಎಂದು ದೃಢ ನಿಶ್ಚಯ ಮಾಡಿದ್ದರೆ ಅವನ ಸಂಕಲ್ಪಕ್ಕನುಸಾರ ದೇವನು ಅವನ ಕರ್ಮಗಳಿಗೆ ಫಲವನ್ನು ನೀಡುವನು. ಒಟ್ಟಿನಲ್ಲಿ ತನ್ನ ಸಂಕಲ್ಪ ಶುದ್ಧಿಯಾಗಿರಬೇಕು. ಪ್ರವಾದಿಯ ಅನುಚರರು ಮುಂಜಾನೆ ಎದ್ದು ದುಡಿಮೆಗಾಗಿ ಮನೆಯಿಂದ ಹೊರಡುವಾಗ ಅವರ ಪತ್ನಿಯರು ಈ ರೀತಿ ತಾಕೀತು ಮಾಡುತ್ತಿದ್ದರಂತೆ, ನೀವು ಅಕ್ರಮ ಸಂಪಾದನೆ ಮಾಡಿ ಮನೆಗೆ ತರಬೇಡಿ.
ಓರ್ವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಐಹಿಕ ಜೀವನದಲ್ಲಿ ಅವನಿಗೆ ಮನ್ನಣೆ ದೊರಕೀತು. ಆದರೆ ಅವನ ಸಂಪಾದನೆ ಶುದ್ಧವಲ್ಲದಿದ್ದರೆ ಅವನು ದೇವನ ದೃಷ್ಟಿಯಲ್ಲಿ ನಿಕೃಷ್ಟನೂ ಅಧಮನೂ ಆಗಿರುವನು. ಬಹುಷ ಆಮಿರ್ನ ಸಂಕಲ್ಪ ಶುದ್ಧಿಯಿಂದಲೇ ಅವನಿಗೆ ಇಂತಹ ಒಂದು ಸೌಭಾಗ್ಯ ದೊರಕಿದೆ. ಅದಲ್ಲದೆ ಇದ್ದರೆ ನಾನು ಹಜ್ಜ್ ಯಾತ್ರೆಗಾಗಿ ಸಂಕಲ್ಪ ಮಾಡಿ ಬಂದಿದ್ದೇನೆ ಮತ್ತು ಇನ್ನು ಹಜ್ಜ್ಗಲ್ಲದೆ ಇಲ್ಲಿಂದ ಮರಳಲಾರೆ ಎಂದು ದೃಢ ನಿರ್ಧಾರ ಮಾಡಲು ಹೇಗೆ ಸಾಧ್ಯ. ಆಮಿರ್ ಇಲ್ಲದೆ ಈ ವರ್ಷದ ಹಜ್ಜ್ ಅಪೂರ್ಣ ಎಂದು ದೇವನು ನಿರ್ಧರಿಸಿದ್ದರೆ ಅದು ನಡೆದೇ ತೀರುವುದು. ದೇವನ ಇಚ್ಛೆಗೆ ವಿರುದ್ಧವಾದ ಯಾವುದು ಕೂಡ ನಡೆಯುವುದಿಲ್ಲ ಎಂಬುದು ವಾಸ್ತವ. ಪರ್ವತದ ತಪ್ಪಲಿನಲ್ಲಿ ಮರದ ಒಂದು ಎಲೆ ಉದುರಿ ಬೀಳುವುದಿದ್ದರೂ ಅದು ದೇವನ ಆಜ್ಞೆಯಂತೆಯೇ ವಿನಃ ನಮ್ಮ ಆಜ್ಞೆಯಂತಲ್ಲ.
ಆಮಿರ್ ಕೊನೆಯ ಯಾತ್ರಿಕನಾಗಿ ವಿಮಾನದೊಳಕ್ಕೆ ಪ್ರವೇಶಿಸಿದರೂ ಎಲ್ಲಾ ಪ್ರಯಾಣಿಕರ ಮತ್ತು ಸಿಬ್ಬಂಧಿ ವರ್ಗದ ಗಮನ ಸೆಳೆದು ಮೊದಲಿಗನಾದ. ಜೆದ್ದಾ ವಿಮಾನ ನಿಲ್ದಾಣ ತಲುಪುದ್ದಿಂತೆ ಆಮಿರ್ನ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತಿದ್ದಂತೆ ಜಗತ್ತಿನಲ್ಲೇ ಹೀರೊ ಆಗಿ ಎಲ್ಲರ ಪ್ರಶಂಸೆಗೆ ಪಾತ್ರನಾದ.
ಆಮಿರ್ನಂತಹ ದೃಢ ಚಿತ್ತದ, ಇಚ್ಛಾ ಶಕ್ತಿಯ, ಸಂಕಲ್ಪ ಶುದ್ಧಿಯ, ಯಾರೊಂದಿಗೂ ವೈಮನಸ್ಸಿಲ್ಲದ, ಅಸೂಯೆ ಅಹಂಕಾರ ಮತ್ತು ಆಡಂಭರತೆಯನ್ನು ಮೈಗೂಡಿಸಿಕೊಳ್ಳದ ಹಜ್ಜಾಜ್ಗಳು ಇನ್ನೂ ವರ್ಷಂಪ್ರತಿ ಹೆಚ್ಚಾಗಲಿ ಮತ್ತು ಅಂತಹ ಮುತ್ತು ರತ್ನಗಳು ಬೆಳೆದು ಬರಲಿ ಎಂದು ಹಾರೈಸೋಣ.
ಅಬ್ದುಸ್ಸಲಾಮ್, ದೇರಳಕಟ್ಟೆ