ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಚಾರ ಪಡೆದ ಮತ್ತು ವೈರಲ್ ಆದ ಒಂದು ಹೆಸರು ಝೊಹ್ರಾನ್ ಮಮ್ದಾನಿ, ಅವರ ಬಗ್ಗೆ ಒಂದಿಷ್ಟು ಚರ್ಚಿಸೋಣ. ಝೊಹ್ರಾನ್ ಮಮ್ದಾನಿ 33 ವರ್ಷದ ಗುಜರಾತ್ ಮೂಲದ ಸ್ಪುರದ್ರೂಪಿ ಯುವಕ ತನ್ನ ಧೀರ ಧೋರಣೆ, ಜನಪರ ಕಾರ್ಯಕ್ರಮಗಳು ಮತ್ತು ಶೋಷಿತರ ಪರವಾಗಿ ನಡೆಸುವ ಹೋರಾಟಗಳಿಂದ ಇಂದು ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರಿಗೆ ಝೊಹ್ರಾನ್ ಮಮ್ದಾನಿ ಒಂದು ಹೊಸ ಭರವಸೆಯ ಕಿರಣವಾಗಿದ್ದಾರೆ. ಝೊಹ್ರಾನ್ ಮಮ್ದಾನಿ ಮೂಲತಃ ಗುಜರಾತ್ ನವರಾಗಿದ್ದು ಉಗಾಂಡಾದಲ್ಲಿ ಜನಿಸಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಬೆಳೆದವರು. ಅವರು ಖ್ಯಾತ ಚಲನ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಗುಜರಾತಿನ ಶಿಕ್ಷಣ ತಜ್ಞ ಮುಹಮ್ಮದ್ ಮಮ್ದಾನಿಯವರ ಪುತ್ರ. ಆದರೆ ಜಗತ್ತಿಗೆ ಅವರ ಪರಿಚಯವಾಗುವುದು ಅವರ ಪೋಷಕರ ಕಾರಣದಿಂದಲ್ಲ ಬದಲಾಗಿ ಅವರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶೋಷಿತ ಮತ್ತು ಹಕ್ಕು ವಂಚನೆಗೊಳಗಾದವರ ಹಾಗೂ ದಮನಿತ ವರ್ಗದವರಿಗಾಗಿ ರೋಟಿ ಕಪ್ಡಾ ಮಕಾನ್ ಎಂಬ ಘೋಷಣೆಯೊಂದಿಗೆ ಹೋರಾಡಿ ಜನಪರ ಕೆಲಸ ಮಾಡುವವರಾಗಿದ್ದಾರೆ. ಅದು ಮಾತ್ರವಲ್ಲ ಸುಮಾರು ಅರವತ್ತು ಸಾವಿರ ಮಂದಿಯನ್ನು ಫೆಲೆಸ್ತೀನಿನಲ್ಲಿ ಮಾರಣ ಹೋಮಗೈದ ಕಿರಾತಕ ಇಸ್ರೇಲ್ ವಿರುದ್ಧ ಮಾತನಾಡಿದ ಧೈರ್ಯಶಾಲಿ ಯುವಕ. ಆದ್ದರಿಂದಲೇ ಅವರು ಸಾಮಾನ್ಯರ ಮತ್ತು ಯುವಜನರ ಹೃದಯಗಳಲ್ಲಿ ತರಂಗವನ್ನು ಸೃಷ್ಟಿಸಿದ್ದಾರೆ. ಅವರ ಈ ಖ್ಯಾತಿ ಇಂದು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಮೊದಲ ಸುತ್ತಿನಲ್ಲಿ ಗೆಲುವನ್ನು ಕಂಡಿದ್ದಾರೆ.
ಝೊಹ್ರಾನ್ನ ತಂದೆ ಗುಜರಾತ್ ಮೂಲದ ಶಿಕ್ಷಣ ತಜ್ಞ, ತಾಯಿ ಮೀರಾ ಒರಿಸ್ಸಾ ಮೂಲದ ಚಲನ ಚಿತ್ರ ನಿರ್ಮಾಪಕಿ. 1991 ಅವರು ಉಗಾಂಡದಲ್ಲಿ ಜನ್ಮ ತಾಳಿದರು. ತನ್ನ ಏಳನೆಯ ವಯಸ್ಸಿನಲ್ಲಿ ನ್ಯೂಯಾರ್ಕ್ಗೆ ವಲಸೆ ಬಂದ ಅವರು ಅಲ್ಲೇ ಬೆಳೆದು ಉನ್ನತ ಶಿಕ್ಷಣ ಪಡೆದು ತದ ನಂತರ ರಾಜಕೀಯಕ್ಕೆ ಧುಮುಕಿದರು. ಎಲ್ಲಾ ಕಾಲದಲ್ಲೂ ಜಗತ್ತಿನ ದೊಡ್ಡಣ್ಣನೆಂಬ ಹೆಸರನ್ನು ಉಳಿಸಿಕೊಂಡೇ ಜಗತ್ತನ್ನು ನಿಯಂತ್ರಿಸುವ ಅಮೇರಿಕ ಬಂಡವಾಳ ಶಾಹಿಗಳ ಕೂಪ. ಆದ್ದರಿಂದಲೇ ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಗೋಜಿಗೆ ಅಲ್ಲಿನ ದೊಡ್ಡಣ್ಣ ಪ್ರಯತ್ನಿಸುವುದೇ ಇಲ್ಲ. ನ್ಯೂಯಾರ್ಕ್ ನಗರದ ಜನರ ಕಷ್ಟಗಳು ಮತ್ತು ಸಮಸ್ಯೆಗಳನ್ನು ಅರಿತ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿ ನಂತರ 2020 ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಅವರು ಅದುವರೆಗೆ ನಾಲ್ಕು ಬಾರಿ ಸದಸ್ಯರಾಗಿದ್ದಂತಹ ಅರವಿಲ್ಲಾ ಸಿಮೋಟಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಯ್ಕೆಯಾದರು. ತಮ್ಮ ಜನಪರ ಆಡಳಿತ, ದಿಟ್ಟ ಎಡಪಂತೀಯ ನಿಲುವು ಮತ್ತು ಹೋರಾಟಗಳ ಮೂಲಕ 2024ರಲ್ಲಿ ಕೂಡ ಅವರು ಮರು ಆಯ್ಕೆಯಾದರು. ಆಗಲೇ ಅವರು ನ್ಯೂಯಾರ್ಕ್ ನ ಮೇಯರ್ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಘೋಷಿಸಿ ನ್ಯೂಯಾರ್ಕ್ನ ಮಾಜಿ ಗವರ್ನರ್ ಆಂಡ್ರೋವನ್ನು ಸೋಲಿಸಿ ನ್ಯೂಯಾರ್ಕ್ನ ನೂತನ ಮೇಯರ್ ಆಗುವ ನಿಟ್ಟಿನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅಧಿಕೃತ ಘೋಷಣೆ ಈ ವರ್ಷದ ಕೊನೆಯಲ್ಲಿ ಘೋಷಣೆಯಾಗಲಿದೆ.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೇನೆAದರೆ ಇಡೀ ಜಗತ್ತು ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವಾಗ ಅದರಲ್ಲೂ ಬಂಡವಾಳಶಾಹಿಗಳ ತವರೂರು ಎಂದೇ ಖ್ಯಾತಿಯಲ್ಲಿರುವ ನ್ಯೂಯಾರ್ಕ್ ಶೇಕಡಾ ಮೂರರಷ್ಟು ಮಾತ್ರ ಮುಸ್ಲಿಮ್ ಜನಸಂಖ್ಯೆ ಇರುವ ನಗರದಲ್ಲಿ ಓರ್ವ ಮುಸ್ಲಿಮ್ ಮಾತ್ರವಲ್ಲ ಎಡಪಂಥೀಯ ವಿಚಾರಧಾರೆಯ ಯುವಕ ಮೇಯರ್ ಸ್ಥಾನಕ್ಕೆ ಗೆಲುವು ಸಾಧಿಸಿದ್ದು ಹೇಗೆ ಎಂಬುದು ಒಂದು ವಿಚಿತ್ರ. ಮಮ್ದಾನಿಗೆ ಗೆಲುವು ತಂದು ಕೊಡಲು ಕಾರಣ ಅವರ ವಿಭಿನ್ನ ಶೈಲಿಯ ಹೋರಾಟದ ಮಾದರಿಯಾಗಿತ್ತು. ರೋಟಿ ಕಪ್ಡಾ ಔರ್ ಮಕಾನ್ ಎಂಬ ಘೋಷಣೆಯೊಂದಿಗೆ ಜನಸಾಮಾನ್ಯರನ್ನು ಒಟ್ಟು ಸೇರಿಸಿ ಮಾಡಿದ ಹೋರಾಟ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಒಂದು ಕಡೆಯಲ್ಲಿ ಅವರ ಗೆಲುವಿನಲ್ಲಿ ಜನಸಾಮಾನ್ಯರು ಖುಷಿ ಪಟ್ಟರೆ, ಇನ್ನೊಂದು ಕಡೆ ಸೋಷಿಯಲಿಸ್ಟ್ ಮತ್ತು ಬಂಡವಾಳಶಾಹಿಗಳ ನಿದ್ರೆಗೆಡಿಸಿದೆ. ಏಕೆಂದರೆ ಅವರೊಬ್ಬ ಮುಸ್ಲಿಮ್, ಅವರು ಫೆಲೆಸ್ತೀನ್ ಪರ ಮಾತಾನಾಡುತ್ತಾರೆ, ನ್ಯೂಯಾರ್ಕ್ ನಗರಕ್ಕೆ ಬೆಂಜಮಿನ್ ನೆತನ್ಯಾಹು ಪ್ರವೇಶಿಸಿದರೆ ಅವರನ್ನು ಬಂಧಿಸುವೆ ಎಂದು ಎಚ್ಚರಿಸಿದ್ದಾರೆ, ಗುಜರಾತಿನಲ್ಲಿ ಗೋದ್ರಾ ಹತ್ಯಾಕಾಂಡದಲ್ಲಿ ನೇರ ಪಾತ್ರಧಾರಿಯಾದ ನರೇಂದ್ರ ಮೋದಿಯನ್ನು ದೂಷಿಸಿದ್ದಾರೆ ಮತ್ತು ಆರೆಸ್ಸೆಸ್ ಭಯೋತ್ಪಾದನೆಯನ್ನು ಖಂಡಿಸುತ್ತಾರೆ. ಆದಾಗ್ಯೂ ಅವರು ಮೇಯರ್ ಚುನಾವಣೆಯಲ್ಲಿ ಆಯ್ಕೆಯಾಗುವುದು ಒಂದು ವಿಶೇಷವೇ ಸರಿ. ಅದಕ್ಕೆ ಮುಖ್ಯ ಕಾರಣ ಅವರ ವಿಭಿನ್ನ ಶೈಲಿಯ ಚುನಾವಣಾ ಪ್ರಚಾರ.
ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಮತ್ತು ಸಾಧಾರಣ ವರ್ಗದವರನ್ನು ಪರಿಗಣಿಸಿ ಅವರಿಗೆ ವಿಶೇಷ ಕೆಲವೊಂದು ಸ್ಕೀಮ್ಗಳನ್ನು ಮುಂದಿಡುತ್ತಾರೆ. ಅದರಲ್ಲಿ ಅಗ್ಗದ ದರದಲ್ಲಿ ಮನೆ ಮತ್ತು ಕಡಿಮೆ ಬಾಡಿಗೆಗೆ ಮನೆ ಸಿಗುವಂತೆ ಮಾಡುವುದು, ಜನರಿಗೆ ದಿನನಿತ್ಯ ಓಡಾಡುವ ನಿಟ್ಟಿನಲ್ಲಿ ಉಚಿತ ಸಾರಿಗೆ ಸೌಲಭ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆ, ದಿನಸಿ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದು, ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ತೆರಿಗೆಯಲ್ಲಿ ಪರಿಷ್ಕರಣೆ ಅರ್ಥಾತ್ ಇದೆಲ್ಲವೂ ಹೇಗೆ ಸಾಧ್ಯ ಎಂದು ಕೇಳಿದರೆ ಶ್ರೀಮಂತರ ಮತ್ತು ವ್ಯಾಪಾರಿಗಳಿಗೆ ಹೆಚ್ಚು ತೆರಿಗೆ ವಿಧಿಸಿ ಅದರಿಂದ ಮಧ್ಯಮ ವರ್ಗದವರ ಜೀವನವನ್ನು ಉತ್ತಮಗೊಳಿಸುವುದು. ಮಾತ್ರವಲ್ಲ ನ್ಯೂಯಾರ್ಕ್ನಲ್ಲಿ ಅಧ್ಯಕ್ಷ ಟ್ರಂಪ್ನ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸುವುದು. ಹೀಗೆ ಶ್ರಮಿಕ ಮತ್ತು ಮಧ್ಯಮ ವರ್ಗಕ್ಕೆ ಚೇತರಿಸಿಕೊಂಡು ಬದುಕಲು ಸಾಧ್ಯವಾಗುವ ಎಲ್ಲಾ ರೀತಿಯ ಯೋಜನೆಗಳನ್ನು ಅವರು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇದುವೇ ಅವರಿಗೆ ಗೆಲುವನ್ನು ತಂದುಕೊಟ್ಟಿತು.
ಅವರು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶ್ರೀಮಂತರನ್ನು ಭೇಟಿಯಾಗಿ ಅವರ ಮುಂದೆ ಮಂಡಿಯೂರುವ ಕೆಲಸಕ್ಕೆ ಕೈಹಾಕಲಿಲ್ಲ. ಏಕೆಂದರೆ ಅವರ ಚುನಾವಣಾ ಪ್ರಣಾಳಿಕೆ ಶ್ರೀಮಂತರ ವಿರುದ್ಧವಾಗಿತ್ತು. ಅವರು ಅದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕೆ ಬದಲಾಗಿ ಅವರು ಸೋಷಿಯಲ್ ಮೀಡಿಯಾದ ಮೊರೆ ಹೋಗಿ ಜನರಲ್ಲಿ ತನ್ನ ಪ್ರಣಾಳಿಕೆಯನ್ನು ವಿವರಿಸುವ ಮೂಲಕ ಹಣ ಸಂಗ್ರಹಕ್ಕೆ ಭಿನ್ನವಿಸಿದರು ಮತ್ತು ಆ ಮೂಲಕ ಅವರಿಗೆ ಹೆಚ್ಚು ಹಣ ಸಂಗ್ರಹ ಮಾಡಲು ಸಾಧ್ಯವಾಯಿತು. ಮಾತ್ರವಲ್ಲ ಇದರಿಂದ ಅವರು ಕೈಗೊಂಡ ಪ್ರಚಾರ ಎಷ್ಟು ಜನಪ್ರಿಯವಾಯಿತೆಂದರೆ ಕೇವಲ ನ್ಯೂಯಾರ್ಕ್ ಮಾತ್ರವಲ್ಲ ಇಡೀ ಜಗತ್ತೇ ಇಂದು ಅವರ ಭಾಷಣವನ್ನು ಆಲಿಸಲು ಮತ್ತು ಅವರ ಪ್ರಚಾರದ ರೀತಿಯನ್ನು ತದೇಕಚಿತ್ತದಿಂದ ಗಮನಿಸುವಂತೆ ಮಾಡಿದೆ.
ಇವೆಲ್ಲದರ ನಡುವೆ ಮಮ್ದಾನಿಯ ವಿರುದ್ಧ ಪ್ರಚಾರ ಮಾಡುವ ವಿರೋಧ ಪಕ್ಷವೂ ತನ್ನ ಪ್ರಚಾರವನ್ನು ಮುಂದುವರಿಸಿದೆ. ಅವರೊಬ್ಬ ಆಂಟಿ ಸೆಮೆಟಿಕ್ (ಯಹೂದಿಯರ ವಿರೋಧಿ) ಏಕೆಂದರೆ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳೂ ಇದ್ದಾರೆ. ಅವರೊಬ್ಬ ಮೂಲಭೂತವಾದಿ ಮುಸ್ಲಿಮ್ ಮತ್ತು ಅವರೊಬ್ಬ ಎಡಪಂಥೀಯ ಎಂಬಿತ್ಯಾದಿ ಆಪಾದನೆಗಳನ್ನು ಹುಟ್ಟು ಹಾಕಿ ಪ್ರಚಾರ ಮಾಡುತ್ತಲೂ ಇದ್ದಾರೆ.
ನಿಜವಾಗಿ ಅಮೇರಿಕ ಎಂಬ ಅಷ್ಟು ದೊಡ್ಡ ದೇಶದ ಒಂದು ಚಿಕ್ಕ ನಗರವಾದ ಆದರೆ ಅಷ್ಟೇ ಶ್ರೀಮಂತ ನಗರವಾದ ನ್ಯೂಯಾರ್ಕ್ನ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದ ಮುಮ್ದಾನಿಯ ವಿರುದ್ಧ ಅಧ್ಯಕರಾದ ಟ್ರಂಪ್ ತಲೆಕೆಡಿಸುವ ಅಗತ್ಯ ಖಂಡಿತಾ ಇಲ್ಲ. ಆದರೆ ಟ್ರಂಪ್ ನೇರವಾಗಿ ಮುಮ್ದಾನಿಯ ವಿರುದ್ಧ ವಾಗ್ದಾಳಿಗೆ ಇಳಿದಿದ್ದು ಅವರೊಬ್ಬ ಪಕ್ಕಾ ಹುಚ್ಚು ಕಮ್ಯೂನಿಸ್ಟ್ ಮತ್ತು ನೋಡಲು ಭಯಾನಕ ಜೀವಿಯಂತೆ ಕಾಣುತ್ತಿದ್ದಾರೆ ಮಾತ್ರವಲ್ಲ ಅವರೊಬ್ಬ ಆಡಳಿತಕ್ಕೆ ತಕ್ಕುದಾದ ವ್ಯಕ್ತಿಯಲ್ಲ ಎಂಬ ಹೇಳಿಕೆಯ ಮೂಲಕ ತನ್ನ ಅಸಹಿಷ್ಣುತೆ ಮತ್ತು ಅಸಹಾಯಕತೆಯನ್ನು ತೋಡಿ ಮತ್ತೊಮ್ಮೆ ಮುಸ್ಲಿಮರೊಂದಿಗಿನ ವೈರತ್ವವನ್ನು ಇಸ್ಲಾಮೊಫೋಬಿಯಾವನ್ನು ನಾಲಿಗೆಯ ಮೂಲಕ ಹರಿಯಬಿಟ್ಟಿದ್ದಾರೆ.
ಟ್ರಂಪ್ ಸೇರಿದಂತೆ ವಿರೋಧ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಮ್ದಾನಿಯ ಪೌರತ್ವನ್ನು ರದ್ಧುಗೊಳಿಸುವಂತೆ ಕೋರಿದ್ದಾರೆ. ಅದಕ್ಕಾಗಿ ಅಲ್ಲಿನ ರಿಪಬ್ಲಿಕ್ ಪಕ್ಷವು ಅಧ್ಯಕ್ಷ ಟ್ರಂಪ್ರೊAದಿಗೆ 1954 ರ ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಪುನಃಸ್ಥಾಪನೆಗೊಳಿಸಬೇಕೆಂದು ಕೂಡ ಕೋರಿದ್ದಾರೆ. 1954 ರಲ್ಲಿ ಅಂದಿನ ಸರಕಾರವು ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಮತ್ತು ಸರಕಾರೇತರ ಹುದ್ದೆಗಳಲ್ಲಿದ್ದ ಎಲ್ಲ ಎಡಪಂಥೀಯರನ್ನು ವಜಾಗೊಳಿಸಿ ಅವರ ಪೌರತ್ವನ್ನು ರದ್ಧುಗೊಳಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.
ಅದಕ್ಕೆ ಕಾರಣವೂ ಇದೆ. ಮಮ್ದಾನಿ ಸ್ವೇಚ್ಛೆಯ ವಿರುದ್ಧ ಮತ್ತು ಬಂಡವಾಳಶಾಹಿಯ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಮಾತ್ರವಲ್ಲ ಟ್ರಂಪ್ನ ಆಪ್ತ ಮಿತ್ರರಾದ ನೆತನ್ಯಾಹು ಮತ್ತು ಅನೇಕ ಶ್ರೀಮಂತರಿಗೆ ಮಮ್ದಾನಿಯ ಯೋಜನೆ ನಿದ್ರೆಗೆಡಿಸುವುದಂತೂ ಸತ್ಯ. ಏಕೆಂದರೆ ನ್ಯೂಯಾರ್ಕ್ ನಗರ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದಲೇ ಮಮ್ದಾನಿಯ ಯೋಜನೆ ಶ್ರೀಮಂತರ ಮತ್ತು ಉದ್ಯಮಿಗಳ ನೀತಿಯನ್ನು ತಲೆಕೆಳಗಾಗಿಸುವುದಂತೂ ಸತ್ಯ.
ನಾವು 21 ನೇಯ ಶತಮಾನದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ದೇಶದಲ್ಲಿ 20 ನೆಯ ಶತಮಾನದ ರಾಜಕೀಯ ನೀತಿಯನ್ನು ಬಳಸಲಾಗುತ್ತೆ. ಆದ್ದರಿಂದಲೇ ಫ್ಯಾಸಿಸ್ಟ್ ಮತ್ತು ಕೋಮುವಾದಿಗಳು ಪದೇ ಪದೇ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಿದ್ದಾರೆ. ಆದರೆ ಮಮ್ಡಾನಿ ಚುನಾವಣಾ ಪ್ರಚಾರಕ್ಕೆ ಅನುಸರಿಸಿದ ನೀತಿ ವಿಶಿಷ್ಟವಾದುದಾಗಿದೆ. ಅವರು ಹೊಸ ಬಗೆಯ ನೀತಿಯನ್ನು ಅನುಸರಿಸುವ ಮೂಲಕ ಜನ ಸಾಮಾನ್ಯರ ಹೃದಯವನ್ನು ಗೆಲ್ಲಲು ಸಾಧ್ಯವಾಗಿದೆ. ಇದೇ ನೀತಿಯನ್ನು ಅಥವಾ ಇದಕ್ಕೆ ಅನುರೂಪವಾದ ಹೊಸ ಬಗೆಯ ಯೋಜನೆ ಮತ್ತು ತಂತ್ರಗಾರಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರೆ ಕೋಮುವಾದಿ, ಕ್ರಿಮಿನಲ್ ಮತ್ತು ಫ್ಯಾಸಿಸ್ಟರನ್ನು ಸೋಲಿಸಲು ಸಾಧ್ಯವಿದೆ ಎಂದು ಮಮ್ದಾನಿ ತೋರಿಸಿಕೊಟ್ಟಿದ್ದಾರೆ.
ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಇದ್ದೇ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ಹತ್ತಾರು ಭರವಸೆಗಳನ್ನು ನೀಡುವ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದರೆ ಅವೆಲ್ಲವನ್ನೂ ಮರೆತು ಬಿಡುವುದು ರಾಜಕಾರಣಿಗಳಿಗೆ ಅಭ್ಯಾಸವಾಗಿ ಬಿಟ್ಟಿದೆ. ಅಂತವರಿಗೆ ತಕ್ಕ ಪಾಠ ಕಲಿಸಲು ಇನ್ನಾದರೂ ಜನಸಾಮಾನ್ಯರು ಮುಂದಾಗಬೇಕು. ಮತೀಯವಾದಿಗಳನ್ನು ಮತ್ತು ಅಧಿಕಾರದಾಹಿಗಳನ್ನು ಸೋಲಿಸಿ ಮನೆಯಲ್ಲಿ ಕೂರಿಸಬೇಕು ಮತ್ತು ಜನಸಾಮಾನ್ಯರಿಗಾಗಿ ಮಿಡಿಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಹೊಸ ಯುವ ಸಮೂಹವು ರಾಜಕೀಯಕ್ಕೆ ಧುಮುಕುವ ಅಗತ್ಯ ಖಂಡಿತ ಇದೆ. ಅಂತಹ ಗುಣ ಮತ್ತು ವೈಶಿಷ್ಯತೆ ಮಮ್ದಾನಿಯವರಲ್ಲಿ ಇದೆ. ಅವರು ಬಳಸಿದ ತಂತ್ರಗಾರಿಕೆ ನಮ್ಮ ದೇಶದ ಜಾತ್ಯಾತೀತವಾದಿಗಳು ಅನುಸರಿಸಬೇಕಾಗಿದೆ. ಅಧಿಕಾರದ ಲಾಲಸೆಯಿಂದ ಹೊರಬಂದು ತನ್ನ ಸ್ವಾರ್ಥತೆಯನ್ನು ಬದಿಗಿಟ್ಟು ಜನರಿಗಾಗಿ ತನ್ನಿಂದೇನು ಮಾಡಲು ಸಾಧ್ಯ ಎಂಬ ಹೊಸ ಕಲ್ಪನೆಯನ್ನು ಹುಟ್ಟು ಹಾಕುವಲ್ಲಿ ಮಮ್ದಾನಿ ಒಂದು ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಅವರಂತಹ ಮುತ್ತು ರತ್ನಗಳು ಬೆಳೆದು ಬರಲಿ ಮತ್ತು ಅವರ ಕನಸು ನನಸಾಗಲಿ ಎಂದು ಹಾರೈಸೋಣ.