ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಅಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟ್ ಅನ್ನು ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆ ಲತಾ ಅವರನ್ನು ಸನ್ಮಾನಿಸಿದರು. ಬಸ್ಸಿನಲ್ಲಿದ್ದ ಮಹಿಳೆಯರಿಗೆ ಇಳಕಲ್ ಸೀರೆ, ಸಿಹಿ ವಿತರಿಸಲಾಯಿತು. ಶಕ್ತಿ ಯೋಜನೆಯ ಫಲಾನುಭವಿಯೊಬ್ಬರು ಮುಖ್ಯಮಂತ್ರಿ ಮತ್ತು ಸಚಿವರಿಗೆ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ನೀಡಿ ಹಾರೈಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಹೆಚ್ ಸಿ. ಮಹದೇವಪ್ಪ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ರೆಡ್ಡಿ ಉಪಸ್ಥಿತರಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿ 2023 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರ ಮೇ 20ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.