ಶಾಲೆಯ ತರಗತಿಯಲ್ಲಿ ‘ಲಾಸ್ಟ್ ಬೆಂಚ್ ವಿದ್ಯಾರ್ಥಿ ಎಂಬ ಮಾತು ಸಾಮಾನ್ಯವಾಗಿ ವಿವಿಧ ಆಯಾಮದಲ್ಲಿ ಚರ್ಚಿತ ವಿಷಯ. ಆದರೆ ‘ಲಾಸ್ಟ್ ಬೆಂಚ್’ ಪರಿಪಾಠಕ್ಕೆ ಮುಕ್ತಿ ನೀಡುವ ಹೊಸ ಬೆಳವಣಿಗೆ ಇತ್ತೀಚೆಗೆ ಕೇರಳದಲ್ಲಿ ನಡೆದಿತ್ತು. ಮಲಯಾಳಂ ಮೂವಿಯೊಂದರಲ್ಲಿ ತೋರಿಸಲಾದ ಕ್ಲಾಸ್ ರೂಮಿನ Setupನಿಂದ ಪ್ರಭಾವಿತಗೊಂಡು ಕೇರಳ ಸರಕಾರ ಈ ಕ್ರಮವನ್ನು ಅನುಸರಿಸಿದೆ. ವಿಶೇಷವೆಂದರೆ ಇಂತಹುದೇ ಬದಲಾವಣೆಯೊಂದು ಸುಶಿಕ್ಷಿತ ಜಿಲ್ಲೆ ದಕ್ಷಿಣ ಕನ್ನಡದಲ್ಲಿಯೂ ಜಾರಿಗೆ ಬಂದಿದೆ.
ಉಳ್ಳಾಲ ತಾಲೂಕಿನ ಬಾಳೆಪುಣಿ ಹೂಹಾಕುವಕಲ್ಲು ಸಮೀಪದ ಪಿ.ಎಂ.ಶ್ರೀ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡಲಾಗಿದೆ.
ಈ ಶಾಲೆಯಲ್ಲಿ ಮಕ್ಕಳ ಬೆಂಚ್ ಹಾಗೂ ಡೆಸ್ಕ್ಗಳನ್ನು ಅರ್ಧ ವೃತ್ತಾಕಾರದಲ್ಲಿ ಇದೀಗ ಬದಲಾಯಿಸಲಾಗಿದೆ. ಶಿಕ್ಷಕರು ಮಧ್ಯದಲ್ಲಿ ನಿಂತು ಪಾಠ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಶಿಕ್ಷಕರಿಗೆ ಹತ್ತಿರವಾಗಿರುವುದಲ್ಲದೆ, ಎಲ್ಲ ಮಕ್ಕಳ ಜತೆ ಶಿಕ್ಷಕರಿಗೆ ಸಮರ್ಪಕ ಸಂವಹನಕ್ಕೆ ಇದು ನೆರವಾಗುತ್ತಿದೆ.
ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಒಟ್ಟು 545 ಮಕ್ಕಳಿದ್ದಾರೆ. ಆರಂಭದಲ್ಲಿ 6ನೇ ತರಗತಿ ಮಕ್ಕಳ ಆಸನ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ಅದನ್ನು ನೋಡಿದ ಇತರ ತರಗತಿಯ ಮಕ್ಕಳೂ ನಮಗೂ ಆದೇ ರೀತಿಯ ವ್ಯವಸ್ಥೆಬೇಕು ಎಂದು ಹೇಳಿದಂತೆ ಅಲ್ಲಿಯೂ ಬದಲಾವಣೆ ಮಾಡಲಾಗಿದೆ. ಸದ್ಯ 30ರಿಂದ 35 ಮಕ್ಕಳವರೆಗಿನ 4ನೇ ತರಗತಿಯಿಂದ 8ನೇ ತರಗತಿವರೆಗಿನ ಒಟ್ಟು 9ನೇ ತರಗತಿಗಳಲ್ಲಿ ‘ಯು’ ಆಕಾರದ ಆಸನ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.
ಮುಖ್ಯೋಪಾಧ್ಯಾಯಿನಿ ವಿಜಯ ಲಕ್ಷ್ಮೀ ಅವರು ಪ್ರತಿಕ್ರಿಯಿಸಿ: ‘ಕೇರಳದ ಕೆಲವು ಶಾಲೆಗಳ ಕೊಠಡಿಗಳ ಆಸನ ವ್ಯವಸ್ಥೆಯ ಬದಲಾವಣೆ ಬಗ್ಗೆ ಗಮನಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಜತೆಗೆ ಚರ್ಚಿಸಿ ಲಾಸ್ಟ್ ಬೆಂಚ್ ಪರಿಕಲ್ಪನೆಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು. ಹೊಸ ವ್ಯವಸ್ಥೆಯನ್ನು ಮಕ್ಕಳು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಶಿಕ್ಷಕರೂ ಇದನ್ನು ಸ್ವಾಗತಿಸಿದ್ದಾರೆ’ ಎನ್ನುತ್ತಾರೆ.