ಇಂದಿನ ಯುವ ಜನಾಂಗದಲ್ಲಿ ಸೌಂದರ್ಯದ ಪ್ರಜ್ಞೆ ಹೆಚ್ಚಾಗುತ್ತಿದ್ದು, ಅತಿ ವೇಗವಾಗಿ ಶರೀರದ ತೂಕ ಇಳಿಸಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಬಿದ್ದು ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ತಮಿಳುನಾಡಿನ ಮಧುರೈನಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಕಲೈಯರಸಿ ಎಂಬ ಯುವತಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ತೂಕ ಇಳಿಸುವ ಮದ್ದು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕಲೈಯರಸಿ ಯೂಟ್ಯೂಬ್ನಲ್ಲಿ ‘ವೆಂಗಾರಂ’ ಅಥವಾ ಬೊರಾಕ್ಸ್ ಎಂಬ ಪುಡಿಯನ್ನು ಬಳಸುವುದರಿಂದ ಬೇಗನೆ ತೂಕ ಇಳಿಸಬಹುದು ಎಂಬ ಮಾಹಿತಿಯನ್ನು ನಂಬಿ, ಮದ್ದಿನ ಅಂಗಡಿಯಿಂದ ಅದನ್ನು ಖರೀದಿಸಿ ಸೇವಿಸಿದ್ದರು. ಮದ್ದು ಸೇವಿಸಿದ ಕೆಲವೇ ಕ್ಷಣಗಳಲ್ಲಿ ತೀವ್ರವಾದ ವಾಂತಿ ಮತ್ತು ಭೇದಿಯಿಂದ ಬಳಲಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ದುರಂತ ಘಟನೆಯು ಇಂದಿನ ಯುವತಿಯರಿಗೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ತೂಕ ಇಳಿಸಿಕೊಳ್ಳುವ ಆಸೆ ಇರುವವರು ಯಾವುದೇ ಕಾರಣಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಯನ್ನು ಕುರುಡಾಗಿ ನಂಬಬಾರದು. ಶರೀರಕ್ಕೆ ಸಂಬಂಧಿಸಿದ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ನುರಿತ ವೈದ್ಯರ ಅಥವಾ ಪ್ರಮಾಣೀಕೃತ ತಜ್ಞರ ಸಲಹೆಯನ್ನು ಪಡೆದೇ ಮುಂದಡಿ ಇಡಬೇಕು. ವೈಜ್ಞಾನಿಕ ಆಧಾರವಿಲ್ಲದ ಇಂತಹ ಮದ್ದುಗಳು ಆಂತರಿಕ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿ ಜೀವಕ್ಕೇ ಕುತ್ತು ತರುತ್ತವೆ. ಸೌಂದರ್ಯಕ್ಕಿಂತ ಜೀವ ಮುಖ್ಯ ಎಂಬ ಅರಿವು ಪ್ರತಿಯೊಬ್ಬ ಯುವತಿಯಲ್ಲಿ ಇರಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.
ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಅವಶ್ಯಕವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ನೆಟ್ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಿದ್ದಾರೆ ಮತ್ತು ಆನ್ಲೈನ್ ಮೂಲಕ ಅಥವಾ ಅಂಗಡಿಗಳಿಂದ ಯಾವ ರೀತಿಯ ಔಷಧಿ ಹಾಗೂ ಪುಡಿಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸಿ, ಅವರಿಗೆ ಇಂತಹ ಅಪಾಯಕಾರಿ ಸೋಷಿಯಲ್ ಮೀಡಿಯಾ ಪ್ರವೃತ್ತಿಗಳ ಬಗ್ಗೆ ತಿಳುವಳಿಕೆ ನೀಡಬೇಕು. ಪೋಷಕರ ಜಾಗೃತಿ ಮತ್ತು ತಜ್ಞರ ಮಾರ್ಗದರ್ಶನ ಮಾತ್ರ ಇಂತಹ ಅನಗತ್ಯ ಸಾವುಗಳನ್ನು ತಡೆಯಲು ಸಾಧ್ಯ.



