ನಸುಕಿನಿಂದ ಸರದಿ ಸಾಲಿನಲ್ಲಿ ನಿಂತ ಜನರು ಆಟಿ ಕಷಾಯ ವಿತರಣೆ ಆರಂಭವಾಗುತ್ತಿದ್ದಂತೆ ಉತ್ಸಾಹದಿಂದ ಸೇವಿಸಲು ಆರಂಭಿಸಿ ಬಾಟಲಿಗಳಲ್ಲೂ ತುಂಬಿಕೊಂಡು ಹೋದರು. ಕೃತಾರ್ಥ ಭಾವದೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವ ಭರವಸೆಯಿಂದ ಖುಷಿಪಟ್ಟರು.
ಗುರುವಾರ ಮಂಗಳೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಸೇವಿಸುವ ಸಂಭ್ರಮ ಕಂಡುಬಂದಿತು. ಮಂಗಳೂರು ನಗರದಲ್ಲಿ ವಿವಿಧ ಸಂಘಟನೆಗಳು, ಆಯುರ್ವೇದ ಆಸ್ಪತ್ರೆಗಳು ಮತ್ತು ಗಿಡಮೂಲಿಕೆಗಳಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಆಟಿ ಕಷಾಯ ವಿತರಣೆ ಕಾರ್ಯಕ್ರಮಗಳು ನಡೆದವು. ಮನೆಗಳಲ್ಲೂ ಕಷಾಯ ಮತ್ತು ಮೆಂತೆ ಗಂಜಿ ಸೇವನೆಯ ಖುಷಿ ಜೋರಾಗಿತ್ತು.
ಕದ್ರಿ ಪಾರ್ಕ್ನಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಹಾಗೂ ಡಿಂಕಿ ಡೈನ್ ಹೋಟೆಲ್, ಆಯುಷ್ ಇಲಾಖೆ ಮತ್ತು ಸಾವಯವ ಕೃಷಿಕ ಗ್ರಾಹಕರ ಬಳಗದ ವತಿಯಿಂದ ವೇದಮಾಯುರ್ವೇದ ಆಸ್ಪತ್ರೆಯಲ್ಲಿ, ಅಶೋಕನಗರದ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಷರಬತ್ತುಕಟ್ಟೆ ಸಮೀಪದ ಪದವು ಪ್ರೌಢಶಾಲೆಯ ಆವರಣ, ಶಾರದಾ ಮಹಿಳಾ ಮಂಡಲ ಸೇರಿದಂತೆ ಅನೇಕ ಕಡೆಗಳಲ್ಲಿ ಕಷಾಯ, ಮೆಂತೆ ಗಂಜಿ ವಿತರಣೆ ನಡೆಯಿತು.
ಕೆಲವು ಮನೆಗಳವರು ಬುಧವಾರವೇ ಪಾಲೆ ಮರವನ್ನು ಗುರುತಿಸಿ, ಅದಕ್ಕೆ ಬಾಳೆಗಿಡದ ಹಗ್ಗ ಅಥವಾ ನೂಲು ಕಟ್ಟಿ ಬುಡದಲ್ಲಿ ಬೆಣಚು ಕಲ್ಲೊಂದನ್ನು ಇರಿಸಿ ಬಂದಿದ್ದರು. ಶುಕ್ರವಾರ ಸೂರ್ಯೋದಯಕ್ಕೆ ಮೊದಲೇ ಹೋಗಿ ಬೆಣಚು ಕಲ್ಲಿನಿಂದ ಮರದ ತೊಗಟೆಯ ತುಂಡನ್ನು ತೆಗೆದುಕೊಂಡು ಬಂದಿದ್ದರು. ಕರಿಮೆಣಸು, ಓಮ, ಬೆಳ್ಳುಳ್ಳಿ, ಜೀರಿಗೆ ಸೇರಿಸಿ ರುಬ್ಬಿ ಸೋಸಿದ ನಂತರ ಬೆಣಚು ಕಲ್ಲನ್ನು ಕೆಂಡಕ್ಕೆ ಹಾಕಿದ ನಂತರ ಕಷಾಯಕ್ಕೆ ಹಾಕಿದರು. ನಂತರ ಕಷಾಯ ಸೇವನೆ ಮಾಡಿದರು.
ಪಾಲೆ ಗಿಡ ನೆಡುವ ಸಂಕಲ್ಪ
“ತುಳುವ ಬೊಳ್ಳಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲೆ ಮರಗಳನ್ನು ನೆಡುವ ಸಂಕಲ್ಪ ಮಾಡಲಾಯಿತು. ಅರಣ್ಯ ಇಲಾಖೆಯಿಂದ ತೆಗೆದುಕೊಂಡು ಬಂದ ಎರಡು ಗಿಡಗಳನ್ನು ಆಯ್ದ ಜಾಗದಲ್ಲಿ ಈ ವಾರದಲ್ಲೇ ಸಾಂಕೇತಿಕವಾಗಿ ನೆಡುವುದಾಗಿ ತಿಳಿಸಲಾಯಿತು. ‘ಒಂದು ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ನಗರದಲ್ಲಿ ನೆಡಲಾಗುವುದು” ಎಂದು ಪ್ರತಿಷ್ಠಾನದ ದಯಾನಂದ ಕತ್ತಲ್ಸಾರ್ ತಿಳಿಸಿದರು.
“ಶರೀರದಲ್ಲಿರುವ ವಿಷಾಂಶಗಳನ್ನು ಹೊರಹಾಕಿ ವರ್ಷವಿಡೀ ಆರೋಗ್ಯವಂತರಾಗಿ ಲವಲವಿಕೆಯಿಂದಿರಲು ಪಾಲೆ ಮರದ ಕಷಾಯ ಸಹಕರಿಸುತ್ತದೆ. ಆಟಿಯ 30 ದಿನಗಳಲ್ಲಿ 30 ಬಗೆಯ ಸೊಪ್ಪುಗಳನ್ನು ತಿನ್ನುತ್ತಿದ್ದರು ಎನ್ನಲಾಗುತ್ತದೆ.”
ರಾಜೇಶ್ ಆಳ್ವ ತುಳುವರ್ಲ್ಡ್ ಫೌಂಡೇಷನ್ ನಿರ್ದೇಶಕ
“ನಾನು ಸಣ್ಣ ವಯಸ್ಸಿನಿಂದಲೇ ಆಟಿ ಕಷಾಯ ಕುಡಿಯುತ್ತಿದ್ದೇನೆ. ರೋಗನಿರೋಧಕ ಶಕ್ತಿ ಹೆಚ್ಚಿ ಜ್ವರ ಶೀತ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ ಎಂಬುದನ್ನು ಅನುಭವಿಸಿ ತಿಳಿದುಕೊಂಡಿದ್ದೇನೆ.”
ಸರಿತಾ ಜನಾರ್ದನ್ ಶಿಕ್ಷಕಿ
73 ಬಗೆಯ ಖಾದ್ಯ; ಸಾವಿರಾರು ಮಂದಿಗೆ ಕಷಾಯ
ಅರಣ್ಯದಲ್ಲಿ ಸಿಗುವ ಕಾಯಿಗಳು ಮತ್ತು ಗಡ್ಡೆಗಳು ಮನೆಗಳ ಹತ್ತಿರ ಬೆಳೆಯುವ ಸೊಪ್ಪುಗಳನ್ನು ಸಂಗ್ರಹಿಸುವುದರಲ್ಲಿ ಕಡಬ ತಾಲ್ಲೂಕಿನ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಬುಧವಾರ ಬ್ಯುಸಿಯಾಗಿದ್ದರು. ಇವುಗಳನ್ನೆಲ್ಲ ಬುಟ್ಟಿಗಳಲ್ಲಿ ತೆಗೆದುಕೊಂಡು ಬಂದು ಕತ್ತಲಾಗುವಷ್ಟರಲ್ಲಿ ಆಯ್ದು ಅಡುಗೆಗೆ ಸಿದ್ಧ ಮಾಡಿಟ್ಟರು. ಗುರುವಾರ ಮುಂಜಾನೆಯಿಂದ ಶಾಲೆ ಆವರಣದಲ್ಲಿ ತುಳುನಾಡಿನ ಆಹಾರ ಪದಾರ್ಥಗಳ ಘಮ. ಹಿಂದಿನ ತಂದಿಟ್ಟ ಸೊಪ್ಪು ಕಾಯಿ ಗಡ್ಡೆ ಇತ್ಯಾದಿ ಸೇರಿ ಒಟ್ಟು 73 ಬಗೆಯ ಪದಾರ್ಥಗಳು ಕೆಲವೇ ತಾಸುಗಳಲ್ಲಿ ತಯಾರಾದವು.
ಶಾಲೆಯ ಒಂದೂವರೆ ಸಾವಿರ ಮಕ್ಕಳು ಅವರ ಪಾಲಕರು ಗಣ್ಯರು ಸೇರಿ ಸಾವಿರಾರು ಮಂದಿ ‘ಆಟಿ ಕಷಾಯ’ ಕುಡಿದು ಆಹಾರದ ಸವಿಯನ್ನುಂಡರು. ಪ್ರದರ್ಶನಕ್ಕೆ ಇರಿಸಿದಲ್ಲಿ ಉಪಯೋಗ ಮತ್ತು ಸಿದ್ಧಪಡಿಸುವ ವಿಧಾನದ ಮಾಹಿತಿ ಫಲಕಗಳು ಇದ್ದವು. ಶಾಲೆಯಲ್ಲಿ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ನೇತ್ರಾವತಿ ತುಳುಕೂಟದ ಸಹಯೋಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೆಸುವಿನ ಎಲೆ ಕೆಸುವಿನ ದಂಟು ಕರಂಡೆಕಾಯಿ ಪುನರ್ಪುಳಿ ಸಿಪ್ಪೆ ಚೇವು ಕೇನೆ ತಿಮರೆ ಮುಂತಾದವುಗಳ ಜೊತೆ ಪ್ರಚಲಿತವಿಲ್ಲದ ಅನೇಕ ಆಹಾರ ಪದಾರ್ಥಗಳ ಪರಿಚಯ ಮಾಡಲಾಯಿತು.