ಮಂಗಳೂರು: ವಿದ್ಯಾರ್ಥಿನಿಯನ್ನು ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಮಾಡಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರೊಂದಿಗೆ ಸ್ನೇಹಿತನನ್ನು ಮಾರತ್ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
19 ವರ್ಷದ ಸಂತ್ರಸ್ತೆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಲೇಜಿನ ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ ಬೆಂಗಳೂರು ನಿವಾಸಿ ಅನೂಪ್ ಬಂಧಿತರು.
‘ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಆರೋಪಿಗಳ ಬ್ಲ್ಯಾಕ್ಮೇಲ್ ಹೆಚ್ಚಾದ ಮೇಲೆ ಮಹಿಳಾ ಆಯೋಗಕ್ಕೆ ಕಳೆದ ವಾರ ಪೋಷಕರ ಜತೆಗೆ ಬಂದು ವಿದ್ಯಾರ್ಥಿನಿ ದೂರು ನೀಡಿದ್ದರು. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿಗೆ ವರ್ಗಾಯಿಸಿ ತನಿಖೆಗೆ ಸೂಚನೆ
ನೀಡಿದ್ದರು. ಮಾರತ್ಹಳ್ಳಿ ಠಾಣೆಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ:
‘ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ಬಳಿಕ ಆಕೆಯ ಜತೆಗೆ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುವುದು, ನೋಟ್ಸ್ ಕಳುಹಿಸುವುದು ಮಾಡುತ್ತಿದ್ದ. ಅಲ್ಲಿ ಶಿಕ್ಷಣ ಪೂರೈಸಿ ಆಕೆ ಬೆಂಗಳೂರಿಗೆ ಬಂದ ನಂತರವೂ ಸಂದೇಶ ಕಳುಹಿಸುತ್ತಿದ್ದ. ನೋಟ್ಸ್ ನೀಡುವುದನ್ನೂ ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತ್ಹಳ್ಳಿಯ ಗೆಳೆಯನ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.
‘ಕೆಲವು ದಿನಗಳ ನಂತರ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್ಗೂ ಈ ವಿಷಯ ಗೊತ್ತಾಗಿತ್ತು. ‘ನೀನು ನರೇಂದ್ರನ ಜೊತೆಗಿರುವ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿಯಿವೆ. ನನ್ನ ಜತೆಗೆ ಸಹಕಾರ ನೀಡದಿದ್ದರೆ ಕಾಲೇಜಿನ ಎಲ್ಲರಿಗೂ ವಿಷಯ ತಿಳಿಯುವಂತೆ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದ. ನಂತರ, ಸಂದೀಪ್ ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಮೂಲಗಳು ತಿಳಿಸಿವೆ.
ಸ್ನೇಹಿತನಿಂದಲೂ ಅತ್ಯಾಚಾರ:
ವಿದ್ಯಾರ್ಥಿನಿ ಮೇಲೆ ನರೇಂದ್ರ ಹಾಗೂ ಸಂದೀಪ್ ಅತ್ಯಾಚಾರ ಎಸಗಿದ್ದ ಕೊಠಡಿ ಅನೂಪ್ಗೆ ಸೇರಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ಕೊಠಡಿಗೆ ಬಂದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನನ್ನ ಕೊಠಡಿಯಲ್ಲಿ ಕ್ಯಾಮೆರಾವಿದೆ. ನನ್ನ ಜತೆಗೂ ಸಹಕಾರ ನೀಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಭಯ ಪಡಬೇಡಿ ದೂರು ನೀಡಿ’
ಸಂತ್ರಸ್ತೆಗೆ ಆಪ್ತಸಮಾಲೋಚನೆ ನಡೆಸಿ ಧೈರ್ಯ ತುಂಬಲಾಗಿದೆ. ‘ವಾರದ ಹಿಂದೆ ಹೆಣ್ಣು ಮಗಳೊಬ್ಬಳು ಪೋಷಕರ ಜತೆಗೆ ಬಂದು ದೂರು ನೀಡಿದ್ದಳು. ಆ ಮಗುವಿಗೆ ಬ್ಲ್ಯಾಕ್ಮೇಲ್ ಮಾಡುತ್ತಾ ಶೋಷಣೆ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳನ್ನೂ ಬಳಸಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ತನ್ನ ಹೇಳಿಕೆ ದಾಖಲಿಸಿದ್ದಾಳೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ‘ಹೆಣ್ಣು ಮಗಳು ಧೈರ್ಯ ತೋರಿ ದೂರು ನೀಡಿದ್ದಾಳೆ. ಬ್ಲ್ಯಾಕ್ಮೇಲ್ಗೆ ಒಳಗಾಗದೇ ದೂರು ನೀಡಬೇಕು. ಹೆದರಿಕೊಂಡರೆ ನೀವೇ ಬಲಿಪಶು ಆಗುತ್ತೀರಿ. ಆರೋಪಿಗಳು ಶೋಷಣೆ ಮಾಡುತ್ತಲೇ ಇರುತ್ತಾರೆ. ಯಾವುದಾದರೂ ತಪ್ಪುಗಳು ನಡೆದರೆ ತಂದೆ –ತಾಯಿಗೆ ಮೊದಲು ತಿಳಿಸಬೇಕು. ನಂತರ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು. ಅದೂ ಸಾಧ್ಯವಾಗದಿದ್ದರೆ ಮಹಿಳಾ ಆಯೋಗಕ್ಕೆ ತಿಳಿಸಿ’ ಎಂದು ನಾಗಲಕ್ಷ್ಮೀ ಮನವಿ ಮಾಡಿದರು.