‘ಮುಸ್ಲಿಂ ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಅವರ ಅಪ್ಪ ಅಮ್ಮ, ಜಮಾತ್ನವರು ಚಿಂತಿಸುತ್ತಾರೆ. ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಈ ಚಿಂತೆ ಬೇಡ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ತಿರುಗೇಟು ನೀಡಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮುಸ್ಲಿಂ ಯುವತಿಯನ್ನು ವಿವಾಹವಾದ ಹಿಂದೂ ಯುವಕನಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು. ಮುಸ್ಲಿಂ ಸಮುದಾಯದ ಖಬರ್ಸ್ಥಾನಗಳ ಬಗ್ಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.
‘ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡಿರುವ ಸಾಕ್ಷಿ ದೂರುದಾರ ಮುಸ್ಲಿಂ ಸಮಾಜಕ್ಕೆ ಸೇರಿದವನು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡದ ಬಗ್ಗೆ ಮಾಹಿತಿ ಇದ್ದರೆ ಅವರದೇ ಕೇಂದ್ರ ಸರ್ಕಾರದ ಮೂಲಕ ತನಿಖೆ ಕೈಗೊಳ್ಳಲಿ’ ಎಂದು ಸವಾಲು ಹಾಕಿದರು.
‘ಧರ್ಮಸ್ಥಳ ವಿಚಾರವಾಗಿ ಮುಸ್ಲಿಂ ಸಮುದಾಯ ಯಾವೊಬ್ಬ ಪ್ರಮುಖರು ಮಾತನಾಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಹೆಗ್ಗಡೆಯವರಿಗೆ ಪ್ರೀತಿ ಇದೆ. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಆದರೆ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಈ ಹಿಂದೆ ಯತ್ನಿಸಿ ಅದಕ್ಕೆ ಪರ್ಯಾಯವಾಗಿ ಕನ್ಯಾಡಿ ಕ್ಷೇತ್ರದ ಆರಂಭಕ್ಕೆ ಕಾರಣರಾದ ಜನಾರ್ದನ ಪೂಜಾರಿ ಅವರಿಗೆ ಈಗ ಧರ್ಮಸ್ಥಳದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕಾಗಿ ಅವರು ಈ ರೀತಿಯ ಹೇಳಿಕೆ ನೀಡಲು ಆರಂಭಿಸಿದ್ದಾರೆ’ ಎಂದು ಅವರು ದೂರಿದರು.
ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಪ್ರಧಾನ ಕಾರ್ಯದರ್ಶಿ ನೌಷದ್ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಮುಖಂಡ ಹಂಝ ಕಬಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.