ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್ಲ ಇಸ್ಮಾಯಿಲ್ ಅವರು ಪವಿತ್ರ ಕುರ್ಆನ್ನ 30 ಕಾಂಡಗಳನ್ನು ಕೈಯಲ್ಲಿ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಸಾಧನೆಯ ಹಿಂದೆ ಸುಮಾರು 5 ವರ್ಷಗಳ ನಿರಂತರ ಪರಿಶ್ರಮವಿದೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಹ್ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ ಸಜ್ಲ ಅವರು ಕುರ್ಆನ್ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಆಗ ಅವರು ಇದೇ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಹಳೆವಿದ್ಯಾರ್ಥಿಯಾಗಿದ್ದು, 2025ರ ಆಗಸ್ಟ್ನಲ್ಲಿ ಬರವಣಿಗೆ ಪೂರ್ಣಗೊಂಡಿದೆ.
ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡ ಕುರ್ಆನ್ ಅನ್ನು ಆ ಕಾಲದ ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪ್ರಸ್ತುತ ಮುದ್ರಣ ಸೌಲಭ್ಯ ಇದ್ದರೂ ಸಜ್ಲ ಅವರು ಕೈಯಲ್ಲಿ ಸ್ಫುಟವಾಗಿ ಬರೆದಿರುವುದು ಸಾಧನೆ ಎನಿಸಿದೆ. ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್ ಸಿಟಿಯ ಮುರ್ ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಷರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಕಡಬ, ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.
ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಅಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದೆ ಸಲಾಗಿದೆ. ಬರೆದು ಮುಗಿಸಲು ಅವರು ಒಟ್ಟು 303 ದಿನಗಳನ್ನು ತೆಗೆದುಕೊಂಡಿದ್ದಾರೆ. ಒಂದು ಪುಟ ಬರೆಯಲು 4 ಗಂಟೆ ಬೇಕಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆದಿದ್ದಾರೆ. ಒಟ್ಟಾರೆ ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ ಎಂದು ಸಜ್ಲ ತಿಳಿಸಿದ್ದಾರೆ.