ನವದೆಹಲಿ: ಶುಕ್ರವಾರ ಬೆಂಗಳೂರಿಗೆ (Bengaluru) ಬರುವ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆನ್ಲೈನ್ ಮೂಲಕ ದಾಖಲೆಗಳನ್ನು ಪ್ರಕಟಿಸಿದ ಅವರು, 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಹಾಗೂ ಅದರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರದ ದತ್ತಾಂಶಗಳನ್ನು ವಿಶ್ಲೇಷಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ, ಅಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಚ್ಚರಿಯಾಗಿ ಸೋಲನ್ನು ಅನುಭವಿಸಿತು. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಮಹಾದೇವಪುರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಸ್ಫೋಟಕ ಆರೋಪ ಮಾಡಿದರು.
ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವೆಡೆ ಮತಗಳ್ಳತನ ಆಗಿದೆ. ಇನ್ನೂ ಕಳೆದ ಐದು ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗುತ್ತದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಿದರೆ ನಮಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿದೆ. ಅದಲ್ಲದೇ ರಾಜಕೀಯ ಪಕ್ಷಗಳಿಗೂ ಕೂಡ ಮತದಾರರ ಪಟ್ಟಿ ನೀಡಿಲ್ಲ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಆಗ್ರಹಿಸಿದ್ದಾರೆ.
ದೇಶದಾದ್ಯಂತ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ಪ್ರತಿಪಾದಿಸಿರುವ ರಾಹುಲ್, ಇದು ಸಂವಿಧಾನ ಹಾಗೂ ರಾಷ್ಟ್ರದ ಸಮಗ್ರತೆಯ ವಿರುದ್ಧದ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂಬುದನ್ನು ಆಯೋಗಕ್ಕೆ ನೆನಪಿಸಲು ಬಯಸುವುದಾಗಿಯೂ ಹೇಳಿದ್ದಾರೆ.