ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ, ಹಿರಿಯ ವಕೀಲರಾದ ಬಾಲನ್, ಡಾ.ಸಿ.ಎಸ್.ದ್ವಾರಕನಾಥ್, ಉಮಾಪತಿ, ಸುಧಾ ಕಟ್ಟಾ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿಯನ್ನೊಳಗೊಂಡ ನಿಯೋಗವು ಭೇಟಿಯಾಗಿ ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡುವುದು ಮಾತ್ರವಲ್ಲದೆ, ತನಿಖೆಯ ಹೊಣೆಯನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರು ಅಥವಾ ಎಡಿಜಿಪಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸಿ.ಎಸ್.ದ್ವಾರಕನಾಥ್, “ದಿನೇ ದಿನೇ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಇದರ ನಡುವೆ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಸಾಕ್ಷಿದಾರ ಬಂದಿದ್ದು, ಆತನಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ರಾಜ್ಯ ಸರಕಾರದ್ದು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲೆ ಮಾತ್ರ ದೌರ್ಜನ್ಯ ನಡೆದಿಲ್ಲ. ಬದಲಾಗಿ ಭಿಕ್ಷುಕರನ್ನು ಹತ್ಯೆ ಮಾಡಿರುವ ಆರೋಪಗಳು ಇವೆ” ಎಂದು ಹೇಳಿದರು.
“ಇನ್ನೂ, ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾಕ್ಷಿ ದೂರುದಾರ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದು, ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದಿರುವುದಾಗಿ ಹೇಳಿದ್ದಾನೆ. ಹೀಗಿರುವಾಗ ರಾಜ್ಯ ಸರಕಾರ ತುರ್ತು ಎಸ್ಐಟಿ ರಚನೆ ಮಾಡಬೇಕು. ಎಲ್ಲ ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು. ಜತೆಗೆ, ಉನ್ನತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.
“ಧರ್ಮಸ್ಥಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪ್ರಕರಣಗಳ ಬೆಳವಣಿಗೆಯ ತನಿಖೆ ಎಲ್ಲವೂ ಓರ್ವ ಸಾಮಾನ್ಯ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ನಡೆಯುತ್ತಿದೆ. ಈ ಇನ್ಸ್ಪೆಕ್ಟರ್ ಡಿವೈಎಸ್ಪಿ ಆದೇಶ ಪಾಲನೆ ಮಾಡಬೇಕು. ಆದರೆ, ವಾಸ್ತವ ಬೇರೆಯೇ ಇದ್ದು, ಅಲ್ಲಿನ ದೊಡ್ಡ ಯಜಮಾನರೇ ಡಿವೈಎಸ್ಪಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಎಸ್ಐಟಿ ರಚನೆ ಮಾಡುವಂತೆ ಕೋರಿ ಸಲ್ಲಿಸಿದ ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಮಾತ್ರವಲ್ಲದೆ, ಗೃಹ ಇಲಾಖೆಯೊಂದಿಗೆ ಚರ್ಚೆ ನಡೆಸಿ ಆನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ದ್ವಾರಕನಾಥ್ ಹೇಳಿದರು.
ಮನವಿಯಲ್ಲೇನಿದೆ?
ಎಡಿಜಿಪಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್ ಐಟಿ ತನಿಖೆ ನಡೆಯಬೇಕು.
ಸಾಕ್ಷ್ಯಗಳನ್ನು ರಕ್ಷಣೆ ಮಾಡಬೇಕು.
ದಾಖಲಾಗಿರುವ ದೂರುಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ನೀಡಬೇಕು.
ಕಳಂಕಿತ ಪೊಲೀಸ್ ಅಧಿಕಾರಿಗಳನ್ನು ತನಿಖೆಯಿಂದ ದೂರ ಇಡಬೇಕು.