“ಸಕೀನಾ! ಸಕೀನಾ! ಎಲ್ಲಿದ್ದೀಯಾ? ಇಲ್ಲಿ ನೋಡು ನನ್ನ ಎದೆಯಲ್ಲಿ ಏನೋ ಇದೆ. ಹುಣ್ಣು ಆಗಿರಬಹುದು. ಕೈಗೆ ತಾಗುತ್ತಿದೆ. ಆದರೆ, ಬಚಾವಾದೆನಪ್ಪ ನೋಯುವುದಿಲ್ಲ” ಎಂದು ಹೇಳುತ್ತಾ ಪರ್ವೀನ್, ಸಕೀನಾಳನ್ನು ಮನೆ ಇಡೀ ಹುಡುಕಿದಳು.
ಸಕೀನ, ಪರ್ವೀನಳ ತಮ್ಮನ ಹೆಂಡತಿ. ಸಕೀನಾ ಸ್ನಾನಕ್ಕೆ ಹೋಗಿದ್ದಾಳೆ ಎಂದು ಅರಿತು ಪರ್ವೀನ್ ಸೋಫಾದಲ್ಲಿ ಕೂತು ಕಾಯುತ್ತಾ ಅಲ್ಲೇ ನಿದ್ದೆಗೆ ಜಾರಿದಳು.
ಸ್ನಾನ ಮುಗಿಸಿ ಬಂದ ಸಕೀನ ಸೋಫಾದಲ್ಲಿ ತನ್ನ ವಸ್ತçದ ಪರಿವೆ ಇಲ್ಲದೆ ಅಡ್ಡಾದಿಡ್ಡಿಯಾಗಿ ಮಲಗಿರುವ ಪರ್ವೀನ್ಳನ್ನು ಎಬ್ಬಿಸಿ “ಹೀಗೆ ಯಾಕೆ ಮಲಗಿದ್ದೀರಾ? ನಿದ್ರಿಸ ಬೇಕೆಂದರೆ ಒಳಗೆ ಕೊಠಡಿಯಲ್ಲಿ ಮಲಗಬಾರದೇ ಯಾರಾದರು ಬಂದವರು ನೋಡಿದರೆ ಎಷ್ಟು ಮುಜುಗರ” ಎಂದು ಹೇಳಿದಳು.
“ಸಕೀನಾ, ಎಷ್ಟು ಹೊತ್ತಿನಿಂದ ನಾನು ನಿನಗೆ ಕಾಯುತ್ತಿದ್ದೇನೆ! ನಿನಗೆ ವಿಷಯ ಏನೂಂತ ತಿಳಿಯಿತೆ?” ಎಂದು ಕೇಳಿದಳು.
“ಇಲ್ಲ ಅಕ್ಕ ಏನಾಯಿತು ಹೇಳಿ”
ಪರ್ವೀನ್, ಸಕೀನಾಳ ಕೈಯನ್ನು ಹಿಡಿದು ತನ್ನ ಎದೆಯ ಮೇಲಿಟ್ಟು, “ಇಲ್ಲಿ ಮುಟ್ಟಿ ನೋಡು. ನನ್ನ ಎದೆಯಲ್ಲಿ ಹುಣ್ಣಾಗಿದೆ. ಇದು ಎಂತಹ ಹುಣ್ಣು ನೋವಿಲ್ಲದ ಹುಣ್ಣು. ನೋವಿಲ್ಲದೆ ಇರುವುದೇ ಸಂತೋಷ” ಎಂದು ಹೇಳಿದಳು.
ಇವಳ ಮಾತು ಕೇಳುತ್ತಿದ್ದ ಸಕೀನಾಳಿಗೆ ಹೃದಯದಲ್ಲಿ ಒಮ್ಮೆ ಧಸಕ್ಕ್ ಆಯಿತು. ಆಕೆ ಪರ್ವೀನ್ಳ ಎದೆಯ ಮೇಲೆ ಕೈ ಆಡಿಸುತ್ತಾ, “ಇದು ಯಾವಾಗದಿಂದ ಇದೆ? ಇಷ್ಟು ದಿನ ಯಾಕೆ ಹೇಳಲಿಲ್ಲ” ಎಂದು ಗಾಬರಿಯಿಂದ ಕೇಳಿದಳು.
“ಯಾ ಅಲ್ಲಾಹ್! ಪರ್ವೀನ್ಗೆ ಆಗಿರುವ ಈ ಹುಣ್ಣು ಎಂತಹ ಹುಣ್ಣಾಗಿರಬಹುದು?” ಎಂದು ಚಿಂತಿಸುತ್ತಾ ತನ್ನ ಮೈದುನ ಅಬ್ದುಲ್ಲಾಗೆ ಕರೆ ಮಾಡಿ ವಿಷಯವನ್ನು ತಿಳಿಸಿದಳು. ಇಂತಹ ಸಮಯ ನನ್ನ ಪತಿ ಜೀವಂತವಾಗಿರುತ್ತಿದ್ದರೆ ಅಕ್ಕನ ಜವಾಬ್ದಾರಿಯನ್ನು ಹೊರುತ್ತಿದ್ದರು. ಏನು ಮಾಡಬೇಕು ಎಂದು ಅವರು ತಿಳಿದಷ್ಟು, ನಮಗೆ ಯಾರಿಗೂ ತಿಳಿದಿಲ್ಲ ಎಂದು ಯೋಚಿಸುತ್ತಾ ತೀರಿ ಹೋದ ತನ್ನ ಪತಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡಳು.
ಗಾಬರಿಗೊAಡ ಸಕೀನಾ ಅಬ್ದುಲ್ಲಾಗೆ ಪುನಃ ಕರೆ ಮಾಡಿ ಬೇಗ ಬರುವಂತೆ ಹೇಳಿದಳು. ಅಬ್ದುಲ್ಲಾ ಬಂದ ತಕ್ಷಣ, ವೈದ್ಯರ ಅಪಾಯಿಂಟ್ಮೆAಟ್ ಪಡೆದು ಪರ್ವೀನಳನ್ನು ವೈದ್ಯರಲ್ಲಿ ಕರಕೊಂಡು ಹೋದರು.
ಪರ್ವೀನಳನ್ನು ಪರೀಕ್ಷಿಸಿದ ವೈದ್ಯರು ಸಕೀನಾಳಿಗೆ ಯಾವುದರ ಬಗೆ ಭಯವಿತ್ತೋ ಅದನ್ನೇ ಹೇಳಿದರು.
ಪರ್ವೀನಳಿಗೆ ಬ್ರೆಸ್ಟ್ ಕ್ಯಾನ್ಸರ್ ಎಂದು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾಗೆ ಕಾಲ ಕೆಳಗಿನಿಂದ ನೆಲ ಕುಸಿದಂತೆ ಆಯಿತು. ಸಕೀನಾ ನಡುಗುತ್ತಾ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಅಲ್ಲೆ ಕೂತು ಅಳ ತೊಡಗಿದರು. ಈಗ ನಾವೇನು ಮಾಡಲಿ ಎಂಬ ಚಿಂತೆ ಆಕೆಗೆ ಕಾಡ ತೊಡಗಿತು.
ವೈದ್ಯರು ತಮ್ಮ ಮಾತನ್ನು ಮುಂದುವರಿಸುತ್ತಾ, “ಇವರಿಗೆ ಆದಷ್ಟು ಬೇಗ ಸರ್ಜರಿ ಮಾಡಬೇಕು” ಆಸ್ಪತ್ರೆಯಲ್ಲಿ ಯಾವಾಗ ದಾಖಲಾಗುತ್ತೀರಿ? ಎಂದು ಕೇಳಿದಾಗ, ಸಕೀನ ಅಬ್ದುಲ್ಲಾನ ಮುಖ ನೋಡಿ, ಏನು ಮಾಡುವುದೆಂದು ಸನ್ನೆಯಿಂದ ನೋಡಿದಳು.
`ಕ್ಯಾನ್ಸರ್’ ಎಂಬ ಪದ ಕೇಳಿದ ತಕ್ಷಣ ಅಬ್ದುಲ್ಲಾ ಕೂಡ ಗಾಬರಿಗೊಂಡರು. ಅಕ್ಕನಿಗೆ ಇಂತಹ ದೊಡ್ಡ ರೋಗ ಹೇಗೆ ಬಂತು? ಇನ್ನು ಏನು ಮಾಡುವುದು ಹಣ ಎಲ್ಲಿಂದ ತರಲಿ ಎಂದೆಲ್ಲಾ ಯೋಚಿಸುತ್ತಾ ಅಬ್ದುಲ್ಲಾಹ್,
“ಎಷ್ಟು ಖರ್ಚು ಬರಬಹುದು ಡಾಕ್ಟೆçÔ ಎಂದು ಮೆಲುಧ್ವನಿಯಲ್ಲಿ ಕೇಳಿದರು.
“ಎಲ್ಲಾ ಖರ್ಚು ಸೇರಿಸಿ ೩ ರಿಂದ ೪ ಲಕ್ಷ ಬೇಕಾಗುವುದು” ಎಂದು ವೈದ್ಯರು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾರಿಗೆ ಏನು ಮಾಡಬೇಕೆಂದು ತೋಚದಾಯಿತು. ಸಮಸ್ಯೆ ಸರ್ಜರಿಯಲ್ಲಿ ಮುಗಿಯುವುದಿಲ್ಲ. ಕೀಮಿಯೋ ತೆರಪಿ ಮಾಡಬೇಕಾಗುತ್ತದೆ. ಆಗಾಗ ಮಾಡುವಾಗ ಅದಕ್ಕೂ ಹಣದ ಅಗತ್ಯ ಇದೆ. ಏನು ಮಾಡುವುದು ಎಂದು ಇಬ್ಬರೂ ಮಾತನಾಡಿಕೊಂಡರು.
ಪರ್ವೀನ್, ಅಬ್ದುಲ್ಲಾಹ್ ಮತ್ತು ಲತೀಫ್ರ ಏಕೈಕ ಸಹೋದರಿ. ಆಕೆ ವಿಧವೆ. ಮಕ್ಕಳೂ ಇಲ್ಲ. ಅಪ್ಪ-ಅಮ್ಮನೂ ಇಲ್ಲ. ಈಗ ಅಣ್ಣ ಕೂಡ ತೀರಿ ಹೋಗಿದ್ದಾರೆ.
ಅಷ್ಟು ಹಣ ಎಲ್ಲಿಂದ ತರುವುದು ಎಂಬ ಚಿಂತೆಯೊAದಿಗೆ ಪರ್ವೀನಳ ಸರ್ಜರಿ ಮಾಡುವ ತಯಾರಿಯನ್ನೂ ಅಬ್ದುಲ್ಲಾ ಮತ್ತು ಸಕೀನ ಮಾಡಲು ಅನುವಾದರು.
ಪರ್ವೀನ್ ವಿವಾಹದ ನಂತರ ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕೇವಲ ತಿನ್ನುವ ಮತ್ತು ಸುತ್ತಾಡುವ ಶೋಕಿ.
ಪರ್ವೀನಳ ಪತಿ ಜೀವಂತವಾಗಿದ್ದಾಗ, ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ. ಇಬ್ಬರು ಪರಸ್ಪರ ನೋಡುತ್ತಲೇ ಭುಸುಗುಟ್ಟಲು ಆರಂಭಿಸುತ್ತಿದ್ದರು.
ಪರ್ವೀನ್ಳ ಅಪ್ಪ ಹುಸೇನ್ ಓರ್ವ ಶ್ರೀಮಂತ ವ್ಯಕ್ತಿ. ಆತ ಎಮ್ಎಸ್ಡಬ್ಲೂö್ಯ ಕಲಿತು, ತಾನು ಜನರ ಸೇವೆ ಮಾಡಬೇಕೆಂದು ಬೇರೆ ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ನೆಲೆಸಿದರು. ಹಳ್ಳಿಗರ ಅಗತ್ಯಗಳಿಗೆ ಕಾಳಜಿವಹಿಸಿ ಸಹಕರಿಸುವವರು ಯಾರೂ ಇರಲಿಲ್ಲ. ಜನರ ಸೇವೆ ಮಾಡುದರೊಂದಿಗೆ ಅವರು ವ್ಯಾಪಾರವನ್ನು ಮಾಡುತ್ತಿದ್ದರು ಮತ್ತು ಹಳ್ಳಿಯ ಜನರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದರು. ವಿವಾಹವಾಗಿ ಪತ್ನಿಯನ್ನೂ ಹಳ್ಳಿಗೆ ಕರಕೊಂಡು ಹೋದ ಹುಸೈನ್ ಹಸನ್ಮುಖಿ ಮತ್ತು ಶ್ರೀಮಂತಿಕೆಯೊAದಿಗೆ ಹೃದಯ ಶ್ರೀಮಂತಿಕೆಯೂ ಆಗಿದ್ದ ಪತಿ-ಪತ್ನಿಯರು ಆ ಊರಿನವರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರು. ಹಳ್ಳಿಗರು ತಮ್ಮೆಲ್ಲ ಸುಖ-ದುಃಖಗಳಲ್ಲಿ ಹುಸೈನ್ ಮತ್ತು ಅವರ ಪತ್ನಿಯನ್ನೂ ಮರೆಯುತ್ತಿರಲಿಲ್ಲ.
ಆ ಹಳ್ಳಿಯಲ್ಲಿ ಸರಿಯಾದ ಶಾಲೆಗಳು ಇರದ ಕಾರಣ, ತಮ್ಮ ಮಕ್ಕಳಿಗೆ ದೂರದ ಊರಿನಲ್ಲಿರುವ ವಸತಿ ಶಾಲೆಗೆ ಸೇರಿಸಿದರು. ಮೂವರು ಅಲ್ಲೇ ಓದುತ್ತಿದ್ದರು.
ತಂದೆ-ತಾಯಿಯಿAದ ದೂರ ಇದ್ದು ಓದುವುದು ಮಕ್ಕಳಿಗೆ ಇಷ್ಟ ಇರಲಿಲ್ಲದಿದ್ದರೂ ಅಪ್ಪ-ಅಮ್ಮನ ನಿರ್ಧಾರದ ಮುಂದೆ ತಲೆ ಬಾಗುವ ಅನಿವಾರ್ಯ ಇತ್ತು. ಮೂವರಿಗೂ ಅಪ್ಪ-ಅಮ್ಮನಿಗೆ ಎದುರು ಹಾಕುವ ಧೈರ್ಯ ಇರಲಿಲ್ಲ ಮತ್ತು ಅವರಿಂದ ದೂರ ಇರಲು ಇಷ್ಟವೂ ಇರಲಿಲ್ಲ.
ಪರ್ವೀನ್ಗೆ ತಾನು ಡಾಕ್ಟರ್ ಆಗಬೇಕು ಎಂಬ ಹಂಬಲ ಇತ್ತು. ಆದುದರಿಂದ ಆಕೆ ಆ ವಾತಾವರಣಕ್ಕೆ ತನ್ನನ್ನು ಹೊಂದಿಸಿ ಬಹಳ ನಿಷ್ಠೆಯಿಂದ ಕಲಿಯ ತೊಡಗಿದಳು. ಮೂವರು ಮನಸಿಟ್ಟು ಶಿಕ್ಷಣ ಮುಂದುವರಿಸಿದರು.
ಪರ್ವೀನ್ ತನ್ನ ಕ್ಲಾಸಿನಲ್ಲಿ ಓದುವುದರಿಂದ ಹಿಡಿದು ಎಲ್ಲಾ ಚಟುವಟಿಕೆಯಲ್ಲಿ ಮೊದಲಿಗಳಾಗಿದ್ದಳು. ಹತ್ತನೆಯ ಪರೀಕ್ಷೆಯಲ್ಲಿ ಅವಳು ಅಗ್ರಸ್ಥಾನದಲ್ಲಿದ್ದಳು. ಮುಂದಿನ ಶಿಕ್ಷಣ ಮೆರಿಟ್ನಲ್ಲಿ ಕಲಿತು ಹೆಸರುವಾಸಿಯಾದ ಡಾಕ್ಟರ್ ಆಗಿ ಅಪ್ಪ-ಅಮ್ಮನ ಹೆಸರು ಬೆಳಗಿಸಬೇಕು ಎಂಬ ಹಂಬಲ ಪರ್ವೀನಳದ್ದು.
ಆದರೆ, ಆಕೆಯ ಕನಸು, ಆಶೆ ಎಲ್ಲವೂ ನುಚ್ಚು ನೂರಾಗುವ ಸಮಯ ಬಂತು. ಹೀಗಾಗಬಹುದು ಎಂದು ಪರ್ವೀನ್ ಕನಸು ಮನಸಿನಲ್ಲಿ ಯೋಚಿಸಿರಲಿಲ್ಲ.
ಅಂದರೆ, ಹುಸೇನ್ರವರ ಆಪ್ತ ಮಿತ್ರ, ಪರ್ವೀನ್ಳನ್ನು ತನ್ನ ಮಗನೊಂದಿಗೆ ವಿವಾಹ ಮಾಡಿಸಬೇಕು ಎಂದು ವಿನಂತಿಸಿದರು. ಹುಸೇನರಿಗೂ, ಮಿತ್ರನ ಕುಟುಂಬ ಹಾಗೂ ರಾಹಿಲ್ ತುಂಬ ಇಷ್ಟ. ರಾಹಿಲ್ ಪರ್ವೀನಳಿಗಿಂತ ೧೫ ವರ್ಷ ದೊಡ್ಡವನಾದರೂ, ಮಿತ್ರನ ಮಗ ಮತ್ತು ವೈದ್ಯ ಕೂಡ ಮತ್ತು ಮಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ಎಂದು ಯೋಚಿಸಿ ಸಂತೋಷ ಪಟ್ಟರು. ಪತ್ನಿಯೊಂದಿಗೆ ಈ ಬಗ್ಗೆ ಚರ್ಚಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
ಉತ್ತಮ ಶಿಕ್ಷಣ ಪಡೆದು ವೈದ್ಯಳಾಗಬೇಕು ಎಂಬ ಕನಸು ಕಂಡ ಪರ್ವೀನ್ ಯಾವ ಕಾರಣಕ್ಕೂ ಮದುವೆಗೆ ಒಪ್ಪಲಿಲ್ಲ. ಆಕೆ ಶಿಕ್ಷಣ ಪಡೆದು ತನ್ನ ಕಾಲಲ್ಲಿ ನಿಲ್ಲಬೇಕು ಎಂಬ ಬಯಕೆಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹಾಗೂ ಆಕೆಗೆ ಆ ಹುಡುಗ ಇಷ್ಟವು ಇರಲಿಲ್ಲ. ಅಪ್ಪ-ಅಮ್ಮನ ಇಚ್ಛೆ ಮತ್ತು ನಿರ್ಧಾರದ ಮುಂದೆ ಅವಳ ನಿರ್ಧಾರ ಮತ್ತು ಇಚ್ಛೆಗೆ ಮನ್ನಣೆ ದೊರಕಲಿಲ್ಲ. “ಅಮ್ಮ ಪ್ಲೀಸ್” ಎಂದು ಗೋಗರೆದರೂ ಅದಕ್ಕೆ ಬೆಲೆ ಇಲ್ಲ.
ಒಲ್ಲದ ಮನಸ್ಸಿನಿಂದ ವಿವಾಹವಾದ ಪರ್ವೀನ್ಳಿಗೆ ಪತಿಯೊಂದಿಗೆ ಹೊಂದಾಣಿಕೆ ಆಗಲು ೧-೨ ವರ್ಷ ತಗಲಿತು. ರಾಹಿಲ್ ಕೂಡ ಪತ್ನಿಯನ್ನು ಸಂತೋಷ ಪಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆತ ಓರಟು ಸ್ವಭಾವದವನಾಗಿದ್ದ ಹಾಗೂ ಸ್ವಾರ್ಥಿಯೂ ಆಗಿದ್ದ.
ಪರ್ವೀನ್ ಗರ್ಭಿಣಿ ಆದಳು. ರಾಹಿಲ್ನೊಂದಿಗೆ ಆಕೆಗೆ ನೆಮ್ಮದಿ ದೊರೆಯುತ್ತಿರಲಿಲ್ಲದಿದ್ದರೂ ತಾನು ಗರ್ಭಿಣಿ ಎಂಬ ಸಂತೋಷದಿAದ ಆಕೆ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಗರಿಷ್ಠ ಪ್ರಯತ್ನಿಸಿದಳು. ಆದರೆ ಪತಿಗೆ ಈ ವಿಷಯ ತಿಳಿಸಲು ಎರಡು ತಿಂಗಳು ಕಳೆಯಲಿ ಎಂದು ಆಕೆಯ ಯೋಚನೆ. ಹಗಲಿರುಳು ತನಗೆ ಹುಟ್ಟುವ ಮಗುವಿನ ಬಗ್ಗೆ ಕನಸು ಕಾಣುವುದು ಆಕೆಯ ದಿನ ನಿತ್ಯದ ಕೆಲಸ.
ಎರಡು ತಿಂಗಳು ಮುಗಿಯುವಷ್ಟರಲ್ಲೇ ಪತಿಯೊಂದಿಗೆ ಹೇಳಬೇಕು ಎಂದು ನಿರ್ಧರಿಸಿದ ಆ ದಿನ ಬಂದೇ ಬಿಟ್ಟಿತು. ನಮಗೆ ಮಗು ಆಗುವ ಸಂತೋಷ ಪತಿಯ ಮುಖದಲ್ಲಿ ನೋಡಬೇಕು. ನಂತರ ಅಮ್ಮನಿಗೆ, ಅತ್ತೆಗೆ ಹೇಳಬೇಕು ಎಂಬ ಲೆಕ್ಕಾಚಾರ ಅವಳದಾಗಿತ್ತು.
ನಾಳೆ ಹೇಳಬೇಕು ಎಂದು ಯೋಚಿಸಿ ಪರ್ವೀನ್ ರಾತ್ರಿ ನಿದ್ದೆ ಇಲ್ಲದೆ ಹಾಸಿಗೆಯಲ್ಲಿ ಹೊರಲಾಡುತ್ತಾ ಬೆಳಿಗ್ಗೆ ಬೇಗನೆ ಎದ್ದು ತನ್ನನ್ನು ಶೃಂಗರಿಸಿ ಪತಿ ಏಳುವುದನ್ನು ಕಾತರದಿಂದ ಕಾಯುತ್ತಾ, ಪತಿಗಾಗಿ ಬೆಳಗಿನ ಉಪಹಾರವನ್ನು ತಯಾರು ಮಾಡಿದಳು. ಕೆಲಸದ ಮಧ್ಯೆ ಪದೇ ಪದೇ ಕೋಣೆಗೆ ಹೋಗಿ ಪತಿ ಎದ್ದಿರಬಹುದೇ ಎಂದು ನೋಡುವುದರಲ್ಲಿ ಕಳೆಯಿತು ಆಕೆಯ ಸಮಯ.
ದಿನಾಲೂ ಏಳುವ ಹೊತ್ತಿನಲ್ಲೇ ಎದ್ದ ರಾಹಿಲ್, ಮದುಮಗಳಂತೆ ಶೃಂಗರಿಸಿರುವ ಪತ್ನಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ. “ಏನು ಮದುವೆಗೆ ಹೋಗಲಿಕ್ಕಿದೆಯೇ? ಅಥವಾ ಅಮ್ಮನ ಮನೆಗೆ ಹೋಗುವ ತಯಾರಿಯೇ?” ಎಂದು ಕೇಳಿದ. ಪರ್ವೀನ್ ನಾಚುತ್ತಾ, ಇಲ್ಲ ಎಂದು ತಲೆ ಅಲ್ಲಾಡಿಸಿದಳು.
“ಮತ್ತೇ?”
ಪರ್ವೀನ್ ಪತಿಯ ಹತ್ತಿರ ಕೂತು ಪತಿಯ ಕೈಯನ್ನು ತನ್ನ ಕೈಯಲ್ಲಿಟ್ಟು, ಮುಖವನ್ನು ನೋಡುತ್ತಾ, “ತುಂಬಾ ದಿವಸದಿಂದ ಒಂದು ವಿಷಯ ನಿಮ್ಮಲ್ಲಿ ಹಂಚಬೇಕು ಎಂದು ಕಾಯುತ್ತಿದ್ದೆ.”
“ತುಂಬ ದಿನ ಯಾಕೆ ಕಾದೆ? ಬೇಗನೆ ಹೇಳಬಾರದೆ? ಏನು ವಿಷಯ” ಎಂದು ಒರಟಾಗಿ ಹೇಳಿದ.
“ನಾನು ಗರ್ಭಿಣಿ. ನಿನ್ನೆಗೆ ಎರಡು ತಿಂಗಳು ಕಳೆಯಿತು. ಮೂರನೇ ತಿಂಗಳು ಆರಂಭಗೊAಡಿತು” ಎಂದು ಸಂತೋಷದಿAದ ಹೇಳಿದಳು.
ಈ ವಿಷಯವನ್ನು ಕೇಳಿದ ರಾಹಿಲಿನ ಮುಖ ಕಪ್ಪಾಯಿತು. ತನ್ನ ಕೈಯನ್ನು ಆಕೆಯ ಕೈಯಿಂದ ಎಳೆದು, ಒಮ್ಮೆಲೆ ಎದ್ದು ನಿಂತು,
“ನಿನಗೆ ತಲೆ ಕೆಟ್ಟಿದೆಯೆ? ವಿವಾಹದ ಎರಡೇ ವರ್ಷದಲ್ಲಿ ಮಗುವಾ! ನಮಗೆ ಐದು ವರ್ಷದ ನಂತರ ಮಗು ಆಗಬೇಕೆಂದು ನಾನು ನಿರ್ಧರಿಸಿದ್ದೆ” ಎಂದು ಅಬ್ಬರಿಸಿದ.
ಪರ್ವೀನಳ ಇಷ್ಟು ದಿನದ ಉತ್ಸಾಹಕ್ಕೆ ನೀರೆರಚಿದಂತಾಯಿತು. ಆಕೆ ಗಡಗಡನೆ ನಡುಗ ತೊಡಗಿದಳು. ಮನಸ್ಸಿಗಾದ ನೋವನ್ನು ತಡೆಲಾರದೆ ಆಕೆ ಅಳುತ್ತಾ, “ನಿಮಗೆ ಸಂತೋಷ ಆಗಲಿಲ್ಲವೇ? ನಾನು ಈ ಸಂತೋಷವನ್ನು ಮೊದಲು ನಿಮ್ಮೊಂದಿಗೆ ಹಂಚಲು ಇಷ್ಟು ದಿನದಿಂದ ಕಾತರದಿಂದ ಕಾಯುತ್ತಿದ್ದೆ” ಎಂದು ನಡುಗುವ ಧ್ವನಿಯಲ್ಲಿ ಹೇಳಿದಳು.
ರಾಹಿಲ್ ಚೀರಾಡುತ್ತಾ, “ನಡಿ! ಈಗಲೇ ನಡಿ! ಈ ಗರ್ಭವನ್ನು ಈಗಲೇ ತೆಗೆದು ಬಿಡುವ” ಎಂದು ಪರ್ವೀನಳ ಕೈ ಹಿಡಿದೆಳೆದ. ಪರ್ವೀನ್ ಒಪ್ಪಲಿಲ್ಲ. ಪರ್ವೀನ್ ಕೂಗಾಡಿದಳು. ಕಿರುಚಾಡಿದಳು.
ರಾಹಿಲ್ ತನ್ನ ಅಮ್ಮನ ಬಳಿ ಹೋಗಿ “ನನಗೆ ಈಗ ಮಗು ಬೇಡ! ಪರ್ವೀನ್ಗೆ ಹೇಳಿ. ಈ ಗರ್ಭವನ್ನು ಈಗಲೇ ತೆಗೆಯಬೇಕು. ಐದು ವರ್ಷದ ತನಕ ನನಗೆ ಮಗು ಬೇಡ. ಅಮ್ಮ ಪರ್ವೀನ್ಗೆ ಹೇಳಿ” ಅಂತ ಚೀರಾಡಿದ.
ಪರ್ವೀನ್ ತನ್ನ ಅಮ್ಮನಿಗೆ ಫೋನಾಯಿಸಿ ಎಲ್ಲ ವಿಷಯವನ್ನು ತಿಳಿಸಿದಳು. ಅಮ್ಮ ರಾಹಿಲ್ನ ಅಮ್ಮನಿಗೆ ಫೋನಾಯಿಸಿ ಮಾತನಾಡಿದರು. ಆದರೆ ಅವರು ಮಗನ ಪರ ವಹಿಸಿದರು. ಅಮ್ಮ ರಾಹಿಲ್ಗೆ ಫೋನಾಯಿಸಿ ಸಮಜಾಯಿಸಲು ಪ್ರಯತ್ನಿಸಿದರು. ಆದರೆ, ರಾಹಿಲ್ ಯಾವ ಕಾರಣಕ್ಕೂ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅಂದೇ ಪರ್ವೀನ್ಗೆ ಆಸ್ಪತ್ರೆಗೆ ಕೊಂಡು ಹೋಗಲಾಯಿತು. ಅತ್ತು ಅತ್ತು ಪರ್ವೀನ್ಳ ಮುಖ ಊದಿ ಕೊಂಡಿತು. ಪರ್ವೀನ್ ಆಸ್ಪತ್ರೆಯಲ್ಲಿ ಪುನಃ ರಾಹಿಲ್ ಮತ್ತು ಅತ್ತೆ-ಮಾವನೊಂದಿಗೆ ಬೇಡಿಕೊಂಡಳು. ತನಗೆ ಈ ಮಗು ಬೇಕು ಎಂದು ಕೂಗಾಡಿದಳು, ಕಿರುಚಿದಳು ಆದರೆ ಯಾರಿಗೂ ಆಕೆಯ ಮೇಲೆ ದಯೆ ಬರಲಿಲ್ಲ.
ಪರ್ವೀನ್ ಅಮ್ಮನಿಗೆ ಫೋನಾಯಿಸಿ “ನಾನು ಮದುವೆಗೆ ತಯಾರಿರಲಿಲ್ಲ ಎಂದು ಹೇಳಿದಾಗ, ನೀವೆಲ್ಲರೂ ಸೇರಿ ನನ್ನ ಇಚ್ಛೆಯನ್ನು ಗಾಳಿಗೆ ತೂರಿ ನನಗೆ ವಿವಾಹ ಮಾಡಿಸಿದರಿ. ರಾಹಿಲ್ ನನಗೆ ಇಷ್ಟ ಇಲ್ಲ ಎಂದು ಹೇಳಿದಾಗಲೂ ನೀವು ಯಾರೂ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಒಲ್ಲದ ಮನಸ್ಸಿನಿಂದ ನಾನು ಅವನೊಂದಿಗೆ ಹೊಂದಿಕೊAಡೆ. ಗರ್ಭಿಣಿ ಆದೆ. ಆದರೆ, ಈಗ ನನಗೆ ಮಗು ಬೇಕು ಎಂದು ಗೋಗರೆದರೂ, ನನ್ನ ಈ ಇಚ್ಛೆಯನ್ನು ಗಾಳಿಗೆ ತೂರಲಾಗುತ್ತಿದೆ. ಸಮಾಜದ ಮುಂದೆ ಈ ಎರಡು ಮನೆಯವರು ಶಿಕ್ಷಿತರು ಎಂದು ಗುರುತಿಸಿಕೊಂಡವರು. ಆದರೆ ಒಂದು ಹೆಣ್ಣಿನ ಬಾಳಿಗೆ, ಹೆಣ್ಣಿನ ಮಾತಿಗೆ, ಹೆಣ್ಣಿನ ನಿರ್ಧಾರಕ್ಕೆ ಈ ಎಜುಕೇಟಡ್ ಜನರ ಮುಂದೆ ಬೆಲೆ ಇಲ್ಲ. ನಾನು ನಿಮ್ಮೆಲ್ಲರನ್ನು ದ್ವೇಷಿಸುತ್ತೇನೆ. ನನ್ನ ಶಿಕ್ಷಣ, ವೈದ್ಯೆ ಆಗುವ ಕನಸು, ತಾಯಿ ಆಗುವ ಕನಸು, ನನ್ನ ಜೀವನ ಎಲ್ಲವನ್ನು ಹಾಳು ಮಾಡಿ ನುಚ್ಚು ನೂರು ಮಾಡಿದ ನಿಮಗೆಲ್ಲರಿಗೂ ನಾನು ದ್ವೇಷಿಸುತ್ತೇನೆ” ಎಂದು ಅಳುತ್ತಾ ಹೇಳಿ, ಅಮ್ಮನ ಉತ್ತರಕ್ಕೆ ಕಾಯದೆ ಫೋನಿಟ್ಟಳು.
ಪತಿಗೂ ಈ ಎಲ್ಲ ವಿಷಯವನ್ನು ಹೇಳಿದಳು. ಪತಿಯ ಮನಸ್ಸು ಕರಗಬಹುದು ಎಂದು ಯೋಚಿಸಿ ಆತನ ಕಾಲ ಮೇಲೆ ಕೂತು ಗೋಗರೆದಳು. ಆದರೆ ಆ ಕಲ್ಲು ಹೃದಯ ಕರಗಲೇ ಇಲ್ಲ. ಬಲವಂತದಿAದ ಆಕೆಯ ಗರ್ಭ ತೆಗೆಯಲಾಯಿತು.
ಪರ್ವೀನ್ಗೆ ಎಚ್ಚರ ಆದಾಗ ತಾನು ಕತ್ತಲೆಯಲ್ಲಿ ಇರುವಂತೆ, ತನ್ನ ಸುತ್ತ ಮತ್ತು ರಾಕ್ಷಸರು ಕೂತಂತೆಯು, ತನ್ನನ್ನು ಚುಚ್ಚಿ ತಿನ್ನುವಂತೆ ಭಾಸವಾಯಿತು. ಆಕೆ ತಲೆ ಹಿಡಿದು ಕಿರುಚಾಡ ತೊಡಗಿದಳು. ನರ್ಸ್ ಚುಚ್ಚು ಮದ್ದು ಕೊಟ್ಟು ನಿದ್ರೆಗೆ ಹೋಗುವಂತೆ ಮಾಡಿದಳು.
ಪರ್ವೀನ್ಗೆ ಸರಿಯಾಗಿ ಎಚ್ಚರ ಆದಾಗ ಯಾರೊಂದಿಗೂ ಮಾತನಾಡಲಿಲ್ಲ. ಮುಖ ತಿರುಗಿಸಿ ಮಲಗಿದಳು. ಆಕೆ ಎಲ್ಲರನ್ನೂ ದ್ವೇಷಿಸುತ್ತಿದ್ದಳು. ಹೊಟ್ಟೆಗೆ ಕೈ ಆಡಿಸಿದಾಗ ಅಲ್ಲಿ ಶೂನ್ಯ ಕವಿದಿತ್ತು. ಆಕೆ ಹೊಟ್ಟೆಗೆ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಳು. ಆಕೆಯ ಹಸಿವು ಬಾಯಾರಿಕೆ ಎಲ್ಲವೂ ಬತ್ತಿ ಹೋಗಿತ್ತು.
ಮನೆಗೆ ಬಂದ ನಂತರವು ಹಗಲಿರುಳು ಅಳುವುದು ಮತ್ತು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಮ್ಮನ ಮನೆಗೆ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿ ಬಾ ಎಂದು ಹೇಳಿದಾಗಲೂ ಆಕೆ ಹೋಗಲಿಲ್ಲ. ಅಮ್ಮ ಬಂದು ಕರೆದಾಗಲು ಪರ್ವೀನ್ ಅಮ್ಮನ ಮುಖವನ್ನು ನೋಡಲು ಇಷ್ಟಪಡಲಿಲ್ಲ. ಬಲವಂತದಿAದ ಪರ್ವೀನಳನ್ನು ಅಮ್ಮ ತನ್ನ ಮನೆಗೆ ಕರೆದುಕೊಂಡು ಬಂದರು.
ಒAದು ಕಾಲದಲ್ಲಿ ಮಾತಿನ ಮಲ್ಲಿ ಎಂದು ಹೆಸರು ಪಡೆದ ಪರ್ವೀನ್, ಈಗ ಮಾತನಾಡುವುದನ್ನೇ ಮರೆತು ಬಿಟ್ಟಿದ್ದಳು. ಯಾರೊಂದಿಗೂ ಮಾತನಾಡುವುದಿಲ್ಲ. ತನ್ನ ಮಂಚದ ಮೇಲೆ ಮಲಗಿ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ತನ್ನಷ್ಟಕ್ಕೆ ಮಾತನಾಡುವುದು, ಅಳುವುದು, ನಗುವುದು ಆಕೆಯ ದಿನಚರಿ.
ಕ್ರಮೇಣ ಆಕೆ, ಸಿಕ್ಕ ಎಲ್ಲ ವಸ್ತುಗಳನ್ನು ತನ್ನ ಮಗುವೆಂದು ಬಗೆದು, ಅದರೊಂದಿಗೆ ಮಾತನಾಡುವುದು, ನಗುವುದು, ಹಾಲುಣಿಸುವುದು, ಕುಣಿಯುವುದು ಎಲ್ಲವೂ ಆರಂಭಗೊAಡಿತು. ಆಕೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು.
ತನ್ನ ಮಗಳು ಮಾನಸಿಕ ರೋಗಿ ಆಗಿದ್ದಾಳೆ ಎಂದು ತಿಳಿಯಲು ಅಮ್ಮನಿಗೆ ಸಮಯ ಬೇಕಾಗಿರಲಿಲ್ಲ. ಆಕೆಯ ಮೇಲೆ ಆಗಿರುವ ಈ ಅನ್ಯಾಯಕ್ಕೆ ನಾವೆಲ್ಲರು ಕಾರಣ ಎಂದು ತನ್ನೊಳಗೆ ಒಪ್ಪಿಕೊಂಡರು. ಆದರೆ ಈಗ! ಈಗ ಸಮಯ ಕೈ ಮೀರಿದೆ.
ಪದೇ ಪದೇ ವೈದ್ಯರು ಸಂಪರ್ಕ ದೊಡ್ಡ ತಲೆನೋವಾಗಿ ಪರಿಣಮಿಸಿತು. ವರ್ಷಗಳ ಮೇಲೆ ವರ್ಷಗಳು ಕಳೆದರೂ ಪರ್ವೀನ್ ಸರಿ ಆಗಲಿಲ್ಲ. ಪತಿಗೆ ತನ್ನನ್ನು ಮುಟ್ಟಲು ಬಿಡಲಿಲ್ಲ. ಪತಿಯನ್ನು ದ್ವೇಷಿಸಿದರೂ ಆತನೊಂದಿಗೆ ಬಾಳುತ್ತಿದ್ದಳು.
ತನ್ನ ಏಕೈಕ ಮಗಳ ಅವಸ್ಥೆ ಕಂಡು ಅಮ್ಮ ಕೊರಗಿ ಕೊರಗಿ ಹಾಸಿಗೆ ಹಿಡಿದರು. ತನ್ನನ್ನು ನೋಡಲೇ ಅಥವಾ ಮಗಳನ್ನು ನೋಡುವುದೇ! ಆದರೆ ಪರ್ವೀನ್ಗೆ ಅಮ್ಮನ ಈ ಸ್ಥಿತಿಯಿಂದ ಮನ ನೋಯುತ್ತಿದ್ದರೂ, ಆಕೆ ಅಮ್ಮನ ಹತ್ತಿರ ಸುಳಿಯುತ್ತಿರಲಿಲ್ಲ. ಈಕೆಯ ದುಃಖದಿಂದ ಅಮ್ಮ ತೀರಿಕೊಂಡರು. ಪರ್ವೀನ್ ಪತಿ ಮತ್ತು ತಂದೆಯೊಡನೆ ಹಣಕ್ಕೆ ಜಗಳಾಡುತ್ತಿದ್ದಳು. ತನಗೆ ಇಚ್ಛೆ ಬಂದAತೆ ಹಣವನ್ನು ಪೋಲು ಮಾಡುವುದೇ ಆಕೆಯ ಅತ್ಯಂತ ಆಸಕ್ತಿದಾಯಕ ಕೆಲಸ.
ಸಂಬAಧಿಕರು, ಪರಿಚಯಸ್ಥರು ಎಲ್ಲರೂ ಆಕೆಯನ್ನು ನೋಡಿ ತಮಾಷೆ ಮಾಡಿ ನಗುವವರೇ ಮತ್ತು ಜರೆಯುವವರೇ ಆದರೆ! ಆಕೆ ಯಾಕೆ ಹೀಗೆ ಆದಳು ಎಂದು ಚಿಂತಿಸುವವರು ಅಥವಾ ಅವಳೊಂದಿಗೆ ಮಾತನಾಡುವವರು ಯಾರೂ ಇಲ್ಲ.
ಕ್ರಮೇಣ ಅಪ್ಪನನ್ನು ಮತ್ತು ಪತಿಯನ್ನು ಕಳಕೊಂಡರು. ಪರ್ವೀನಳ ಜೀವನದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಪತಿಯ ಮನೆಯಲ್ಲಿ ಆಕೆಯ ಬಗ್ಗೆ ಕನಿಕರವುಳ್ಳವರು ಯಾರೂ ಇಲ್ಲ. ಪರ್ವೀನ್ ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಇರ ತೊಡಗಿದಳು. ಅತ್ತಿಗೆ ಎಲ್ಲ ರೀತಿಯಲ್ಲಿ ಪರ್ವೀನ್ಳ ಆರೈಕೆ ಮಾಡುತ್ತಿದ್ದಳು. ಆದರೆ ಪರ್ವೀನಳಿಗೆ ಅಗತ್ಯವಿರುವ ನೆಮ್ಮದಿ, ಸಂತೋಷ ಅತ್ತಿಗೆಯಿಂದಲು ಕೊಡಲು ಸಾಧ್ಯವಿಲ್ಲ. ಈಗ ಪರ್ವೀನ್ ಅಣ್ಣನನ್ನು ಕಳಕೊಂಡರೂ ಆಕೆಯ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ವಿಧಿ ಲಿಖಿತದೊಂದಿಗೆ ಹೋರಾಡಿ ಸೋತು ಹೊಗಿದ್ದಾಳೆ.
ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ಪರ್ವೀನ್ ಕ್ಯಾನ್ಸರ್ ಎಂಬ ಭಯಾನಕ ರೋಗಕ್ಕೆ ತುತ್ತಾಗಿದ್ದಾಳೆ. ಆದರೆ ಆಕೆಗೆ ಇದರ ಪರಿವೆಯೂ ಇಲ್ಲ. ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಆಕೆಯ ರೋಗವನ್ನು ವೈದ್ಯರು, ವೈದ್ಯಕೀಯ ವಿಭಾಗ ಅಥವಾ ತಮ್ಮ ಮತ್ತು ಅತ್ತಿಗೆ ಆಕೆಯ ಆರೋಗ್ಯಕ್ಕಾಗಿ ಸುರಿಸುತ್ತಿರುವ ಹಣ ಯಾವುದು ಅವಳಿಗೆ ಉತ್ತಮ ಆರೋಗ್ಯ ದೊರಕಿಸುತ್ತಿಲ್ಲ.
ಅವಳು ಜೀವಂತ ಶವವಾಗಿ ಉಳಿದಳು.