ಬೇಕಾಗುವ ಸಾಮಗ್ರಿಗಳು:
೧) ಗೋಧಿ ಹುಡಿ- ೧ ಕಪ್, ಮೊಸರು- ೧/೩ ಕಪ್, ಬೇಕಿಂಗ್ ಪೌಡರ್- ೧/೨ ಚಮಚ, ಬೇಕಿಂಗ್ ಸೋಡ- ೧/೪ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಸಕ್ಕರೆ (ಹುಡಿ ಮಾಡಿದ್ದು) – ೨ ಚಮಚ, ಎಣ್ಣೆ- ೨ ಚಮಚ.
೨) ಮಖಾನಿ ಸಾಸ್ ತಯಾರಿಸಲು:
ಬೆಣ್ಣೆ- ೧ ಚಮಚ, ಎಣ್ಣೆ- ೧ ಸ್ಪೂ., ಜೀರಿಗೆ- ೧ ಸ್ಪೂ., ಶುಂಠಿ- ೧ ಇಂಚು, ಬೆಳ್ಳುಳ್ಳಿ- ೫-೬ ಎಸಳು, ಹಸಿಮೆಣಸು- ೧, ನೀರುಳ್ಳಿ- ೩, ಗೇರುಬೀಜ- ೭-೮, ಟೊಮೆಟೊ- ೪, ಉಪ್ಪು- ೧೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧/೨ ಸ್ಪೂ., ಇಡೀ ಗರಮ್ ಮಸಾಲಾ- ಲವಂಗ, ಕೆತ್ತೆ ದಾಲ್ಚಿನ್ನಿ ಎಲೆ, ಬೆಣ್ಣೆ- ೧ ಸ್ಪೂ., ಎಣ್ಣೆ- ೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧ ಸ್ಪೂ., ಕೊತ್ತಂಬರಿ ಹುಡಿ- ೧/೨ ಸ್ಪೂ., ಗರಮ್ ಮಸಾಲಾ ಹುಡಿ- ೧/೪ ಸ್ಪೂ., ಫ್ರೆಶ್ ಕ್ರೀಮ್- ೨ ಸ್ಪೂ., ಕಸೂರಿ ಮೇತಿ- ೧ ಸ್ಪೂ., ಸಕ್ಕರೆ- ೧ ಸ್ಪೂ.
ಪಿಝ್ಝಾದ ಮೇಲ್ಗಡೆ ಹಾಕಲು:
ಕ್ಯಾಪ್ಸಿಕಮ್, ಪನೀರ್ ೫-೬ ತುಂಡು, ನೀರುಳ್ಳಿ, ಓರೆಗ್ಯಾನೋ, ಚಿಲ್ಲಿ ಫ್ಲೇಕ್ಸ್, ಮೊಝರೆಲ್ಲಾ ಚೀಝ್, ಚೀಝ್ ಸ್ಲೆöÊಸ್, ಉಪ್ಪು- ಬಾಣಲೆಯಲ್ಲಿ ಬಿಸಿ ಮಾಡಲು ಹಾಕಲು- ೨ ಕಪ್.
ಮಾಡುವ ವಿಧಾನ:
ನಂಬರ್ (೧)ರಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ನಾದಿ. ೮-೧೦ ನಿಮಿಷಗಳ ವರೆಗೆ ಎಣ್ಣೆ ಹಾಕಿ ಚೆನ್ನಾಗಿ ನಾದಿರಿ. ಮಧ್ಯೆ ಮಧ್ಯೆ ಕೈಗೆ ಎಣ್ಣೆ ಹಚ್ಚಿ ಚೆನ್ನಾಗಿ ನಾದಿರಿ. ಹಿಟ್ಟನ್ನು ಒಂದು ಬಾಲಿನ ಆಕಾರಕ್ಕೆ ತಂದು ಒಂದು ಬೌಲಿನಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಮುಚ್ಚಳ ಮುಚ್ಚಿ ೨ ಗಂಟೆ ಹಾಗೆಯೇ ಇಡಿ.
ಈಗ ಒಂದು ಪ್ಯಾನ್ ಒಲೆಯ ಮೇಲಿಟ್ಟು ಅದಕ್ಕೆ ಬೆಣ್ಣೆ ಹಾಕಿ, ಜೊತೆಗೆ ಎಣ್ಣೆ ಸ್ವಲ್ಪ ಹಾಕಿ. ಈಗ ಜೀರಿಗೆ ಹಾಕಿ ಹುರಿಯಿರಿ. ನಂತರ ಇಡೀ ಗರಮ್ ಮಸಾಲಾ ಹಾಕಿ ಹುರಿಯಿರಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಈಗ ಕತ್ತರಿಸಿದ ನೀರುಳ್ಳಿ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನೀರುಳ್ಳಿ ನಸು ಕಂದು ಬಣ್ಣ ಬಂದಾಗ ಗೇರುಬೀಜ ಹಾಕಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ. ಬೇಕಾದಷ್ಟು ಉಪ್ಪು ಹಾಕಿ. ಸ್ವಲ್ಪ ಕೆಂಪು ಮೆಣಸಿನ ಹುಡಿ ಸೇರಿಸಿ. ೫ ನಿಮಿಷಗಳ ವರೆಗೆ ಹುರಿದು ಇದಕ್ಕೆ ೧/೨ ಕಪ್ ನೀರು ಸೇರಿಸಿ. ೫-೬ ನಿಮಿಷಗಳ ವರೆಗೆ ಮುಚ್ಚಳ ಮುಚ್ಚಿ ಬೇಯಿಸಿ. ಟೊಮ್ಯಾಟೋ ಬೆಂದ ಬಳಿಕ ಈ ಮಿಶ್ರಣವನ್ನು ಒಲೆಯಿಂದ ತೆಗೆದಿರಿಸಿ ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಸೋಸುವ ಜರಡಿಗೆ ಹಾಕಿ, ಅದನ್ನು ಚೆನ್ನಾಗಿ ಜರಡಿ ಹಿಡಿಯಿರಿ. ತುಂಬಾ ನಯವಾದ ಮಿಶ್ರಣ ದೊರೆಯುತ್ತದೆ.
ಪುನಃ ಒಂದು ಬಾಣಲೆಯನ್ನು ಒಲೆಯಲ್ಲಿಟ್ಟು ಅದಕ್ಕೆ ಬೆಣ್ಣೆ, ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಕೆಂಪು ಮೆಣಸಿನ ಹುಡಿ ಹಾಕಿ ಹುರಿಯಿರಿ. ನಂತರ ಜರಡಿಯಾಡಿಟ್ಟ ಮಿಶ್ರಣ ಹಾಕಿ. ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಸ್ವಲ್ಪ ಕೊತ್ತಂಬರಿ ಹುಡಿ ಹಾಕಿ. ಈ ಸಮಯದಲ್ಲಿ ಉಪ್ಪು ಸರಿಯಾಗಿದೆಯಾ ನೋಡಿಕೊಂಡು ಹಾಕಿ. ೫-೬ ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಫ್ರೆಶ್ ಕ್ರೀಮ್ ಹಾಗೂ ಕಸೂರಿ ಮೇತಿ ಹಾಕಿ. ನಂತರ ಒಂದು ಚಮಚ ಹುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಿಝ್ಝಾದ ಮೇಲೆ ಹಾಕಲು ಸಾಸ್ ರೆಡಿ. ತಣ್ಣಗಾಗಲು ತೆಗೆದಿಡಿ.
ನಂತರ ಚೆನ್ನಾಗಿ ನಾದಿ ಇಟ್ಟ ಹಿಟ್ಟನ್ನು ಎರಡು ಭಾಗಗಳಾಗಿ ಮಾಡಿ. ಒಂದು ಸ್ಟೀಲಿನ ಬಟ್ಟಲನ್ನು ತೆಗೆದು ಅದಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ. ಇದರ ಮಧ್ಯೆ ಒಂದು ದೊಡ್ಡ ಪಾತ್ರೆಯಲ್ಲಿ ಉಪ್ಪು ಹಾಕಿ (೨ ಕಪ್) ಅದರ ಮೇಲೆ ಒಂದು ಸ್ಟೀಲಿನ ಅಥವಾ ಅಲ್ಯೂಮಿನಿಯಂ ಸ್ಟಾö್ಯಂಡ್ ಇಟ್ಟು ಮುಚ್ಚಳ ಮುಚ್ಚಿ ೧೦ ನಿಮಿಷ ಮಂದ ಉರಿಯಲ್ಲಿ ಬಿಸಿಯಾಗಲು ಇಡಿ.
ಈಗ ಹಿಟ್ಟನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ರೌಂಡ್ ಲಟ್ಟಿಸಿ, ಎಣ್ಣೆ ಹಚ್ಚಿದ ಸ್ಟೀಲ್ ಪ್ಲೇಟಿನಲ್ಲಿ ಅಂಟಿನವರೆಗೂ ಕೈಯಿಂದ ಒತ್ತುತ್ತಾ ಹರಡಿ. ಫೋರ್ಕ್ನಿಂದ ಇಡೀ ಹಿಟ್ಟಿನಲ್ಲಿ ಸಣ್ಣ ಸಣ್ಣ ರಂಧ್ರ ಮಾಡಿ. ನಂತರ ಇದರ ಮೇಲೆ ಬೆಣ್ಣೆ ಹಚ್ಚಿ. ಈಗ ತಯಾರಿಸಿಟ್ಟ ಮಖಾನಿ ಸಾಸ್ ಹಚ್ಚಿ ಅದರ ಮೇಲೆ ಚೀಝ್ ಸ್ಲೆöÊಸ್ ತುಂಡು ಮಾಡಿ ಇಡೀ ಪಿಝ್ಝಾದ ಮೇಲೆ ಹರಡಿ. ನಂತರ ಮೊಝರೆಲ್ಲ ಚೀಝ್ ಹಾಕಿ. ಈಗ ಪನೀರ್ ತುಂಡುಗಳನ್ನು ಮಖಾನಿ ಸಾಸ್ನಿಂದ ರೋಲ್ ಮಾಡಿ ಪಿಝ್ಝಾದ ಮೇಲೆ ಇಡಿ. ನೀರುಳ್ಳಿ ತುಂಡು, ಕ್ಯಾಪ್ಸಿಕಮ್ ತುಂಡುಗಳನ್ನು ಕೂಡಾ ಪಿಝ್ಝಾದ ಮೇಲೆ ಇಡಿ. ಮೇಲ್ಗಡೆ ಪುನಃ ಮೊಝರೆಲ್ಲ ಚೀಝ್ ಹಾಕಿ. ಓರೆಗ್ಯಾನೋ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ. ಇದನ್ನು ಬಿಸಿಯಾಗಲು ಇಟ್ಟ ದೊಡ್ಡ ಪಾತ್ರೆಯ ಸ್ಟಾö್ಯಂಡಿನ ಮೇಲಿಟ್ಟು ಮುಚ್ಚಳ ಮುಚ್ಚಿ. ಮಂದ ಉರಿಯಲ್ಲಿ ೧೫-೨೦ ನಿಮಿಷಗಳ ವರೆಗೆ ಬೇಯಿಸಿ. ಗೋಧಿ ಹಿಟ್ಟಿನ ಮಖಾನಿ ಪಿಝ್ಝಾ ರೆಡಿ.