ಲೋಹಿತ ಅಮೆರಿಕದಿಂದ ಬಂದು ಎರಡು ದಿನಗಳಾಗಿದ್ದವು, ಅವನು ಅಮೆರಿಕದಿಂದ ಹೊರಡುವ ಸಮಯದಲ್ಲೇ ಅವನ ಗೆಳೆಯ ರವೀಂದ್ರ ಫೋನ್ ಮಾಡಿ ತನ್ನ ಹೆಂಡತಿಗೆ ತೀರ ಅರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಲಾಗಿದೆಯೆಂಬ ವಿಚಾರ ತಿಳಿಸಿದಾಗ “ನಾ ಊರಿಗೆ ಹೊರಡುತ್ತಿದ್ದೇನೆ ಅಲ್ಲಿ ಒಂದು ವಾರ ಇರುತ್ತೇನೆ, ಈ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮಲ್ಲಿ ಬರುತ್ತೇನೆ, ಧೈರ್ಯದಿಂದಿರು ಏನು ಆಗುವುದಿಲ್ಲ” ಎಂದು ಸಮಾಧಾನ ಹೇಳಿದ.
ಸಮಯದ ಎಷ್ಟೇ ಅಭಾವವಿದ್ದರೂ ಅಮೆರಿಕಕ್ಕೆ ಹಿಂತಿರುಗುವುದಕ್ಕೆ ಮುನ್ನ ಅವಕಾಶ ಮಾಡಿಕೊಂಡು ಗೆಳೆಯನನ್ನು ಭೇಟಿ ಮಾಡಲೇ ಬೇಕೆಂದು ತೀರ್ಮಾನಿಸಿದ ಲೋಹಿತ ಅವನು ಸಹ ವೈದ್ಯನಾಗಿರುವುದರಿಂದ ಗೆಳೆಯನ ಮಡದಿಯ ಖಾಯಿಲೆ ಬಗ್ಗೆ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಏನಾದರೂ ಸಲಹೆ ಕೊಡಬಹುದೆಂದು ಅವನ ಆಲೋಚನೆಯಾಗಿತ್ತು.
ಅವನ ಊರಿಂದ ರವೀಂದ್ರ ಇರುವ ಶಹರಕ್ಕೆ ಹೆಚ್ಚೆಂದರೆ ಮೂರು ತಾಸಿನ ಹಾದಿ.
ಅಮೆರಿಕದಿಂದ ಬಂದ ಎರಡು ದಿನ ಬಳಿಕ ಅದೊಂದು ದಿನ ಲೋಹಿತ ಅರ್ಷದ್ಗೆ ಫೋನ್ ಮಾಡಿ ನಾಳೆ ಬೆಳೆಗ್ಗೆ ಬರುವುದಕ್ಕಾಗುತ್ತೇನೆಂದು ವಿಚಾರಿಸಿದ ಅವನು ಬರುತ್ತೇನೆಯೆಂದು ಒಪ್ಪಿಕೊಂಡ. ಆ ಮೇಲೆ ಲೋಹಿತ, ರವೀಂದ್ರನಿಗೆ ಫೋನ್ ಮಾಡಿ ನಾಳೆ ಬರುತ್ತಿದ್ದೇನೆ ಎಂಬ ಸಮಾಚಾರ ಮುಟ್ಟಿಸಿದ.
ಅರ್ಷದ್ ಟ್ಯಾಕ್ಸಿ ಚಾಲಕ, ಲೋಹಿತ ಅಮೆರಿಕದಿಂದ ಬಂದು ಇಲ್ಲಿ ಎಲ್ಲಾದರೂ ಹೋಗುದಿದ್ದರೆ ಅರ್ಷದ್ಗೆ ಫೋನ್ ಮಾಡುತ್ತಿದ್ದ, ಅವನು ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದೆ ಹಾಕಿ ಬಂದು ಲೋಹಿತನ ಕಾರು ಓಡಿಸುತ್ತಿದ್ದ.
ಎರಡು ತಿಂಗಳ ಹಿಂದಷ್ಟೇ ರವೀಂದ್ರನ ಮಗ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದ ಈ ಸಮಾಚಾರವನ್ನು ಅಳುತ್ತ ಹೇಳಿದಾಗ ಆಗ ಲೋಹಿತ ಅಮೆರಿಕದಲ್ಲಿದ್ದ ಮತ್ತು ಆಸ್ಪತ್ರೆಯಿಂದ ಮನೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದ. ಅಂದು ಲೋಹಿತ ಸರಿಯಾಗಿ ನಿದ್ದೆ ಮಾಡಲಿಲ್ಲ. ಹತ್ತಾರು ಬಾರಿ ಗೆಳೆಯನಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದ.
ಲೋಹಿತ ಮತ್ತು ರವೀಂದ್ರ ಅನೇಕ ವರ್ಷದವರೆಗೆ ಸಹಪಾಠಿಗಳಾಗಿದ್ದರು.
ಕೊಟ್ಟ ಮಾತಿನಂತೆ ಅರ್ಷದ್ ಬೆಳಗ್ಗೆಯೇ ಬಂದ ಬಿಟ್ಟ, ಉಪಹಾರದ ಬಳಿಕ ಇಬ್ಬರು ಹೊರಟರು.
ಮಧ್ಯದಾರಿಯಲ್ಲಿ ಲೋಹಿತನಿಗೆ ಟೀ ಕುಡಿಯಬೇಕೆಂದೆನಿಸಿ ಎಲ್ಲಾದರೊಂದು ಕಡೆ ಕಾರು ನಿಲ್ಲಿಸಲು ಸೂಚಿಸಿದ.
ಮುಂದೊAದು ಊರಿತ್ತು. ರಸ್ತೆ ಪಕ್ಕದಲ್ಲಿರುವ ದರ್ಶಿನಿ ಮುಂದೆ ನಿಲ್ಲಿಸಿದ ಅರ್ಷದ್ ಅವರಿಬ್ಬರು ಇಳಿದು ಟೀ ಸೇವಿಸಿ ಹಿಂತಿರುಗಿದಾಗ ಕಾರು ಬಳಿ ನಡು ವಯಸ್ಸಿನ ಹಳ್ಳಿ ಮಹಿಳೆಯೊಬ್ಬಳು ಆರೇಳು ವರ್ಷದ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಲೋಹಿತ ಕಾರು ಹತ್ತಲು ಹೋದಾಗ ಮಹಿಳೆ ಬಂದು, ಬಸ್ಸುಗಳಲ್ಲಿ ತುಂಬ ರಷ್ ಇದೆ, ಹತ್ತಲು ಸಹ ಸಾಧ್ಯವಿಲ್ಲ, ತಬ್ಬಲಿ ಕೂಸಿಗೆ ಜ್ವರ ಇಲ್ಲಿ ಔಷಧಿಗೆ ಬಂದಿದ್ದೆ. ಮುಂದಿನ ಊರಿನವರೆಗೆ ಕರೆದುಕೊಂಡು ಹೋಗಿ ಎಂದು ವಿನಂತಿಸಿಕೊAಡಳು. “ಪುಣ್ಯ ಬರುತ್ತೆಯಪ್ಪ ಇಲ್ಲ ಎನ್ನ ಬೇಡಿ” ಕೊನೆಯಲ್ಲಿ ಈ ವಾಕ್ಯ ಹೇಳಿದಳು.
ಹಿಂದಿನ ಆಸನವಂತು ಖಾಲಿಯಿದೆ ಕೂರಿಸಿಕೊಂಡು ಹೋದರಾಯಿತು ಎಂದು ಹಿಂದಿನ ಬಾಗಿಲನ್ನು ತೆರೆದಾಗ ಮಹಿಳೆ ಮೊದಲು ಮಗುವನ್ನು ಜೋಪಾನವಾಗಿ ಕೂರಿಸಿ ಆ ಮೇಲೆ ಅವಳು ಹತ್ತಿಕೊಂಡಳು.
ಕಾರು ಮುಂದೆ ಹೊರಟಾಗ ಲೋಹಿತ ಹಿಂತಿರುಗಿ ಮಹಿಳೆಯನ್ನು ನೋಡುತ್ತ ಆ ಮಗುವಿನ ತಂದೆ ತಾಯಿ ಎಲ್ಲಿ ಎಂದು ಹೀಗೆ ಸಹಜವಾಗಿ ವಿಚಾರಿಸಿದ, ಮಗುವಿನ ಹಿಂದೆ ಒಂದು ನೋವಿನ ಕಥೆಯೇ ಇತ್ತು.
ಸುಮಾರು ನಾಲ್ಕು ವರ್ಷದ ಕೆಳಗೆ ಅದೆಲ್ಲಿಂದಲೂ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಮುಸ್ಲಿಂರ ಒಂದು ಕುಟುಂಬ ಸಹ ಇಲ್ಲದ ಆ ಹಳ್ಳಿಗೆ ಬಂದರು, ಬರಿಕೈಯಲ್ಲಿ ಬಂದ ಅವರು ಆಲೆಮನೆಗಳಲ್ಲಿ ಕೆಲಸ ಮಾಡುತ್ತ ಅಲ್ಲೆ ಬಾಡಿಗೆಗೊಂದು ಕೋಣೆ ಹಿಡಿದು ಜೀವನ ಮಾಡ ತೊಡಗಿದರು, ಯಾರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವಿದ್ದರು, ಊರಿನ ಹತ್ತಿರವೇ ಹರಿಯುವ ನದಿಗೆ ಅವರು ಮಾಮೂಲಿನಂತೆ ಒಂದು ದಿನ ಹೋದರು. ಮಗುವನ್ನು ಅಂಗನವಾಡಿಯಲ್ಲಿ ಬಿಟ್ಟು ಹೋದಾಗ ನದಿ ತುಂಬಿ ಹರಿಯುತ್ತಿತ್ತು.
ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹೆಂಡತಿ ನದಿಯಲ್ಲಿ ಜಾರಿಕೊಂಡಳು. ಅವಳನ್ನು ಕಾಪಾಡಲು ಗಂಡ ನದಿಗೆ ದುಮುಕಿದ, ನೀರಿನ ಹರಿತ ಜಾಸ್ತಿಯಿತ್ತು, ಹರಿಯುವ ನದಿಯಲ್ಲಿ ಇಬ್ಬರೂ ಕೊಚ್ಚಿಕೊಂಡರು ಆಮೇಲೆ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು, ಅವರಿಬ್ಬರ ಹೆಣಗಳು ದೊರೆತವು, ಆಮೇಲೆ ಊರಿನವರು ಸ್ವಲ್ಪ ದೂರದ ಹಳ್ಳಿಯಲ್ಲಿರುವ ಮುಸ್ಲಿಂರನ್ನು ಕರೆಸಿ ಅವರ ಧರ್ಮ ಪದ್ಧತಿಯಂತೆ ಅವರನ್ನು ದಫನ್ ಮಾಡಿಸಿದರು. ಇದಾದ ಬಳಿಕ ಮಗುವನ್ನು ಯಾರು ನೋಡಿ ಕೊಳ್ಳುತ್ತಾರೆಂದು ಪ್ರಶ್ನೆ ಮುಂದೆ ಬಂದಾಗ ಆ ಹಿಂದು ಮಹಿಳೆ ಮುಂದೆ ಬಂದು ಇದರ ಜವಾಬ್ದಾರಿ ನನ್ನ ಮೇಲಿರಲಿ ನನ್ನ ಎರಡು ಮಕ್ಕಳಂತೆ ಇದನ್ನು ಸಹ ಸಾಕುತ್ತೇನೆ ಎಂದು ಊರಿನವರ ಮುಂದೆ ಒಪ್ಪಿಕೊಂಡು ಅಂದಿನಿAದ ಅವಳೇ ಆ ಮಗುವನ್ನು ನೋಡುಕೊಳ್ಳುತ್ತಿದ್ದಳು. ಆ ಮಗುವಿನ ಅಪ್ಪ ಅಮ್ಮ ಏನು ಹೆಸರನ್ನು ಇಟ್ಟಿದ್ದರೂ ಅದನ್ನು ಬದಲಾಯಿಸಲಿಲ್ಲ.
ಇಷ್ಟ್ಟೆಲ್ಲ ಕಥೆ ಹೇಳಿದ ಬಳಿಕ ಮಹಿಳೆ ಮೌನ ಧರಿಸಿಕೊಂಡು ರಸ್ತೆಯ ಕಡೆಯೇ ಗಮನವಿಟ್ಟು ನೋಡುತ್ತಿದ್ದಳು. ಅವಳು ಇಳಿಯುವ ಸ್ಥಳ ಬಂದ ಕೂಡಲೇ “ಇಲ್ಲೇ ನಿಲ್ಲಿಸಿ” ಎಂದಳು.
ಅವಸರ ಬೇಡ ಮಹಿಳೆ ನೆಮ್ಮದಿಯಿಂದ ಇಳಿಯಲಿ ಎಂದು ಅರ್ಷದ್ ಇಂಜೀನ್ ಆಫ್ ಮಾಡಿದ.
ಮಹಿಳೆ ಮೊದಲು ತಾನಿಳಿದು ಆಮೇಲೆ ಮಗುವನ್ನು ಜೋಪಾನವಾಗಿ ಇಳಿಸಿಕೊಂಡಳು.
“ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ಹಾರೈಸಿದಳು.
ಇವಳ ಹಾರೈಕೆ ಖಂಡಿತ ದೇವರು ಒಪ್ಪುತ್ತಾನೆ ಎಂದು ಯೋಚಿಸಿದ ಲೋಹಿತ.
ಕಾರು ಒಡಿಸುತ್ತಿದ್ದರೂ ತನ್ನ ಇಡೀ ಗಮನವೆಲ್ಲ ಮಹಿಳೆಯ ಕಡೆಯಲಿಟ್ಟಿದ್ದ ಅರ್ಷದ್, ಮಹಿಳೆ ಇಳಿದ ಬಳಿಕ ಅರ್ಷದ್ “ದೇವರು ಯಾವ ಯಾವ ರೂಪದಲ್ಲಿರುತ್ತಾನೆ ಎಂದು ಹೇಳುವುದಕ್ಕಾಗುವುದಿಲ್ಲ.”
ಲೋಹಿತ ಏನನ್ನು ಹೇಳಲಿಲ್ಲ ಅವನಿಗಂತು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದಂತಾಯಿತು. ಅರ್ಷದ್ ಕಾರು ಸ್ಟಾರ್ಟ್ ಮಾಡುತ್ತಿರುವಾಗ ಲೋಹಿತ ಹೇಳಿದ, “ಅರ್ಷದ್ ಈ ಊರು ನೆನಪಿಡಿ. ಬರುವಾಗ ಆ ಮಹಿಳೆಯನ್ನು ಮತ್ತೆ ಭೇಟಿ ಮಾಡೋಣವಂತೆ ಅವಳಿಗೆ ಏನಾದರೂ ಸಹಾಯ ಮಾಡೋಣ ಎನಿಸುತ್ತಿದೆ.”
“ಆಯಿತು” ಎಂದ ಅರ್ಷದ್.
ಕಾರು ಚಲಿಸುತ್ತಿರುವಾಗ ಲೋಹಿತ ನಾಲ್ಕಾರು ಬಾರಿ ಹಿಂತಿರುಗಿ ಮಹಿಳೆ ಕಡೆ ನೋಡಿದ.
ಅಲ್ಲಿಂದ ಅವರು ಒಂದಿಷ್ಟು ದೂರ ಹೋಗಿರಬೇಕು. ಅಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಅವರ ಶಹರದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿದೆ. ಶಹರದ ಒಂದೆಡೆ ಹಿಂದು ಮುಸ್ಲಿಂ ದಂಗೆಯಾಗಿದೆ ಎಂದ. ಆಮೇಲೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಶಹರದ ಯಾವುದೂ ಒಂದು ಮೂಲೆಯಲ್ಲಿ ಗಲಾಟಿಯಾಗಿರುವುದು ವಾಹನಗಳು ಓಡಾಡುತ್ತಿವೆ, ಜನ ಸಹ ತಿರುಗಾಡುತ್ತಿದ್ದಾರೆ ಎಂದಾಗ ಲೋಹಿತನಿಗೆ ಸ್ವಲ್ಪ ಧೈರ್ಯ ಬಂತು.
ಅವನು ಯೋಚನೆ ಮಾಡುತ್ತಿರುವುದನ್ನು ಕಂಡು ಅರ್ಷದ್ ಕಾರಣ ಕೇಳಿದ.
“ಅಲ್ಲಿ ರಾತ್ರಿ ಹಿಂದು ಮುಸ್ಲಿಂ ದಂಗೆಯಾಗಿದೆಯಲ್ಲ”
“ಇತ್ತೀಚೆಗೆ ಅಲ್ಲಿ ದಿನನಿತ್ಯ ದಂಗೆಯಾಗುತ್ತಲೆಯಿವೆ. ಎರಡು ಕಡೆಯವರು ಬೇರೆಲ್ಲ ವ್ಯವಹಾರ ಬಿಟ್ಟು ಗಲಾಟೆ ಮಾಡುವುದಕ್ಕೆ ನಿಂತು ಬಿಟ್ಟಿದ್ದಾರೆ. ಮೊನ್ನೆ ನಾನು ಅಲ್ಲಿ ಹೋಗಿದ್ದೆ, ಬಾಡಿಗೆ ಸಿಕ್ಕಿತ್ತು, ರಸ್ತೆಯಲ್ಲಿ ಜನ ಹೆದರಿಸಿದರು, ಆದರೆ ಅಲ್ಲಿ ಹೋದಾಗ ಎಲ್ಲಾ ಸಹಜವಾಗಿತ್ತು. ಯಾವುದೋ ಒಂದು ಏರಿಯದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿರುತ್ತೆ ಆ ಕಡೆ ಹೋಗಬಾರದು, ಅರ್ಷದ್ ಹೇಳಿದ ಧೈರ್ಯದಿಂದ.
ರಸ್ತೆಯಲ್ಲಿ ಭೇಟಿಯಾದ ಆ ಹಿಂದು ಮಹಿಳೆಯ ಬಗ್ಗೆ ಯೋಚಿಸಿದ ಲೋಹಿತ, ಮುಸ್ಲಿಂರ ಮಗುವನ್ನು ಪೋಷಿಸುತ್ತಿರುವ ಆ ಅವಿದ್ಯಾವಂತೆ ಮಹಿಳೆಯಲ್ಲಿರುವ ಮಾನವೀಯತೆ ವಿದ್ಯಾವಂತರಲಿಲ್ಲ.
ಅರ್ಷದ್ ಹೇಳಿದ ಮಾತಿನಿಂದ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಯಾವ ಅನಾಹುತವಿಲ್ಲದೆ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿದರೆ ಸಾಕೆಂದು ಮನದಲ್ಲಂದುಕೊAಡ.
ಇನ್ನೇನು ಅರ್ಧ ಗಂಟೆಯಲ್ಲಿ ಅವರ ಕಾರು ಶಹರದ ಗಡಿ ದಾಟಬೇಕೆಂದುವಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಶಹರದ ಎಲ್ಲಾ ಕಡೆ ದಂಗೆ ಎದ್ದಿದೆ, ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿಲ್ಲ, ಅಂಗಡಿ ಮುಂಗಟ್ಟು ಮುಚ್ಚಲಾಗಿವೆ, ರಸ್ತೆಗಳಲ್ಲಿ ವಾಹನಗಳ, ಜನಗಳ ಸಂಚಾರವಿಲ್ಲ, ಹಲವಾರು ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
“ಏನಂತೆ ಸಾರ್” ಅರ್ಷದ್ ಕೇಳಿದ.
“ಏನಿಲ್ಲ ನೀವಂತು ಎಚ್ಚರದಿಂದಿರಿ”
“ನೀವು ಭಯ ಪಡಬೇಡಿ” ಎಂದು ಅರ್ಷದ್ ಹೇಳುತ್ತಿರುವಾಗಲೇ ಎದುರಿಂದ ಒಂದು ಕಾರು ಬಂತು. ಅದರ ಗಾಜು ಹೊಡೆದು ಹೋಗಿದ್ದವು, ಬಾನೇಟ್ ಮೇಲೆ ನಾಲ್ಕಾರು ಕಡೆ ರಕ್ತದ ಕಲೆಗಳಿದ್ದವು, ಕಾರಿನಲ್ಲಿರುವವರು ತುಂಬ ಭಯಭೀತಿಕ್ಕೊಳಗಾಗಿದ್ದರು.
ಲೋಹಿತನ ಕಾರು ಹೊರವಲಯಲ್ಲಿತ್ತು. ಇನ್ನೇನು ಶಹರದೊಳಗೆ ಪ್ರವೇಶಿಸಬೇಕು ಅಷ್ಟರಲ್ಲಿ ಕಾರನ್ನು ಪೋಲಿಸರು ನಿಲ್ಲಿಸಿದರು. ಪೋಲಿಸರು ಯಾವ ವಾಹನವು ಒಳಗೆ ಹೋಗದಂತೆ ತಡೆಯುತ್ತಿದ್ದರು. ಶಹರದೊಳಗಿನಿಂದ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು.
ಅರ್ಷದ್ ಒಂದೆಡೆ ಕಾರು ನಿಲ್ಲಿಸಿಬಿಟ್ಟ, ಇನ್ನು ಶಹರದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದೆನಿಸುತ್ತಿರುವಾಗಲೇ ರವೀಂದ್ರ ಫೋನ್ ಮಾಡಿ ಅವನ ಮಡದಿಗೆ ಕೂಡಲೇ ರಕ್ತ ಬೇಕಾಗಿದೆ. ರಕ್ತದ ಗ್ರೂಪ್ ಎಬಿ ನೆಗೆಟಿವ್, ಇಲ್ಲಿ ಆಸ್ಪತ್ರೆಯಲ್ಲಿ ಆ ಗ್ರೂಪ್ನ ರಕ್ತವಿಲ್ಲ. ಈ ಸಮಯದಲ್ಲಿ ಹೊರಗಿನಿಂದ ತರಿಸಲು ಸಹ ಸಾಧ್ಯವಿಲ್ಲ ಎಂದು ನಿರಾಸೆಯಿಂದ ತಿಳಿಸಿದ. ಆ ಗ್ರೂಪ್ನ ರಕ್ತ ಸಿಗಬೇಕಾದರೆ ಸ್ವಲ್ಪ ಕಷ್ಟವೇ. ಲೋಹಿತ ಯೋಚಿಸಿದ.
ಆದಷ್ಟು ಬೇಗ ಬಿಗುವಿನ ವಾತಾವರಣ ಕಡಿಮೆಯಾಗಿ ಆಸ್ಪತ್ರೆಗೆ ತಲುಪಿದರೆ ಸಾಕೆಂದು ಯೋಚಿಸಿದ. ಎಂಥ ಪರೀಕ್ಷೆಯ ಸಮಯ ಎದುರಾಗಿದೆ. ಒಬ್ಬರ ಜೀವ ರಕ್ಷಣೆ ಮಾಡುವ ಅವಕಾಶ ಸಿಕ್ಕಿಯೂ ಸ್ವಲ್ಪದರಲ್ಲಿ ತಪ್ಪಿ ಹೋಗುತ್ತಿದೆಯಲ್ಲ. ಹೀಗೆಲ್ಲ ಯೋಚಿಸಲು ಮುಖ್ಯಕಾರಣವೇನೆಂದರೆ ಲೋಹಿತನ ರಕ್ತದ ಗ್ರೂಪ್ ಸಹ ಎಬಿ ನೆಗೆಟಿವ್ ಆಗಿತ್ತು.
ತನ್ನ ರಕ್ತದ ಗ್ರೂಪ್ ಯಾವುದೆಂದು ಅವನು ಗೆಳೆಯನಿಗೆ ಹೇಳದೆ ನೇರವಾಗಿ ಹೋಗಿ ಕೊಟ್ಟೆ ಬಿಡೋಣ ಎಂದು ಅವನ ಲೆಕ್ಕಾಚಾರವಾಗಿತ್ತು.
ಸ್ವಲ್ಪ ಸಮಯದ ಬಳಿಕ ಸುರೇಂದ್ರ ಫೋನ್ ಮಾಡಿ ಅವರೆಲ್ಲಿದ್ದಾರೆಂದು ವಿಚಾರಿಸಿದ, ಶಹರದ ಹೊರವಲಯದಲ್ಲಿದ್ದೇನೆ ಶಹರದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿವರಿಸಿದಾಗ, ಹಿಂತಿರುಗಿ ಹೊರಟು ಹೋಗಿ ಜೀವದ ಹಂಗು ಬಿಟ್ಟು ಒಳ ಬರಬೇಡಿ, ಆಸ್ಪತ್ರೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಾಗಿದ್ದಾರೆ ಖಂಡಿತವಾಗಿ ಬರಬೇಡಿ ಬೇಡಿಕೊಂಡ ಸುರೇಂದ್ರ.
ಬೇರೆ ಸಂದರ್ಭವಾಗಿದ್ದರೆ ಅವನು ಹಿಂತಿರುಗಿ ಹೋಗುತ್ತಿದ್ದ. ಆದರೆ ಗೆಳೆಯನ ಮಡದಿಗೆ ರಕ್ತದ ಅವಶ್ಯಕತೆ ಇರುವುದನ್ನು ತಿಳಿದು ಹಿಂತಿರುಗಿ ಹೋಗುವುದು ಸರಿಯಿಲ್ಲ. ಇಲ್ಲೇ ಇದ್ದು ಶಹರದ ಸ್ಥಿತಿ ಸುಧಾರಣೆಯಾಗುವ ವರೆಗೆ ಕಾಯಬೇಕು. ಕಾರು ಶಹರದೊಳಗೆ ಪ್ರವೇಶಿಸಲು ಅವಕಾಶ ಕೊಟ್ಟರೆ ಸಾಕೆಂದು ಯೋಚಿಸಿದ.
ಶಹರದೊಳಗೆ ಯಾವ ವಾಹನವೂ ಹೋಗದಂತೆ ತಡೆದಿರುವುದರಿಂದ ಅವನ ಕಾರಿನ ಹಿಂದೆ ಮುಂದೆ ಅನೇಕ ವಾಹನಗಳು ನಿಂತುಕೊಳ್ಳಲು ಆರಂಭಿಸಿದವು. ನೋಡುನೋಡುತ್ತಿದ್ದಂತೆ ವಾಹನಗಳ ಸಾಲ ಹೆಚ್ಚಾಗತೊಡಗಿತ್ತು.
ವಾಹನದೊಳಗೆ ಕುಳುತಿರುವವರು ಪೈಕಿ ಯಾರೊಬ್ಬರು ಹೊರ ಬಾರದೆ ಒಳಒಳಗೆಯೇ ಭಯ ಭೀತಿಕ್ಕೊಳಗಾಗಿ ಮೌನ ಧರಿಸಿಕೊಂಡಿದ್ದರು. ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆದಾಗ ಸಾಲಾಗಿ ನಿಂತಿರುವ ವಾಹನಗಳು ಹಾರನ್ಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೇ ಯಾರೊಬ್ಬರು ಇಂಜಿನ್ಗಳನ್ನು ಆಫ್ ಮಾಡುವುದಿಲ್ಲ. ಆದರೆ ಈಗ ಇಲ್ಲಿ ಬೇರೆಯೇ ಸನ್ನವೇಶವಿತ್ತು” ನಿಜ ಸಂಗತಿ ಏನೆಂದು ಅರಿತು ಎಲ್ಲರೂ ಇಂಜಿನ್ಗಳನ್ನು ಆಫ್ ಮಾಡಿದ್ದರು. ಮೌನವಾಗಿ ಹೋಗಿದ್ದರು ಮತ್ತು ಒಬ್ಬರನೊಬ್ಬರನ್ನು ಸಂದೇಹದಿAದ ನೋಡುತ್ತಿದ್ದರು.
ರಕ್ತ ಸಿಕ್ಕಿದಿಯೋ ಇಲ್ಲವೋ ಅವನು ಎಷ್ಟೊಂದು ಸಂಕಷ್ಟದಲ್ಲಿದ್ದಾನೆಯೋ ಅವನಿಗೆ ಫೋನ್ ಮಾಡಿದಾಗ ಅವನ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು. ಲೋಹಿತ ಯಾಕಿಷ್ಟು ಬೇಚೈನಾಗಿದ್ದಾನೆಂದು ಅರ್ಷದ್ಗೆ ತಿಳಿಯಲಿಲ್ಲ.
“ಮನೆಯಿಂದ ಸ್ವಲ್ಪ ಮುಂಚಿತವಾಗಿ ಹೊರಟ್ಟಿದ್ದರೆ ಅಥವಾ ಶಹರದೊಳಗೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದರೆ ಕಾರು ಅತಿವೇಗದಿಂದ ಚಲಾಯಿಸುತ್ತ ಆಸ್ಪತ್ರೆಗೆ ತಲುಪಿಸಿ ಬಿಡುತ್ತಿದ್ದೆ” ಅರ್ಷದ್ ಹೇಳಿದ.
ಆದರೆ ಲೋಹಿತ ತನ್ನದೇ ವಿವಾರದಲ್ಲಿ ಮುಳುಗಿದ್ದ.
ನಾನು ಎಲ್ಲಾ ವಿಷಯದ ಬಗ್ಗೆ ಪಾಸಿಟೀವ್ ಆಗಿ ಯೋಚಿಸುತ್ತೇನೆ. ನನ್ನ ರಕ್ತದ ಗ್ರೂಪ್ ಯಾಕೆ ನೆಗೆಟಿವ್, ಈಗಿನ ಕಾಲದಲ್ಲಿ ಒಳ್ಳೆ ಯೋಚನೆ ಮಾಡುವ ಜನರೇ ಇಲ್ಲವೇನು? ಮನುಷ್ಯ ಯಾಕೆ ಇಷ್ಟೊಂದು ಕ್ರೂರಿಯಾಗಿ ಧರ್ಮದ ಹೆಸರಿನಲ್ಲಿ ಯಾಕೆ ರಕ್ತ ಹರಿಸುತ್ತಿದ್ದಾನೆ. ವಿಜ್ಞಾನಿಗಳು ಆಕಾಶದಿಂದ ಬಾಂಬ್ಗಳನ್ನು ಬೀಳುಸುವುದರ ಬದಲು ಆಕಾಶದಿಂದ ಹೂಮಳೆ ಹೊಮ್ಮಿಸುವುದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ?
ಲೋಕೇಶ ಏನೇನೋ ಯೋಚಿಸುತ್ತ ಕ್ಷಣದಿಂದ ಕ್ಷಣಕ್ಕೆ ಕಂಗಾಲಾಗಿ ಹೋಗುತ್ತಿರುವಾಗಲೇ ಫೋನ್ ಮೊಳಗಿತ್ತು. ಸುರೇಂದ್ರನ ಫೋನ್ ಇರುವುದರಿಂದ ಲೋಹಿತ ತನ್ನ ಹೃದಯದ ಬಡಿತದ ಮೇಲೆ ನಿಯಂತ್ರಣ ಪಡೆಯುತ್ತ ಮೊಬೈಲ್ ಆನ್ ಮಾಡಿದ.
ಬಂತು ಗೆಳೆಯನ ಮಡದಿಗೆ ಸಕಾಲದಲ್ಲಿ ರಕ್ತ ಸಿಕ್ಕಿದೆ ಎಂಬ ಸಂತೋಷದ ಸುದ್ದಿ ದಂಗೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡಿರುವ ಗಾಯಾಳನೊಬ್ಬ ಜತೆಯಲ್ಲಿ ಬಂದಿದ್ದ ಮುಸ್ಲಿಂ ಯುವಕನೊಬ್ಬನ ರಕ್ತದ ಗ್ರೂಪ್ ಎಬಿ ನೆಗೆಟಿವ್ ಆಗಿದ್ದು, ವೈದ್ಯರು ಅವನಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆಯಿದೆ ಎಂದಾಗ ಅವನು ಯಾರಿಗೆ ಏನೇಂತು ಬಗ್ಗೆ ವಿಚಾರಿಸಿದೆ ರಕ್ತದಾನ ಮಾಡಿದ.
ಲೋಹಿತ ಇದೆಲ್ಲವನ್ನು ಕೇಳಿದ ಬಳಿಕ ಮೌನ ಧರಿಸಿಕೊಂಡ, ರಸ್ತೆಯಲ್ಲಿ ಸಿಕ್ಕಿದ ಮುಸ್ಲಿಮ್ ಮಗುವನ್ನು ಸಲಹುತ್ತಿರುವ ಮಹಿಳೆ ಮತ್ತು ಇಂಥ ದಂಗೆಯ ಸಮಯದಲ್ಲಿ ಹಿಂದು ಮಹಿಳೆಗೆ ರಕ್ತ ನೀಡಿದ ಮುಸ್ಲಿಂ ಯುವಕ, ಇವರಿಬ್ಬರೂ ಅವನ ಮನಸ್ಸಿನಲ್ಲಿ ತುಂಬಿಕೊAಡಿದ್ದರು.
ಈಗಿನ ಸ್ಥಿತಿಯಲ್ಲಿ ಇಂಥವರೇ ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಕತ್ತಲೆ ಹರಡಿಕೊಂಡಿರುವ ಈ ಸಮಯದಲ್ಲಿ ಇವರೇ ಮಿನುಗುವ ನಕ್ಷತ್ರಗಳು.
ಲೋಹಿತನ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರನ್ನು ಕಂಡು “ಯಾಕೆ ಸಾರ್ ಕಣ್ಣೀರು ಹಾಕುತ್ತಿದ್ದೀರಾ?”
ಅರ್ಷದ್ ಕೇಳಿದ.
ಅದೀಬ್ ಅಖ್ತರ್, ಮೈಸೂರು