ಇಂದು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಕಾಡಾನೆಗಳದ್ದೇ ಸುದ್ದಿ. ಅವು ಕಾಡಿನಿಂದ ನಾಡಿಗೆ ಕಾಲಿಟ್ಟು ದಾಂಧಲೆ ನಡೆಸಿದ ಘಟನೆಗಳೇ ಹೆಚ್ಚು. ಕೆಲವೊಮ್ಮೆ ಸಾವು-ನೋವಿನ ವಿಷಾದಕರ ಸುದ್ದಿಯೂ ಇರುತ್ತದೆ.
ಆಳವಾದ ಚಿಂತನೆ ಮಾಡಿದರೆ, ಈ ಆನೆಗಳನ್ನು ನಾಡಿಗೆ ಬರ ಮಾಡಿಕೊಂಡದ್ದೇ ನಮ್ಮವರು. ತಮ್ಮ ಸ್ವಾರ್ಥಕ್ಕೆ ಅವರು ನಾನಾ ಕಾರಣಗಳಿಗೆ ಕಾಡನ್ನು ಕಡಿದು ಉರುಳಿಸಿದರು. ಅಭಿವೃದ್ಧಿಯ ನಾಮದಲ್ಲಿ ಜಲ ವಿದ್ಯುತ್, ಗಣಿಕಾರಿಕೆ, ರೈಲ್ವೆ ಹಳಿ, ರಿಸಾರ್ಟ್, ಸುರಂಗ, ಹೆದ್ದಾರಿ ಅನ್ನುತ್ತಾ ಎಲ್ಲಡೆ ಕೊಡಲಿ ಬೀಸಿದರು. ಕೃಷಿ ಭೂಮಿಯ ಒತ್ತುವರಿಯೆಂದು ಸಾಕಷ್ಟು ಅರಣ್ಯವನ್ನು ಧ್ವಂಸ ಮಾಡಿದರು. ಈಗ ಮೂಕ ಪ್ರಾಣಿ-ಪಕ್ಷಿಗಳು ದಿಕ್ಕುಪಾಲಾಗಿ ಚದುರಿಕೊಂಡವು. ಅದರಲ್ಲಿ ವಿಶೇಷವಾಗಿ ಈ ಗಜಪಡೆಯಂತೂ ತಾವು ತಮ್ಮ ಹಿರಿಯರಿಂದ ಗುರುತಿಸಿಕೊಂಡಿದ್ದ ಹಾದಿಯನ್ನು ಮರೆತು ಹೋದವು. ಈ ಸೇಡನ್ನು ತೀರಿಸಿಕೊಳ್ಳುವ ಅವು ಕಾಡಿನಿಂದ ನಾಡಿನತ್ತ ನುಗ್ಗಿದವು. ಅವುಗಳಿಗೆ ಕಬ್ಬಿನ ತೋಟ, ಪಚ್ಚೆ ಪೈರಿನ ಹೊಲಗದ್ದೆ, ಕಾಫಿ ತೋಟ, ಬಾಳೆಗಿಡಗಳ ಕೃಷಿ ಇತ್ಯಾದಿಗಳೇ ರುಚಿ ಅನಿಸಿದವು. ಸರಕಾರವು ಕಾಡು ಕಡಿದು ಕೃತಕವಾಗಿ ಸೃಷ್ಟಿಸಿದ ಗಿಡ-ಮರಗಳನ್ನು ಅವು ಮೂಸಿಯೂ ನೋಡಲಿಲ್ಲ.
ಆನೆಗಳು ಯಾವತ್ತೂ ಕಾಡಿನ ಒಂದೇ ನೆಲೆಯಲ್ಲಿ ವಾಸವಾಗಿರುವುದಿಲ್ಲ. ಅವು ಆಹಾರವನ್ನು ಹುಡುಕುತ್ತಾ ಸಾವಿರಾರು ಕಿ.ಮೀ. ದೂರಕ್ಕೆ ಚಲಿಸಿಕೊಂಡೇ ಸಾಗುತ್ತವೆ. ಮನುಷ್ಯರಂತೆ ಆನೆಗಳು ಸಂಘ ಜೀವಿಗಳು. ಅವು ಒಗ್ಗಟ್ಟಿನಿಂದಲೇ ಜೀವನ ಸಾಗಿಸುತ್ತವೆ. ತಾತ-ಮುತ್ತಾತ, ಮಾವ-ಮಾಮಿ, ಚಿಕ್ಕಪ್ಪ-ಚಿಕ್ಕಮ್ಮ, ಅವರ ಮಕ್ಕಳು ಮರಿಗಳೆಂದು ಸುಮಾರು 60 ರಿಂದ 70 ಮಂದಿ ಸದಸ್ಯರು ಇರುತ್ತಾರೆ. ಈ ಗುಂಪಿಗೆ ಹೆಣ್ಣು ಆನೆಯೇ ಯಜಮಾನಿ- ನಾಯಕಿ. ಆಕೆ ಹೇಳಿದಂತೆ ಅವು ಎಲ್ಲಾ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಕುಟುಂಬದಿAದ ಹೊರ ದೂಡುತ್ತವೆ.
ಈ ಬಂಧು-ಬಳಗವು ದಿನದ ಹದಿನೆಂಟು ತಾಸುಗಳನ್ನು ಆಹಾರ ತಿನ್ನವುದರಲ್ಲಿಯೇ ಕಳೆದುಕೊಳ್ಳುತ್ತವೆ. ಅವರ ದೈತ ದೇಹಕ್ಕೆ ಹಸಿವು ಹೆಚ್ಚು. ದಿನನಿತ್ಯ ಅವುಗಳಿಗೆ ಸುಮಾರು 25 ರಿಂದ 30 ಕೆ.ಜಿ.ಯಷ್ಟು ಆಹಾರಬೇಕು. ಹಾಗೆ 150 ರಿಂದ 180 ಲೀಟರ್ನಷ್ಟು ನೀರು ಬಾಯಾರಿಕೆಗೆ ಬೇಕು. ಬೇಸಿಗೆಯಲ್ಲಿ ಸ್ಥಳೀಯ ಜಲಧಾರೆಯು ಬತ್ತಿಕೊಂಡರೆ, ಮುಂದೆ ಎಲ್ಲಿ ನೀರು ಸಿಗುತ್ತದೆ ಅನ್ನುವ ಪರಿಜ್ಞಾನ ಅವುಗಳ ಹಿರಿಯರಿಗಿದೆ. ಈಗ ಅವು ಮೇವುವನ್ನು ಹುಡುಕುತ್ತಾ, ನೀರು ಅರಸುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ.
ಕೆಲವು ಬಾರಿ ಅವು ಒಂದು ಪಶ್ಚಿಮ ಘಟ್ಟದಿಂದ, ಇನ್ನೊಂದು ಪಶ್ಚಿಮ ಘಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ. ದಿನಕ್ಕೆ ಸುಮಾರು 20 ರಿಂದ 25 ಕಿ.ಮೀ. ದೂರ ಸಾಗುತ್ತ, ಸಾವಿರಾರು ಕಿ.ಮೀ. ಕ್ರಮಿಸುತ್ತವೆ. ಕರ್ನಾಟಕದಿಂದ ಕೇರಳದ ದಟ್ಟಡವಿಯಲ್ಲಿ ಸಾಗಿದರೂ ಅವು ಮತ್ತೆ ಹಿಂತಿರುಗಿ ಬರುವ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮಂತಹ ಮನುಷ್ಯರಿಗೆ ಹೀಗೆ ಕಾಡಿನಲ್ಲಿ ದಾರಿ ತಪ್ಪುವುದೇ ಹೆಚ್ಚು. ಆಗ ಹುಡುಕಾಡಲು ಆಧುನಿಕ ಸೌಲಭ್ಯಗಳು ಬೇಕು. ಇಲ್ಲದಿದ್ದರೆ ಈ ಚಕ್ರವ್ಯೂಹದಿಂದ ಹೊರಬರುವುದೇ ಕಷ್ಟ. ಆದರೆ ಆನೆಗಳು ಈ ಹಾದಿಯನ್ನು ತಮ್ಮ ಹಿರಿಯರಿಂದ ಅರಿತುಕೊಳ್ಳುತ್ತವೆ. ಯಾವ ಋತುಮಾನದಲ್ಲಿ ಯಾವ ಕಡೆ ಸಾಗಬೇಕು ಅನ್ನುವುದು ಕಲಿತುಕೊಂಡಿರುತ್ತವೆ. ಇದು ಅವರಿಗೆ ಅನುಭವದಲ್ಲಿ ದಕ್ಕಿದ ಪಾಠ. ಪರಂಪರೆಯ ಜ್ಞಾನ!
ಈಗ ಮನುಷ್ಯ ಈ ಹಾದಿಯನ್ನೇ ಕಡಿದು ಹಾಕಿದರೆ ಆನೆಗಳು ಏನು ಮಾಡಬೇಕು? ಯಾರ ತಂಟೆಗೂ ಹೋಗದೆ ಕಾಡಿನಲ್ಲಿ ಹಾಯಾಗಿದ್ದ ಅವು ದಿಕ್ಕು ತಪ್ಪಿ ಎತ್ತ ಸಾಗಬೇಕು? ಆಗ ಕಾಣಿಸಿಕೊಳ್ಳುವುದೇ ನಮ್ಮ ನಾಡು! ನಮ್ಮ ಕಾಡ ಹತ್ತಿರದ ಊರು!
ಆನೆಗಳಲ್ಲಿ ಏಷ್ಯಾ ಖಂಡದ ಆನೆಗಳು ಮತ್ತು ಆಫ್ರಿಕಾ ಖಂಡದ ಆನೆಗಳು ಅನ್ನುವ ಎರಡು ವರ್ಗಗಳಿವೆ. ನಮ್ಮ ಆನೆಗಳ ಬೆನ್ನು ಹೊರ ಉಬ್ಬಿಕೊಂಡರೆ, ಅವುಗಳ ಹುಬ್ಬು ಒಳಗಡೆ ಬಾಗಿಕೊಂಡಿರುತ್ತದೆ. ನಮ್ಮಲ್ಲಿ ಗಂಡಿಗೆ ಮಾತ್ರ ದಂತವಿದ್ದರೆ ಆಫ್ರಿಕಾದ ಗಂಡು-ಹೆಣ್ಣಿಗೂ ದಂತಗಳಿವೆ. ಆದರೆ ಎರಡು ಖಂಡದ ಆನೆಗಳ ಜೀವಿತ ಅವಧಿ 60 ರಿಂದ 70 ವರ್ಷಗಳು.
ಹೆಣ್ಣು ಆನೆ ಯೌವನಕ್ಕೆ ಕಾಲಿಡಲು 10 ರಿಂದ 12 ವರುಷಗಳು ಬಏಕು. ಅವುಗಳ ಗರ್ಭಧಾರಣೆಗೆ ಯಾವುದೇ ಋತುಮಾನದ ಅಗತ್ಯವಿಲ್ಲ. ಆದರೆ ಮರಿ ಆನೆ ತಾಯಿಯ ಗರ್ಭದಿಂದ ಹೊರಬರಲು 22 ರಿಂದ 23 ಮಾಸಗಳ ವರೆಗೆ ಕಾಯಬೇಕು. ಅಂದರೆ ಸುಮಾರು ಎರಡು ವರುಷಗಳಿಗೆ ಹತ್ತಿರ! ಹೆಚ್ಚಾಗಿ ಒಂದೇ ಮರಿ ನೀಡುವ ಆನೆಯೂ ಕೆಲವು ಬಾರಿ ಮಾತ್ರ ಅವಳಿಗಳಿಗೆ ಜನ್ಮ ನೀಡುತ್ತವೆ. ವಿಶೇಷವೆಂದರೆ ಆಗ ತಾನೆ ಹುಟ್ಟಿದ ಮರಿಯಾನೆಯೂ ಎದ್ದು ನಿಲ್ಲುತ್ತದೆ.
ಗಜಲಕ್ಷ್ಮಿ ಈ ಮಗುವನ್ನು ಬಹು ಜಾಗ್ರತೆಯಿಂದ ಲಾಲನೆ-ಪಾಲನೆ ಮಾಡುತ್ತದೆ. ಸದಾ ಇವುಗಳನ್ನು ಗುಂಪಿನ ನಡುವೆ ಇಟ್ಟುಕೊಂಡೇ ಸಾಗುತ್ತವೆ. ಏಕೆಂದರೆ ಹುಲಿ ಮತ್ತು ಕತ್ತೆ ಕಿರುಬ ಇವುಗಳ ಅಜಾತ ಶತ್ರುಗಳು. ಇದನ್ನು ತಿಂದು ಮುಗಿಸಲು ಅವು ಸದಾ ಹೊಂಚು ಹಾಕಿರುತ್ತವೆ. ಹೀಗಾಗಿ ಬಾಣಂತಿಯಾದ ತಾಯಿಯೂ ಅದರ ರಕ್ಷಣೆಯಲ್ಲಿ ರಾತ್ರಿ ನಿದ್ದೆಯೂ ಸರಿಯಾಗಿ ಮಾಡದು.
ಅಂದ ಹಾಗೆ ಆನೆಗಳಿಗೆ ನಿದ್ರೆ ಕಡಿಮೆ. ಇಡೀ ದಿನದಲ್ಲಿ ಅವು 4-5 ತಾಸು ಮಲಗಿದರೆ ಅದೇ ಹೆಚ್ಚು. ಬಹುತೇಕ ಅವು ನಿಂತುಕೊಂಡೇ ನಿದ್ರಿಸುತ್ತವೆ. ಅನುಕೂಲ ಕಂಡರೆ ಮಾತ್ರ ನೆಲಕ್ಕೆ ಒರಗಿಕೊಳ್ಳುತ್ತವೆ. ಇವುಗಳ ಶ್ರವಣ ಶಕ್ತಿ ಅದೆಷ್ಟು ತೀವ್ರವೆಂದರೆ, ಕಾಡಿನ ಮರದಿಂದ ಸಣ್ಣ ಕಾಯಿ ಬಿದ್ದರೂ ಅವು ಗ್ರಹಿಸಿಕೊಳ್ಳಬಹುದು. ಅದೇ ರೀತಿ ವಾಸನೆ ಗ್ರಂಥಿಯೂ ಸೂಕ್ಷ್ಮ. ಅದೇಷ್ಟು ದೂರದ ಮರದಲ್ಲಿ ಹಲಸಿನ ಹಣ್ಣುಗಳು ಪಕ್ವವಾದರೆ ಅದು ತಿಳಿದುಕೊಳ್ಳಬಹುದು. ನೆಲ್ಲಿಕಾಯಿ, ಬಿದಿರು, ಹುಣಸೆಕಾಯಿ, ಮಾವು ಮತ್ತು ಕಬ್ಬು ಇವುಗಳಿಗೆ ಪ್ರಿಯವಾದ ತಿನಿಸು. ಊರಿನ ಬೆಲ್ಲವೆಂದರೂ ಇಷ್ಟ.
ಆನೆಗಳಿಗೆ ನೀರಾಟವೆಂದರೆ ತುಂಬಾ ಸಂತೋಷ. ಹೀಗಾಗಿ ಅವು ನದಿ ತೀರದಲ್ಲಿ, ಸರೋವರದ ಬಳಿ ಹೆಚ್ಚಾಗಿ ಕಾಣಿಸಕೊಳ್ಳುತ್ತವೆ. ಅವುಗಳಿಗೆ ಬೆವರು ಗ್ರಂಥಿಗಳಿಲ್ಲದ ಕಾರಣ, ಅವು ದೇಹದ ಉಷ್ಣತೆಯನ್ನು ತನ್ನ ವಿಶಾಲವಾದ ಕಿವಿಗಳಿಂದ ಚಾಮರದಂತೆ ಬೀಸಿಕೊಂಡು ತಂಪು ಮಾಡಿಕೊಳ್ಳುತ್ತವೆ. ಕೆಲವು ಬಾರಿ ಇಂತಹ ನೀರಿನಲ್ಲಿ ಮುಳುಗಿ ಪರಿಹಾರ ಹುಡುಕುತ್ತವೆ. ಅದರ ಸೊಂಡಿಲು ಬಲಿಷ್ಠವಾದರೂ, ತುಂಬಾ ಮೃದುವಾಗಿದೆ. ಸೊಂಡಲಿನ ತುದಿಯಲ್ಲಿ ಅದಕ್ಕೆ ನಮ್ಮ ಬೆರಳಿನಂತಹ ಅಂಗವಿದೆ. ಇದರಿಂದ ಅದು ಸಣ್ಣ ಅಡಿಕೆಯನ್ನೂ ಹೆಕ್ಕಿ ಕೊಡಬಲ್ಲದು. ಕಣ್ಣುಗಳು ಅತೀ ಚಿಕ್ಕದಿದ್ದರೂ, ಬಲು ದೂರದವರೆಗೆ ನೋಟ ಹರಿಸಬಹುದು. ತನ್ನ ಜೊತೆಗೆ ಶತ್ರುತ್ವವನ್ನು ಬೆಳೆಸಿದವರ ಪರಿಚಯವನ್ನು ಬಹಳಷ್ಟು ಕಾಲ ಮರೆಯದೆ ಇಡಬಹುದು. ಎರಡು ಹೊರ ದಂತಗಳAತೂ ಹುಲಿಯಂತಹ ಶತ್ರುಗಳನ್ನು ಎದುರಿಸಲು, ಮರದ ತೊಗಟೆಯನ್ನು ಸೀಳಿ ತೆಗೆಯಲು ನೆರವು ನೀಡುತ್ತದೆ. ಆದರೆ ದವಡೆಗಳಂತೂ ತನ್ನ ಜೀವಿತ ಅವಧಿಯಲ್ಲಿ ಆರು ಬಾರಿ ಉದುರಿ ಮತ್ತೆ ಹುಟ್ಟಿಕೊಳ್ಳುತ್ತವೆ. ದಿನದಲ್ಲಿ ಸುಮಾರು 16-18 ತಾಸುಗಳು ಅವು ಮೇಯುವ ಕಾರ್ಯದಲ್ಲಿ ನಿರಂತರವಾಗಿರುವಾಗ, ಅವು ಸವೆದು ಹೋಗುತ್ತವೆ. ಏಳನೇ ಬಾರಿ ಈ ಹಲ್ಲುಗಳು ಹುಟ್ಟಿಕೊಳ್ಳುವುದಿಲ್ಲ. ಅಷ್ಟರಲ್ಲಿ ಅದಕ್ಕೆ ಮುದಿತನ ಆವರಿಸಿಕೊಂಡಿರುತ್ತದೆ. ಆಗ ಅದಕ್ಕೆ ಜಗಿಯುವ ಶಕ್ತಿಯೇ ಇರದು. ಕೆಲವು ಬಾರಿ ಅವು ಈ ಕಾರಣವಾಗಿಯೇ ಉಪವಾಸ ಬಿದ್ದು ಸಾವನ್ನು ಅಪ್ಪುತ್ತವೆ. ಅದು ಪ್ರಕೃತಿ ನಿಯಮ.
ಆನೆಯು ಅದೆಷ್ಟೇ ದೈತ ಇರಲಿ, ಮನುಷ್ಯನು ಮಾತ್ರ ಅದಕ್ಕಿಂತ ಬುದ್ಧಿವಂತ. ಅನಾದಿ ಕಾಲದಿಂದಲೂ ಆತ ಆನೆಯ ಬಲ, ಸಾಮರ್ಥ್ಯ ಶಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾನೆ. ಇದನ್ನು ವಶಪಡಿಸಿಕೊಂಡರೆ ತನಗೆ ಆಗದಿರುವ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ಲೆಕ್ಕಾಚಾರ ಹಾಕಿದ್ದಾನೆ. ಹೀಗಾಗಿ ಆ ಬೆಟ್ಟದಂತಹ ಆ ಕಾಡು ಪ್ರಾಣಿಯನ್ನೇ ತನ್ನ ಅಂಕುಶದಲ್ಲಿ ಬಂಧಿಸಿ ನೆಲಕ್ಕೆ ಕೆಡವಿದ್ದಾಣೆ. ಮನುಷ್ಯನ ಮೋಹದ ಜಾಲದ ಖೆಡ್ಡಾ'ಕ್ಕೆ ಬಿದ್ದ ಆನೆಯಂತೂ ಮೋಸ ಹೋಗಿದೆ. ಅದು ಮಾವುತನಿಂದ ತರಬೇತಿ ಪಡೆದು, ತನ್ನ ಪ್ರತಿಭಟನೆ, ಒರಟುತನ, ಆಕ್ರೋಶ, ಸಿಟ್ಟು, ಆವೇಶ ಎಲ್ಲವನ್ನೂ ತ್ಯಜಿಸಿ ಸಾಧುವಾಗಿದೆ. ಆತನ ಎಲ್ಲಾ ಕೆಲಸಕ್ಕೂ
ಜೀ ಹುಜೂರ್’ಯೆಂದು ಒಪ್ಪಿಕೊಂಡಿದೆ. ತನ್ನ ದೈತ್ಯ ಬಲದ ಶಕ್ತಿಯನ್ನು ಮರೆತು ಬಾಲ ಮುದುಡಿ ಮೌನವಾಗಿದೆ. ತನ್ನ ಕಂಬದAತಹ ಕಾಳಿಗೆ ಜುಜುಬಿ ಹಗ್ಗ ಕಟ್ಟಿದರೂ ಅದು ಕಬ್ಬಿಣದ ಸರಪಳಿಯೆಂದೇ ಭಾವಿಸಿಕೊಂಡಿದೆ. ಐದಡಿ-ಆರಡಿ ಮನುಷ್ಯನಿಗೆ, ಆತ ಕುಬ್ಬ, ಅಲ್ವ ಅನ್ನುವುದೇ ಮರೆತು ಹೋಗಿದೆ.
ಒಂದು ವೇಳೆ ಅದು ತನ್ನ ನೈಜ ಕೋಪದಲ್ಲಿ ಸೊಂಡಿಲು ಬಳಸಿದರೆ, ಮನುಷ್ಯನ ದೇಹದ ಮೂಳೆಗಳು ಲಟಲಟನೆ ಮುರಿದು ಹೋಗಬಹುದು. ತಲೆಯು ಬಲವಾದ ಪಾದದ ಅಡಿಯಲ್ಲಿ ಬಂದರೆ ಬುರುಡೆಯೇ ಇರದು. ಕೂಡಲೇ ಅಪ್ಪಚ್ಚಿಯಾಗಿ ಸಿಡಿದು ಹೋಗಬಹುದು!
ಆದರೆ ಬುದ್ಧಿವಂತ ಮನುಷ್ಯನು ಅದನ್ನೂ ರಾಜ-ಮಹಾರಾಜರ ಕಾಲದಿಂದಲೂ ಯೋಗ್ಯವಾಗಿ ಬಳಸಿಕೊಂಡಿದ್ದಾನೆ. ಘೋರ ಕಾಳಗವೇ ಇರಲಿ, ಸಣ್ಣ ಪುಟ್ಟ ಯುದ್ಧಗಳೇ ಇರಲಿ, ಅದರ ಮೇಲೆ ಹತ್ತಿ ಶತ್ರುಗಳನ್ನು ಸದೆ ಬಡೆದಿದ್ದಾನೆ- ಯಾರೂ ಸಾಗದ ನದಿ, ಬೆಟ್ಟ, ಗುಡ್ಡ, ಕಾಡುಗಳನ್ನು ಬಳಸಿ ದುರ್ಗಮ ಹಾದಿಯನ್ನೂ ಸವೆದಿದ್ದಾನೆ. ಯುದ್ಧದ ಸಾಮಗ್ರಿ ಹಾಗೂ ಆಹಾರ ವಸ್ತುಗಳ ಭಾರವಾದ ವಸ್ತುಗಳನ್ನು ಅದರ ಬೆನ್ನು ಮೇಲೆ ಏರಿಕೊಂಡು ಅದರ ಉಪಯೋಗ ಪಡೆದಿದ್ದಾನೆ. ಕೆಲವೊಮ್ಮೆ ಅದರ ಮೇಲೆ ಅಂಬರಿಯನ್ನೂ ಕಟ್ಟಿ ರಾಜ-ಮಹಾರಾಜರಿಗೆ ಊರ ಸವಾರಿಯನ್ನೂ ಮಾಡಿಸಿದ್ದಾನೆ.
ದೊಡ್ಡ ದೊಡ್ಡ ಮರದ ದಿಮ್ಮಿಗಳಾಗಲಿ, ದೇವಸ್ಥಾನ ನಿರ್ಮಾಣದ ಕಲ್ಲು ಬಂಡೆಗಳಾಗಲಿ ಅದನ್ನು ಸಾಗಿಸಲು ಈ ಆನೆಗಳನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸೈನಿಕ ಪಡೆಯಲ್ಲಿ ಆನೆಗಳ ಸಂಖ್ಯೆಯೇ ದೊಡ್ಡ ಬಲವಾಗಿತ್ತು. ಈ ಆನೆಗಳು ಭಾರತದಿಂದ ಮುಂದೆ ಅನೇಕ ರಾಷ್ಟçಗಳಿಗೆ ಪ್ರಯಾಣವೂ ಬೆಳೆಸಿದವು. ಅವು ಅಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡವು.
ಇರ್ಶಾದ್ ಮೂಡಬಿದ್ರೆ