ಇಸ್ಲಾಮ್ ಭಾರತಕ್ಕೆ ಆಗಮಿಸಿ ಸಾವಿರ ವರ್ಷಗಳೇ ಕಳೆದಿದ್ದರೂ ಅದರ ಧರ್ಮಗ್ರಂಥ ಕುರ್ಆನ್ ಮತ್ತು ಆರಾಧನಾ ಕೇಂದ್ರವಾಗಿರುವ ಮಸೀದಿಗಳು, ಉಪವಾಸ ವ್ರತ, ಹಬ್ಬಗಳು ಮತ್ತು ಮುಸ್ಲಿಮರ ಆಚಾರ-ವಿಚಾರಗಳೆಲ್ಲ ಈ ದೇಶಕ್ಕೆ ತೆರೆದುಕೊಂಡಿರುವುದು ಬಹಳ ಕಡಿಮೆ. ಇದರಿಂದಾಗಿ ಸಮಾಜದಲ್ಲಿ ಮಸೀದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ, ಅವರ ಗ್ರಂಥದ ಬಗ್ಗೆ ಮತ್ತು ಸಾಂಸ್ಕೃತಿಕ, ಸಂಗತಿಗಳ ಬಗ್ಗೆ ಹಲವು ಅನುಮಾನ, ಕುತೂಹಲಗಳುಳ್ಳ ಅಭಿಪ್ರಾಯ ಸೃಷ್ಟಿಯಾಗುವುದಕ್ಕೆ ಕಾರಣವಾಗಿದೆ. ಆರೋಪಗಳಿಗೂ ಕೊರತೆ ಇಲ್ಲ. ಮುಚ್ಚಿಟ್ಟ ಯಾವುದೇ ವಸ್ತು ಕುತೂಹಲಕ್ಕೂ ಅನುಮಾನಗಳಿಗೂ ಕಾರಣವಾಗುವುದು ಸಹಜ. ಆದ್ದರಿಂದಲೇ ಈ ವಿಷಯದಲ್ಲಿ ಸಮಾಜವನ್ನು ವಿಶ್ವಾಸಕ್ಕೆ ಪಡಕೊಳ್ಳಬೇಕು ಮತ್ತು ಎಲ್ಲವುಗಳು ಬಗ್ಗೆ ತೆರೆದ ಮನಸ್ಸಿನಿಂದ ಸಮಾಜಕ್ಕೆ ತಿಳಿಸಬೇಕು ಎಂದು ತೀರ್ಮಾನಿಸಿ “ಮಸೀದಿ ದರ್ಶನ” ಎಂಬ ಕಾರ್ಯಕ್ರಮಗಳನ್ನು ದೇಶದ ಹಲವೆಡೆ ಏರ್ಪಡಿಸಲಾಯಿತು.
ಮಸೀದಿ ಹೇಗಿದೆ, ಏನಿದೆ, ಏನಿಲ್ಲ, ಅಲ್ಲಿ ನಡೆಯುವ ಪ್ರಾರ್ಥನೆ ಹೇಗಿರುತ್ತದೆ, ಅದನ್ನು ಯಾಕೆ ಕಟ್ಟಲಾಯಿತು, ಮಸೀದಿಯಿಂದ ಕೊಡುವ ಅಝಾನ್ (ಪ್ರಾರ್ಥನಾ ಕರೆ) ಹಿನ್ನಲೆ ಏನು, ಅದನ್ನು ಕೊಡುವುದಕ್ಕೆ ಕಾರಣ ಏನು, ಅದರ ಅರ್ಥ ಏನು, ವುಝೂ (ಅಂಗಸ್ನಾನ) ಹೇಗೆ ಮಾಡುವುದು, ಇತ್ಯಾದಿ ಹಲವು ಸಂಗತಿಯನ್ನು ದೇಶ ಬಾಂಧವರಿಗಾಗಿ ತಿಳಿಸುವ ಅಗತ್ಯ ಇದೆ.
ಈ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಜಾಮಿಯಾ ಮಸೀದಿಯನ್ನು ದರ್ಶನಕ್ಕಾಗಿ ತೆರೆದಿಡಲಾಯಿತು. ಸರ್ವ ಧರ್ಮೀಯರು ಈ ಒಂದು ಅವಕಾಶವನ್ನು ಪಡೆದುಕೊಂಡರು. ಸಂದರ್ಶಕರಿಗೆ ಕಾರ್ಯಕರ್ತರಾದ ಪುರುಷರೂ, ಮಹಿಳೆಯರೂ ಸಂಭ್ರಮದಿಂದ ವಿವರಣೆ ನೀಡಿದರು. ಸಮಾಜ ಸೇವಕರು, ಸಾಹಿತಿಗಳು, ರಾಜಕೀಯದಲ್ಲಿರುವವರು, ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು ಮಸೀದಿಯ ಸಂದರ್ಶನ ಮಾಡಿದರು. ಮಸೀದಿಯಲ್ಲಿ ಅಂದು ನಡೆದ ಸಾಮೂಹಿಕ ನಮಾಝ್ನ ಶಿಸ್ತುಬದ್ಧ ಸಾಲು, ಭಕ್ತಿಯ ವಾತಾವರಣ ನೋಡಿದರು. ಮಸೀದಿ ಎಂಬುವುದು ನಿಗೂಢ ಸ್ಥಳ ಎಂಬ ಭಾವನೆ ಇದ್ದ ಹಲವರಿಗೆ ಅಲ್ಲಿಯ ತೆರೆದ ಪ್ರಾರ್ಥನಾ ಸ್ಥಳದ ಪವಿತ್ರತೆ ನೋಡಿ ಮನಸ್ಸು ತಿಳಿಯಾಗಿತ್ತು. ದೇಶಬಾಂಧವರು ಸಂಭ್ರಮದಿAದ ಒಳಗೆ ಓಡಾಡಿ ಪ್ರತಿಯೊಂದು ಸ್ಥಳವನ್ನೂ ವೀಕ್ಷಿಸಿ ವಿವರ ಪಡೆದುಕೊಂಡದ್ದು ಮಾತ್ರವಲ್ಲ ಟಿ.ವಿ. ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅನುಭವಗಳನ್ನು ಹಂಚಿಕೊAಡರು. ಬಹಳಷ್ಟು ಗಣ್ಯ ಪುರುಷರೂ ಆಗಮಿಸಿದ್ದರು.
ಇಲ್ಲಿ ಮುಖ್ಯವಾಗಿ ಪುರುಷರಿಂದ ಹಾಗೂ ಮಹಿಳೆಯರಿಂದ ಬಂದ ಒಂದು ಪ್ರಶ್ನೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಇದೆಯೇ?” ಎಂದಾಗಿತ್ತು. ಯಾಕಾಗಿ ಒಟ್ಟಿಗೆ ನಮಾಝಿಲ್ಲ ಎಂದಾಗಿತ್ತು. ಸಂದರ್ಶಕರ ಪ್ರಶ್ನೆ ನಮಗೆ ಅನಿರೀಕ್ಷಿತವೂ ಆಗಿರಲಿಲ್ಲ. ಸಹಜವಾಗಿಯೇ ಅವರ ಮನಸ್ಸಿನಲ್ಲಿದ್ದ ಸಂಶಯ! ಆಕ್ಷೇಪನೂ ಇದಾಗಿತ್ತು. ಮಸೀದಿ ಒಳಗೆ ಅಂದು ಇದ್ದ ಅಪಾರ ಸಂಖ್ಯೆಯ ಬುರ್ಖಾಧಾರಿಣಿಗಳ ಸಂಖ್ಯೆಯನ್ನು ನೋಡಿ ಅವರಿಗೂ ಆಶ್ಚರ್ಯವಾಗಿತ್ತು.
ನಮ್ಮ ಪ್ರವಾದಿ ಮುಹಮ್ಮದ್(ಸ)ರ ಬಳಿ ಇದೇ ಪ್ರಶ್ನೆಯನ್ನು ಸಾವಿರದ ನಾನೂರೈವತ್ತು ವರ್ಷದ ಹಿಂದೆ ಅಂದಿನ ಮಹಿಳೆಯರು ಕೇಳಿದ್ದರು. ಆಗ ಪ್ರವಾದಿಯವರು(ಸ) ಹೇಳಿದರು, ದೇವನ ಆರಾಧಾನಾಲಯ ಎಲ್ಲರಿಗೂ ಸೇರಿದ್ದು. ಪುರುಷರಂತೆಯೇ ಮಹಿಳೆಯರಿಗೂ ಮಸೀದಿಗೆ ಬರುವ ಸ್ವಾತಂತ್ರ್ಯ ಇದೆ. ಆದ್ರೆ ಮಹಿಳೆಯರಿಗೆ ಈ ಬಗ್ಗೆ ಕಡ್ಡಾಯ’ ವಿಧಿಸಲಾಗಿಲ್ಲ. ಪುರುಷರು ಐದು ಹೊತ್ತು ಮಸೀದಿಗೆ ಬಂದು ನಮಾಝ್ ಮಾಡುವಂತೆ ಮಹಿಳೆಯರಿಗೂ ಒಂದು ವೇಳೆ ಕಡ್ಡಾಯ ಮಾಡಿರುತ್ತಿದ್ದರೆ ಮಹಿಳೆಯರಿಗೆ ಅದು ಕಷ್ಟಕರವಾಗುತ್ತಿತ್ತು. ಕಾರಣ ಪ್ರಥಮವಾಗಿ ಮಹಿಳೆಯರ ದೈಹಿಕವಾದ ಮಾಸಿಕ ಮುಟ್ಟು, ಬಾಣಂತನ, ಬಸುರಿ ಇತ್ಯಾದಿ ಆರೋಗ್ಯ ಸಮಸ್ಯೆಗಳು ಮಹಿಳೆಯರಿಗೆ ಮಸೀದಿಯ ಪ್ರಾರ್ಥನೆಗೆ ಅನುಕೂಲವಾಗಿರದು. ಮಹಿಳೆಯರು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಲು ಬಯಸಿದರೆ ಅವರನ್ನು ತಡೆಯಬಾರದು, ಹೋಗಲು ಇಷ್ಟ ಪಡದಿದ್ದರೆ ಅವರನ್ನು ಒತ್ತಾಯಿಸಲೂ ಬಾರದು, ಅವರಿಗೆ ಮಸೀದಿಗಿಂತಲೂ ಮನೆಯ ಒಳ ಕೋಣೆಯೇ ಹೆಚ್ಚು ಅನುಕೂಲ ಆಗಿರುತ್ತದೆ” ಎಂದರು ಪ್ರವಾದಿ(ಸ).
ರಾಜಕಾರಣಿಗಳು ಮತ್ತು ಧರ್ಮದ್ವೇಷಿಗಳು “ಮಸೀದಿಗೆ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ” ಎಂದು ಅಪಪ್ರಚಾರ ಮಾಡುತ್ತಾರೆ. ಇಂತಹ ತಪ್ಪು ಭಾವನೆಯನ್ನು ಹೋಗಲಾಡಿಸಲು ಈ ಮಸೀದಿ ಸಂದರ್ಶನ ಕಾರ್ಯಕ್ರಮ ಪ್ರಯೋಜನವಾಗುತ್ತದೆ. ಪುರುಷರೊಂದಿಗೇ ಯಾಕೆ ಮಹಿಳೆಯರಿಗೂ ಒಂದೇ ಜಾಗದಲ್ಲಿ ನಮಾಝ್ಗೆ ಅವಕಾಶ ಇರಲ್ಲ… ಎಂದು ಓರ್ವರು ಕೇಳಿದರು. ಅದಕ್ಕೆ ನಮ್ಮ ಉತ್ತರ ಮುಸ್ಲಿಮರ ನಮಾಝ್ ರೀತಿ ತಲೆ ಬಾಗುವುದು ಮತ್ತು ನೆಲಕ್ಕೆ ಸಾಷ್ಟಾಂಗವಾಗಿ ಎರಗುವ ಶೈಲಿಯು ಪುರುಷರು ಮುಂದೆ ನಿಂತು ನಮಾಝ್ ಮಾಡಿದರೆ ಮಹಿಳೆಯರು ಪುರುಷರ ಹಿಂದೆ ನಿಂತು ನಮಾಝ್ ಮಾಡುವುದು ಹೆಚ್ಚು ಅನುಕೂಲ ಹಾಗೂ ಒಳಿತು ಅನಿಸುತ್ತದೆ. ಮಹಿಳೆಯರು ಯಾವುದೇ ಸಂಕೋಚ, ಮುಜುಗರ, ಸಂದೇಹದ ಒದ್ದಾಟವಿಲ್ಲದೆ ನಿರಾಳವಾಗಿ ನಮಾಝ್ ಮಾಡಬಹುದು. ಹೆಚ್ಚಾಗಿ ಪರ್ಧಾಧಾರಿಣಿ ಮಹಿಳೆಯರು ಪ್ರತ್ಯೇಕವಾಗಿಯೇ ನಮಾಝ್ ನಿರ್ವಹಿಸಲು ಬಯಸುತ್ತಾರೆ. ಆರಾಧನೆಗೆ ಯಾವುದೇ ತೊಂದರೆ ಆಗದೇ ಇರುವುದು ಮುಖ್ಯ.
ಮಸೀದಿಯನ್ನು ಒಂದು ನಿಗೂಢವಾಗಿ ಎಂದೂ ಇರಿಸಬಾರದು, ನಾವು ಪರಸ್ಪರ ಎಲ್ಲರ ಧರ್ಮದ ಆಚಾರ, ವಿಚಾರವನ್ನು ಅರಿಯಬೇಕು. ನಮ್ಮ ನಡುವೆ ಇರುವ ಒಂದು ಭೀತಿಯ ಗೋಡೆ ತೊಲಗಬೇಕು, ಇಗರ್ಜಿ, ಮಂದಿರ, ದೇವಸ್ಥಾನ ಎಲ್ಲರ ಪಾಲಿಗೂ ತೆರೆದ ಮನೆಯಾಗಬೇಕು. ಒಬ್ಬಕ್ರೈಸ್ತ ಸಮುದಾಯದ ಸಹೋದರಿ ಉಪನ್ಯಾಸಕಿ ಕೇಳಿದರು, “ನಿಮ್ಮ ಮಸೀದಿಯಲ್ಲಿ ಕೇವಲ ಆರಾಧನೆ ಮಾತ್ರವೇ ನಿರ್ವಹಿಸುವುದೇ? ಯಾಕೆ ಇಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಕ್ಕೆ ಪ್ರೇರಣೆ ಕೊಡಬಾರದು, ಉದಾ: ಮುಸ್ಲಿಮ್ ಸಮುದಾಯದ ಯುವಕರು ಹೆಚ್ಚಾಗಿ ಡ್ರಗ್ಸ್ ಪೀಡಿತರೆಂಬ ಅಪವಾದ ಇದೆ. ಇಂತಹ ಡ್ರಗ್ಸ್’ನ ಅಪಾಯದ ಬಗ್ಗೆ ಇಲ್ಲಿ ಏನೂ ಕ್ರಮ ಕೈಗೊಳ್ಳುವುದಿಲ್ಲವೇ? ಎಂದರು. ನಾವು ಇದಕ್ಕೆ ಅವರಿಗೆ ಹೇಳಿದೆವು, “ಮಸೀದಿಯಲ್ಲಿ ಕೇವಲ ನಮಾಝ್ ಮಾತ್ರವಲ್ಲ, ಶುಕ್ರವಾರದ ದಿವಸ ಜುಮಾ ಪ್ರವಚನ ಇರುತ್ತದೆ. ಅಂದು ಸಾಮಾಜಿಕವಾದ ವಿಷಯಗಳ ಉಪನ್ಯಾಸ ಕೂಡಾ ಇರುತ್ತದೆ. ಸಮಾಜದಲ್ಲಿದ್ದ ಕೆಡುಕಿನ ವಿರುದ್ಧ ಜನ ಜಾಗೃತಿ ಹುಟ್ಟಿಸುವ ಪ್ರವಚನ ಕಾರ್ಯ ನೀಡಲ್ಪಡುತ್ತದೆ.
ಅದೇ ರೀತಿ ಮಸೀದಿಯಲ್ಲಿ ಸಮುದಾಯದ ಕೌಟುಂಬಿಕ ಸಮಸ್ಯೆಗಳ ಕೌನ್ಸಿಲಿಂಗ್ ಕೂಡಾ ಇಲ್ಲಿಯ ಧರ್ಮ ಗುರುಗಳು ನಡೆಸುತ್ತಾರೆ. ಡ್ರಗ್ಸ್ನ ನಿರ್ಮೂಲನೆ ಜನ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಕಡೆ ಮುಸ್ಲಿಮ್ ಸಮುದಾಯದ ಸಮಾಜ ಸೇವಾ ಘಟಕದವರು ನಡೆಸುತ್ತಾ ಬಂದಿದ್ದಾರೆ ಎಂದೆವು.ಮಸೀದಿ’ ಎಂಬುವುದು ದೇವನ ಸ್ತುತಿ, ಸ್ತೋತ್ರ ಮಾಡುವ ಪವಿತ್ರ ಸ್ಥಳ. ನಿರ್ಮಲ ಮನಸ್ಸು ಎಲ್ಲರಲ್ಲೂ ಮುಖ್ಯ. ಇಲ್ಲಿ ಮದ್ರಸಾ' ಇದೆ. ಈ
ಮದ್ರಸಾ’ದಲ್ಲಿ ಮಕ್ಕಳಿಗೆ ಕುರ್ಆನ್ ಮತ್ತು ಧಾರ್ಮಿಕ ವಿಧಿ, ವಿಧಾನ ಕಲಿಸಲಾಗುತ್ತದೆ. ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಕಲಿಸಲಾಗುತ್ತದೆ. ಸತ್ಯ, ನ್ಯಾಯ, ನೀತಿ ಕಲಿಸಲಾಗುತ್ತದೆ. ಮೊಸರಿನಲ್ಲೂ ಕಲ್ಲು ಹುಡುಕುವ ದುಷ್ಟ ಮನಃಸ್ಥಿತಿಯನ್ನು ತೊರೆದಾಗಲೇ ನಾವು ನೈಜ ಮಾನವರಾಗಲು ಸಾಧ್ಯ ಅಲ್ಲವೇ?
ಸಾರ್ವಜನಿಕರಿಗೆ ಮಸೀದಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಇಂತಹ ಅದ್ಭುತ ಕಾರ್ಯಕ್ರಮ ಸಂಘಟಿಸಿದ ಕುದ್ರೋಳಿ ಜಾಮಿಯಾ ಮಸೀದಿ ಕಮಿಟಿ, ಮುಸ್ಲಿಮ್ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕ ನಿಜಕ್ಕೂ ಅಭಿನಂದನಾರ್ಹರು.
ಶಮು