ಮಾನವನ ಜೀವನಕ್ಕೆ ನಾಲ್ಕು ಹಂತಗಳು ಇವೆ. ಅದೃಷ್ಟವಂತರು ಈ ನಾಲ್ಕು ಹಂತಗಳನ್ನು ಅನುಭವಿಸುತ್ತಾರೆ- ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ. ಬಾಲ್ಯವು ಜೀವನದ ಅತಿ ಸೊಗಸಾದ ಹಂತ. ಕುತೂಹಲ ಮತ್ತು ಕಲಿಕೆಯ ಆಸಕ್ತಿ ಬಾಲ್ಯದ ವೈಶಿಷ್ಟ್ಯ. ಈ ಹಂತದಲ್ಲಿ ವ್ಯಕ್ತಿ ಭವಿಷ್ಯಕ್ಕೆ ಭದ್ರವಾದ ಅಡಿಕಲ್ಲುಗಳನ್ನು ಇಡುವುದು ಮುಖ್ಯ.
ಯೌವ್ವನವು ಉತ್ಸಾಹದ ಹಾಗೂ ಕನಸುಗಳ ಹಂತ. ಒಳ್ಳೆಯ ಚಿಂತನೆಗಳು, ಕೆಟ್ಟ ಚಿಂತನೆಗಳು, ಉತ್ತಮ ಸ್ನೇಹಿತರು, ಕೆಟ್ಟ ಸ್ನೇಹಿತರು ಹಾಗೂ ಜೀವನದ ಗುರಿಗಳನ್ನು ನಿರ್ಧರಿಸುವ ಹಂತ. ಪ್ರೌಢಾವಸ್ಥೆ ಜೀವನದ ಹೊಣೆಗಾರಿಕೆಯ ಹಂತ. ಕುಟುಂಬ, ಸಮಾಜ, ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಪ್ರಮುಖ ಹಂತ. ಅನುಭವಗಳನ್ನು ಪಡೆಯುವುದು. ಇತರರ ಅನುಭವಗಳನ್ನು ಅವಲೋಕಿಸಿ ಅದರ ಬೆಳಕಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೇ ಹಂತದಲ್ಲಿ ಆಗುತ್ತದೆ.
ವೃದ್ಧಾಪ್ಯವು ಮಾನವ ಜೀವನದ ಅಂತಿಮ ಹಂತ. ಈ ಹಂತದಲ್ಲಿ ದೈಹಿಕ ಶಕ್ತಿ ಕುಂದುತ್ತದೆ. ವೃದ್ಧಾಪ್ಯವು ಮಾನವ ಜೀವನದ ಅತ್ಯಂತ ಮಹತ್ವದ ಹಂತ. ಏಕೆಂದರೆ ಈ ಹಂತದಲ್ಲಿ ವ್ಯಕ್ತಿ ತನ್ನ ಹಿಂದಿನ ಜೀವನದ ಅನುಭವಗಳನ್ನು ಮುಂದಿಟ್ಟು ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾನೆ.
ಮಾನವ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುಖ-ಸಂತೋಷ, ಜಯ-ಸೋಲು, ಏರುಪೇರುಗಳು… ಅಂಗಗಳು. ಆದರೆ, ಪ್ರತಿಯೊಬ್ಬರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರಲಾರರು.
ಕೆಲವರಲ್ಲಿ ಸ್ವಾಭಾವಿಕವಾಗಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಅವರು ಕಷ್ಟಗಳನ್ನು ಹೊಸ ಅವಕಾಶಗಳೆಂದು ನೋಡುತ್ತಾರೆ ಮತ್ತು ಸೋಲುಗಳಿಂದ ಪಾಠ ಕಲಿಯುತ್ತಾರೆ. ಇನ್ನೂ ಕೆಲವರಿಗೆ ಈ ಸಾಮರ್ಥ್ಯಗಳನ್ನು ಬೆಳೆಸಲು ತರಬೇತಿಯ ಅಗತ್ಯವಿರುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ದೊರೆತರೆ ಅವರು ಸಹ ಸಮರ್ಥ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಒಬ್ಬ ವ್ಯಕ್ತಿ ತನ್ನ ಜೀವನದ ಅರವತ್ತು ವರ್ಷಗಳನ್ನೂ ದಾಟಿದನು ಅಂದರೆ, ಅವನು ತನ್ನ ಜೀವನದ ಬಹು ದೊಡ್ಡ ಹಂತವನ್ನು ದಾಟಿದ್ದಾನೆ ಎಂದರ್ಥ. ಈ ಹಂತವು ಕೇವಲ ವಯಸ್ಸಿನ ಅಂಕಿ ಅಂಶ ಅಷ್ಟೇ ಅಲ್ಲ. ಅದು ಜೀವನದ ಅನುಭವದ ಮಹಾ ಸಂಪತ್ತು.
ಮಾನವನನ್ನು ಮಣ್ಣಿನಿಂದ ಸೃಷ್ಟಿಸಿ, ನಂತರ ವೀರ್ಯದಿಂದ, ಬಳಿಕ ರಕ್ತಪಿಂಡದಿಂದ ರೂಪಿಸಿ, ಶಿಶುವಾಗಿ ಜನಿಸಿ, ಬಾಲ್ಯವನ್ನು ದಾಟಿ, ಯುವಕನಾಗಿ ಬೆಳೆಸಿ. ನಂತರ ಅತಿ ವೃದ್ಧಾಪ್ಯಕ್ಕೆ ತಲುಪಿ, ಕೊನೆಯಲ್ಲಿ ತಿಳಿಯದವನಾಗುವ ವರೆಗೂ ಹಾದು ಹೋಗುತ್ತಾನೆ ಎಂದು ಪವಿತ್ರ ಕುರ್ಆನ್ ಸ್ಪಷ್ಟಪಡಿಸುತ್ತದೆ. ಆತ ತನ್ನನ್ನು, ತನ್ನವರನ್ನು, ಎಲ್ಲವನ್ನು, ಎಲ್ಲರನ್ನೂ ಮರೆಯುತ್ತಾನೆ. ಅಂದರೆ ಆತ `ಡೆಮಿನ್ಶಿಯ’ ಎಂಬ ರೋಗಕ್ಕೆ ತುತ್ತಾಗಿದ್ದಾನೆ ಎಂದರ್ಥ.
ಆಯುಷ್ಯ ಇದ್ದಲ್ಲಿ ವೃದ್ಧಾಪ್ಯವು ಮಾನವನ ಜೀವನದಲ್ಲಿ ತಪ್ಪಿಸಲಾಗದ ಸಹಜ ಹಂತ. ಶರೀರದ ಶಕ್ತಿ ಕ್ಷೀಣಿಸಿದರೂ, ಮನಸ್ಸು ಚುರುಕಾಗಿರಲು ಮತ್ತು ಆತ್ಮಬಲ ಹೆಚ್ಚಿಸಲು ಸಾಧ್ಯ. ವೃದ್ಧಾಪ್ಯವನ್ನು ಭಾರವೆಂದು ಭಾವಿಸುವ ಬದಲು, ಅದನ್ನು ಅನುಭವಗಳ ಸಂಪತ್ತಿನAತೆ ಆಗಲು ಯೌವ್ವನದಲ್ಲಿ ಪ್ರಯತ್ನಿಸುವುದು ಮುಖ್ಯ. ವೃದ್ಧಾಪ್ಯದಲ್ಲಿಯೂ ಮಾನವನಿಗೆ ತನ್ನದೇ ಆದ ಮಹತ್ವವಿದೆ. ಯಶಸ್ವೀ ಜೀವನ ಎಂದರೆ ಕೇವಲ ಯೌವ್ವನದಲ್ಲಿ ಮಾತ್ರ ಸಾಧನೆಗಳನ್ನು ಮಾಡುವುದಲ್ಲ, ವೃದ್ಧಾಪ್ಯದಲ್ಲಿಯೂ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಸಮಾಧಾನವನ್ನು ಕಂಡುಕೊಳ್ಳುವುದು.
ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ, “ಅಂತಿಮವು ಒಳ್ಳೆಯದಾದರೆ ಎಲ್ಲವೂ ಒಳ್ಳೆಯದು”. ಅಂದರೆ ಮನುಷ್ಯನ ಜೀವನದ ಕೊನೆಯ ಹಂತವೇ ಅವನ ಜೀವನದ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ.
ಕೆಲವರು ಪ್ರಪಂಚದಲ್ಲಿ ತುಂಬಾ ಒಳ್ಳೆಯವರಂತೆ ಕಾಣಬಹುದು. ಜನರ ಕಣ್ಣಿಗೆ ಅವರು ಧಾರ್ಮಿಕರೂ, ಸಜ್ಜನರೂ, ಸಮಾಜದಲ್ಲಿ ನಿಷ್ಠಾವಂತರೂ ಆಗಿ ತೋರುತ್ತಾರೆ. ಆದರೆ ಅವರ ಅಂತರAಗ ಬೇರೆ ರೀತಿಯದ್ದಾಗಿರುತ್ತದೆ. ಅವರ ಕೊನೆಯ ವಾಸ ಸ್ಥಳ ನರಕವಾಗಬಹುದು. ಆ ಸಮಯದಲ್ಲಿ ಅವರ ಜೀವನದ ಬಾಹ್ಯ ಗೌರವ, ಹೆಸರು-ಮೆಚ್ಚುಗೆ ಎಲ್ಲವೂ ಅರ್ಥವಿಲ್ಲದಂತಾಗುತ್ತದೆ.
ಇನ್ನು ಕೆಲವರು ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿರಬಹುದು. ಜನರಿಂದ ತಪ್ಪಾಗಿ ಅರ್ಥೈಸಲ್ಪಟ್ಟವರಾಗಿರಬಹುದು. ಆದರೆ ಅವರ ಹೃದಯದಲ್ಲಿದ್ದ ಸತ್ಯತೆ, ಪಶ್ಚಾತ್ತಾಪ ಮತ್ತು ದಯೆಯ ಕಾರಣದಿಂದ ಅವರ ಅಂತಿಮ ಹಂತ ಶ್ರೇಷ್ಠವಾಗಬಹುದು. ಅಂತಹವರಿಗೆ ಸ್ವರ್ಗವೇ ಅಂತಿಮ ವಾಸ ಸ್ಥಳವಾಗಬಹುದು.
ಒಂದು ವೇಳೆ ನಮ್ಮ ಜೀವನವು ಹಲವು ತಪ್ಪುಗಳು, ದೋಷಗಳು, ಕೆಟ್ಟ ಕೆಲಸಗಳಿಂದ ಕೂಡಿದ್ದರೂ, ನಿರಾಶರಾಗುವ ಅಗತ್ಯವಿಲ್ಲ. ಏಕೆಂದರೆ ಅಲ್ಲಾಹನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. “ಇಂದು” ಮಾಡಿದ ಸುಧಾರಣೆ ನಾಳೆಯ ಸುಂದರ ಅಂತ್ಯಕ್ಕೆ ದಾರಿ ತೆರೆದುಕೊಡುತ್ತದೆ.
ಹಾಗಾದರೆ ನಮ್ಮ ವೃದ್ಧಾಪ್ಯ ಹೇಗಿರಬೇಕು? ಚೆನ್ನಾಗಿರಲು ಏನು ಮಾಡಬೇಕು? ಕೆಲವರ ವೃದ್ಧಾಪ್ಯ ದುಃಖಭರಿತವಾಗಿರುತ್ತದೆ. ಅವರ ಜೀವನದ ಕೊನೆಯ ಹಂತವು ವೃದ್ಧಾಶ್ರಮದಲ್ಲಿ ಕೊನೆಗೊಳ್ಳುತ್ತದೆ. ತಮ್ಮ ಮನೆ, ಕುಟುಂಬದಿAದ ದೂರವಾಗಿ ನೆನಪುಗಳೊಂದಿಗೆ ಏಕಾಂತದಲ್ಲಿ ದಿನ ಕಳೆಯುತ್ತಾರೆ.
ಇನ್ನು ಕೆಲವರ ವೃದ್ಧಾಪ್ಯ ಉಲ್ಲಾಸದಿಂದ ಕೂಡಿರುತ್ತದೆ. ಅವರು ತಮ್ಮ ಮಕ್ಕಳ, ಮೊಮ್ಮಕ್ಕಳ ಜೊತೆಗಿದ್ದು ಪ್ರೀತಿ ಮತ್ತು ಗೌರವವನ್ನು ಅನುಭವಿಸುತ್ತಾರೆ. ಕುಟುಂಬ ಸಾನಿಧ್ಯವು ಅವರಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ.
ಮುಸ್ಲಿಮ್ ಸಮುದಾಯದಲ್ಲಿ ಕೌಟುಂಬಿಕ ಜೀವನಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮ್ ಧರ್ಮವು ತಂದೆ-ತಾಯಿ ಮತ್ತು ಹಿರಿಯರ ಸೇವೆಗೆ ಬಹಳ ಮಹತ್ವವನ್ನು ಕೊಡುತ್ತದೆ. ಆದ್ದರಿಂದ ವೃದ್ಧರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುತ್ತಾರೆ.
ನಮ್ಮ ವೃದ್ಧಾಪ್ಯದ ಬಗ್ಗೆ ನಮಗೆ ಕಾಳಜಿ ಇರಬೇಕು. ಯೌವ್ವನದಲ್ಲಿಯೇ ದೂರದೃಷ್ಟಿಯೊಂದಿಗೆ ಬದುಕಿದರೆ ವೃದ್ಧಾಪ್ಯವನ್ನು ಸಂತೋಷಭರಿತವಾಗುವAತೆ ರೂಪಿಸಬಹುದು. ಸಕಾರಾತ್ಮಕ ಚಿಂತನೆ, ಆರೋಗ್ಯದ ಕಾಳಜಿ, ಅಧ್ಯಾತ್ಮಿಕತೆ ಮತ್ತು ಕುಟುಂಬದೊAದಿಗೆ ಒಗ್ಗಟ್ಟಿನಿಂದ ಬಾಳುವ ಜೀವನವೇ ವೃದ್ಧಾಪ್ಯದ ನೆಮ್ಮದಿ, ಗೌರವ ಮತ್ತು ಸಂತೋಷಕ್ಕೆ ದಾರಿ.
ವೃದ್ಧಾಪ್ಯದಲ್ಲಿ ನಮ್ಮ ಬದುಕು ಇತರರಿಗೆ ಆದರ್ಶವಾಗುವಂತಿರಬೇಕು. ನಮ್ಮ ಮಾತು, ನಡೆ-ನುಡಿ, ಪ್ರಾಮಾಣಿಕತೆ ಮತ್ತು ಅನುಭವದಿಂದ ಮುಂದಿನ ಪೀಳಿಗೆಗೆ ದಾರಿ ತೋರಿಸಬೇಕು. ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾವು ಜ್ಞಾನ, ಮೌಲ್ಯಗಳು ಮತ್ತು ಧರ್ಮನಿಷ್ಠೆಯ ಮಾದರಿಯಾಗಿದ್ದರೆ ನಮ್ಮ ಜೀವನ ಉತ್ತಮವಾಗುತ್ತದೆ.
ಮನೋ ವೈದ್ಯರು ಹೇಳುವಂತೆ, ವೃದ್ಧಾಪ್ಯವನ್ನು ಆರೋಗ್ಯಕರವಾಗಿಯೂ ಸುಂದರವಾಗಿಯೂ ನಡೆಸಲು ಮೂರು ಮುಖ್ಯ ಅಂಶಗಳನ್ನು ಅಳವಡಿಸಬೇಕು.
1. ಶಾರೀರಿಕ ಆರೋಗ್ಯದ ಕಾಳಜಿ.
ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ತಕ್ಕ ಮಟ್ಟದ ವಿಶ್ರಾಂತಿ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಪರೀಕ್ಷೆಗಳು ವೃದ್ಧಾಪ್ಯದಲ್ಲಿ ದೇಹವನ್ನು ಚುರುಕಾಗಿಡುತ್ತದೆ.
ಆರೋಗ್ಯದ ವೃದ್ಧಾಪ್ಯಕ್ಕಾಗಿ ರೋಗಗಳು ಬಂದು ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅವುಗಳನ್ನು ಮುಂಚಿತವಾಗಿ ತಡೆಗಟ್ಟುವುದು ಅತ್ಯಂತ ಮುಖ್ಯ.
ಜಾಗ್ರತೆ- ರೋಗಗಳು ಉಂಟಾಗುವ ದಾರಿಯನ್ನು ತಿಳಿದುಕೊಳ್ಳುವುದು. ಆಹಾರದಲ್ಲಿ ಅಸಮತೋಲನ, ವ್ಯಾಯಾಮದ ಕೊರತೆ, ಒತ್ತಡ, ಕೆಟ್ಟ ಅಭ್ಯಾಸಗಳು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
ಅದನ್ನು ತಡೆಗಟ್ಟಲು ಸರಿಯಾದ ಜೀವನ ಶೈಲಿ, ಶುದ್ಧ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮಾನಸಿಕ ಶಾಂತಿ ಅತಿ ಮುಖ್ಯ. ರೋಗಗಳಿಗೆ ತುತ್ತಾಗದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ಉತ್ತಮ ಜೀವನ ಶೈಲಿ ಅತಿ ಮುಖ್ಯ.
ವೃದ್ಧಾಪ್ಯದಲ್ಲಿ ಈ ಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ವಯಸ್ಸಿನೊಂದಿಗೆ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಗೆ ಹೆಚ್ಚಿನ ಮಹತ್ವ ಕೊಡಬೇಕು.
ಮಾನಸಿಕ ಆರೋಗ್ಯವು ಬಹಳ ಮಹತ್ವಪೂರ್ಣವಾಗಿದೆ. ಕೆಲವೊಮ್ಮೆ ವೃದ್ಧಾಪ್ಯದಲ್ಲಿ ಮಾನಸಿಕ ಒತ್ತಡ, ಡಿಪ್ರೇಶನ್, ಪಶ್ಚಾತ್ತಾಪ ಅಥವಾ ಅಪರಾಧ ಭಾವನೆಗಳು ಕಾಡುತ್ತದೆ. ಇಂತಹ ನಕಾರಾತ್ಮಕ ಭಾವನೆಗಳು ಮಾನವನನ್ನು ರೋಗಿಗಳನ್ನಾಗಿ ಮಾಡುತ್ತದೆ. ಮನಸ್ಸಿನ ಆಶಾಂತಿ ದೇಹದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಜಾಗ್ರತೆಗಳಿಂದ ವೃದ್ಧಾಪ್ಯವನ್ನು ಆರೋಗ್ಯಕರ, ಸಂತೋಷಕರ ಮತ್ತು ಶಾಂತಿಯುತವಾಗಿಸಬಹುದು.
2. ಯಶಸ್ವಿ ಅಥವಾ ಸುಂದರವಾದ ವೃದ್ಧಾಪ್ಯವನ್ನು ಪಡೆಯಬೇಕೆಂದರೆ, ಬದುಕಿನ ಎಲ್ಲಾ ವಿಷಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಶರೀರವನ್ನು ಚುರುಕಾಗಿಡುವ ಶಿಸ್ತಿನ ಜೀವನ.
ಮನಸ್ಸಿಗೆ ನೆಮ್ಮದಿ ನೀಡುವ ಸಕಾರಾತ್ಮಕ ಚಿಂತನೆ.
ಸಮಾಜದೊAದಿಗೆ ಬೆಸೆದುಕೊಳ್ಳುವ ಒಡನಾಟ ಮತ್ತು ಆಧ್ಯಾತ್ಮಿಕತೆಯಿಂದ ಆತ್ಮಶಾಂತಿ ಪಡೆಯುವುದು. ಇವೆಲ್ಲವನ್ನು ಸಮಾನವಾಗಿ ಪಾಲಿಸಿದಾಗ ವೃದ್ಧಾಪ್ಯವು ನಿಜವಾಗಿಯೂ ಯಶಸ್ವಿ ಮತ್ತು ಸುಂದರವಾಗಲು ಸಾಧ್ಯ.
ವೃದ್ಧಾಪ್ಯದಲ್ಲಿ ಅನೇಕರು ತಮ್ಮ ಉದ್ಯೋಗದಿಂದ ನಿವೃತ್ತಿಯಾಗುತ್ತಾರೆ. “ಆಫೀಸಿನಿಂದ ನಿವೃತ್ತಿಯಾದರೂ, ಜೀವನದಿಂದ ನಿವೃತ್ತಿಯಾಗಬಾರದು.” ಸಮಾಜಕ್ಕೆ ಸೇವೆ ಸಲ್ಲಿಸುವ ಅನೇಕ ಅವಕಾಶಗಳು ನಮ್ಮ ಸುತ್ತಲಿವೆ.
ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವೃದ್ಧಾಪ್ಯ ಚೈತನ್ಯದಿಂದ ಕೂಡಿರುತ್ತದೆ. ಧಾರ್ಮಿಕ ಕೇಂದ್ರಗಳು, ಶಾಲೆಗಳು, ಸ್ವಯಂ ಸೇವಾ ಸಂಘಟನೆಗಳು, ಕುಟುಂಬಸ್ಥರನ್ನು ಭೇಟಿ ಆಗುವುದು. ನೆರೆ ಹೊರೆಯ ಸಮಿತಿಗಳು ಎಲ್ಲೆಡೆ ಹಿರಿಯ ಮಾರ್ಗದರ್ಶನ ಮತ್ತು ಅನುಭವ ಅಗತ್ಯ. ನಿವೃತ್ತಿ ಹೊಂದಿದರೂ, ಇದು ಹೊಸ ರೀತಿಯ ಬದುಕಿನ ಆರಂಭ- ಯುವಕರಿಗೆ ದಾರಿದೀಪ ಆಗಬಹುದು. ತಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಹೀಗೆ, ವೃದ್ಧಾಪ್ಯದಲ್ಲಿ “ನಾನು ನಿವೃತ್ತ” ಎಂಬ ಯೋಚನೆಯ ಬದಲು ನಾನು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದರಿಂದ ಪ್ರಗತಿಶೀಲರಾಗಿರಲು ನೆರವಾಗುತ್ತದೆ.
ಪೋಷಕರ ಸೇವೆ ಎಂಬುದು ಕೇವಲ ಅವರು ಬದುಕಿದ್ದಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಮರಣಾ ನಂತರವೂ ಮಾಡಬಹುದು ಎಂದು ಇಸ್ಲಾಮಿನ ಈ ಶಿಕ್ಷಣದಿಂದ ಸ್ಪಷ್ಟವಾಗುತ್ತದೆ.
ಇಂದಿನ ಸ್ವಾರ್ಥಪರ ಸಮಾಜದಲ್ಲಿ, ತಮಗೆ ಜೀವನವನ್ನು ನೀಡಿದ ತಂದೆ-ತಾಯಿಗಳಿಗೆ ಗೌರವ, ಕಾಳಜಿ ತೋರಿಸದೆ ಇರುವಾಗ, ತಮ್ಮ ಆಪ್ತ ಬಂಧುಗಳ ಬಗ್ಗೆ ಕಾಳಜಿ ವಹಿಸುವರೆ!
ತಂದೆ-ತಾಯಿಗಾಗಿ ಖರ್ಚು ಮಾಡುವುದು ಮಕ್ಕಳ ಕರ್ತವ್ಯ. ಅವರಿಗೆ ಮಾಸಿಕವಾಗಿ ಹಣ ನೀಡುವುದು, ಅವರ ಅಗತ್ಯಗಳನ್ನು ಪೂರೈಸುವುದು ಮಕ್ಕಳ ಜವಾಬ್ದಾರಿಯಾಗಿದೆ. ಪೋಷಕರಿಗೆ ಪಿಂಚಣಿ ಸಿಗುತ್ತಿದ್ದರು, ಅದನ್ನು ಕಾರಣವನ್ನಾಗಿ ಮಾಡದೆ ಮಕ್ಕಳು ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕು. ಅವರಿಗೆ ನೀಡಿದ ಪ್ರೀತಿ ಮತ್ತು ಕಾಳಜಿ ಯಾವತ್ತೂ ವ್ಯರ್ಥವಾಗುವುದಿಲ್ಲ.
ವೃದ್ಧಾಪ್ಯದಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲರಾಗುವುದು ಸಹಜ. ಆದರೆ ದೈಹಿಕವಾಗಿಯೂ, ಮಾನಸಿಕವಾಗಿಯು ಬಲಿಷ್ಠರಾಗಿರುವುದು ಜೀವನ ನಿಜವಾದ ಶಕ್ತಿ ಮತ್ತು ಯಶಸ್ಸು. ಇದರ ಅತ್ಯುತ್ತಮ ಉದಾಹರಣೆ ಪ್ರವಾದಿ ಮುಹಮ್ಮದ್(ಸ)ರು.
ಪ್ರವಾದಿ ಮುಹಮ್ಮದ್(ಸ)ರು ವೃದ್ಧಾಪ್ಯದಲ್ಲಿಯೂ ದೈಹಿಕವಾಗಿ ಚುರುಕಾಗಿದ್ದು, ಮಾನಸಿಕವಾಗಿ ದೃಢವಾಗಿದ್ದರು. ತಮ್ಮ ಜೀವನದ ಅಂತಿಮ ಹಂತದಲ್ಲಿಯೂ ಸಮಾಜವನ್ನು ಮುನ್ನಡೆಸುವ ಶಕ್ತಿ, ಧೈರ್ಯ ಮತ್ತು ತಾಳ್ಮೆ ಅವರಲ್ಲಿತ್ತು.
ಇದರಿಂದ ಹುದೈಬಿಯಾ, ಖೈಬರ್ ಯುದ್ಧಗಳಲ್ಲಿ ಜಯಗೊಳಿಸಿದರು, ಹುನೈನ್ ಯುದ್ಧ ಆ ಕಾಲದ ಪ್ರಮುಖ ಯುದ್ಧಗಳಲ್ಲಿ ಒಂದು. ಇದನ್ನು ಜಯಗೊಳಿಸಿದ್ದು, ತನ್ನ ಜೀವನದ ಕೊನೆಯ ಐದು ವರ್ಷಗಳಲ್ಲಿ. ಇದೇ ಸಮಯದಲ್ಲಿ ತಾಯಿಫನ್ನು ವಶಪಡೆದು ಕೊಂಡರು. ಅದೇ ಸಮಯದಲ್ಲಿ “ಯುದ್ಧವಿಲ್ಲದೆಯೇ ಮಕ್ಕಾ ವಿಜಯವನ್ನು ಸಾಧಿಸಲಾಯಿತು.” ಹಜ್ಜ್ನ ಸಮಯ ವಿದಾಯ ಭಾಷಣದಲ್ಲಿ 1,40,000 ಸಂಗಾತಿಗಳೆದುರು ಭಾಷಣ ಮಾಡಿದರು. ಈ ಉದಾಹರಣೆಗಳನ್ನು ಮುಂದಿಟ್ಟು ನೋಡಿದಾಗ, ಪ್ರವಾದಿವರ್ಯರ(ಸ) ಜೀವನ ಯಾವಾಗಲೂ ಮೇಲೇರುತ್ತಾ ಹೋದದಲ್ಲದೆ, ಕೆಳಕ್ಕೆ ಇಳಿಯಲಿಲ್ಲ. ಅವರು ಯಶಸ್ಸು ಸಾಧಿಸುತ್ತಾ ಹೋದರು. ಅವರ(ಸ) ಜೀವನ ನಮಗೆ ಪಾಠದಾಯಕವಾಗಿದೆ.
“ಹಿರಿಯರು ದೈಹಿಕ ಚಟುವಟಿಕೆಗಳನ್ನು ಸತತವಾಗಿ ಮಾಡಬೇಕು. ಸಮಾಜದಲ್ಲಿ ಸೇವೆಗೆ ಸಿದ್ಧ” ಎಂಬ ಮನೋಭಾವನೆ ಬೆಳೆಸಿಕೊಳ್ಳುವುದು ಯಶಸ್ವಿ ವೃದ್ಧಾಪ್ಯದ ಗುಟ್ಟು.
3. ವೃದ್ಧಾಪ್ಯದಲ್ಲಿ ಹಿರಿಯರಿಗೆ ಭಾವನಾತ್ಮಕ ಬೆಂಬಲವೂ ಅತ್ಯಂತ ಮುಖ್ಯ.
ಭಾವನಾತ್ಮಕ ಬೆಂಬಲದ ಕೊರತೆಯಿಂದ ವೃದ್ಧರು ಏಕಾಂತತೆ, ಒತ್ತಡ ಮತ್ತು ನಿರಾಶೆಗೆ ಒಳಗಾಗುತ್ತಾರೆ. ಆದರೆ ಮನೆಯವರ ಗೌರವ, ಪ್ರೀತಿ ದೊರೆತರೆ, ಮನೆಯವರು ಅವರನ್ನು ಗೌರವಿಸಿದರೆ, ಅವರೊಂದಿಗೆ ಸಮಯ ಕಳೆದರೆ, ಅವರ ಸೇವೆ ಮಾಡಿದರೆ ಅವರಿಗೆ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.
ವೃದ್ಧರು, ವೃದ್ಧಾಪ್ಯವನ್ನು ಆರೋಗ್ಯಕರವಾಗಿ ಕಳೆಯಲು ಅಧ್ಯಯನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳನ್ನು ಓದುವುದು, ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಹೊಸ ವಿಷಯಗಳನ್ನು ಕಲಿಯುವುದು, ವಿಚಾರ ವಿನಿಮಯಗಳಂತಹ ಚಟುವಟಿಕೆಗಳನ್ನು ಮಾಡುತ್ತಿದ್ದರೆ, ಮಾನಸಿಕವಾಗಿ ಸಕ್ರಿಯರಾಗಿರುತ್ತಾರೆ. ಬುದ್ಧಿಹೀನತೆಗೆ ಒಳಗಾಗುವುದಿಲ್ಲ. ಅವರ ಸ್ಮರಣ ಶಕ್ತಿ ಕುಗ್ಗುವುದಿಲ್ಲ. ಮಾನಸಿಕ ದುರ್ಬಲತೆಗೆ ತುತ್ತಾಗುವುದಿಲ್ಲ.
ಕೆಲವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಉದ್ಯೋಗ ಮುಗಿದ ನಂತರ ಉದ್ಯಮ ಇಲ್ಲ. ಪಿಂಚಣಿ ಸಿಗುವುದಿಲ್ಲ. ಆದಾಯದ ಮೂಲವಿಲ್ಲ, ಇಂತಹ ಸ್ಥಿತಿಯಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಕುಟುಂಬದವರು ಸಹ ವೃದ್ಧರನ್ನು ನಿರ್ಲಕ್ಷಿಸಿ ಮನೆಯಿಂದ ಹೊರಹಾಕುವ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ವೃದ್ಧರು ಆಶ್ರಯವಿಲ್ಲದೆ ಫುಟ್ಪಾತ್ಗಳಲ್ಲಿ ವಾಸಿಸುವಂತಾಗುತ್ತದೆ. ನೀವು ನಗರಗಳಲ್ಲಿ ಭಿಕ್ಷೆ ಬೇಡುವ ವೃದ್ಧರನ್ನು ನೋಡಬಹುದು.
ಪ್ರವಾದಿ ಶುಯೈಬ್(ಅ)ರು ವೃದ್ಧಾಪ್ಯದಲ್ಲಿ ದುಡಿಯಲು ಅಸಮರ್ಥರಾದಾಗ, ಅವರಿಬ್ಬರು ಪುತ್ರಿಯರು ತಂದೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ತಂದೆಗೆ ಆರ್ಥಿಕವಾಗಿ ಸಹಕರಿಸಲು ಮೇಕೆಗಳನ್ನು ಮೇಯಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡರು.
ತAದೆ ವೃದ್ಧರಾದಾಗ ಮಕ್ಕಳು ಅವರನ್ನು ಆರ್ಥಿಕವಾಗಿ ಸಹಕರಿಸಬೇಕು. ಅವರ ಆವಶ್ಯಕತೆಗಳನ್ನು ಗಮನಿಸಿ ಪೂರೈಸುವುದು ಕೇವಲ ನೈತಿಕ ಕರ್ತವ್ಯವಷ್ಟೇ ಅಲ್ಲ ಇಸ್ಲಾಮಿನ ಬೋಧನೆಯೂ ಆಗಿದೆ.
ಪ್ರವಾದಿ ಮುಹಮ್ಮದ್(ಸ)ರು ಹೇಳಿದ್ದಾರೆ- “ಮಾತಾಪಿತರು ಮರಣ ಹೊಂದಿದ ಬಳಿಕವೂ ಅವರ ಆಪ್ತ ಸಂಬAಧಿಕರ ಬಗ್ಗೆ ಕಾಳಜಿ ತೋರಿಸುವುದು, ಸಹಾಯ ಮಾಡುವುದು ಮತ್ತು ಅವರ ಸ್ನೇಹಿತರಿಗೆ ಗೌರವ ನೀಡುವುದು ಪೋಷಕರಿಗೆ ಮಾಡಿದ ಸೇವೆಯಂತೆಯೇ ಆಗುತ್ತದೆ.”
ಸಕ್ರಿಯರಾಗಿರಿ. ಮಾನಸಿಕವಾಗಿ ನಿವೃತ್ತರಾಗಬೇಡಿ. 40 ವರ್ಷಗಳಿಂದ ಸೇವಿಸಿದ ಆಹಾರವನ್ನು ಬದಲಾಯಿಸಿ. ಆರೋಗ್ಯಕರ ಆಹಾರ, ನಿದ್ರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ವಯಸ್ಸಿಗೆ ತಕ್ಕ ಆಹಾರ ಸೇವಿಸಿ. ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳಿ. ಸಾಮಾಜಿಕ ಜೀವನ, ಧಾರ್ಮಿಕತೆ, ಸಮಾಜದ ಹಿತಕ್ಕಾಗಿ ದುಡಿಯುವ ಉದ್ದೇಶಗಳನ್ನು ಮುಂದಿಟ್ಟಾಗ ವೃದ್ಧಾಪ್ಯವು ಉತ್ತಮವಾಗಬಹುದು ಮತ್ತು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಸಂತೋಷ ನೆಮ್ಮದಿ ನಿಮ್ಮ ಜೀವನದ ಪಾಲಾಗುವುದು.
ಸಜ್ರೂನ್