[ಭಾರತ ಬಹುಸಂಸ್ಕೃತಿಯ ಆಚರಣೆಗಳ ದೇಶ. ಕರ್ನಾಟಕದಲ್ಲಿ ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನವರಾತ್ರಿಗಳ ಈ ಉತ್ಸವದ ಹಿನ್ನೆಲೆಯು ಹಿಂದೂ ಬಾಂಧವರಲ್ಲಿ ಶುಭ ದಿನಗಳಾಗಿವೆ. ದುಷ್ಟ ಶಕ್ತಿಯ ದಮನ, ಸಂಕಷ್ಟ ನಿವಾರಣೆಯ ನಂಬಿಕೆಯಲ್ಲಿ ಈ ಉತ್ಸವ ಆಚರಿಸುತ್ತಾರೆ. ಅಂತೆಯೇ ಇದೇ ತಿಂಗಳಲ್ಲಿ ದೀಪಾವಳಿ’ಯ ಬೆಳಕಿನ ಹಬ್ಬದ ಸಂಭ್ರಮವನ್ನೂ ದೇಶಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುವವರಾಗಬೇಕು. ಪರಸ್ಪರ ಧಾರ್ಮಿಕ ಅರಿವು’ ಉಳ್ಳವರಾಗಬೇಕು. ಹಬ್ಬಗಳು ಮನಸ್ಸನ್ನು ಬೆಸೆಯುವ, ಸೌಹಾರ್ದತೆಯನ್ನು ಹುಟ್ಟಿಸುವ ಆಚರಣೆಯಾಗುತ್ತದೆ. ದಸರಾ ಮತ್ತು ದೀಪಾವಳಿಯ ಹಿನ್ನಲೆಯ ಬಗ್ಗೆ ಲೇಖಕಿ ಸುಖಲಾಕ್ಷಿ ವೈ. ಸುವರ್ಣರವರು ಬರೆದಿರುವ ಈ ಲೇಖನವನ್ನು ಓದುಗರಿಗಾಗಿ ಇಲ್ಲಿ ಕೊಡುತ್ತಿದ್ದೇವೆ. ಅಂತೆಯೇ ದೇಶ ಬಾಂಧವರಿಗೆ ಶುಭಾಶಯಗಳನ್ನೂ ಕೋರುತ್ತೇವೆ.] -ಸಂಪಾದಕಿ.
ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಪ್ರಕೃತಿಯನ್ನು ವಿಕೃತಿಗೊಳಿಸುವ ದುಷ್ಟಶಕ್ತಿಗಳ ದಮನ ಮಾತೃಶಕ್ತಿಯಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ದುಷ್ಟರ ಶಿಕ್ಷೆ ಶಿಷ್ಟ ರಕ್ಷಣೆಗಾಗಿ ಒಂಭತ್ತು ಅವತಾರಗಳನ್ನೆತ್ತಿದ ದುರ್ಗಾಮಾತೆ ಸಕಲ ಸಂಕಷ್ಟ ನಿವಾರಕಳೆಂದು ಕರೆಯಲ್ಪಟ್ಟು ಆದಿಶಕ್ತಿಯ ರೂಪದಲ್ಲಿ ದೇಶದೆಲ್ಲೆಡೆ ಪೂಜಿಸಲ್ಪಡುತ್ತಿದ್ದಾಳೆ.
‘ದಸರಾ’ ಎಂದು ಕರೆಯಲ್ಪಡುವ ನವರಾತ್ರಿಯನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಒಂಬತ್ತು ರಾತ್ರಿಗಳ ದುರ್ಗೆಯ ಆರಾಧನೆಯ ಬಳಿಕ ಹತ್ತನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಜಯದಶಮಿಯನ್ನು ದಶಶಿರನಾದ ರಾವಣ ಸಂಹಾರ ಮಾಡಿದ ವಿಜಯದ ದ್ಯೋತಕವಾಗಿ ದಶಹರ/ದಸರಾ ಎಂದು ಕರೆಯುತ್ತಾರೆ. ಈ ದಿನವನ್ನು ಶ್ರೀರಾಮಚಂದ್ರ ರಾವಣ ಸಂಹಾರ ಮಾಡಿದ ದಿನವೆಂದು ನಂಬಲಾಗುತ್ತಿದ್ದು, ಉತ್ತರಭಾರತದಲ್ಲಿ ನವರಾತ್ರಿಯನ್ನು ‘ರಾಮ್ ಲೀಲಾ’ ಎಂದೇ ಪೂಜಿಸಲಾಗುತ್ತಿದೆ. ವಿಜಯ ದಶಮಿಯಂದು ರಾವಣ ಸಂಹಾರದ ದ್ಯೋತಕವಾಗಿ ಉದ್ದನೆಯ ಮರದ ತುಂಡಿಗೆ ರಾವಣನ ಆಕಾರ ನೀಡಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಇದನ್ನು ‘ಲಂಕಾ ದಹನ’ ಎಂದು ಕರೆದು ಜನ ಸಂಭ್ರಮಿಸುತ್ತಾರೆ. ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ನಂಬಲಾಗುತ್ತದೆ. ಪಾಂಡವರು ವೇಷ ಬದಲಾಯಿಸಿ ವಿರಾಟ ನಗರಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ಮರದೊಳಗೆ ಸಂರಕ್ಷಿಸಿಟ್ಟಿದ್ದು ಅವರ ವಿಜಯದ ಸಂಕೇತವಾಗಿ ವಿಜಯದಶಮಿಯಂದು ಆಯುಧ ಪೂಜೆ ಮತ್ತು ಶಮೀ ಮರವನ್ನು ಪೂಜಿಸಲಾಗುತ್ತದೆ.
ಗುಜರಾತಿನಲ್ಲಿ ನವರಾತ್ರಿಯನ್ನು ಸಂಗೀತ-ನೃತ್ಯಗಳಿಂದ ಆರಾಧಿಸಲಾಗುತ್ತದೆ. ಗುಜರಾತಿಗಳು ಘಟಸ್ಥಾಪನೆಯ ದಿನದಿಂದ ಒಂಭತ್ತು ದಿನಗಳವರೆಗೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ. ಅಗತ್ಯವುಳ್ಳವರಿಗೆ ಉಚಿತ ಖಾದ್ಯ ವಿತರಣೆ ಮಾಡಿ ಸಹಾಯ ಮಾಡಲಾಗುತ್ತದೆ. ಒಂಭತ್ತು ರಾತ್ರಿಗಳಲ್ಲಿ ಸಾವಿರಾರು ಜನ ಸೇರಿ ವರ್ತುಲ ರೂಪಿಸಿ ಗಾರ್ಭ ನೃತ್ಯ ಸೇವೆ ನಡೆಯುತ್ತದೆ. ಹೆಣ್ಣುಮಕ್ಕಳು ಬಣ್ಣಬಣ್ಣದ ಛನಿಯಾ ಚೋಲಿ, ಗಾಗರಾ ಹಾಗೂ ಪುರುಷರು ಕುರ್ತಾ ಪ್ಶೆಜಾಮದಂತಹ ಸಾಂಪ್ರದಾಯಿಕ ಉಡುಪು ತೊಟ್ಟು ಆವೇಶದಿಂದ ಕುಣಿಯುತ್ತಾ ಗಾರ್ಭಾ ನೃತ್ಯದ ಮೂಲಕ ದುರ್ಗಾಮಾತೆಯನ್ನು ಆರಾಧಿಸುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ದೊಡ್ಡಹಬ್ಬ. ಈ ದಿನಗಳಲ್ಲಿ ಕೋಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿ ದುರ್ಗಾಮಾತೆಯ ಪೆಂಡಾಲ್ಗಳನ್ನು ಹಾಕಲಾಗುತ್ತದೆ. ದುರ್ಗಾಪೂಜೆಯ ಒಂಬತ್ತು ದಿನಗಳಲ್ಲಿಯೂ ಇಡೀ ಕೋಲ್ಕತ್ತಾ ನಗರ ಸಂಭ್ರಮದ ನಗರಿಯಾಗಿ ಬದಲಾಗುತ್ತದೆ. ಪಶ್ಚಿಮಬಂಗಾಳ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಅಶ್ವಯುಜ ಶುಕ್ಲ ಪಂಚಮಿಯಿAದ ತೊಡಗಿ ದಶಮಿಯವರೆಗಿನ ಆರು ದಿನಗಳ ತನಕ ದುರ್ಗಾಪೂಜೆ ನಡೆಯುತ್ತದೆ.
ಕರ್ನಾಟಕದಲ್ಲಿ ನಾಡಹಬ್ಬ‘
ಅಥವಾ ‘ದಸರಾ’ ಎಂದು ಕರೆಯಲ್ಪಡುತ್ತಿರುವ ನವರಾತ್ರಿ ಮಹೋತ್ಸವ ರಾಜ್ಯದ ಹೆಮ್ಮೆಯ ಮತ್ತು ಪ್ರಮುಖ ಹಬ್ಬವಾಗಿದೆ. ಮೈಸೂರು ದಸರಾ ಎಂದೇ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ವಿಜಯನಗರ ಕಾಲದಿಂದಲೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನವೆಂದು ವಿಜಯದಶಮಿಯನ್ನು ‘ಕೆಟ್ಟದರ ಮೇಲೆ ಒಳ್ಳೆಯವರ ವಿಜಯ’ ಎಂದು ಸಾಂಕೇತಿಸುವ ಹಬ್ಬವಾಗಿದೆ. ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕಾಗಿ ದಸರಾ ಮಹೋತ್ಸವವನ್ನು ‘ನಾಡ ಹಬ್ಬ’ವೆಂದು ಕರೆಯಲಾಗುತ್ತದೆ. ವಿಶ್ವ ವಿಖ್ಯಾತವಾದ ಮೈಸೂರು ದಸರಾ 10 ದಿನಗಳ ಕಾಲ ಸಂಭ್ರಮದಿAದ ಆಚರಿಸಲಾಗುತ್ತಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ದುರ್ಗೆಯನ್ನು ನವರೂಪಗಳಲ್ಲಿ ಅಲಂಕರಿಸಿ ನವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಗುತ್ತದೆ.
ತುಳುನಾಡಿನಲ್ಲಿ ನವರಾತ್ರಿಯನ್ನು ‘ಮಾರ್ನೆಮಿ’ ಎಂದು ಕರೆಯುತ್ತಾರೆ. ಒಂಭತ್ತು ರಾತ್ರಿಯ ಹಬ್ಬವಾದ ನವರಾತ್ರಿಯ ಒಂಭತ್ತನೆಯ ದಿನ ‘ಮಹಾನವಮಿ’ ತುಳುಭಾಷೆಯಲ್ಲಿ ‘ಮಾರ್ನೆಮಿ’ ಎಂದಾಗಿದೆ. ದುರ್ಗೆ ಹತ್ತು ರಾಕ್ಷಸರನ್ನು ಸಂಹರಿಸಿದ ರಾತ್ರಿಯೆಂದು ದಶಹರ/ದಸರಾ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ತುಳುನಾಡಿನ ದೇವಾಲಯಗಳಲ್ಲಿ ಮಾರ್ನೆಮಿಯ ಪ್ರಥಮ ದಿನದಂದು ‘ಕೊಪ್ಪರಿಗೆ’ ಏರಿಸಲಾಗುತ್ತದೆ. ಕೊಪ್ಪರಿಗೆ ಅಂದ್ರೆ ‘ನಿಧಿ’ ಎಂದರ್ಥ. ಭತ್ತಬೇಸಾಯ ಸಂಸ್ಕçತಿಯ ತುಳುನಾಡಿನಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ಧಾರ್ಮಿಕ ಕೇಂದ್ರಗಳಲ್ಲಿ ‘ಅನ್ನಪ್ರಸಾದ’ ಸೇವೆ ನಡೆಯುತ್ತದೆ. ಅನ್ನದಾನ ಎಂಬುದು ಪುಣ್ಯದಾನವೆಂದು ನಂಬಲಾಗುತ್ತಿದ್ದು ‘ಅನ್ನಪ್ರಸಾದ’ದ ಸೇವೆಗೆ ದೊಡ್ಡ ‘ಕಟಾರ’ದ ಅವಶ್ಯಕತೆ ಇದ್ದು ತುಳುವಿನಲ್ಲಿ ‘ಕೊಪ್ಪರಿಗೆ ಏರಾವುನಿ’ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸಿ ಅನ್ನ ಬೇಯಿಸಲಾಗುತ್ತದೆ. ಮಾರ್ನೆಮಿಯ ಒಂಭತ್ತು ದಿನಗಳಲ್ಲಿಯೂ ವಿವಿಧ ವೇಷಗಳಿಂದ ವಿಶೇಷವಾಗಿ ಹುಲಿವೇಷ ಹಾಕಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿ ಉತ್ಸವಕ್ಕೆ ಮತ್ತು ಹುಲಿವೇಷಕ್ಕೆ ನೇರವಾದ ಸಂಬಂಧವಿದೆ. ಹುಲಿ ದುರ್ಗಾದೇವಿಯ ವಾಹನ. ದುರ್ಗಾಮಾತೆ ಹುಲಿಯ ಮೇಲೆ ಕುಳಿತುಕೊಂಡು ರಕ್ಕಸರನ್ನು ಸಂಹರಿಸಿದ ಸಂಕೇತವಾಗಿ ಹುಲಿವೇಷ ಹಾಕಿ ದೇವಿಯನ್ನು ಆರಾಧಿಸುತ್ತಾರೆ. ಇದು ದುಷ್ಟಶಕ್ತಿಗಳನ್ನು ನಿಗ್ರಹಿಸಿದ ಸಂಕೇತವೂ ಆಗಿದೆ.
ತುಳುನಾಡಿನಲ್ಲಿ ಹುಲಿ ವೇಷದ ಹಿಂದೆ ಜನಪದ ಕತೆ ಇದ್ದು ಮಕ್ಕಳಲ್ಲಿ ಅಂಗವಿಕಲತೆ, ಆರೋಗ್ಯ ಸಮಸ್ಯೆ ಇದ್ದರೆ ಮಾರ್ನೆಮಿಯ ದಿನಗಳಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕುವ ಹರಕೆ ಹೊತ್ತರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ತುಳುನಾಡಿನಲ್ಲಿ ನವರಾತ್ರಿಯನ್ನು ‘ಶಾರದಾ ಮಹೋತ್ಸವ’ ಎಂದೂ ಕರೆಯುತ್ತಾರೆ. ಐದನೇ ದಿನದ ಲಲಿತ ಪಂಚಮಿಯಂದು ವಿದ್ಯೆಯ ಅಧಿದೇವತೆಯಾದ ಶಾರದೆಯ ಪ್ರತಿಷ್ಠಾಪನೆ ಮಾಡಿ ಪುಟ್ಟ ಮಕ್ಕಳನ್ನು ಶಾರದೆಯ ಮುಂದೆ ಕೂರಿಸಿ ಅಕ್ಷರಾಭ್ಯಾಸದ ಆರಂಭ ಮಾಡಲಾಗುತ್ತದೆ. ವಿದ್ಯೆಯೇ ಬದುಕಿನ ಮೂಲಾಧಾರ. ಉತ್ತಮ ಶಿಕ್ಷಣದಲ್ಲಿಯೇ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ.
ಪ್ರಸ್ತುತ ಪ್ರಪಂಚವು ಎದುರಿಸುತ್ತಿರುವ ಅತ್ಯಾಚಾರ, ದುರಾಚಾರ, ಪೈಶಾಚಿಕತ್ವ ಎಲ್ಲದರ ಪರಿಹಾರಕ್ಕೆ ದುರ್ಗಾರಾಧನೆ ಪರಿಣಾಮಕಾರಿ ಎಂದು ನಂಬಲಾಗುತ್ತದೆ. ಈ ಮುಖೇನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ, ರಾಕ್ಷಸತನದ ದಮನಕ್ಕೆ ‘ದುರ್ಗತಿಹಾರಿಣಿ ದುರ್ಗಾಮಾತೆಯ’ ಆರಾಧನೆ ಮಹತ್ವದ್ದಾಗಿದೆ. ಅಧರ್ಮದ ವಿರುದ್ಧದ ಯುದ್ಧದಲ್ಲಿ ಕೊನೆಗೆ ಧರ್ಮ ವಿಜಯದ ಸಂದೇಶವೇ ‘ದುರ್ಗಾರಾಧನೆ’
ಸುಜ್ಞಾನದ ದೀಪ ಬೆಳಗುವ ಹಬ್ಬ ‘ದೀಪಾವಳಿ’. ರಾಷ್ಟ್ರೀಯ ಹಬ್ಬವೆಂದು ಖ್ಯಾತಿ ಪಡೆದ ‘ದೀಪಾವಳಿ’ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ದೀಪಾವಳಿ ಇತರ ಹಬ್ಬಗಳಂತೆ ಕೇವಲ ಆರಾಧನೆಯನ್ನು ಕೇಂದ್ರೀಕರಿಸುವ ಹಬ್ಬವಲ್ಲ. ಮನುಷ್ಯನ ಮನಸ್ಸಿನ ಕತ್ತಲೆಯನ್ನು ನೀಗಿಸಿ, ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಬೆಳಕಿನ ಹಣತೆ ಹಚ್ಚುವ ಮೂಲಕ ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಜ್ಞಾನದ ಬೆಳಕೆಂದರೆ ಗುರುವಿದ್ದಂತೆ. ‘ಅರಿವೇ ಗುರು’. ಒಳ್ಳೆಯತನವನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಲೌಕಿಕ ಬದುಕಿನ ಬೆಳಕೇ ಬೆಳಕು… ಸೊಗಸೇ ಸೊಗಸು… ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ, ದೀಪ ಮತ್ತು ಆವಳಿ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದೆ. ಆವಳಿ ಎಂದರೆ ಸಾಲು ಅಥವಾ ಗುಂಪು ಎಂದರ್ಥ.
ದೀಪಾವಳಿಯೊಂದಿಗೆ ಹಲವು ಪೌರಾಣಿಕ ಕತೆಗಳು ಮಿಳಿತಗೊಂಡಿವೆ. ಶ್ರೀರಾಮಚಂದ್ರ ವಿಜಯದಶಮಿಯಂದು ರಾವಣ ಸಂಹಾರ ಮಾಡಿ ಸರಿಯಾಗಿ ಇಪ್ಪತ್ತು ದಿನಕ್ಕೆ ಲಂಕೆಯಿಂದ ಅಯೋಧ್ಯಾ ತಲುಪಿದ್ದಾನೆ ಎಂದೂ, 14 ವರ್ಷಗಳ ವನವಾಸದ ಬಳಿಕ ತಮ್ಮ ಪ್ರಭುವಿನ ಅಯೋಧ್ಯಾಗಮನದ ಸಂಭ್ರಮವಾಗಿ ಪ್ರಜೆಗಳು ಸುತ್ತಲೂ ದೀಪಗಳನ್ನು ಬೆಳಗಿ ಶ್ರೀರಾಮಚಂದ್ರನನ್ನು ಸ್ವಾಗತಿಸಿದರು ಎಂಬುದು ಪೌರಾಣಿಕ ಐತಿಹ್ಯ. ಉತ್ತರಭಾರತದ ಸುತ್ತಮುತ್ತಲಿನ ರಾಜ್ಯಗಳ ಜನರು ಇಂದಿಗೂ ಈ ನಂಬಿಕೆಯನ್ನು ಉಳಿಸಿಕೊಂಡು ಶ್ರದ್ಧಾಭಕ್ತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತದ ಪೂರ್ವಭಾಗಗಳಲ್ಲಿ ಮುಖ್ಯವಾಗಿ ಪಶ್ಚಿಮಬಂಗಾಳ, ಒಡಿಶಾ, ಅಸ್ಸಾಂನಲ್ಲಿ ದೀಪಾವಳಿ ಅಮವಾಸ್ಯೆಯಂದು ಕಾಳಿದೇವಿಯನ್ನು ಆರಾಧಿಸಲಾಗುತ್ತಿದ್ದು ಈ ಪೂಜೆಯನ್ನು ‘ಶ್ಯಾಮ ಪೂಜೆ’ಯೆಂದು ಕರೆಯಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿ ಈ ಹಬ್ಬವನ್ನು ‘ದಿವಾಳಿ’ ಎಂದು ಕರೆಯುತ್ತಾರೆ. ಮೊದಲನೇ ದಿನ ‘ಧನ್ ತೇರಸ್’ ನಂದು ಮನೆಗೆ ಬೇಕಾದ ಹೊಸವಸ್ತುಗಳನ್ನು ಖರೀದಿಸಲು ಶುಭದಿನವೆಂದು ನಂಬಲಾಗುತ್ತಿದೆ. ಮಾರನೇ ದಿನ ಬರುವ ನರಕ ಚತುರ್ದಶಿಯನ್ನು ‘ಛೋಟಿ ದಿವಾಲಿ’ ಎಂದು ಕರೆಯುತ್ತಾರೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧಮುಕ್ತಗೊಳಿಸಿದ ಸಂಭ್ರಮವನ್ನು ಲೋಕದ ಜನರು ಸೂರ್ಯೋದಯಕ್ಕೆ ಮೊದಲೇ ಎದ್ದು ಅಭ್ಯಂಜನ ಸ್ನಾನ ಮಾಡಿ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ, ಸಿಹಿ ಹಂಚುತ್ತಾರೆ. ಸಂಜೆ ಲಕ್ಷ್ಮೀ ಪೂಜೆ. ದೀಪಾವಳಿ ಅಮವಾಸ್ಯೆಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಶುಭದಾಯಕವೆಂದು ನಂಬಲಾಗುತ್ತದೆ. ದೇವಾಸುರರು ಅಮೃತ ಪ್ರಾಪ್ತಿಗಾಗಿ ಹಾಲ್ಗಡಲನ್ನು ಕಡೆವಾಗ ‘ಲಕ್ಷ್ಮೀ’ ಎಂಬ ಸಂಪತ್ತಿನ ದೇವತೆ ಉದ್ಭವವಾದ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಭಿನ್ನಭಿನ್ನವಾಗಿ ದೀಪಾವಳಿ ಆಚರಿಸಲಾಗುತ್ತದೆ. ಮೂರುದಿನಗಳ ದೀಪಾವಳಿ ಆಚರಣೆಯಲ್ಲಿ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ, ಲಕ್ಷ್ಮೀ ಪೂಜೆಯಂದು ಗಣೇಶ ಮತ್ತು ಲಕ್ಷ್ಮೀ ಪೂಜೆ, ಮೂರನೇ ದಿನ ಬಲಿಪಾಡ್ಯಮಿಯಂದು ಬಲೀಂದ್ರ ಪೂಜೆ ಮಾಡಲಾಗುತ್ತದೆ. ಅಂದು ರೈತರು ತಮ್ಮ ಗದ್ದೆ ಸುತ್ತಲೂ ದೀಪವಿಟ್ಟು ಬಲಿಚಕ್ರವರ್ತಿಯನ್ನು ಸ್ಮರಿಸುತ್ತಾರೆ. ಅಂದು ಶಿವಪಾರ್ವತಿಯರು ಪಗಡೆಯಾಟವಾಡಿದ ಸಂಕೇತವಾಗಿ ಬಹಳಷ್ಟು ಮನೆಗಳಲ್ಲಿ ಪಗಡೆಯಾಡುವುದು ವಾಡಿಕೆ.
ತುಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಮನೆಗಳ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಲಾಗುತ್ತದೆ. ಮೊದಲ ದಿನ ಸಂಧ್ಯಾಕಾಲದಲ್ಲಿ ನೀರು ತುಂಬುವ ಹಬ್ಬ, ಮಾರನೇ ದಿನ ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲೇ ಅಭ್ಯಂಜನ ಸ್ನಾನ, ಮೂರನೇ ದಿನ ಲಕ್ಷ್ಮೀ ಪೂಜೆಯಂದು ಮನೆಮನೆಗಳಲ್ಲಿ ಪೂಜಾ ಸಂಭ್ರಮ, ಅಂದು ವರ್ತಕರು ಲಕ್ಷ್ಮೀ ಪೂಜೆ ಮಾಡಿ ಹೊಸ ಲೆಕ್ಕಗಳನ್ನು ಪ್ರಾರಂಭಿಸುವ ಪರಿಪಾಠ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ನಾಲ್ಕನೆಯ ದಿನ ಗೋಪೂಜೆ ಮತ್ತು ಬಲೀಂದ್ರ ಪೂಜೆ. ಅಂದು ಹಸುಗಳನ್ನು ಮೀಯಿಸಿ ಅರತಿ ಬೆಳಗಿ ಸಿಹಿ ತಿನ್ನಿಸಲಾಗುತ್ತದೆ. ರೈತರು ಸಂಜೆ ಹೊತ್ತು ಗದ್ದೆತೋಟಗಳ ಅಂಚಿನಲ್ಲಿ ಸಾಲು ದೀಪಗಳನ್ನು ಬೆಳಗಿ ಬಲೀಂದ್ರನನ್ನು ಕರೆಯುತ್ತಾರೆ. ಈ ಪದ್ಧತಿ ಫಲವಂತಿಕೆಯನ್ನು ನೀಡುವ ಶಕ್ತಿಮಾತೆಯ ಆರಾಧನಾ ಕ್ರಮವಾಗಿದೆ.
ಒಟ್ಟಿನಲ್ಲಿ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಮನೆಮಂದಿಗೆ ಹೊಸಬಟ್ಟೆ, ಹೊಸ ವಸ್ತುಗಳ ಖರೀದಿ, ಮಹಿಳೆಯರಿಗೆ ಬಗೆಬಗೆಯ ಸಿಹಿತಿನಿಸುಗಳ ತಯಾರಿಯ ಸಂಭ್ರಮ ಜೊತೆಗೆ ಬಣ್ಣಬಣ್ಣದ ಗೂಡುದೀಪಗಳ ತಯಾರಿ, ಮಕ್ಕಳಿಗೆ ಕಿವಿಗಡಚಿಕ್ಕುವ ಪಟಾಕಿ ಸುಡುವ ಸಂಭ್ರಮವೇ ಸಂಭ್ರಮ…. ವಿವಿಧ ಧರ್ಮಗಳ, ವೈವಿಧ್ಯಮಯ ಸಂಸ್ಕೃತಿಯ ಭಾರತದಲ್ಲಿ ದೀಪಾವಳಿ ಬರಿಯ ದೀಪಗಳ ಹಬ್ಬವಲ್ಲ. ನಂಬಿಕೆ-ಆಚರಣೆ, ಪುರಾಣ ಕಥನಗಳ ಮಿಳಿತದೊಂದಿಗೆ ಪ್ರಕೃತಿಯೊಂದಿಗಿನ ಅನುಸಂಧಾನದ ಪರ್ವ ದಿನವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆದು ಚಿರನೂತನಗೊಳಿಸುವ ಸಂಭ್ರಮದ ಹಬ್ಬವಾಗಿದೆ.
ಸುಖಲಾಕ್ಷಿ ವೈ. ಸುವರ್ಣ