ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದರೂ ಶಿಕ್ಷಕರ ವಿರುದ್ಧ ದೂರು ನೀಡಲು ಹಿಂದೆ ಮುಂದೆ ನೋಡದ ಹೆತ್ತವರು ಇರುವ ಕಾಲವಿದು. ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ ವ್ಯವಹರಿಸುವ ವಿದ್ಯಾರ್ಥಿಗಳೂ ಇರುತ್ತಾರೆ. ಇವೆಲ್ಲವುಗಳು ಅಧ್ಯಾಪಕರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ.
ಮಕ್ಕಳು ಅತಿಯಾದ ತುಂಟಾಟವನ್ನು ತೋರಿಸಿದರೆ ಅಧ್ಯಾಪಕರು ಜೋರು ಮಾಡಿದರೆ ಅಥವಾ ಶಬ್ದವನ್ನು ಎತ್ತರಿಸಿ ಮಾತನಾಡಿದರೆ ಕಣ್ಣು ದೊಡ್ಡದು ಮಾಡಿ ನೋಡಿದರೆ ಮಕ್ಕಳ ಮನಸ್ಸಿನಲ್ಲಿ ಗಾಯ ಉಂಟಾಗುತ್ತದೆ. ಆದರೆ ತಪ್ಪುಗಳನ್ನು ಪುನರಾವರ್ತಿಸದೆ ಇರುವ ರೀತಿಯಲ್ಲಿ ವಿಷಯಗಳನ್ನು ಪ್ರೀತಿಯೊಂದಿಗೆ ಮನವರಿಕೆ ಮಾಡಿ ಹೃದಯದಲ್ಲಿ ಬೆಳಕನ್ನು ಹಚ್ಚುವ ಒಳ್ಳೆಯ ಅಧ್ಯಾಪಕರು ಇಂದಿಗೂ ಇದ್ದಾರೆ .ಅವರು ಕೂಡ ನಿಷ್ಕ್ರಿಯರಾಗಿ ಮಾರ್ಪಡುವ ರೀತಿಯಲ್ಲಿ ಇಂದಿನ ಹಲವು ವಿದ್ಯಾಸಂಸ್ಥೆಗಳ ಪರಿಸ್ಥಿತಿ ಬದಲಾಗಿದೆ. “ನನ್ನ ಮಗನನ್ನು ಶಿಕ್ಷಿಸುವ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ” ಎಂಬ ರೀತಿಯ ಹೇಳಿಕೆಗಳು. `ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ವಿಧಾನವನ್ನು ಸ್ವೀಕರಿಸಿದ ಅಹಂಕಾರದಿAದ ವರ್ತಿಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ.
ವಿದ್ಯಾರ್ಥಿಗಳ ಗೌರವವನ್ನು ಗಳಿಸಲು ವಿಫಲರಾದ ಶಿಕ್ಷಕರು
ಕಲಿಕೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸದಲ್ಲಿ ಅಧ್ಯಾಪಕರ ಪಾತ್ರವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿಮೆ ಮಾಡುತ್ತಿದೆ ಎಂಬುದರ ಸೂಚನೆಗಳು ಲಭಿಸುತ್ತಿವೆ. ಮಾದರಿ ಯೋಗ್ಯವಾದಂತಹ ವ್ಯವಹಾರ ಮತ್ತು ಶೈಲಿಗಳ ಅಭಾವ, ಜೊತೆಗೆ ಅಧ್ಯಾಪಕ ವೃತ್ತಿಯಲ್ಲಿ ವಿಶಿಷ್ಟತೆಯನ್ನು ತೋರ್ಪಡಿಸಲು ಸಾಧ್ಯವಾಗದೆ ಇರುವ ಕಾರಣ ವಿದ್ಯಾರ್ಥಿಗಳಿಂದ ಗೌರವವನ್ನು ಗಳಿಸಲು ಸಾಧ್ಯವಾಗದ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
ಹೆತ್ತವರು ವಿದ್ಯಾರ್ಥಿಗಳು ಅಧ್ಯಾಪಕರು ಮುಂತಾದವರೆಲ್ಲ ಸೇರಿ ಉಂಟಾಗುವ ವಿದ್ಯಾಲಯದ ಪರಿಸರದ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತಿವೆ. ತಾಂತ್ರಿಕತೆಯ ಡಿಜಿಟಲ್ ಯುಗವು ಮಕ್ಕಳ ಸ್ವಭಾವವನ್ನು ಉಂಟು ಮಾಡುವುದರಲ್ಲಿ, ಅವರ ಸಾಮಾಜಿಕ ವರ್ತನೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಮಲು ಪದಾರ್ಥಗಳ ವ್ಯಾಪಕವಾದ ಬಳಕೆಯು ಇನ್ನೊಂದು ಮುಖ್ಯ ಸಮಸ್ಯೆಯಾಗಿದೆ. ಕಾಲಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಪಾತ್ರವು ಪುನರ್ನವೀಕರಿಸಲ್ಪಡುತ್ತಿದೆ. ಅರ್ಥಪೂರ್ಣವಾಗಿ ಎಲ್ಲರೂ ಜೊತೆಗೂಡಿ ವಿಷಯಗಳನ್ನು ಗಮನಿಸದೇ ಹೋದರೆ, ಕ್ರಮಗಳನ್ನು ಕೈಗೊಳ್ಳದಿದ್ದರೆ ಮಕ್ಕಳು ನಮ್ಮ ಕೈಯಿಂದ ಹೊರಟು ಹೋಗಬಹುದು.
ಸರ್ ಸ್ವಲ್ಪ ಬದಲಾಗೋಣ
ಯಾವುದೇ ವಿಷಯದಲ್ಲಾದರೂ ಒಂದಕ್ಕಿಂತ ಒಂದು ಉತ್ತಮವಾದಂತಹ ಆನ್ಲೈನ್ ಕ್ಲಾಸುಗಳು ಇಂದು ಲಭ್ಯವಿದೆ. ಗೂಗಲ್ನಲ್ಲಿ ಸರ್ಚ್ ಮಾಡಿದರೆ ಎಲ್ಲ ರೀತಿಯ ಮಾಹಿತಿಗಳು ಒಳ್ಳೆಯ ರೀತಿಯಲ್ಲಿ ಸಿಗುತ್ತದೆ. ಅದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ಸಹಾಯವು ಇದೆ. ಜ್ಞಾನವನ್ನು ಗಳಿಸಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಅಪಾರವಾದಂತಹ ಸಾಧ್ಯತೆಗಳು ಮುಂದಿವೆ. ಅವರಿಗೆ ಅಧ್ಯಾಪಕರನ್ನು ಆಶ್ರಯಿಸದೆಯೇ ಜ್ಞಾನವನ್ನು ಗಳಿಸಬಹುದಾಗಿದೆ. ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದಾಗಿದೆ. ಆದರೆ ತರಗತಿಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಗಳಿಸುವ ವಿದ್ಯೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ.
ಇದರಲ್ಲಿ ವೀಕ್ಷಣಾ ಸಾಮರ್ಥ್ಯವು ಶಕ್ತಿಯುತವಾಗುತ್ತದೆ. ಇದೆಲ್ಲಾ ಸಾಧ್ಯವಾಗಬೇಕಾದರೆ ಇಂದಿನ ಕಾಲದಲ್ಲಿ ಅಧ್ಯಾಪಕರು ಹೆಚ್ಚು ಪಕ್ವತೆಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆ ರೀತಿಯಲ್ಲಿ ನಮ್ಮ ಬೋಧನಾ ರೀತಿಯನ್ನು ನವೀಕರಿಸಲು ಅಧ್ಯಾಪಕರಿಗೆ ಸಾಧ್ಯವಾಗಬೇಕು. ತಾವು ಬೋಧಿಸುತ್ತಿರುವ ವಿಷಯಗಳು ಯಾವ ಮೂಲದಿಂದೆಲ್ಲ ಗಳಿಸಿ ಜ್ಞಾನದ ಪರಿಪೂರ್ಣತೆಯೆಡೆಗೆ ತಲುಪಲು ಸಾಧ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಲು ಅಧ್ಯಾಪಕರಿಗೆ ಸಾಧ್ಯವಾಗಬೇಕು.
ಪ್ರತಿ ವರ್ಷ ಮೊದಲೇ ಸಿದ್ದಪಡಿಸುತ್ತಿರುವ ಒಂದು ನೋಟ್ಸ್ ನ ಭಾಗಗಳನ್ನು ಹಿಡಿದುಕೊಂಡು ಪ್ರತಿ ವರ್ಷವೂ ಅದನ್ನೇ ಪುನರಾವರ್ತಿಸುತ್ತಿದ್ದ ಅದೇ ಹಳೆಯ ಕಥೆಗಳನ್ನು ಹೇಳುತ್ತಾ ಮುಂದೆ ಸಾಗುವುದು ಈ ವೈಜ್ಞಾನಿಕ ಕ್ರಾಂತಿಯ ಯುಗದಲ್ಲಿ ಇರುವಂತಹ ಅಧ್ಯಾಪಕರಿಗೆ ಸೂಕ್ತವಾದ ವಿಧಾನವಲ್ಲ. ವಿಷಯಗಳ ಸಂಗ್ರಹ ಮತ್ತು ಕಲಿಸುವಂತಹ ಶೈಲಿಯನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಗುರುಗಳಿಗಿಂತ ಹೆಚ್ಚು ಅರಿವನ್ನು ಹೊಂದಿರುವ ಬಹಳ ಬುದ್ಧಿವಂತರಾದ ಮಕ್ಕಳನ್ನು ಹೊಂದಿದ ತರಗತಿಗಳು ಇರುತ್ತವೆ. ಅವರ ಸಂಶಯಗಳಿಗೆ ಸರಿಯಾದ ಉತ್ತರವನ್ನು ನೀಡಲು, ಅದು ಎಲ್ಲಿಂದ ಸಿಗುತ್ತದೆ ಎಂಬುದನ್ನು ಗುರುತಿಸಿ ಹೇಳಲು ಶಿಕ್ಷಕರಿಗೆ ಸಾಧ್ಯವಾಗಬೇಕು.
ವಿವಿಧ ಕಾರಣಗಳಿಂದಾಗಿ ಕುಟುಂಬದಲ್ಲಿ ಮಕ್ಕಳಿಗೆ ಸಿಗಬೇಕಾದಂತಹ ಗಮನ ಸಿಗದೇ ಹೋದ ಪರಿಸ್ಥಿತಿಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಬಹಳ ಹೆಚ್ಚಿದೆ. ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಉತ್ತಮವಾದಂತಹ ಮಾರ್ಗದಲ್ಲಿ ಅವರನ್ನು ಮುಂದೆ ಕೊಂಡು ಹೋಗುವಂತಹ ಮಾರ್ಗದರ್ಶನವನ್ನು ನೀಡಲು ಓರ್ವ ಮಾರ್ಗದರ್ಶಕನ ವೇಷವನ್ನು ಅವರು ಧರಿಸಬೇಕಾಗಿ ಬರುತ್ತದೆ. ಈ ಪಾತ್ರವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾದರೆ ಖಂಡಿತವಾಗಿಯೂ ಅಂತಹ ಅಧ್ಯಾಪಕರಿಗೆ ಉತ್ತಮ ಗೌರವ ಲಭಿಸುತ್ತದೆ.
ಮಾದರಿ ಅಧ್ಯಾಪಕರಾಗೋಣ
ಯಾರು ಅತ್ಯುತ್ತಮ ಅಧ್ಯಾಪಕರು ಎಂಬ ವಿಷಯದಲ್ಲಿ ಈ ಹಿಂದೆ ಶಾಲೆಗಳಲ್ಲಿ ನಡೆಸಿದಂತಹ ಒಂದು ಅಧ್ಯಯನವಿದೆ. ಅದು ಇಂದಿಗೂ ಪ್ರಸಕ್ತವಾಗಿದೆ. ಯಾರು ವಿದ್ಯಾರ್ಥಿಗಳೊಂದಿಗೆ ಬಹಳ ಆತ್ಮೀಯತೆಯೊಂದಿಗೆ, ಸಹಕಾರ ನೀಡಿ, ಪ್ರಜಾಪ್ರಭುತ್ವ ಶೈಲಿಯಲ್ಲಿ ವರ್ತಿಸುತ್ತಾರೋ ಅಂತಹ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರ ಎನಿಸಿಕೊಳ್ಳುತ್ತಾರೆ. ಪ್ರೀತಿಯ ಮನಸ್ಸುಳ್ಳ, ಸಣ್ಣವರನ್ನು ಅಂಗೀಕರಿಸುವAತಹ, ಕ್ಷಮೆಯೊಂದಿಗೆ ವರ್ತಿಸುವಂತಹ, ಅನುಭವಿಗಳಾಗಿ ವ್ಯವಹರಿಸುವಂತಹ ಮನೋಭಾವವನ್ನು ಮತ್ತು ವಿದ್ಯಾರ್ಥಿಗಳ ಹಿತವನ್ನು ಬಯಸುವಂತಹ ಶಿಕ್ಷಕರನ್ನು ಮಕ್ಕಳು ಸದಾ ಇಷ್ಟಪಡುತ್ತಾರೆ. ಮೃದುಮನಸ್ಕರಾದ, ಎಲ್ಲರನ್ನೂ ಪರಿಗಣಿಸುವ ಸಹನೆಯೊಂದಿಗೆ ಸಹಾನುಭೂತಿಯೊಂದಿಗೆ ವರ್ತಿಸುವ ಅಧ್ಯಾಪಕರನ್ನು ಎಲ್ಲ ವಿದ್ಯಾರ್ಥಿಗಳು ಇಷ್ಟಪಡುತ್ತಾರೆ.
ಯಾರಾದರೂ ಒಂದಿಬ್ಬರು ವಿದ್ಯಾರ್ಥಿಗಳ ಹಿಂದೆ ಬಿದ್ದು ಅವರನ್ನೇ ಇಷ್ಟಪಡುವ ಇತರ ವಿದ್ಯಾರ್ಥಿಗಳೊಂದಿಗೆ ತಾರತಮ್ಯವನ್ನು ತೋರುವ ಅಧ್ಯಾಪಕರನ್ನು ಯಾರೂ ಇಷ್ಟಪಡುವುದಿಲ್ಲ. ಬದಲಾಗಿ ಪಕ್ಷಪಾತ ರಹಿತವಾಗಿ ಎಲ್ಲರೊಂದಿಗೂ ವ್ಯವಹರಿಸುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ಶ್ರೇಷ್ಠ ಅಧ್ಯಾಪಕರು.
ಏನಾದರೂ ಸಮಸ್ಯೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾಧ್ಯವಿರುವ ಮತ್ತು ಅದರಲ್ಲಿ ಆಸಕ್ತಿಯನ್ನು ತೋರಿಸುವ ಶಿಕ್ಷಕರು ಒಳ್ಳೆಯ ಮನಸ್ಸುಳ್ಳ ಶಿಕ್ಷಕರಾಗಿರುತ್ತಾರೆ. ವಿದ್ಯಾರ್ಥಿಗಳ ಮಧ್ಯೆ ಇರುವ ವೈಮನಸನ್ನು ತಮ್ಮ ಹಾಸ್ಯ ಮಿಶ್ರಿತ ರೀತಿಯಲ್ಲಿ ಹೋಗಲಾಡಿಸಿ ಅವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ಅದು ಬಹಳಷ್ಟು ಉಪಯುಕ್ತ.
ಆಹ್ಲಾದಕರವಾದ ವ್ಯಕ್ತಿತ್ವ, ವರ್ತನೆಗಳು, ಶರೀರ ಭಾಷೆ ಮುಂತಾದವುಗಳನ್ನು ಹೊಂದಿರುವ ಅಧ್ಯಾಪಕರು ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೋಧನಾ ಶೈಲಿಯಲ್ಲಿ ಬದಲಾವಣೆಯನ್ನು ಮಾಡುವ, ಹೊಸ ವಿಧಾನಗಳನ್ನು ಸ್ವೀಕರಿಸುವ ಅರ್ಥಪೂರ್ಣವಾದ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯ, ಉತ್ತಮ ಅಧ್ಯಾಪಕನಿಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಣ್ಣ ವಿಶೇಷತೆಯನ್ನು ಗಮನಿಸಿ ಅದನ್ನು ಗೌರವಿಸಿ ಪ್ರೋತ್ಸಾಹಿಸುವ ಸಾಮರ್ಥ್ಯವಿರುವ ಅಧ್ಯಾಪಕರು ಸದಾ ವಿದ್ಯಾರ್ಥಿಗಳ ಮನಸ್ಸಿನಾಳದಲ್ಲಿ ಉಳಿಯುತ್ತಾರೆ. ಕಲಿಸುವ ವಿಷಯದ ಬಗ್ಗೆ ಆಳವಾದ ಅರಿವು ಉತ್ತಮ ಅಧ್ಯಾಪಕನ ಗುಣಗಳ ಪೈಕಿ ಒಂದಾಗಿದೆ.
ಕಠೋರವಾಗಿ ವರ್ತಿಸಿ ಶಿಸ್ತನ್ನು ಪಾಲಿಸುವಂತೆ ಮಾಡಲು ಸಾಧ್ಯವಿಲ್ಲ
ವಿದ್ಯಾರ್ಥಿಗಳು ತಮಗೆ ವಿಧೇಯರಾಗಿರಬೇಕು ಮತ್ತು ಅವರು ಸದಾ ಶಿಸ್ತಿನೊಂದಿಗೆ ವರ್ತಿಸಬೇಕು ಎಂಬುದು ಎಲ್ಲ ಶಿಕ್ಷಕರ ಕನಸಾಗಿರುತ್ತದೆ. ಇದು ಪಠ್ಯ ಪಠ್ಯೇತರ ಚಟುವಟಿಕೆಗಳು ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಅನುಚಿತವಾದಂತಹ ವರ್ತನೆಗಳನ್ನು ನಡವಳಿಕೆಗಳನ್ನು ಇಲ್ಲವಾಗಿಸಲು ಶಿಸ್ತು ಬಹಳ ಅಗತ್ಯವಾಗಿದೆ. ಶಿಸ್ತನ್ನು ಉಲ್ಲಂಘಿಸಿದರೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಇದು ಒಂದು ವಿದ್ಯಾಸಂಸ್ಥೆಯು ಸಮಾಧಾನಪೂರ್ವಕವಾದಂತಹ ವಾತಾವರಣದಲ್ಲಿ ಮುಂದುವರಿಯಲು ಬಹಳ ಅಗತ್ಯವಾದಂತಹ ವಿಷಯವಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಚೆನ್ನಾಗಿ ತಿಳಿದಿರಬೇಕು. ಶಾಲಾ ನಿಯಮಗಳಿಗೆ ಬದ್ಧರಾಗಿ ವರ್ತಿಸಲು ಮತ್ತು ಇತರರನ್ನು ಗೌರವಿಸಿ ಜೀವಿಸುವುದನ್ನು, ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡುವುದು ವಿದ್ಯಾರ್ಥಿಗಳಿಗೂ ಪಾಲಕರಿಗೂ ಅತ್ಯಂತ ಅಗತ್ಯದ ವಿಷಯವಾಗಿದೆ. ನಿಯಮಗಳನ್ನು ಪಾಲಿಸಲು ಮಾನಸಿಕವಾಗಿಯೂ ಸಿದ್ಧತೆಯ ಅಗತ್ಯವಿರುತ್ತದೆ. ಅದಕ್ಕಾಗಿ ಕೆಲವು ತತ್ವಗಳನ್ನು ಪಾಲಿಸಬೇಕು.
1. ಯಾವ ರೀತಿಯಲ್ಲಿ ವ್ಯವಹರಿಸಬೇಕು ಯಾವ ನಿಯಮಗಳನ್ನೆಲ್ಲ ಪಾಲಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಅದೇ ರೀತಿ ಇವುಗಳನ್ನು ಉಲ್ಲಂಘಿಸಿದರೆ ಉಂಟಾಗುವAತಹ ಪರಿಣಾಮಗಳ ಬಗ್ಗೆಯೂ ಕೂಡ ಮುನ್ನೆಚ್ಚರಿಕೆಯನ್ನು ನೀಡಬೇಕು. ಶಾಲಾ ದಿನಚರಿಯಯಲ್ಲಿ ಇವುಗಳನ್ನೆಲ್ಲ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಪ್ರೇರಣೆಯನ್ನು ನೀಡಬೇಕು.
2. ಶಿಸ್ತನ್ನು ಪಾಲಿಸಿದರೆ ಮಾದರಿ ಯೋಗ್ಯವಾಗಿ ವರ್ತಿಸಿದರೆ ಅಂತಹ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬೇಕು. ಅದರ ಬಗ್ಗೆ ಹೆತ್ತವರಿಗೆ ತಿಳಿಸಬೇಕು.
3. ವಿದ್ಯಾರ್ಥಿಗಳು ಶಿಸ್ತನ್ನು ಉಲ್ಲಂಘಿಸಿದರೆ, ಅನುಚಿತ ರೀತಿಯಲ್ಲಿ ವರ್ತಿಸಿದರೆ ಶಿಕ್ಷಕರು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಬ್ದವನ್ನು ಎತ್ತರಿಸದೆ ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕು. ನಾವು ಅವರಿಗೆ ಶಿಸ್ತನ್ನು ಕಲಿಸುವವರು ಶಿಸ್ತನ್ನು ಉಲ್ಲಂಘಿಸದಂತೆ ನೋಡಿಕೊಂಡು ಅವರಿಗೆ ಅವರ ತಪ್ಪಿನ ಮನವರಿಕೆಯಾಗುವಂತೆ ಮಾಡಬೇಕು. ಪ್ರಥಮವಾಗಿ ಮಾಡುವ ಶಿಸ್ತಿನ ಉಲ್ಲಂಘನಿಗೆ ಕೇವಲ ಬಾಯಿ ಮಾತಿನ ಎಚ್ಚರಿಕೆ ಸಾಕು. ಪುನಃ ಪುನಃ ಅದು ಆವರ್ತನೆಯಾಗುತ್ತಿದ್ದರೆ ಶಿಸ್ತುಕ್ರಮವನ್ನು ಕೈಗೊಳ್ಳಬಹುದು. ಪೆಟ್ಟು ಕೊಡುವುದಕ್ಕಿಂತ, ದೈಹಿಕ ದಂಡನೆಗಿAತ ಹೆಚ್ಚಾಗಿ ಮನಶಾಸ್ತ್ರ ತಿಳಿಸಿ ಕೊಡುವ ವಿಧಾನವನ್ನು ಬಳಸಬಹುದು. ಶಿಕ್ಷೆಯ ರೂಪದಲ್ಲಿ ಅವರು ಇಷ್ಟಪಡುವ ಆಟೋಟ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ಅವರನ್ನು ದೂರವಿರಿಸಬಹುದು. ಹೆಚ್ಚು ಹೊಣೆಗಾರಿಕೆಗಳನ್ನು ವಹಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಷ್ಟವಿಲ್ಲದ್ದು ಏನು ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯ ಅಧ್ಯಾಪಕರಿಗೆ ಇರಬೇಕು. ಮಾಡಿದ ತಪ್ಪನ್ನು ನೆನಪಿಸಲಿಕ್ಕಾಗಿ ಈ ರೀತಿಯಲ್ಲಿ ನಿನ್ನನ್ನು ಶಿಕ್ಷಿಸಲಾಗುತ್ತಿದೆ ಎಂಬುದು ಅವರಿಗೆ ಮನವರಿಕೆಯಾಗಬೇಕು. ಯಾವ ರೀತಿಯ ಶಿಸ್ತಿನ ಉಲ್ಲಂಘನೆ ಆಗಿದೆಯೋ ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಮಾತ್ರ ನೀಡತಕ್ಕದ್ದು .ಹೆಚ್ಚು ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೆ ಮಕ್ಕಳ ಸ್ವಭಾವವನ್ನು ತಿದ್ದಲು ಹೆತ್ತವರ ಸಹಾಯವನ್ನು ಪಡೆಯಬೇಕು.
4. ತಪ್ಪು ಮಾಡಿದರೂ ಕೆಲವು ವಿದ್ಯಾರ್ಥಿಗಳನ್ನು ಸುಮ್ಮನೆ ಬಿಟ್ಟು ಬಿಡುವುದು ಉಚಿತವಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನನ್ನು ಅನ್ವಯಿಸಬೇಕು. ಅಚ್ಚುಕಟ್ಟುತನ, ಒಳ್ಳೆಯ ವರ್ತನೆ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಕಾಳಜಿ ಉಂಟಾಗಬೇಕಿದ್ದರೆ ಈ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಶಿಕ್ಷೆಯನ್ನು ನೀಡುತ್ತೇನೆ ಅಥವಾ ತರಗತಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿ ಮಕ್ಕಳನ್ನು ಸರಿಪಡಿಸಲು ಪ್ರಯತ್ನಿಸಬಾರದು. ಅದಕ್ಕೆ ಹೆಚ್ಚು ಬೆಲೆ ಇರುವುದಿಲ್ಲ. ಮಕ್ಕಳನ್ನು ಕಾಳಜಿಯೊಂದಿಗೆ ಪರಿಗಣಿಸುವುದು ಮತ್ತು ಪ್ರೀತಿಯೊಂದಿಗೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ತಿದ್ದಲು ಪ್ರಯತ್ನಿಸಿದರೆ ಖಂಡಿತವಾಗಿಯೂ ಅದು ಮಕ್ಕಳ ಮನಸ್ಸನ್ನು ತಟ್ಟುತ್ತದೆ .ಈ ರೀತಿ ಅವರೊಳಗಿಂದಲೇ ತಾವು ಬದಲಾಗಬೇಕು, ಒಳ್ಳೆಯವರಾಗಬೇಕು ಎಂಬ ಪ್ರೇರಣೆ ಬರುವಂತೆ ಅವರಲ್ಲಿ ಪ್ರೀತಿಯ ವರ್ತನೆ ತೋರುವ ಶಿಕ್ಷಕರು ನಾವಾಗಬೇಕು.
ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರು
ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರ ಕುರಿತು ಅಧ್ಯಯನಗಳು ನಡೆದಿವೆ. ಮುಂಗೋಪ, ಅಸಹಿಷ್ಣುತೆ ಇರುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ಇಷ್ಟಪಟ್ಟಿಲ್ಲ. ಕೇವಲ ತಮಗಿಷ್ಟ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಮಹತ್ವವನ್ನು ನೀಡುವ, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವ ಭೇದಭಾವ ತೋರಿಸುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ದ್ವೇಷಿಸುತ್ತಾರೆ. ವಿದ್ಯಾರ್ಥಿಗಳನ್ನು ಬಹಿರಂಗವಾಗಿ ತಮಾಷೆ ಮಾಡುವ, ಕೀಳಾಗಿ ತೋರಿಸುವ ಸಾಮಾನ್ಯವಾಗಿ ಗೆಳೆತನವಿಲ್ಲದ ರೀತಿಯಲ್ಲಿ ವ್ಯವಹರಿಸುವ ಅಧ್ಯಾಪಕರನ್ನು ಕೂಡ ವಿದ್ಯಾರ್ಥಿಗಳು ದ್ವೇಷಿಸುತ್ತಾರೆ ಎಂಬುದಾಗಿ ಅಧ್ಯಯನಗಳು ಸೂಚಿಸುತ್ತವೆ.
ಅಧ್ಯಾಪಕರ ಅತಿಯಾದ ಶಿಸ್ತು ಮತ್ತು ಸಹನೆಯ ಕೊರತೆಯು ತರಗತಿಗಳಲ್ಲಿ ಸಂಘರ್ಷವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳೊಂದಿಗೆ ಆಗಲಿ ಅಧ್ಯಾಪಕ ವೃತ್ತಿಯೊಂದಿಗೆ ಬದ್ಧತೆ ಇಲ್ಲದ ರೀತಿಯಲ್ಲಿ ಶರೀರಭಾಷೆಯನ್ನು ತೋರಿಸುವ ಅನಾಕರ್ಷಕವಾದ ಶೈಲಿಯನ್ನು ಹೊಂದಿರುವುದು ಒಳ್ಳೆಯ ಅಧ್ಯಾಪಕರ ಲಕ್ಷಣವಲ್ಲ.
ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರು ಮಾಡಬೇಕಾದುದು
– ತರಗತಿಯ ಎಲ್ಲ ವಿದ್ಯಾರ್ಥಿಗಳ ಸ್ವಭಾವ, ಅವರ ವಿಶೇಷತೆಗಳು, ಅವರ ಹಿನ್ನೆಲೆ, ಅವರ ಸಾಮರ್ಥ್ಯ, ಅಸಾಮರ್ಥ್ಯ ಇವುಗಳನ್ನು ಕೃತ್ಯವಾಗಿ ಅರಿಯಲು ಪ್ರಯತ್ನಿಸಿ. ಅವರ ಸಂತೋಷ ಮತ್ತು ದುಃಖದಲ್ಲಿ ಅಧ್ಯಾಪಕರು ಜೊತೆಗಿರುತ್ತಾರೆ ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ. ನಿಮಗೆ ಅವರ ಬಗ್ಗೆ ಕಾಳಜಿ ಇದೆ ಮತ್ತು ವಿಶ್ವಾಸವಿದೆ ಎಂಬುದು ಅವರಿಗೆ ಮನವರಿಕೆಯಾದರೆ ಹಲವು ರೀತಿಯ ಸ್ವಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ.
– ಯಾವುದೇ ರೀತಿಯ ನಾಟಕೀಯತೆ ಇಲ್ಲದೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದು ಒಳ್ಳೆಯದು. ಮೃದು ಮನಸ್ಸಿಗೆ ಗಾಯ ಉಂಟಾಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಆಕ್ಷೇಪಿಸಬಾರದು ಮತ್ತು ಅವರ ಬಗ್ಗೆ ತೀರ್ಮಾನವನ್ನು ಹೇಳಿಬಿಡಬಾರದು. ಒಳ್ಳೆಯ ಅಭ್ಯಾಸಗಳ ಬಗ್ಗೆ ಇರುವಂತಹ ಮಾರ್ಗದರ್ಶನಗಳು ಮುಕ್ತ ಮಾತುಕತೆಗಳ ಮೂಲಕ ಅವರಿಗೆ ಮನವರಿಕೆಯಾಗಬೇಕು. ಉಪದೇಶಗಳನ್ನು ನೀಡುವ ಮೂಲಕ ಅವರನ್ನು ಬೋರು ಹೊಡೆಸಬಾರದು.
– ವಿದ್ಯಾರ್ಥಿಯ ಭಾವನೆಗಳನ್ನು ಅವನ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೊರಗೆಡಹಲು ಅವಕಾಶ ನೀಡಬೇಕು .ಅಧ್ಯಾಪಕರು ಒಳ್ಳೆಯ ಕೇಳುಗರಾಗಬೇಕು .ಎಲ್ಲರನ್ನೂ ಒಂದೇ ರೀತಿಯಲ್ಲಿ ಸಮಾನತೆಯೊಂದಿಗೆ ನೋಡಬೇಕು. ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಒಲವನ್ನು ಹೊಂದಿರಬಾರದು.
– ವಿದ್ಯಾರ್ಥಿಗಳಿಗೆ ಉತ್ತರ ತಿಳಿದಿಲ್ಲದ ಪ್ರಶ್ನೆಗಳನ್ನು ಕೇವಲ ಅವರನ್ನು ಕೀಳಾಗಿಸಲಿಕ್ಕಾಗಿ ಕೇಳಬಾರದು. ಅವರಿಗೆ ತಿಳಿದಿರುವ ವಿಷಯಗಳನ್ನೇ ಪ್ರಶ್ನೆಗಳ ರೂಪದಲ್ಲಿ ಕೇಳಿ ಅವರಿಂದ ಉತ್ತರ ಹೇಳಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ಆತ್ಮವಿಶ್ವಾಸದೊಂದಿಗೆ ಅವರು ತಮಗೆ ತಿಳಿದಿಲ್ಲದ ವಿಷಯಗಳನ್ನು ಕಲಿತು ಮುಂದೆ ಬರಲು ಸಹಾಯವಾಗುತ್ತದೆ.
– ತರಗತಿಯನ್ನು ನಡೆಸುವ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಸಾಧ್ಯವಾದ ರೀತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರು ನಿಮಗಾಗಿ ಏನಾದರೂ ಸಹಾಯ ಮಾಡಿದರೆ ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಪ್ರೋತ್ಸಾಹಿಸಬೇಕು.
– ಒಳ್ಳೆಯ ಕಥೆಗಳನ್ನು ,ಜೀವನದ ಅನುಭವ ಪಾಠಗಳನ್ನು, ವೈಯಕ್ತಿಕವಾದ ಅನುಭವಗಳನ್ನು, ದಿನಪತ್ರಿಕೆಗಳಲ್ಲಿ ಬರುವಂತಹ ವಾರ್ತೆಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ತರಗತಿಗಳನ್ನು ಉತ್ತಮಪಡಿಸಬಹುದು. ವಿದ್ಯಾರ್ಥಿಗಳು ಅಂತಹ ಅಧ್ಯಾಪಕರ ತರಗತಿಗಳನ್ನು ಕಾದಿರುತ್ತಾರೆ. ಇಂತಹ ತರಗತಿಗಳಲ್ಲಿ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.
– ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಡಿಜಿಟಲ್ ಅಭ್ಯಾಸಗಳು ಯಾವುದು ಎಂಬುದರ ಕುರಿತು ಸರಿಯಾದ ಅರಿವು ಗಳಿಸಲು ಅಧ್ಯಾಪಕರು ಶ್ರಮಿಸುವುದು ಒಳ್ಳೆಯದು .ಡಿಜಿಟಲ್ ಲೋಕದಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು, ಸುರಕ್ಷಾ ಕ್ರಮಗಳ ಕುರಿತು ತರಗತಿಯಲ್ಲಿ ನೆನಪಿಸುತ್ತಿರಬೇಕು.
– ಓದುವುದರಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ನೀವಾಗಿಯೇ ನೀಡಬಹುದು. ಅದರ ಸಾರಾಂಶವನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಸ್ತುತಪಡಿಸಲಿ.
– ಮನೆಯಲ್ಲಿ ಉತ್ತಮ ಕೌಟುಂಬಿಕ ಪರಿಸ್ಥಿತಿ ಇಲ್ಲದೆ ಇರುವಂತಹ ವಿದ್ಯಾರ್ಥಿಗಳ ಪಾಲಿಗೆ ನೀವು ಉತ್ತಮ ರಕ್ಷಕರ ಪಾತ್ರವನ್ನು ವಹಿಸಬೇಕು. ಅವರು ಆ ಕಾರಣದಿಂದ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬೆಂಬಲಕ್ಕೆ ಸದಾ ನೀವು ನಿಲ್ಲಬೇಕು.
ಅಧ್ಯಾಪಕರು ಮತ್ತು ಹೆತ್ತವರ ಒಂದು ಸಂಘ ಇರಬೇಕು
ಮಕ್ಕಳು ಚೆನ್ನಾಗಿ ಕಲಿಯಬೇಕು ಮತ್ತು ಯುವ ಪ್ರಾಯಕ್ಕೆ ತಲುಪಿದರೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಸಿಗಬೇಕು ಎಂದು ಬಯಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದಕ್ಕಾಗಿ ಅವರನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಒಳ್ಳೆಯ ರೀತಿಯಲ್ಲಿ ಬೆಳೆಯಬೇಕಾದರೆ ಜೀವನದ ಮೌಲ್ಯಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಾದರೆ ಪಕ್ವತೆಯುಳ್ಳ ವ್ಯಕ್ತಿತ್ವ ಉಂಟಾಗಬೇಕಾದರೆ ಯಾವುದಕ್ಕೆ ಮಹತ್ವ ನೀಡಬೇಕು ಮತ್ತು ನಮ್ಮ ಜೀವನದ ಗುರಿ ಏನಾಗಿರಬೇಕು ಎಂಬುದನ್ನು ಮರೆತುಬಿಡುತ್ತೇವೆ. ಮಕ್ಕಳಿಗೆ ಮೀಸಲಾಗಿರುವ ಸಮಯದಲ್ಲಿ ಹೋಂವರ್ಕ್ ಮಾಡಿಸಲು ಮಾರ್ಕ್ ಮತ್ತು ಗ್ರೇಡ್ಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆಯ ಬಗ್ಗೆ ಅವರಿಗೆ ತಿಳಿಹೇಳಲು ಹೆತ್ತವರು ಸೀಮಿತರಾಗಿ ಬಿಡುತ್ತಾರೆ.
ನನ್ನ ಹೆತ್ತವರೊಂದಿಗೆ ಯಾವುದೇ ವಿಷಯವನ್ನು ತೆರೆದು ಹೇಳಬಹುದು ಮತ್ತು ನಾನು ಏನು ಹೇಳಿದರೂ ಅದನ್ನು ಪೂರ್ವಗ್ರಹದೊಂದಿಗೆ ನೋಡುವುದಿಲ್ಲ ಎಂದು ಧೈರ್ಯವಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ದೈನಂದಿನ ದಿನಚರಿಯನ್ನು ಡಿಜಿಟಲ್ ಮಾಧ್ಯಮಗಳು ನುಂಗಿ ಹಾಕಲು ಆರಂಭಿಸಿದ ಬಳಿಕ ಎಲ್ಲರೂ ಜೊತೆ ಸೇರಿ ಸಾಮೂಹಿಕತೆಯನ್ನು ಬೆಳೆಸಲು ಸಾಧ್ಯವಿರುವ ಆಟೋಟಗಳ ಸಂಖ್ಯೆ ಕಡಿಮೆಯಾಯಿತು. ಇವುಗಳಿಂದಾಗಿ ಭಾವನಾತ್ಮಕ ಶುಷ್ಕತೆಯನ್ನು ಅನುಭವಿಸುವಂತೆ ಆಗಿದೆ. ವಿವಿಧ ರೀತಿಯ ಸ್ವಭಾವ ಸಂಬAಧಿ ನ್ಯೂನತೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.
ಮಕ್ಕಳು ಇಂದು ಯಾವುದನ್ನು ನೋಡಬಾರದು ಅದನ್ನು ನೋಡುತ್ತಿದ್ದಾರೆ. ಯಾವುದರ ಬಗ್ಗೆ ಆಲೋಚಿಸುವ ಅಗತ್ಯವಿಲ್ಲವೋ ಅವುಗಳನ್ನು ಆಲೋಚಿಸುತ್ತಿದ್ದಾರೆ. ಸಣ್ಣ ಮೆದುಳಿನಲ್ಲಿ ಹಲವು ಅನಗತ್ಯ ವಸ್ತುಗಳು ಸೇರಿಸಲ್ಪಡುತ್ತಿವೆ. ಈ ವಾಸ್ತವಿಕತೆಗಳನ್ನು ಹೆತ್ತವರು ಚರ್ಚಿಸುವುದಿಲ್ಲ. ಅದರಲ್ಲಿ ಲೈಂಗಿಕತೆ ಇದೆ. ಅಕ್ರಮವಿದೆ .ಅಪರಾಧಿ ಕೃತ್ಯಗಳಿವೆ. “ಯಾಕೆ ಈ ಮಗು ಹೀಗಿದೆ” ಎಂದು ಏನಾದರೂ ಸಂಭವಿಸಿದ ಬಳಿಕ ಚಿಂತಿಸುವುದಕ್ಕಿಂತ ಮೊದಲೇ ಮಕ್ಕಳಿಗಾಗಿ ಏನನ್ನು ಮಾಡಲಿಕ್ಕೆ ಸಾಧ್ಯವಿದೆ ಎಂಬುದರ ಬಗ್ಗೆ ಹೆತ್ತವರು ಅಧ್ಯಾಪಕರು ಜೊತೆ ಸೇರಿ ಆಲೋಚಿಸಬೇಕು. ಎಳೆಯ ಮನಸ್ಸುಗಳನ್ನು ಅರಿಯಲು ಸಾಧ್ಯವಾಗದೆ ಹೋದಾಗ ಹೆತ್ತವರು ಮತ್ತು ಮಕ್ಕಳು ಅದೇ ರೀತಿ ಅಧ್ಯಾಪಕರು ಮತ್ತು ಮಕ್ಕಳ ಮಧ್ಯೆ ಅಂತರವು ಹೆಚ್ಚುತ್ತಲೇ ಸಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಅಧ್ಯಾಪಕರ ಮಧ್ಯೆ ಕ್ರಿಯಾತ್ಮಕವಾದ ಸಂಘಟನೆ ಅನಿವಾರ್ಯವಾಗಿದೆ. ಅಧ್ಯಾಪಕರನ್ನು ಅಪರಾಧಿಗಳನ್ನಾಗಿಸುವ, ಅವರ ಆತ್ಮಸ್ಥೆöÊರ್ಯವನ್ನು ಕುಂದಿಸುವ ಕೆಲಸಗಳನ್ನು ಮಾಡಬಾರದು. ಏನಾದರೂ ತಪ್ಪುಗಳು ಸಂಭವಿಸಿದರೆ ಮಾನವೀಯ ದೃಷ್ಟಿಯಿಂದ ವಿದ್ಯಾಲಯದೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ಅರ್ಥಪೂರ್ಣವಾಗಿ ಇಂತಹ ರಕ್ಷಕ ಶಿಕ್ಷಕರ ಸಂಘದ ಭಾಗವಾಗಲು ಪ್ರಯತ್ನಿಸಬೇಕು. ಈ ಬಗ್ಗೆ ಕೆಲವು ಮಾರ್ಗ ನಿರ್ದೇಶನಗಳು ಈ ಕೆಳಗಿವೆ.
1. ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಶೈಲಿಯಲ್ಲಿ ಹೆತ್ತವರಿಂದ ತಪ್ಪುಗಳು ಸಂಭವಿಸಬಹುದು. ಆದರೆ ಅವರ ಉದ್ದೇಶವು ಒಳ್ಳೆಯದಾಗಿರುತ್ತದೆ. ಮಾಡಿದ ರೀತಿಯಲ್ಲಿ ತೊಂದರೆ ಸಂಭವಿಸಿರುತ್ತದೆ. ಆದುದರಿಂದ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಮಾರ್ಗ ನಿರ್ದೇಶನಗಳನ್ನು ನೀಡಬೇಕು. ನಾವು ಅವರ ಮೇಲೆ ಆರೋಪಿಸಿದರೆ, ಅವರು ಅಧ್ಯಾಪಕರ ಮೇಲೆ ಆರೋಪವನ್ನು ಹೊರಿಸಲಾರಂಭಿಸುತ್ತಾರೆ. ಅದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಉಪಕಾರವನ್ನು ಮಾಡುವುದಿಲ್ಲ.
2. ಉಪದೇಶ ನೀಡುವ, ಕಲಿಸುವ ವಿಷಯದಲ್ಲಿ ಇರುವ ಪ್ರೇರಣೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟು ಮಾಡದೆ, ಹೆತ್ತವರೊಂದಿಗೆ ಅಧ್ಯಾಪಕರು ಶಾಂತ ರೀತಿಯಲ್ಲಿ ಅವರ ಮಾತುಗಳನ್ನು ಆಲಿಸುವವರಾಗಬೇಕು. ಮನಬಿಚ್ಚಿ ಮಾತನಾಡಲು ಅವರು ತಯಾರಿರಬೇಕು.
3. ಒಂದು ಮಗುವಿನ ವರ್ತನೆಯಲ್ಲಿ ನ್ಯೂನತೆ ಇದ್ದರೆ ಅದು ಕಲಿಕೆಯಲ್ಲಿ ಹಿಂದುಳುವಿಕೆ ಆಗಿದ್ದರೆ ಅಧ್ಯಾಪಕರು ಅದಕ್ಕಾಗಿ ಕೆಲವು ಕಾರಣಗಳನ್ನು ಗುರುತಿಸಿರಬಹುದು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಭಿನ್ನವಾದ ವೀಕ್ಷಣೆಯನ್ನು ಹೊಂದಿರಬಹುದು. ಅಧ್ಯಾಪಕರು ಮತ್ತು ಹೆತ್ತವರ ಕಾರಣಗಳನ್ನು ಜೊತೆಗೂಡಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬರಬಹುದು. ಆಗ ಒಂದು ಸರಿಯಾದ ಪರಿಹಾರವನ್ನು ಸೂಚಿಸಲು ಸಾಧ್ಯವಾಗಬಹುದು.
4. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಒಳಿತು ಮತ್ತು ತುಂಟತನಗಳ ಬಗ್ಗೆ ಹೆತ್ತವರು ಮನಬಿಚ್ಚಿ ಮಾತನಾಡಲು ಪ್ರೇರೇಪಿಸಬಹುದು.
ಅವರ ವರ್ತನೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಎತ್ತಿ ತೋರಿಸಿ ಪ್ರೋತ್ಸಾಹಿಸಬೇಕು.
5. ಹೆತ್ತವರ ಮಾತುಗಳನ್ನು ಆಲಿಸಿದ ಬಳಿಕ ಆ ವಿದ್ಯಾರ್ಥಿಯು ಶಾಲೆಯಲ್ಲಿ ಮಾಡುವ ಉತ್ತಮ ವಿಷಯಗಳ ಕುರಿತು ಪ್ರಸ್ತಾಪಿಸಬೇಕು. ಅದು ಎಷ್ಟರವರೆಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸಬಹುದು. ಯಾಕೆ ಮಗು ಈ ಸಾಮರ್ಥ್ಯವನ್ನು ಎಲ್ಲ ವಿಷಯಗಳಲ್ಲಿಯೂ ಬಳಸುತ್ತಿಲ್ಲ ಎಂಬುದರ ಕುರಿತು ಒಟ್ಟಿಗೆ ಚರ್ಚಿಸಬಹುದು. ಯಾವುದನ್ನು ಅಧ್ಯಾಪಕರಿಂದ ಮಾಡಬಹುದು ಮತ್ತು ಯಾವುದನ್ನು ಹೆತ್ತವರು ಮಾಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು. ವರ್ತನೆಯಲ್ಲಿರುವ ವೈಕಲ್ಯಗಳನ್ನು ಪರಿಹರಿಸುವುದಕ್ಕೆ ಮತ್ತು ಡಿಜಿಟಲ್ ಅಡಿಕ್ಷನ್ ಅನ್ನು ನಿವಾರಿಸಲು ಈ ರೀತಿಯ ಹೆತ್ತವರ ಮತ್ತು ಅಧ್ಯಾಪಕರ ಪರಸ್ಪರ ಚರ್ಚೆಯು ಸಹಕಾರಿಯಾಗಬಹುದು.
6. ಶಿಕ್ಷಕ-ರಕ್ಷಕ ಸಂಘದ ಕುರಿತು ಹೆತ್ತವರು ಇಟ್ಟುಕೊಂಡಿರುವ ನಿರೀಕ್ಷೆ ಬಗ್ಗೆ ಹೆತ್ತವರು ಹೇಳಬೇಕು. ವಿದ್ಯಾರ್ಥಿಗಳ ಪಠ್ಯ ಪಠ್ಯೇತರ ಸಾಮರ್ಥ್ಯಗಳ ಬಗ್ಗೆ ಹೆತ್ತವರಿಗೆ ಶಿಕ್ಷಕರು ಹೇಳಿಕೊಡಬಹುದು. ಅವನ ಭವಿಷ್ಯವನ್ನು ರೂಪಿಸಲಿಕ್ಕೆ ಪ್ರೇರಣೆಯನ್ನು ನೀಡಬಹುದು. ವಿದ್ಯಾರ್ಥಿಗಳ ಕೆಲಸಗಳನ್ನು ವಿವರಿಸಿದ ಬಳಿಕ ಹೀಗೆ ಮಾಡಬಹುದು. ಜೊತೆಗೆ ಸ್ವಲ್ಪ ಸಮಯ ಕಳೆದ ಬಳಿಕ ಬದಲಾಗಬಹುದು ಎಂಬುದನ್ನು ನೆನಪಿಸಿಕೊಡಬೇಕು.
7. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ತರಗತಿಯಲ್ಲಿ, ಅದೇ ರೀತಿಯಲ್ಲಿ ಆಯಾಸ ರಹಿತವಾಗಿ ಮನೆಗೆ ಬಂದ ಬಳಿಕವು ಶಿಕ್ಷಣದ ಬಗ್ಗೆ ಒಲವುಂಟಾಗಿ ಕಲಿಯುವಂತಾಗಲು ಏನು ಮಾಡಬೇಕು? ಯಾವ ವಿಧಾನವನ್ನು ಅಳವಡಿಸಬಹುದು ಎಂಬುದರ ಕುರಿತು ಹೆತ್ತವರು ಮತ್ತು ಶಿಕ್ಷಕರು ಜೊತೆಗೂಡಿ ಏನಾದರೂ ತೀರ್ಮಾನಕ್ಕೆ ಬರಬೇಕು. ಮತ್ತು ಅದನ್ನು ಹಂತ ಹಂತವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು.
8. ವಿದ್ಯಾರ್ಥಿಯ ಒಂದು ಅಥವಾ ಎರಡು ವಿಷಯಗಳ ಮೇಲೆ ಒತ್ತು ನೀಡುವ ಮೂಲಕ ಸಹಕಾರ ಆರಂಭಿಸಬಹುದು. ಅದು ಯಶಸ್ವಿಯಾದಾಗ ಇತರ ಕ್ಷೇತ್ರಗಳಿಗೂ ಪ್ರೇರಣೆಯಾಗುತ್ತದೆ. ಸಹಕಾರದ ಫಲಿತಾಂಶ ಲಭಿಸುತ್ತಿದೆಯೇ ಎಂಬುದನ್ನು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮರುಪರಿಶೀಲಿಸಬೇಕು. ಯಶಸ್ಸು ಕಂಡರೆ ಸಹಕರಿಸಿದ ಪೋಷಕರನ್ನು ಪ್ರಶಂಸಿಸಲು ಲೋಭ ತೋರಬಾರದು. ವಿದ್ಯಾರ್ಥಿಗೆ ಶ್ರೇಯಸ್ಸು ಸಲ್ಲಿಸುವಂತೆ ಪೋಷಕರನ್ನು ಪ್ರೇರೇಪಿಸಬೇಕು. ಶಿಕ್ಷಕರೂ ಕೂಡ ಶಾಲೆಯಲ್ಲಿ ಇದನ್ನು ಪಾಲಿಸಬೇಕು.
9. ಸಹಕಾರದ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೂ ನಿರಾಶರಾಗಬಾರದು. ಪೋಷಕರ ಮೇಲೆ ಒತ್ತಡ ಹಾಕಬಾರದು. ಇದು ಪರಸ್ಪರ ದೋಷಾರೋಪಣೆಗೆ ದಾರಿ ನೀಡಬಹುದು. ಬದಲಾವಣೆಯನ್ನು ತರಲು ಸಾಧ್ಯವೆಂಬ ಆತ್ಮವಿಶ್ವಾಸವನ್ನು ಪೋಷಕರಿಗೆ ಸದಾ ನೀಡಬೇಕು. ಶಿಕ್ಷಕರೂ ಕೂಡ ಅದನ್ನು ಬೆಳೆಸಿಕೊಳ್ಳಬೇಕು. ಇದರ ಪರಿಣಾಮ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಬAಧದಲ್ಲಿರುವಾಗ ಕಾಣಿಸುತ್ತದೆ.
10. ಗುರಿಯಾಗಿಟ್ಟುಕೊಂಡ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ವಿದ್ಯಾರ್ಥಿ ಪ್ರಗತಿ ಸಾಧಿಸಿದರೂ ಕೆಲವು ಪೋಷಕರು ಶಿಕ್ಷಕರಿಗೆ ಧನ್ಯವಾದ ಹೇಳದಿರಬಹುದು. ಹತಾಶರಾಗಬೇಡಿ. ನಿಮ್ಮನ್ನು ನೀವು ‘ವೆರಿ ಗುಡ್’ ಎಂದು ಶ್ಲಾಘಿಸಿಕೊಳ್ಳಿ.
ಡಾ. ಸಿ.ಜೆ. ಜೋನ್
ಸೀನಿಯರ್ ಸೈಕಿಯಾ ಟ್ರಿಸ್ಟ್