ಬೀ ಅಮ್ಮ ಆಬಾದಿ ಬೇಗಮ್ (1852-1924)
ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿ .ಬೀಅಮ್ಮರ ನೈಜ ಹೆಸರು ಆಬಾದಿ ಬೇಗಮ್ ಆಗಿತ್ತು. ಅವರ ಮೊಮ್ಮಕ್ಕಳೂ ಸೇರಿದಂತೆ ಎಲ್ಲರೂ ಅವರನ್ನು ಬೀಅಮ್ಮ ಎಂದೇ ಕರೆಯುತ್ತಿದ್ದರು.
ಬೀಅಮ್ಮರ ತಂದೆಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬೀಅಮ್ಮರವರ 5ನೆಯ ವಯಸ್ಸಿನಲ್ಲಿ ಅವರ ತಂದೆ ನಿಧನ ಹೊಂದಿದರು. 28ನೆಯ ವಯಸ್ಸಿನಲ್ಲಿ, ಅವರ ಪತಿ ಅಬ್ದುಲ್ ಅಲಿ ಖಾನ್ ಪ್ಲೇಗ್ ರೋಗದಿಂದ ನಿಧನ ಹೊಂದಿದರು. ಚಿಕ್ಕ ವಯಸ್ಸಿ ನಲ್ಲಿಯೇ ಆಬಾದಿ ಬೇಗಮ್ ವಿಧವೆಯಾದರು. ಆರು ಗಂಡು ಮತ್ತು ಒಂದು ಹೆಣ್ಣು ಹೀಗೆ ಏಳು ಮಕ್ಕಳು ಇದ್ದರು.
ಅವರು ಅಷ್ಟು ಸ್ಥಿತಿವಂತರೇನೂ ಆಗಿರಲಿಲ್ಲ. ಆದರೆ ಬೀ ಅಮ್ಮ ಧೃತಿಗೆಡಲಿಲ್ಲ. ಈ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿದರು. ತಮ್ಮ ಸರ್ವಸ್ವವನ್ನೂ ಮಕ್ಕಳ ಪಾಲನೆ, ಪೋಷಣೆಗಾಗಿ ಧಾರೆ ಎರೆದರು. ಇದ್ದ ದುಡ್ಡಿನಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರು. ಉನ್ನತ ಶಿಕ್ಷಣಕ್ಕಾಗಿ ಮುಹಮ್ಮದಲಿ ಮತ್ತು ಶೌಕತ್ ಅಲಿಯವರನ್ನು ಅಲೀಗಢದ ಎಮ್.ವಿ.ಓ. ಕಾಲೇಜಿಗೆ ಕಳುಹಿಸ ಬಯಸಿದಾಗ, ಸ್ವಲ್ಪ ಆರ್ಥಿಕ ಸಹಾಯ ನೀಡುತ್ತಿದ್ದ ಮಕ್ಕಳ ಚಿಕ್ಕಪ್ಪ, ಮಕ್ಕಳಿಗೆ “ಇಂಗ್ಲಿಷ್ ಶಿಕ್ಷಣ”ಕ್ಕಾಗಿ ಧನ ಸಹಾಯ ನೀಡಲು ನಿರಾಕರಿಸಿದರು. ಆದರೆ ಬೀ ಅಮ್ಮ ಇದಕ್ಕೆಲ್ಲಾ ಸೊಪ್ಪು ಹಾಕುವವರಾಗಿರಲಿಲ್ಲ. ತಮ್ಮ ಒಡವೆಗಳನ್ನು ಮಾರಿ ಮಕ್ಕಳ ಶಿಕ್ಷಣವನ್ನು ಮುಂದುವರಿಸಿದರು.
1898ರಲ್ಲಿ ಮುಹಮ್ಮದಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡ್ಗೆ ತೆರಳಿದರು. ಮುಹಮ್ಮದ್ ಅಲಿ ತಮ್ಮ ತಾಯಿಯವರ ಬಗ್ಗೆ ಈ ರೀತಿ ಹೇಳುತ್ತಿದ್ದರು: “ನನ್ನ ತಾಯಿ ವಿದ್ಯಾಭ್ಯಾಸ ಪಡೆದವರಾಗಿರಲಿಲ್ಲ. ಆದರೆ ಅವರಷ್ಟು ವ್ಯವಹಾರ ಚತುರೆಯನ್ನು ನಾನೆಲ್ಲೂ ಕಂಡಿಲ್ಲ.”
ಒಂದು ಘಟನೆ ಇಲ್ಲಿ ಸ್ಮರಣೀಯವಾಗಿದೆ. ಗುಪ್ತಚರ ವಿಭಾಗದ ನಿರ್ದೇಶಕರಾಗಿದ್ದ ಸರ್ ಚಾರ್ಲ್ಸ್ ಕ್ಲೈವ್ ಲೆಂಡ್ (Sir Charles Clive Lend) ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಬ್ದುಲ್ ಮಜೀದ್ರ ಮುಖಾಂತರ ಅಲಿ ಸಹೋದರರಿಗೆ ಒಂದು ಪತ್ರವನ್ನು ರವಾನಿಸಿದರು. ಈ ಪತ್ರದಲ್ಲಿ ಬ್ರಿಟಿಷ್ ಸರಕಾರದ ಶರತ್ತುಗಳನ್ನು ಒಪ್ಪಿಕೊಂಡರೆ ಎರಡೂವರೆ ವರ್ಷಗಳ ಕಠಿಣ ಸೆರೆಮನೆಯ ಶಿಕ್ಷೆಯನ್ನು ಕೊನೆಗೊಳಿಸುವ ಪ್ರಸ್ತಾವನೆ ಇತ್ತು. ಮುಹಮ್ಮದಲಿ ಪತ್ರವನ್ನು ಓದಿದ ನಂತರ, ಕಾಗದದ ಮೇಲೆ ಏನೋ ಬರೆಯಲಾರಂಭಿಸಿದರು. ಅಲ್ಲಿಯೇ ಅಡ್ಡಾಡುತ್ತಿದ್ದ ಬೀಅಮ್ಮ ಡಿ.ಎಸ್.ಪಿ.ಯವರನ್ನು ಉದ್ದೇಶಿಸಿ ಹೇಳಿದರು: “ಸರಕಾರ ನನ್ನ ಮಕ್ಕಳನ್ನು ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಲು ಮುಂದೆ ಬಂದಿರುವುದು ಸಂತೋಷದ ವಿಷಯ. ಕಳೆದ 30 ತಿಂಗಳಿನಿಂದ ಜೈಲಿನಲ್ಲಿ ಅವರು ಎಷ್ಟು ಸಂಕಷ್ಟಗಳಿಗೆ ಈಡಾಗಿದ್ದಾರೆ ಮತ್ತು ಎಷ್ಟು ಸಹನೆಯಿಂದ ಅವುಗಳನ್ನು ಎದುರಿಸಿದ್ದಾರೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಸರಕಾರ ಅವರೊಂದಿಗೆ ಕರಾರು ಮಾಡಿಕೊಳ್ಳ ಬಯಸಿದೆಯೆಂದು ನನ್ನ ಗಮನಕ್ಕೆ ಬಂದಿದೆ. ಮುಹಮ್ಮದಲಿ ಮತ್ತು ಶೌಕತ್ಅಲಿ ಇಸ್ಲಾಮಿನ ಸಿಪಾಯಿಗಳು, ಖಂಡಿತವಾಗಿ ಇಸ್ಲಾಮಿನ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಅವರು ಮಾಡಲಾರರು ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಜೈಲಿನಿಂದ ಬಿಡುಗಡೆ ಹೊಂದಲಿಕ್ಕಾಗಿ ಇಂತಹ ಕಾರ್ಯ ಮಾಡಲು ಅವರು ಮುಂದಾಗಿರುವರು ಎಂದು ನನಗೆ ತಿಳಿದು ಬಂದಲ್ಲಿ, ಅವರ ಕತ್ತು ಹಿಸುಕಿ ಕೊಲ್ಲುವಷ್ಟು ಶಕ್ತಿ ನನ್ನ ರಟ್ಟೆಗಳಲ್ಲಿ ಇನ್ನೂ ಇದೆ.”
ಸ್ವಾತಂತ್ರ್ಯವೆಂಬುದು ಅಮೂಲ್ಯ ಸಂಪತ್ತು. ಅದನ್ನು ಪಡೆಯಲು ಮನುಷ್ಯನು ಯಾವುದೇ ಮಟ್ಟಕ್ಕೆ ಇಳಿಯಬಲ್ಲನು. ಅತ್ಯಂತ ಧೈರ್ಯ ಶಾಲಿಗಳ ಕಾಲುಗಳು ಕೆಲವೊಮ್ಮೆ ನಡುಗಿ ಹೋಗುತ್ತವೆ. ಬ್ರಿಟಿಷ್ ಸರಕಾರದ ಉನ್ನತ ಅಧಿಕಾರಿಯ ಎದುರು ಮೇಲಿನ ಮಾತುಗಳನ್ನು ಹೇಳಿದ ಬೀಅಮ್ಮನವರ ನಿಸ್ವಾರ್ಥ ದೇಶಪ್ರೇಮ ಎಂತಹವರನ್ನೂ ನಾಚಿಸುವಂತಿದೆ!
ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕರ್ತರ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಈ ಬಗ್ಗೆ ಅವರು ಬರೆದಿದ್ದ ಪತ್ರ, ಅವರ ಮಾನವ ಪ್ರೇಮವನ್ನು ಎತ್ತಿ ತೋರಿಸುತ್ತದೆ. “ನನ್ನ ಮನಸ್ಸು ಜೈಲಿನಲ್ಲಿ ಕೊಳೆಯುತ್ತಿರುವ ಸಹಸ್ರಾರು ನಿರಪರಾಧಿ ಯುವಕರ ಬಗ್ಗೆ ರೋಧಿಸುತ್ತದೆ. ಜೀವನದ ಅವಶ್ಯಕತೆಳಿಗಾಗಿ ಸಂಪಾದನೆ ಮಾಡುವ ಸ್ವಾತಂತ್ರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಹೋಂ ರೂಲ್ ಲೀಗ್ ಸಂಘಟನೆಯು ಪ್ರಮುಖ ಕೈದಿಗಳಲ್ಲದೇ, ಇತರ ಸುಮಾನ್ಯ ಕೈದಿಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿದೆಯೇ? ಅವರು ಮತ್ತು ಅವರ ಸಂಬಂಧಿಕರು ಹಸಿವೆಯಿಂದ ಏಕೆ ನರಳಬೇಕು? ಅವರ ಸಹಾಯಾರ್ಥ ಮನವಿ ಮಾಡಿದಲ್ಲಿ, ಭಾರತದ ಪ್ರತಿಯೊಂದು ಮನೆಯಿಂದಲೂ ಏನಾದರೂ ಸಹಾಯ, ಖಂಡಿತ ಒದಗಿ ಬರುತ್ತದೆಂಬ ವಿಶ್ವಾಸ ನನಗಿದೆ.”
1917 ಡಿಸೆಂಬರ್ 18ರಂದು ಮಾಂಟಿಗೋರನ್ನು ಭೇಟಿ ಮಾಡಲು ನಿಯುಕ್ತಗೊಂಡಿದ್ದ ಭಾರತೀಯ ಮಹಿಳಾ ತಂಡದ ಸದಸ್ಯರಾಗಿದ್ದರು. 1917 ಡಿಸೆಂಬರ್ 12ರಂದು ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಎರಡನೆಯ ಸಮ್ಮೇಳನದಲ್ಲಿ ಬೀಅಮ್ಮ ಉಪಸ್ಥಿತರಿದ್ದರು. ಬಿಳಿಯ ಬುರ್ಖಾ ಧರಿಸಿ, ಕೋಲು ಹಿಡಿದು ಸಭಾಂಗಣಕ್ಕೆ ಬಂದಾಗ, ಅವರ ಸಹಾಯಕ್ಕೆ ಶ್ರೀಮತಿ ಅನ್ನಿ ಬೆಸೆಂಟ್ ಧಾವಿಸಿದರು.
ಅನ್ನಿ ಬೆಸೆಂಟ್ ಭಾಷಣ ಮಾಡುತ್ತಾ ಹೇಳಿದರು: ” ಮುಹಮ್ಮದಲಿ ಮತ್ತು ಶೌಕತ್ ಅಲಿಯವರ ಮಾತೆ ನಮ್ಮೊಂದಿಗೆ ಇದ್ದಾರೆ. ಅವರು ನೈಜ ಮುಸ್ಲಿಮರೂ, ನಿಷ್ಟಾವಂತ ದೇಶಪ್ರೇಮಿಯೂ ಆಗಿರುವರು, ಅವರಲ್ಲಿ ಮಾತೃ ವಾತ್ಸಲ್ಯವಿದ್ದರೂ, ಅವರ ಹೃದಯ ಸಿಂಹದ ಹೃದಯ. ಅವರಿಗೆ ದುಃಖ ಮತ್ತು ಸಂಕಟ ಬಾಧಿಸುವುದಿಲ್ಲ, ಅವರ ಮಕ್ಕಳು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವುದು ಅವರಿಗೆ ಹರ್ಷವನ್ನೊದಗಿಸಿದೆ…”
1921 ಡಿಸೆಂಬರ್ 30ರಂದು ಅಹ್ಮದಾಬಾದ್ನಲ್ಲಿ ನಡೆದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷತೆಯನ್ನು ಬೀಅಮ್ಮ ವಹಿಸಿದ್ದರು. ಈ ಸಮ್ಮೇಳನದಲ್ಲಿ ಶ್ರೀಮತಿ ಕಸ್ತೂರ್ಬಾ ಗಾಂಧಿ, ಸರೋಜಿನಿ ನಾಯ್ಡು, ಬೇಗಮ್ ಹಝ್ರತ್ ಮೋಹಾನಿ, ಅನುಸೂಯ ಬಾಯಿ, ಬೇಗಮ್ ಸೈಫುದ್ದೀನ್ ಕೀಚಲು, ಶ್ರೀಮತಿ ಸರಳಾದೇವಿ ಮೊದಲಾದವರು ಇದ್ದರು.
ಖಿಲಾಫತ್ ಚಳವಳಿಯಲ್ಲಿ ಬೀಅಮ್ಮ ವಹಿಸಿದ ಪಾತ್ರದ ಕುರಿತು ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು: “… ಅವರು ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಶ್ರಮವಹಿಸುತ್ತಿದ್ದರು. ಖಿಲಾಫತ್ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬೀ ಅಮ್ಮ ಇಸ್ಲಾಮಿನ ಕಟ್ಟಾ ಅನುಯಾಯಿಗಳಾಗಿದ್ದರು. ಹಿಂದೂ-ಮುಸ್ಲಿಮ್ ಐಕ್ಯತೆ ಅವರಿಲ್ಲದೇ ಸಾಧ್ಯವಿರಲಿಲ್ಲ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ…”
1921ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಒಬ್ಬರು ‘ಸದಾಯ ಖಾತೂನ್'(ಮಹಿಳೆಯ ಧ್ವನಿ) ಎಂಬ ಶೀರ್ಷಿಕೆಯಡಿಯಲ್ಲಿ ಕವನವನ್ನು ರಚಿಸಿದರು. ಕೆಲವೇ ದಿನಗಳಲ್ಲಿ ಈ ಕವನ ಎಲ್ಲಾ ಜನರಿಗೂ ಸುಪರಿಚಿತವಾಯಿತು. ಇಂದಿಗೂ ಈ ಕವನ ಉರ್ದುವಲಯದಲ್ಲಿ ಪ್ರಸಿದ್ಧವಾಗಿದೆ. ಕವನ ಹೀಗಿದೆ:
ಬೋಲಿ ಅಮ್ಮ ಮುಹಮ್ಮದಲಿ ಕೀ
ಸಾಥ್ ತೇರೇ ಹೈ ಶೌಕತ್ ಅಲಿ ಭೀ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಜಾನ್ ಬೇಟಾ ಖಿಲಾಫತ್ ಪೆ ದೇದೋ.
ಸಬರ್ಸೆ ಜೈಲ್ ಖಾನೆಮೆ ರಹನಾ
ಕುಚ್ ಯೂ ಅಪ್ನಿ ಅಮ್ಮಾ ಕಾ ಕಹನಾ
ಜೋ ಮುಸೀಬತ್ ಪಡೇ ಉಸ್ಕೋ ಸಹನಾ
ಜಾನ್ ಬೇಟಾ ಖಿಲಾಫತ್ ದೇದೋ
ಫಾಂಸಿ ಆಯೆ ಅಗರ್ ತುಮ್ ಕೋ ಜಾನಿ
ಕಲಿಮಾ ಪಡ್ಪಡ್ಕೆ ಫಾಂಸಿ ಪೆ ಚಡ್ ನಾ
ಮಾಂಗನಾ ಮತ್ ಹುಕೂಮತ್ ಸೆ ಪಾನಿ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಆಬಾದಿ ಬೇಗಮ್ರವರು ನವೆಂಬರ್ 1924ರಲ್ಲಿ ನಿಧನ ಹೊಂದಿದರು. ಅವರ ನಿಧನದ ಕುರಿತು ಗಾಂಧೀಜಿ ‘ಯಂಗ್ ಇಂಡಿಯಾ’ದಲ್ಲಿ ಈ ರೀತಿ ಬರೆದರು: “ಬೀ ಅಮ್ಮ ಇನ್ನಿಲ್ಲವೆಂದು ನಂಬುವುದು ಕಷ್ಟಕರವಾಗಿದೆ. ಅವರ ವ್ಯಕ್ತಿತ್ವದಿಂದ ಮತ್ತು ಸಾರ್ವಜನಿಕ ಸಭೆಗಳಲ್ಲಿ ಅವರ ಪ್ರಭಾವ ಪೂರ್ಣ ಭಾಷಣಗಳಿಂದ ಪ್ರಭಾವಿತರಾಗದೇ ಉಳಿದವರಾರೂ ಇಲ್ಲ. ಅವರ ನಿಧನದ ವೇಳೆ ಅವರ ಸನಿಹವಿದ್ದುದು ನನ್ನ ಅದೃಷ್ಟವಾಗಿತ್ತು…”
ಸ್ವಾಮಿ ಶ್ರದ್ಧಾನಂದ ಸರಸ್ವತಿಯವರು ದೆಹಲಿಯ ಪಟೌಡಿ ಹೌಸ್ನಲ್ಲಿ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಪಾಲ್ಗೊಳ್ಳುತ್ತಾ ಈ ರೀತಿ ಹೇಳಿದ್ದರು.”… ಹಿಂದೂ-ಮುಸ್ಲಿಮ್ ಐಕ್ಯತೆಗಾಗಿ ಯಾರಲ್ಲಿಯಾದರೂ ಉತ್ಕಟ ಅಭಿಲಾಷೆ ಇದ್ದರೆ, ಅದು ಬೀ ಅಮ್ಮರವರಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಅವರು ಮೆರೆದ ಸಾಹಸ ಮತ್ತು ಧೈರ್ಯಗಳನ್ನು ರಾಜಕೀಯ ಮುಖಂಡರೂ ಸಹ ತೋರಲು ಸಾಧ್ಯವಿರಲಿಲ್ಲ.”
ಸ್ವಾತಂತ್ರ ಸಂಗ್ರಾಮದ ಚಳವಳಿಯಲ್ಲಿದ್ದ ಇನ್ನೊಂದು ಪ್ರಮುಖ ಹೆಸರು ‘ಅಮ್ಜದೀ ಬೇಗಮ್’- ಇವರು ಬೀಅಮ್ಮನ ಸೊಸೆ, ಮುಹಮ್ಮದಾಲೀ ಅವರ ಪತ್ನಿ.
ಇನ್ನೊ ಬ್ಬರು, ‘ಬೇಗಮ್ ಹರ್ಝತ್ ಮಹಲ್’. ಇವರನ್ನು ಬ್ರಿಟಿಷರು ಝಾನ್ಸಿ ರಾಣಿಗೆ ಹೋಲಿಸಿದ್ದರು. ಅಷ್ಟು ಧೈರ್ಯಶಾಲಿ ಮಹಿಳೆಯಾಗಿದ್ದರು ಮಹಲ್ ಅವರು. ಅಸ್ಟರಿ ಬೇಗಮ್,
ಮಾಜಿದಾ ಬಾನು, ಹಾಜಿರಾ ಬೇಗಮ್, ಹಮೀದಾ ತಯ್ಯಬ್ಜೀ, ಫಾತಿಮಾ, ಸಫೀಯಾ ಖಾನ್, ಮರ್ಯಮ್ ಸಾದತ್, ಬಾನು ಕಿಚಲು, ಖುರ್ಶಿದಾ ಬೇಗಮ್, ಸಯೀದಾ ಬೇಗಮ್, ರೆಹನಾ ತಯ್ಯಬ್ಜೀ, ಮೆಹರ್ ತಾಜ್… ಮುಂತಾದ ಮುಸ್ಲಿಮ್ ಮಹಿಳೆ ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದವರು ಮತ್ತು ಹುತಾತ್ಮರಾದವರೂ ಇದ್ದಾರೆ. ಬಿಳಿಯರಿಂದ ಈ ದೇಶ ಸ್ವತಂತ್ರ ಪಡೆಯುವಲ್ಲಿ ಪುರುಷರೂ ಬಹಳ ಸಂಖ್ಯೆಯಲ್ಲಿ ತ್ಯಾಗ ಮಾಡಿದ್ದಾರೆ.
ಇವರ ಸ್ಟೋರಿಯು ಶಾಂತಿ ಪ್ರಕಾಶನ ಪ್ರಕಟಿಸಿದ ‘ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು” ಎಂಬ ಪುಸ್ತಕದಲ್ಲಿ ವಿವರಿಸಲಾಗಿದೆ.
ಲೇಖಕ: ಆಸಿಫ್ ಅಲಿ
ಕೃತಿ: ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಮುಸ್ಲಿಮರು