ನಮ್ಮಂತಹ ಸಂಸಾರಿ ಅನಿವಾಸಿಗಳು ವರ್ಷಕ್ಕೊಮ್ಮೆ ಊರಿಗೆ ಹೊರಡುತ್ತೇವೆ. ಸುಮಾರು 30-40 ದಿನಗಳ ರಜೆಯನ್ನು ಕಳೆದು ಮತ್ತೆ ಮರಳಿ ಬರುತ್ತವೆ. ಆ ಅವಧಿಯಲ್ಲಿ ಹೊರಡುವ ಆನಂದ, ಹಿಂತಿರುಗಿ ಬರುವ ಸಂಕಟ, ನಡುವೆ ಊರಿನಲ್ಲಿ ಜರುಗುವ ಆಗು-ಹೋಗುಗಳು ನಿಜಕ್ಕೂ ಸ್ವಾರಸ್ಯಕರ. ಇದು ನನಗೆ ಮಾತ್ರವಲ್ಲ ಎಲ್ಲಾ ಗಲ್ಫ್ ವಾಸಿಗಳಿಗೂ ಆಗುವ ಅನುಭವ ಪಾಠ. ಈ ಕಥೆ-ವ್ಯಥೆಯನ್ನೇ ನಾನಿಲ್ಲಿ ನಿಮ್ಮ ನಡುವೆ ಬಿಚ್ಚಿಡುತ್ತಿದ್ದೇವೆ.
ಜುಲೈ-ಆಗಸ್ಟ್ ಮಾಸವೆಂದರೆ ದುಬಾಯಿಯಲ್ಲಿ ಉರಿಯುವ ಸೆಖೆ. ನೆಲ ಅನ್ನುವುದು ಸುಡುವ ಕಾವಲಿ. ಆಕಾಶವನ್ನು ದಿಟ್ಟಿಸಿ ನೋಡಿದರೆ ದುರುಗುಟ್ಟಿ ನೋಡುವ ಸೂರ್ಯ. ಒಂದು ಫರ್ಲಾಂಗು ಹೆಜ್ಜೆಗಳು ಹಾಕಿದರೆ ಸಾಕು, ಹಣೆಯಿಂದ ನಾಭಿಯವರೆಗೆ ಇಳಿದು ಬರುವ ಬೆವರು. ಬೀಸುವ ಬಿಸಿ ಗಾಳಿಗೆ ಬದುಕೇ ಹೈರಾಣ. ಒಂದು ವಿಶೇಷವೆಂದರೆ, ಇಲ್ಲಿಯ ಸೆಖೆಗೆ ಊರಿನಂತೆ ತೇವಾಂಶವಿಲ್ಲ. ಅಲ್ಲಿ ಬೆವರಿಗೆ ಮೈಯೆಲ್ಲಾ ಅಂಟು-ಅAಟು. ಧರಿಸಿದ ಅಂಗಿಯ ಕಾಲರ್ ತಿರುಗಿಸಿ ನೋಡಿದರೆ ಜಿಡ್ಡು-ಕೊಳೆ. ಅಲ್ಲದೆ ಊರಿನಲ್ಲಿ ಬಹುತೇಕ ಮಂದಿ ಬಿಸಿಲಿಗೆ ಕೊಡೆ ಹಿಡಿಯುತ್ತಾರೆ. ಇಲ್ಲಿ ಸೆಖೆಯಾಗಲಿ-ಮಳೆಯಾಗಲಿ, ಕೊಡೆ ಅನ್ನುವುದೇ ಕಾಣೆ! ಮರುಭೂಮಿಯಾದರೂ ಸೈ, ಕೈ ಬೀಸಿಯೇ ಸಾಗುತ್ತಾರೆ. ಕೆಲವಡೆ ಫಿಲಿಪಿನೀ ಕನ್ಯೆಯರು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾಟರಿಯಲ್ಲಿ ಚಲಿಸುವ ಮಿನಿ ಫ್ಯಾನು ಹಿಡಿಯುತ್ತಾರೆ. ಮುಖ್ಯವಾಗಿ ಅದು ತಂಪು ಗಾಳಿಗಲ್ಲ. ಮುಖಕ್ಕೆ ಮೆತ್ತಿಕೊಂಡ ಮೇಕಪ್ ಜಾರದಿರಲಿ ಅನ್ನುವ ಜಾಗೃತೆಗೆ!
ದುಬಾಯಿಯಲ್ಲಿ ಜೂನ್ ಕೊನೆಯ ವಾರ ಸಮೀಪಿಸಿದಂತೆ, ಶಾಲಾ ಮಕ್ಕಳಿಗೆ ಎರಡು ತಿಂಗಳ ವಾರ್ಷಿಕ ರಜೆ ಆರಂಭವಾಗುತ್ತದೆ. ಆಗ ಎಲ್ಲರಿಗೂ ಊರಿಗೆ ಹೋಗುವ ಸಂಭ್ರಮ. ಮಕ್ಕಳಿಗೆ ಅಜ್ಜ-ಅಜ್ಜಿಯ ಜೊತೆ ಒಂದು ಗೂಡುವ ಸಂತೋಷ. ಮಳೆಯ ನೀರಿನಲ್ಲಿ ಕುಣಿಯುವ ಉತ್ಸಾಹ. ಊರಿನ ಬಗೆ ಬಗೆಯ ತಿಂಡಿ-ತಿನಿಸುಗಳು ತಿನ್ನುವ ಕಾತುರ. ಆದರೆ ಇದೇ ವೇಳೆಗೆ ಬೇಟೆಗೆ ಕುಳಿತ ಹುಲಿಯಂತೆ, ನಮ್ಮ ವಿಮಾನ ಸಂಸ್ಥೆಗಳು ಕಾದು ಕುಳಿತುಕೊಂಡಿರುತ್ತವೆ. ಅವರು ಮಿತಿ ಮೀರಿ ಏರಿಸುವ ಟಿಕೇಟ್ ದರವನ್ನು ಮಾತ್ರ ಕೇಳಬೇಡಿ! ಉಳಿದ ಸಮಯದಲ್ಲಿ ಮಂಗಳೂರಿಗೆ ವಿಮಾನದ ಹಾರಾಟದ ದರವು ದಿರಹಮ್ಸ್ 800-1000 ಇದ್ದರೆ, ಈಗ ಅದು ದಿರ್ಹಮ್ಸ್ 1800ರ (ಸುಮಾರು ರೂಪಾಯಿ 42,000) ಗಡಿಯನ್ನು ದಾಟಿಯೇ ಮುನ್ನುಗ್ಗಿರುತ್ತದೆ. ಚೌಕಾಸಿಗೆ ನಿಂತರೆ ಕೊನೆಗೆ ಅದೂ ಇಲ್ಲ. ಇಲ್ಲಿ ಪತಿ-ಪತ್ನಿ, ಎರಡು ಮೂರು ಮಕ್ಕಳಿದ್ದರೆ ದೊಡ್ಡ ಗಂಡಾತರ. ವರ್ಷವಿಡೀ ನಾಲ್ಕು ಕಾಸು ಕಮಾಯಿ ಮಾಡಿಟ್ಟರೆ, ಇವರ ಹಸಿದ ಹೊಟ್ಟೆಗೆ ಸುರಿಯಬೇಕು. ಈ ಅನ್ಯಾಯ-ದಬ್ಬಾಳಿಕೆಯನ್ನು ಸ್ಥಳೀಯ ಸರಕಾರ ಅಥವಾ ಭಾರತದ ಸರಕಾರಕ್ಕೆ ದೂರಿ ಕೊಂಡರೆ ಅವರಿಗೆ ಕಿವಿಯೇ ಕೇಳಿಸದು. ಅದು ಜಾಣ ಕುರುಡು! ಹಣವಿದ್ದರೆ ಹೊರಡಿ, ಇಲ್ಲದಿದ್ದರೆ ಮುಂದಿನ ಬಾರಿ ಸಾಗಿರಿ ಅನ್ನುವ ಪುಕ್ಕಟೆ ಸಲಹೆಯನ್ನು ನೀಡುತ್ತಾರೆ. ಹೀಗಾಗಿ “ದೊಡ್ಡ ಸಂಸಾರಸ್ಥ” ಮಕ್ಕಳು ಐದಾರು ವರ್ಷಗಳು ತಮ್ಮ ಊರಿನ ಮುಖವನ್ನೇ ನೋಡಿರುವುದಿಲ್ಲ. ಅವರ ಅಜ್ಜ-ಅಜ್ಜಿಯಂದಿರು ಇವರನ್ನು ಕಾಣುವ ನಿರೀಕ್ಷೆಯಲ್ಲಿ ಇನ್ನಷ್ಟು ಮುದಿಯಾಗಿರುತ್ತಾರೆ.
ಎರಡು ಮೂರು ದಶಕಗಳ ಹಿಂದೆ ಹೆಚ್ಚಿನ ಕಂಪೆನಿಗಳು ತನ್ನಲ್ಲಿ ದುಡಿಯುವ ಉದ್ಯೋಗಿಗಳಿಗೆ ಫ್ಯಾಮಿಲಿ ಟಿಕೇಟ್ ನೀಡುತ್ತಿತ್ತು. ಈಗ ಬಹುತೇಕ ಅದು ನಿಂತು ಹೋಗಿದೆ. ಒಂದು ಹೆಜ್ಜೆ ಮುಂದಿಟ್ಟ ಕೆಲವು ಕಂಪೆನಿಗಳು, ಈಗ ಟಿಕೇಟಿಗೂ ಇಂತಿಷ್ಟು ಮೊತ್ತವೆಂದು ನಿಗದಿ ಪಡಿಸಿದ್ದಾರೆ. ಇಲ್ಲದಿದ್ದರೆ ಅವರಿಗೆ ಶಾಲಾ ರಜೆಯ ಸಮಯದಲ್ಲಿ, ಹಬ್ಬದ ದಿನಗಳಲ್ಲಿ ದುಪ್ಪಟ್ಟು ಟಿಕೇಟ್ ದರ ನೀಡಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳ ಈ ಹಗಲು ದರೋಡೆಗೆ ಇವರು ಕೂಡ ತತ್ತರಿಸಿ ಹೋಗಿದ್ದಾರೆ. ಇದರ ನೇರ ಹೊಡೆತ ಬಿದ್ದಿರುವುದು ನಮ್ಮಂತಹ ಮಧ್ಯಮ ವರ್ಗದವರಿಗೆ. ಹೆಚ್ಚು ಮೊತ್ತವಾದರೆ, ನಾವೇ ಸ್ವಯಂ ಜೇಬಿನಿಂದ ತುಂಬಬೇಕು. ಇಲ್ಲದಿದ್ದರೆ ಶಾಲೆಗಳಿಗೆ ರಜೆಯಲ್ಲದ ದಿನಗಳಲ್ಲಿ ಪ್ರಯಾಣ ಬೆಳೆಸಬೇಕು. ಅದು ಸಾಧ್ಯವೇ?
ಟಿಕೇಟಿನ ಈ ರಗಳೆ ಮುಗಿಯುತ್ತಿದ್ದಂತೆ ಈಗ ಖರೀದಿಯ ಸರದಿ. ಅಪರೂಪದಲ್ಲಿ ವರ್ಷಕ್ಕೊಮ್ಮೆ ಊರಿಗೆ ಹೊರಟಾಗ ಅದಕ್ಕೂ ದೊಡ್ಡ ಮೊತ್ತ ಕಾದಿರಿಸಬೇಕು. ಅಪ್ಪ-ಅಮ್ಮಾ, ಅಜ್ಜ, ಅಜ್ಜಿ, ತಂಗಿ, ತಮ್ಮ, ಅಕ್ಕ, ಭಾವ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಅತ್ತೆ, ಅತ್ತಿಗೆ… ಅಂದಾಗ ಪ್ರತಿಯೊಬ್ಬರಿಗೂ ಏನಾದರೂ ಕಪ್ಪ ಕಾಣಿಕೆಗಳು ನೀಡಲೇಬೇಕು. ಇದು ಅನಿವಾಸಿಗಳ ಅಜನ್ಮ ಸಿದ್ಧ ಹಕ್ಕು! ಅವರು ಬೇಡ ಅಂದರೂ ನಮಗಂತೂ ಬರಿಗೈಯಲ್ಲಿ ಕೈ ಕಟ್ಟಿ ನಿಲ್ಲಲು ಸಾಧ್ಯವೇ? ನಮ್ಮ ನೆರೆಕರೆಯ ಮಕ್ಕಳಿಗೂ ಒಂದು ಮುಷ್ಠಿ ಚಾಕಲೇಟ್ ಆದರೂ ನೀಡಬೇಡವೇ? ಮಗಳನ್ನು ಕೈಗೆ ಒಪ್ಪಿಸಿದ ಅತ್ತೆ ಮಾವರಿಗೆ ಬಾದಮ್, ಪಿಸ್ತಾ, ಚೈನಾ ಗ್ರಾಸ್, ಇತ್ಯಾದಿ ನೀಡದೆ ಹೋದರೆ ಅಲ್ಲಿ ಮರ್ಯಾದೆ ಉಂಟೇ? ಜೊತೆಗೆ ಮಾವನಿಗೆ ಟೋಪಿ, ಅತ್ತರಿನ ಬಾಟಲಿ, ಅತ್ತೆಗೆ ಬಣ್ಣ ಬಣ್ಣದ ಸೀರೆ! ಹಾಗೆ ನಮ್ಮ ಮನೆ ಮಂದಿಗೆ ಬಟ್ಟೆ ಬರೆ. ಬೇಡಿಕೆ ಇಟ್ಟವರಿಗೆ ಮೊಬೈಲು, ಸನ್ ಗ್ಲಾಸು, ಪರ್ಸು, ವಾಚು ಇತ್ಯಾದಿ. ಆಗ ಬೆಳೆದ ನಿಂತ ಮಕ್ಕಳು ಉದ್ಗಾರ ತೆಗೆಯುವುದಿದೆ: ಅಪ್ಪ, ಇವೆಲ್ಲಾ ಇಂಡಿಯಾದಲ್ಲಿ ಧಾರಾಳ ಸಿಗುತ್ತದೆ. ಇಲ್ಲಿಂದ ಏಕೆ ಹೊತ್ತು ಸಾಗಬೇಕು?” ಅವರು ಹೇಳುವ ಮಾತಿಗೂ ಅರ್ಥವಿದೆ. ಆದರೆ ಪುಕ್ಕಟೆ ಸಿಗುತ್ತದೆಯೇ? ನಮಗೆ ಇಲ್ಲ ಅನ್ನಲು ಸಾಧ್ಯವೇ? ಎಲ್ಲವೂ ಆತ್ಮೀಯ ಬಂಧ!
ನಮ್ಮ ಈ ಐದಾರು ಸೂಟು ಕೇಸು- ರಟ್ಟಿನ ಪೆಟ್ಟಿಗೆಗಳನ್ನು ತುಂಬಲು ಕೆಲವು ಸಮಯವೇ ಬೇಕಾಗುತ್ತದೆ. ಅದಕ್ಕೆ ದುಬಾಯಿಯ ಹತ್ತಾರು ಗಲ್ಲಿಗಳನ್ನು ಸುತ್ತಬೇಕು. ಶಾಪಿಂಗ್ ಮಹಲ್ಗಳ ಹಲವು ಲಿಫ್ಟ್ಗಳನ್ನು ಹತ್ತಬೇಕು. ಎಲ್ಲಿ ಅಗ್ಗದ ದರ, ಎಲ್ಲಿ ಕಡಿತದ ಮಾರಾಟ ಅನ್ನುವುದನ್ನೂ ಪತ್ತೆ ಹಚ್ಚಬೇಕು. ಬೀದಿ ಬದಿಯ ಅಂಗಡಿಗಳಲ್ಲಿ ಚೌಕಾಸಿಗೆ ನಿಲ್ಲಬೇಕು. ಬಿಸಿಲಿನ ಜಳಕ, ಜನರ ನೂಕು ನುಗ್ಗಾಟ, ಕಾರ್ ಪಾರ್ಕಿಂಗ್ನ ಹುಡುಕಾಟ, ಭಾರವಾದ ಚೀಲಗಳು ಹಿಡಿದು ನಡೆಯುವ ಆಯಾಸಕ್ಕೆ ಸಖತ್ ತಾಳ್ಮೆಯನ್ನು ವಹಿಸಬೇಕು. ಅದರಲ್ಲೂ ನಮ್ಮವರ ಲಗ್ನ, ಸಂಬಂಧಿಕರ ಮನೆ ಒಕ್ಕಲು, ಆತ್ಮೀಯರ ನಿಶ್ಚಯ ಇತ್ಯಾದಿಗಳಿದ್ದರೆ ಕೇಳಬೇಡಿ. ಈ ಹೆಂಡತಿ-ಮಕ್ಕಳಿಗೆ ಅದೆಷ್ಟು ಖರೀದಿಸಿದರೂ ಕಡಿಮೆ. ಆ ಕೊನೆಯ ದಿನಗಳ ಅವಸರವಂತೂ ನೋಡಿದರೆ ನಮ್ಮ ಮನೆಯಲ್ಲಿಯೇ ಮದುವೆಯಂತೆ ಕಾಣುತ್ತದೆ. “ಅದು ಬೇಕಿತ್ತು ಇದು ಬೇಕಿತ್ತು. ಅದು ಸಿಕ್ಕಿಲ್ಲ, ಇದು ತರಲಿಲ್ಲ” ಎಂಬ ಹತ್ತಾರು ತಕರಾರು. ಗಂಡ ಅನ್ನುವ ಪ್ರಾಣಿ ಇಲ್ಲಿ ಕೆಲವು ದಿನಗಳ ಮಟ್ಟಿಗೆ ಖಾಯಂ ಕೂಲಿಯಾಳು!
ಪ್ರತಿಯೊಬ್ಬರಿಗೆ 30 ಕೆ.ಜಿ.ಯ ಲಗೇಜು, ಕೈಗೆ ಏಳು ಕೆ.ಜಿ.ಯ ಹ್ಯಾಂಡ್ಬ್ಯಾಗ್ ಅಂದಾಗ ನಾಲ್ಕು ಮಂದಿಯ ಪೆಟ್ಟಿಗೆಗಳ ಭಾರ 150 ಕೆ.ಜಿ. ದಾಟಿಕೊಂಡಿರುತ್ತದೆ. (ಹೆಗಲಿಗೆ ಜೋತು ಬಿದ್ದ ವಾನಿಟಿ ಬ್ಯಾಗು, ಲ್ಯಾಪ್ಟಾಪ್ ಬ್ಯಾಗು ಪ್ರತ್ಯೇಕ). ಈ ಸಾಮಾಗ್ರಿ ಗಳನ್ನು 20 ಕೆ.ಜಿ.ಯ ಮಿತಿಯಂತೆ ಸೂಟುಕೇಸ್ ಅಥವಾ ರಟ್ಟಿನ ಪೆಟ್ಟಿಗೆಯಲ್ಲಿ ತುಂಬುವ ಭಾರ ಪಾಪಿ’ ಗಂಡನ ಪಾಲಿಗೆ! ಅದನ್ನು ಐದಾರು ಬಾರಿ ತೂಕದ ತಕ್ಕಡಿಯಲ್ಲಿಟ್ಟು ತೂಗಬೇಕು. ಎತ್ತಿ-ಇಳಿಸಿ ಭಾರವನ್ನು ಸರಿ ತೂಗಿಸಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದಲ್ಲಿ ಒಂದು-ಎರಡು ಕೆ.ಜಿ. ಹೆಚ್ಚಾದರೂ ದಂಡ ಕಟ್ಟಲು ಆಜ್ಞೆ ಮಾಡುತ್ತಾರೆ! ಹೀಗೆ ಹಗ್ಗ ಸುತ್ತಿದ ಈ ಪೆಟ್ಟಿಗೆಗಳನ್ನು ಮರುದಿನ ಕಾರಿಗೆ ತುಂಬಬೇಕು. ನಿಲ್ದಾಣದಲ್ಲಿ ಮತ್ತೆ ಇಳಿಸಿ, ನೂಕುವ ಟ್ರಾಲಿಗೆ ವರ್ಗಾಯಿಸಬೇಕು. ಇನ್ನು ಟಿಕೇಟ್ ಕೌಂಟರ್ನಲ್ಲಿ ನಡು ಬಗ್ಗಿಸಿ ಲಗೇಜ್ ಬೆಲ್ಟ್ಗೆ ಎತ್ತಿ ಹಾಕಬೇಕು. ಅಲ್ಲಿಗೆ ಸೊಂಟದ ಒಂದು ಮೂಲೆಯಲ್ಲಿ ನೋವು ಕಾಣಿಸಿಕೊಂಡಿರುತ್ತದೆ. ಮೂರುವರೆ ತಾಸಿನ ಪ್ರಯಾಣದಲ್ಲಿ ಅದಕ್ಕೆ ಒಂದಿಷ್ಟು ಆರಾಮ ಸಿಕ್ಕಿತು ಅನ್ನುವಾಗ ಮತ್ತೆ ಅದನ್ನು ಊರಿನ ಲಗೇಜ್ ಬೆಲ್ಟ್ನಿಂದ ಇಳಿಸುವ ಸಂಕಷ್ಟ. ಟ್ರಾಲಿಯಲ್ಲಿ ತುಂಬಿಸಿ, ಕಾರಿಗೆ ಏರಿಸುವ ಪ್ರಯಾಸ. ಆದರೆ ಅದೇಕೋ ವಿಮಾನ ನಿಲ್ದಾಣದಲ್ಲಿ ನಮ್ಮವರ ನಗುಮುಖವನ್ನು ಕಂಡಾಗ ಎಲ್ಲಾ ನೋವುಗಳು ಮಾಯಾ!
ಈಗ ಈ ಲಗೇಜಿನ ಸಹಾಯಕ್ಕೆ ಅವರು ಕೂಡ ಮುನ್ನುಗುತ್ತಾರೆ. ಜೊತೆಯಲ್ಲಿ ಆಗಮಿಸಿದ ಪುಟ್ಟ ಮಕ್ಕಳಿಗಂತೂ ನಮ್ಮ ಸೂಟ್ಕೇಸಿನ ಮೇಲೆಯೇ ಕಣ್ಣು. “ಮಾರಿ ಕಣ್ಣು ಕುರಿಯ ಮ್ಯಾಗೆ” ಅನ್ನುವ ಹಾಗೆ! ಅವರಿಗೆ ಅದರ ಹಗ್ಗವನ್ನು ಬಿಚ್ಚುವ ವರೆಗೂ ತಳಮಳ-ಕುತೂಹಲ. ಈ ಬಾರಿ ಆಟವಾಡಲು ಯಾವ ಆಟಿಕೆ ತಂದಿದ್ದಾರೆಯೆAಬ ಕಾತುರ!
ಪ್ರತಿಬಾರಿ ಊರಿಗೆ ಬಂದಾಗ ಹಸಿರು ಚಾದರ ಹೊದ್ದು ಕೊಂಡ ಪ್ರಕೃತಿ, ಬೀಸುವ ತಂಪುಗಾಳಿ, ಬೆಳಗುವ ಮಿಂಚು, ಸ್ವಾಗತ-ಸುಸ್ವಾಗತ ತೋರುವ ಮಳೆ. ದೀರ್ಘ ಕಾಲ ಮರು ಭೂಮಿಯಲ್ಲಿ ನೆಲನಿಂತ ನಮಗೆ ಇವು ನೆಮ್ಮದಿ-ಆಹ್ಲಾದ ನೀಡುವ ನೋಟ. ಮುಂಜಾನೆಯಿಂದ ನಮ್ಮ ದಾರಿಯನ್ನೇ ಕಾಯುವ ಅಪ್ಪ-ಅಮ್ಮವನ್ನು ಬಿಗಿದಪ್ಪಿದಾಗ ಕಣ್ಣು ತುಂಬಾ ಆನಂದಬಾಷ್ಪ! ಅಜ್ಜ-ಅಜ್ಜಿಯನ್ನು ಭೇಟಿ ಆದಾಗ ಅವರ ಮುಪ್ಪಿನ ಚಹರೆಯ ನೆರಿಗೆಗಳಲ್ಲೂ ಸಂತೋಷದ ಅಲೆಗಳು. ಮಕ್ಕಳನ್ನು ಕಂಡಾಗ “ಇಷ್ಟು ದೊಡ್ಡವರು ಆದಿರಾ?” ಅನ್ನುವ ಉದ್ಗಾರ!
ಅಂದು ಮನೆಯಲ್ಲಿ ಹಬ್ಬದ ಸಡಗರ. ಅದಕ್ಕೆ ತಕ್ಕಂತೆ ಬಗೆ ಬಗೆಯ ರುಚಿಯಾದ ಅಡುಗೆ. ಊಟದ ಬಳಿಕ ಸೂಟ್ಕೇಸ್ ಪೆಟ್ಟಿಗೆಯನ್ನು ತೆರೆಯಲು ಕೂತಾಗ ಎಲ್ಲರ ಕಣ್ಣುಗಳಲ್ಲಿ ಹೊಳಪು. ತನಗೆ ಏನು ಸಿಗಬಹುದೆಂಬ ಕುತೂಹಲ. ಮಕ್ಕಳು ಅದನ್ನು ಒಂದೊAದಾಗಿ ಅಲ್ಲಿದ್ದವರ ಕೈಗೆ ಒಪ್ಪಿಸುವಾಗ ಅವರಿಗೂ ಖುಷಿ. ಆಗ ಸುತ್ತ-ಮುತ್ತ ಲವಂಗ-ಏಲಕ್ಕಿಯದ್ದೇ ಸುಗಂಧ-ಪರಿಮಳ.
ಊರಿನಲ್ಲಿರುವಷ್ಟು ದಿನ ಅಮ್ಮನಿಗೆ ಅದೆಷ್ಟು ಬಗೆಯ ತಿಂಡಿ-ತಿನಿಸು ಬಡಿಸಿದರೂ ಕಡಿಮೆ. ಅದು ಕರಂಡೆಯ ಉಪ್ಪಿನಕಾಯಿ, ದೀವು ಗುಜ್ಜದ ಸುಕ್ಕ, ಹಳದಿ ಎಲೆಯ ರೊಟ್ಟಿ, ಅಣಬೆಯ ಸಾರು, ಹಲಸಿನ ದೋಸೆ, ತೊರಾಟ ಎಲೆಗಳ ಪಲ್ಯ, ಬಾಳೆದಂಡಿನ ಗೊಜ್ಜು, ಮೆತ್ತೆಯ ಗಂಜಿ, ಸಣ್ಣಕ್ಕಿಯ ಪಾಯಸ ಇತ್ಯಾದಿ ಇತ್ಯಾದಿ. ಸಂಜೆಯಾದರೆ ಮತ್ತೆ ಟೀ ಜೊತೆಗೆ ಕುರುಕುರು ತಿಂಡಿಗಳು. ಆಲೂಬೋಂಡಾ, ಮಿರ್ಚಿ, ಭಜೆಗಳಲ್ಲಿ ಎಣ್ಣೆ ಇರುತ್ತದೆ ಬೇಡವೇ ಬೇಡವೆಂದರೂ ಆಕೆ ಕೇಳಬೇಕಲ್ಲ? “ನಿನ್ನ ಒಂದು ತಿಂಗಳ ಪಥ್ಯವನ್ನು ದುಬಾಯಿಯಲ್ಲಿಡು, ಈಗ ನಾನು ಮಾಡಿದ್ದು ತಿನ್ನಬೇಕೆಂಬ ಒತ್ತಡ. ರಾತ್ರಿ ಮತ್ತೆ ಭರ್ಜರಿ ಭೋಜನ. ಅತ್ತ ಅತ್ತೆ ಮನೆಗೆ ಹೋದರೂ ಅಷ್ಟೇ. ವಿಶೇಷ ಅಡುಗೆಗಳು. ಕೊನೆಗೆ ಒಂದೇ ಆರೋಪ- “ನಮ್ಮ ಮನೆಯಲ್ಲಿ ಅಳಿಯ ಏನೂ ತಿನ್ನಲೇ ಇಲ್ಲ”! ಅಂತೂ-ಇಂತೂ ಊರು ಬಿಡುವಾಗ ತೂಕದಲ್ಲಿ ಎರಡು-ಮೂರು ಕೆ.ಜಿ. ಹೆಚ್ಚಳವಾಗಿರುತ್ತದೆ.
ಮೊದಲ ದಿನ ಮಾವನ ಮನೆಗೆ ಹೋದಾಗ ರಾತ್ರಿಯಲ್ಲಿ ಎಲ್ಲಾ ಕೋಣೆಗಳ ದೀಪಗಳು ಆರಿಕೊಂಡಿರುತ್ತವೆ. ಆದರೆ ಡೈನಿಂಗ್ ಹಾಲಿನ ದೀಪ ಮಾತ್ರ ಉರಿಯುತ್ತಿರುತ್ತದೆ. ಆ ಮೇಜಿನ ಮೇಲೆ ತಾಯಿ-ಮಗಳ ದುಂಡು ಮೇಜಿನ ಪರಿಷತ್ತು. ಇಬ್ಬರಿಗೂ ವಾರ್ಷಿಕ ವರದಿಯನ್ನು ಸಲ್ಲಿಸುವ ಸರದಿ. ಇವರ ಮಾತಿನ ಭರಟೆಗೆ ಹೊರಗೆ ಆರ್ಭಟಿಸುವ ಗುಡುಗು, ಹೊಳೆಯುವ ಮಿಂಚು ಕೂಡ ಅರಿವಿಗೆ ಬಾರದು. ಸುರಿಯುವ ಮುಸಲಧಾರೆ ನಿಂತರೂ ಇವರ ಪಟ್ಟಾಂಗ ನಿಲ್ಲದು. ಇವರು ಯಾವಾಗ ಮಲಗುತ್ತಾರೋ- ಯಾವಾಗ ಎಚ್ಚರವಾಗುತ್ತಾರೋ ಅವರಿಗೇ ಗೊತ್ತು!
ನೋಡು ನೋಡುತ್ತಿದ್ದಂತೆ ಈ 30-40 ದಿನಗಳ ರಜೆಯು ಹೇಗೆ ಕಳೆದು ಹೋಯಿತೆಂದು ತಿಳಿಯುವುದಿಲ್ಲ. ಒಡ ಹುಟ್ಟಿದವರ ಮನೆಗೆ, ಬಂಧು-ಮಿತ್ರರ ಸಂದರ್ಶನಕ್ಕೆ, ಮದುವೆ ಸಮಾರಂಭದ ಹಾಜರಾತಿಗೆ, ರೋಗಿಗಳ ಭೇಟಿಗೆ… ಅಂದಾಗ ರಜೆಗಳ ಬತ್ತಳಿಕೆಯ ಬಾಣಗಳು ಖಾಲಿಯಾಗ ತೊಡಗುತ್ತದೆ. ಪ್ರತಿಬಾರಿ ಒಂದಿಷ್ಟು ರಜೆಗಳಲ್ಲಿ ಕೇರಳ ಹೋಗಬೇಕು, ಮುಂಬೈ ನೋಡಬೇಕು, ರಾಜಸ್ತಾನ ಸುತ್ತಬೇಕೆಂದು ಆಲೋಚಿಸಿಕೊಂಡು ಬರುವುದು. ಆದರೆ ಅಲ್ಲಿ ಸುರಿಯುವ ಮಳೆಗೆ, ನೆರೆ ಹಾವಳಿಗೆ, ಕುಸಿಯುವ ಗುಡ್ಡಗಳಿಗೆ, ಸಂಪರ್ಕ ಕಡಿದುಕೊಂಡ ರಸ್ತೆಗಳಿಗೆ ಭಯ ಬೀಳುತ್ತೇವೆ. ಆಗ ಮನೆಯ ಹಿರಿಯರು “ಈ ಮಳೆಗೆ, ಈ ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಪ್ರವಾಸ? ಮಳೆ ಪೂರ್ಣ ತಿಳಿಯಾಗಲಿಯೆಂದು” ಲಕ್ಷ್ಮಣ ರೇಖೆಯನ್ನು ಎಳೆಯುತ್ತಾರೆ. ಅಲ್ಲಿಗೆ ಯೋಜಿಸಿದ ಕನಸಿಗೆ ಮುಕ್ತಿ ಸಿಕ್ಕಿದ ಹಾಗೆ!
ಪ್ರತಿ ಶುಕ್ರವಾರದಂದು ಜುಮಾ ಪ್ರಾರ್ಥನೆಗೆ ದೊಡ್ಡ ಮಸೀದಿಗೆ ತೆರಳಿದರೆ, ಅಲ್ಲಿ ಹಿರಿಯ ತಲೆಗಳು, ಒಂದೆರಡು ಶಾಲಾ ಗುರುಗಳು, ನಮ್ಮಂತೆ ಗಲ್ಫ್ನಿಂದ ಆಗಮಿಸಿದ ಅನಿವಾಸಿಗಳು, ಚಡ್ಡಿ ದೋಸ್ತಿಗಳು, ಪರಿಚಿತರು ಮುಂತಾದವರು ಸಿಗುತ್ತಾರೆ. ನಮ್ಮ ಬಾಲ್ಯದಲ್ಲಿ ಹೀರೋ ಆಗಿ ಮರೆದವರು, ಈಗ ನಡೆದಾಡಲು ಆಶಕ್ತಗೊಂಡು, ಆಧಾರಕ್ಕೆ ಕುರ್ಚಿಯಲ್ಲಿ ಕೂತು ತಲೆ ಬಗ್ಗಿಸುತ್ತಾರೆ- ದೇವನ ಮುಂದೆ! ಅದೇ ಪಕ್ಕದ ಆವರಣದ ಕಬರಸ್ತಾನಕ್ಕೆ ಭೇಟಿ ನೀಡಿದರೆ ಇವರ ಅನೇಕ ಸಹಪಾಠಿ ಮಿತ್ರರು ಶಾಶ್ವತವಾಗಿ ಅಲ್ಲಿ ಮಲಗಿ ಕೊಂಡಿದ್ದಾರೆ. ಈ ಗೋರಿಗಳ ನಡುವೆ ನಮ್ಮವರನ್ನೂ ಹುಡುಕುತ್ತಾ ಸಾಗಿದಾಗ ಈ ಜೀವನ ಅದೆಷ್ಟು ವಿಚಿತ್ರ ಅನಿಸುತ್ತದೆ. ಈ ಬದುಕಿಗಾಗಿ ನಮ್ಮ ಹೋರಾಟ-ಹಾರಾಟ-ಅಲೆದಾಟ ಸುಮ್ಮನೆ ಅನಿಸಿ ಬಿಡುತ್ತದೆ. ಈ ಅಂತಸ್ತು, ಅಧಿಕಾರ, ವರ್ಚಸ್ಸು ಕೇವಲ ನಾಲ್ಕು ದಿನಗಳ ಬಯಲಾಟ ಅಂದುಕೊಳ್ಳುತ್ತದೆ. ದೇಶ-ವಿದೇಶ ಸುತ್ತಾಡಿದರೂ, ಗಗನದ ಮೇಲೆ ಹಾರಾಡಿದರೂ ಕೊನೆಗೆ ಈ ನೆಲವೇ ಕೊನೆಯ ನಿಲ್ದಾಣವಲ್ಲವೇ ಅನಿಸುತ್ತದೆ.
ರಜೆ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳಿರುವಾಗ ಏಕೋ ಊರು ತ್ಯಜಿಸಿ ಹೋಗಲು ಮನಸ್ಸೇ ಬಾರದು. ಮರಣ ಶಯ್ಯೆಯ ರೋಗಿಯ ಹಾಗೆ! ಹೆತ್ತವರ ಅಕ್ಕರೆ, ಮನೆಮಂದಿಗಳ ಪ್ರೀತಿ, ಪುಟ್ಟ ಮಕ್ಕಳ ಒಡನಾಟ ಆತ್ಮೀಯರ ಸ್ನೇಹ ಇತ್ಯಾದಿ ಅದೆಲ್ಲೂ ಗಾಢವಾಗಿ ಬಂಧಿಸಿ ಬಿಡುತ್ತದೆ. ದೇಶಿ ಅಡುಗೆಯ ರುಚಿಯಂತೂ ಬಾಯಿ ಚಪ್ಪರಿಸಿ ಬಿಡುತ್ತದೆ. ಈ ರುಚಿಯಂತೂ ದುಬಾಯಿಯಲ್ಲಿ ಸಿಗುವುದೇ ಇಲ್ಲ. ಇಲ್ಲಿಯಂತೆ, ಬಂಗುಡೆ, ಬೂತಾಯಿ, ಕಾಣೆಗೆ ಚೆನ್ನಾಗಿ ಮಸಾಲೆ ಹಚ್ಚಿ ಕಾಯಿಸಿದರೂ ಆ ಸ್ವಾದಿಷ್ಟವೇ ಕಾಣೆ!
ಕೊನೆಯ ದಿನಗಳ್ಲಿ ಹೆಂಡತಿಯಂತೂ ತುಂಬಾ ಬ್ಯೂಸಿ. ಮನೆಗೆ ಅದು ಬೇಕು- ಇದು ಬೇಕೆಂಬುದು ಅರ್ಧ ದಿನವಂತೂ ಪೇಟೆಯಲ್ಲಿಯೇ ಸುತ್ತಾಡಿಕೊಂಡಿರುತ್ತಾರೆ. ಕಷಾಯ ಗುದ್ದುವ ಕಲ್ಲಿನಿಂದ ಹಿಡಿದು,ಪುನರ್ಪುಳಿ’ ಸಿಪ್ಪೆಯವರೆಗೆ ಎಲ್ಲವೂ ಅವರಿಗೆ ಬೇಕು. ಅಷ್ಟರಲ್ಲಿ ಖಾಲಿ ಬಿದ್ದಿದ್ದ ಸೂಟ್ಕೇಸ್ಗಳು ಒಂದೊಂದಾಗಿ ತುಂಬಿಕೊಳ್ಳುತ್ತದೆ. ಇದರ ನಡುವೆ ಊರಿನ ಆತ್ಮೀಯರ ಪಾರ್ಸಲ್ಗಳು ಬೇರೆ. ನನ್ನ ಮಗನಿಗೆ ಉಪ್ಪಿನಕಾಯಿ, ಮಗಳಿಗೆ ಪತ್ರೋಡೆ, ಮಗುವಿಗೆ ಚಿಕ್ಕಿ-ಚಕ್ಕುಲಿಯೆಂದು ಕೊಡುತ್ತಿರುತ್ತಾರೆ. ಅದರಲ್ಲಿ ಹಪ್ಪಳ, ಸಂಡಿಗೆ, ಚಿಪ್ಸ್ ಅಂತೂ ಮಾಮೂಲಿ. ಕೆಲವರು ತಮ್ಮ ಮಕ್ಕಳಿಗೆ ಹಲಸು, ಗೆಣಸು, ಅನನಾಸು, ತರಕಾರಿಗಳನ್ನೂ ಕೊಡುವುದಿದೆ. ಇವು ಎಲ್ಲಾ ಲೂಲು ಸೆಂಟರ್ನಲ್ಲಿ ಸಿಗುವುದಿಲ್ಲವೇ ಅಂದರೆ- “ಸಿಗಬಹುದು, ಆದರೆ ಮನೆಯಲ್ಲಿ ಬೆಳೆಸಿದ ಈ ರುಚಿಯುಂಟಾ?” ಎಂದು ಮರುಪ್ರಶ್ನೆ ಹಾಕುತ್ತಾರೆ. ನಮ್ಮಲ್ಲಿ ಅದಕ್ಕೆ ಉತ್ತರವೇ ಇರುವುದಿಲ್ಲ. ಪುಕ್ಕಟೆ ಹೊತ್ತುಕೊಂಡು ಸಾಗುವವರು ಸಿಕ್ಕರೆ, ಇವರು ಮಸಾಲೆ ಅರೆಯುವ ಕಲ್ಲು ಕೂಡ ನೀಡಲು ಸಿದ್ಧರಿರುತ್ತಾರೆ. ನಮಗಂತೂ ಮೈ ತುಂಬಾ ಹೆಪ್ಪುಗಟ್ಟಿದ ದಾಕ್ಷಿಣ್ಯ. “ಇಲ್ಲ” ಅನ್ನಲು ನಾಲಗೆಯೇ ಹೊರಳದು. ಕೆಲವು ಬಾರಿ ನಮ್ಮ ಹಳೇ ಬಟ್ಟೆಯನ್ನು ಇಲ್ಲೇ ತೊರೆದು, ಇವರ ಅಗ್ಗದ ಸರಕನ್ನೇ ಸೂಟುಕೇಸಿಗೆ ತುರುಕುವುದು ಹೆಚ್ಚು. ಬೇಸರವೆಂದರೆ, ಕೆಲವೊಮ್ಮೆ ಈ ವಸ್ತುಗಳಿಗೆ ಮೂರುಪಟ್ಟು ಬೆಲೆಯ ದಂಡ ಕಟ್ಟಿ ವಿಮಾನ ಹತ್ತುವುದೂ ಇದೆ. ಇವರು ನೀಡುವ ಬಸಳೆಗೆ ಬೀದಿ ಬದಿಯಲ್ಲಿ ನೂರು ರೂಪಾÊ ಇದ್ದರೆ, ಅಲ್ಲಿ ಆರು ನೂರು ರೂಪಾÊ ಪುಕ್ಕಟೆ ವಸೂಲಿ ಮಾಡುತ್ತಾರೆ. ನಮ್ಮವರಿಗೆ ಇದು ಅರ್ಥವೇ ಆಗುವುದಿಲ್ಲ.
ಹೊರಡುವ ಹೊತ್ತು ಮನೆಗೆ ಒಡಹುಟ್ಟಿದವರು ಮಾತ್ರವಲ್ಲ, ವಠಾರದವರು ಬರುತ್ತಾರೆ. ಪುಟ್ಟ ಮಕ್ಕಳ ಕಿಸೆಗೆ ಒಂದಿಷ್ಟು ನೋಟು ತುರುಕಿ, ಎಲ್ಲರನ್ನು ಬೀಳ್ಕೊಂಡ ಬಳಿಕ ಉಳಿದವರು ಅಪ್ಪ-ಅಮ್ಮ. ಅವರನ್ನು ಆಲಂಗಿಸಿ ಕೊಂಡಾಗ ದುಃಖದ ಕಟ್ಟೆ ಒಡೆದು ಹೋಗುತ್ತದೆ. ಏನೋ ಸಂಕಟ ವೇದನೆ. ಅಲ್ಲಿ ಮತ್ತೆ ನಿಲ್ಲಲು ಸಾಧ್ಯವಾಗುವುದಿಲ್ಲ. ಕಾರು ಹತ್ತಿ ಎಲ್ಲರಿಗೂ ಕೈ ಬೀಸಿದಾಗ ಆ ಮಂಜಾದ ಕಣ್ಣುಗಳಲ್ಲಿ ಅಸ್ಪಷ್ಟ ಚಹರೆಗಳು, ಕಾರು ಮುಂದೆ ಮುಂದೆ ಸಾಗಿದಂತೆ, ಹೃದಯದ ಒಂದೊAದೇ ಬೇರುಗಳು ಕಡಿದು ಹೋದಂತಹ ನೋವು. ಮಕ್ಕಳ ನೇತ್ರಗಳಲ್ಲಿ ಹರಿಯುವ ಕಣ್ಣೀರು. ಹೆಂಡತಿಯ ಕಳೆಗುಂದಿದ ಮುಖ. ವಿಮಾನ ಏರಿ ಕೂತಾಗ ಎಲ್ಲರಲ್ಲೂ ಗಾಢ ಮೌನ. ಸಂತಸವೇ ಸತ್ತು ಹೋದ ಭಾವ.
ದುಬಾಯಿಗೆ ಕಾಲಿಟ್ಟಾಗ ಅದೇ ಸುಡುವ ಬಿಸಿ ಗಾಳಿ, ಅಪರಿಚಿತ ಮುಖಗಳು, ಓಡಾಡುವ ಕಾರು-ಬಸ್ಸುಗಳು, ಚಲಿಸುವ ಮೆಟ್ರೋಗಳು, ಹಾರಾಡುವ ವಿಮಾನಗಳು. ಮರುದಿನ ಅದೇ ಕಛೇರಿ, ಅದೇ ಯಾಂತ್ರಿಕ ಬದುಕು. ನಾವು ಅದಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳಲೇ ಬೇಕು. ಈ ದೇಶ ಅದೆಷ್ಟೋ ಶ್ರೀಮಂತವಾದರೂ, ಊರಿನ ಆ ಸುಖವಂತೂ ಇಲ್ಲಿ ಖಂಡಿತ ಸಿಗಲಾರದು. ಅಲ್ಲಿಯ ಗಾಳಿ, ಮಳೆ, ಚಳಿ, ನಮ್ಮವರ ಪ್ರೀತಿ, ಅಕ್ಕರೆ, ಒಲವು ಎಂದಿಗೂ ದೊರೆಯುವುದು. ಆ ಪುಟ್ಟ ಮಕ್ಕಳ ನಗು-ಕೇಕೆ-ಅಳು ಈಗ ಬರೇ ನೆನಪು ಮಾತ್ರ. ವಾರ ಕಳೆದರೂ ಮನಸ್ಸು ಊರಿನಿಂದ ಹೊರಗೆ ಬರಲು ಒಪ್ಪುವುದೇ ಇಲ್ಲ. ಅದಕ್ಕೆ ಕನಿಷ್ಟ ಎರಡು ವಾರವಾದರೂ ಬೇಕು. ಈಗ ರಾತ್ರಿ ಮಲಗಿದರೂ ಊರಿನದ್ದೇ ಕನಸು. ಅನಿವಾಸಿಗಳ ಬದುಕೇ ಹೀಗೆ. “ಇಲ್ಲಿ ಇರಲಾರೆ, ಅಲ್ಲಿ ಬದುಕಲಾರೆ” ಅನ್ನುವ ಆತಂತ್ರ ಸ್ಥಿತಿ. ಅದು ಹಣದ ಆಶೆಗೆ ಬೆನ್ನು ಹತ್ತಿ ಬಂದ ನಾಗಲೋಟವೋ, ಭವಿಷ್ಯದ ಬದುಕಿಗೆ ಹಾಕಿಕೊಂಡ ಅಡಿಪಾಯವೋ, ಸಂಸಾರವು ಕಟ್ಟಿ ಹಾಕಿದ ಬಂಧನವೋ ಅಥವಾ ನಮ್ಮ ಸ್ವದೇಶ ನಮಗೆ ಸೂಕ್ತ ಉದ್ಯೋಗ-ಅವಕಾಶ ನೀಡದ ವಂಚನೆಯೋ ತಿಳಿಯದು? ಆದರೆ ಮರುಭೂಮಿಯ ಕಾಂಕ್ರಿಟ್ ಕಾಡಿನಲ್ಲಿ ಬದುಕು ಸಾಗುತ್ತಲೇ ಇರುತ್ತದೆ. ಮತ್ತೆ ಆ ಮಳೆ, ತಂಪು, ಪ್ರೀತಿ, ಬಗೆ ಬಗೆಯ ಊಟ-ತಿಂಡಿ ಬೇಕು ಅನ್ನುವುದಾದರೆ ಒಂದು ವರುಷ ಕಾಯಲೇಬೇಕು. ಅಲ್ಲಿಯವರೆಗೆ ಸುಡುವ ಮರುಭೂಮಿಯಲ್ಲಿ ಹೆಜ್ಜೆಗಳು ಹಾಕುತ್ತಲೇ ಇರಬೇಕು ಪರದೇಶಿಯಾಗಿ.