ಈಗೀಗ ನನಗೆ ಅತೀವ ಮರೆವು,
ಫ್ರಿಜ್ಜು ತೆರೆಯುತ್ತೇನೆ,
ಯಾಕೆ ತೆರೆದೆ ಎಂದು ಮರೆಯುತ್ತೇನೆ.
ಬಟ್ಟೆ ಬರೆಗಳನ್ನು ಮಡಚಲೆಂದು
ಕೋಣೆಗೆ ತೆರಳುತ್ತೇನೆ.
ಅಲ್ಲಿ ಮತ್ತೇನೋ ಕೆಲಸ ಕಂಡೊಡನೆ
ಈ ಕೆಲಸ ಮರೆಯುತ್ತೇನೆ.
ವಿಶೇಷ ಅಡುಗೆ ಮಾಡಲೆಂದು
ಹೊರಟಾಗಲೂ ಅಷ್ಟೇ,
ಕೆಲವೊಂದು ಸಾಮಗ್ರಿಗಳನ್ನು
ಹಾಕಲೂ ಮರೆಯುತ್ತೇನೆ.
ಏನೋ ಹೇಳಲೆಂದು
ಬಾಯಿ ತೆರೆಯುತ್ತೇನೆ,
ಮಧ್ಯದಲ್ಲಿ ಮತ್ತೇನೋ ಮಾತು ಬಂದರೆ ಸಾಕು
ಈ ವಿಷಯ ಮರೆತೇಹೋಗುತ್ತೇನೆ.
ಇದು ನನ್ನ ಸಮಸ್ಯೆ ಮಾತ್ರವೇ
ಪ್ರಶ್ನಿಸುವೆ ಹಲವು ಬಾರಿ
ಇಲ್ಲ ನಮ್ಮದೂ ಕೂಡಾ
ಅನ್ನುತ್ತಾರೆ ಗೆಳತಿಯರು ಸಾರಿ.
ಬಹುಷಃ ನಲ್ವತ್ತರ ಅಂಚಿನಲ್ಲಿರುವ
ನಮಗೆ ಇದು ಸಾಮಾನ್ಯ
ಆದರೂ ಈ ಬಗ್ಗೆ
ಮುಗಿಯದು ತಲ್ಲಣ
ಮತ್ತೊಮ್ಮೆ ನನ್ನಲ್ಲೇ ಪ್ರಶ್ನಿಸುತ್ತೇನೆ.
ಅದೇಕೆ ನನಗೆ ನನ್ನ
ಸಮಸ್ಯೆಗಳು ಮರೆಯುವುದಿಲ್ಲ,
ಹಿಂದೊಮ್ಮೆ ಘಟಿಸಿದ ಕಹಿಘಟನೆ
ಮರೆತುಹೋಗುವುದಿಲ್ಲ,
ಬದುಕಿಗೆ ವಿದಾಯ ಹೇಳಿದ
ಅಪ್ಪನ ಅಗಲಿಕೆಯ ನೋವೇಕೆ
ಮರೆತು ಹೋಗುವುದಿಲ್ಲ,
ಜವಾಬ್ದಾರಿಗಳೂ ಮರೆತು ಹೋಗುವುದಿಲ್ಲ.
ನಾನು ಮರೆಯುವುದು ಅತ್ಯಂತ ಕ್ಷುಲ್ಲಕ ವಿಷಯಗಳನ್ನು.
ಮನೆಯನ್ನು ನಡೆಸುವುದಾಗಲಿ,
ಮಕ್ಕಳಿಗೆ ಉಣಿಸುವುದಾಗಲಿ ನಾನು ಮರೆಯುವುದಿಲ್ಲ.
ಆದರೂ ನನಗೀಗ ಹೆಸರು
ಮಹಾನ್ ಮರೆಗುಳಿ.
ಹೌದು ಕೆಲವೊಮ್ಮೆ ಅನಿಸುವುದು
ಮರೆಯಬೇಕು ಎಲ್ಲವನ್ನು,
ತಿಂಗಳು ತಿಂಗಳು ಅನುಭವಿಸುವ ನೋವನ್ನು,
ಎಂದೋ ಅನುಭವಿಸಿದ,
ಇಂದಿಗೂ ಚುಚ್ಚುವ ಅವಮಾನವನ್ನು,
ಮನದಲ್ಲಿ ಅದುಮಿಟ್ಟುಕೊಂಡಿರುವ ಆಸೆಯನ್ನು,
ನಾಳೆ ಎನ್ನುವುದನ್ನು
ಮರೆಯಬೇಕು, ಮರೆತು ಬದುಕಬೇಕು.
ಬದುಕಲ್ಲಿ ಒಂದು ದಿನವನ್ನು ನನಗಾಗಿ ಬದುಕಬೇಕು.
ಯಾವುದೇ ಧಾವಂತವಿಲ್ಲದೆ,
ಯಾವುದೇ ಒತ್ತಡವಿಲ್ಲದೆ,
ಯಾವ ಜವಾಬ್ದಾರಿಯ ಹಂಗೂ ಇಲ್ಲದೇ.
ನಾನಾಗಿ, ನನಗಾಗಿ.
ಅಸ್ಮತ್ ವಗ್ಗ