ಹೆಣ್ಣು ಮಕ್ಕಳ ಸಾಧನೆಗೆ ಹೆಮ್ಮೆ ಪಡುವ ಬದಲಿಗೆ ಕೆಲವರು ಅದನ್ನು ಅಪಮಾನವೆಂದೂ, ಹೆತ್ತವರ ಗೌರವಕ್ಕೆ ಭಂಗವೆಂದು ಪರಿಗಣಿಸುತ್ತಿರುವುದು ಎಷ್ಟೊಂದು ದುಃಖದ ಸಂಗತಿಯಾಗಿದೆ.
ಗುರುಗಾಂವ್ನಲ್ಲಿ ಟೆನಿಸ್ ಆಟಗಾರ್ತಿಯ ಹತ್ಯೆ, ಸಾಂಸ್ಕೃತಿಕ ಮೌಲ್ಯಗಳ ಬಲಿ ಸಮಾಜದ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಅಲ್ಲ; ಅದು ಮಾನವೀಯ ಮೌಲ್ಯಗಳ ಗಾಢ ಬೆಳೆತವನ್ನೂ ಒಳಗೊಂಡಿರಬೇಕು.
ಇತ್ತೀಚೆಗೆ ಹರಿಯಾಣದ ಗುರುಗಾಂವ್ನಲ್ಲಿ ನಡೆದ ದಾರುಣ ಘಟನೆ ಈ ಮಾತಿಗೆ ಉಜ್ವಲ ಸಾಕ್ಷಿ. ರಾಷ್ಟ್ರಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ಅವಳನ್ನು ಅವಳ ತಂದೆ ದೀಪಕ್ ಯಾದವ್ (54) ಗುಂಡಿಕ್ಕಿ ಹತ್ಯೆ ಮಾಡಿದ ಶೋಕಾಂತಿಕ ಘಟನೆ ಜುಲೈ 10 ರಂದು ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿತ್ತು. ಆಕೆಯು ಅಡಿಗೆ ಮನೆಯಲ್ಲಿದ್ದಾಗಲೇ ತಂದೆ ತನ್ನ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ನಿಂದ ಅವಳ ಹೊಟ್ಟೆಗೆ ಗುಂಡು ಹಾರಿಸಿದ್ದರು. ಆಸ್ಪತ್ರೆಯಲ್ಲಿ ಅವಳು ಕೊನೆಯುಸಿರೆಳೆದಳು.
ಪೊಲೀಸರು ತಿಳಿಸಿದಂತೆ, ಈ ಅಪರಾಧಕ್ಕೆ ಪ್ರೀತಿ ಸಂಬಂಧ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಎಂಬುದು ಯಾವುದೇ ಕಾರಣವಾಗಿಲ್ಲ. ಬದಲಾಗಿ, ಮಹಿಳೆಯೊಬ್ಬಳ ಸ್ವಾತಂತ್ರ್ಯ ಹಾಗೂ ಆರ್ಥಿಕ ಸ್ವಾವಲಂಬನೆಯೇ ಈ ದುರಂತಕ್ಕೆ ಕಾರಣವಾಯಿತು. ದೀಪಕ್ ಅವರನ್ನು ಗ್ರಾಮದಲ್ಲಿ “ಮಗಳ ಹಣದಲ್ಲಿ ಮನೆಯು ನಡೆಯುತ್ತಿದೆ” ಎಂಬ ಟೀಕೆ ಮಾಡಿದ್ದರಿಂದ ಹಿಂಸೆಯತ್ತ ಪ್ರೇರಿತನಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಇಂದು ಕೆಲವರಿಗೆ ತಮ್ಮ ಹೆಣ್ಣುಮಕ್ಕಳ ಯಶಸ್ಸು ಸಹಿಸಲಾಗುತ್ತಿಲ್ಲ. ಆ ಹೆಣ್ಣು ಮಕ್ಕಳ ಆದಾಯದ ಮೇಲೆ ಮನೆಯ ಹಿಡಿತ ಇದ್ದರೂ ಕೂಡ ಅದು ಹೆತ್ತವರ ಅಹಂಕಾರಕ್ಕೆ ಧಕ್ಕೆಯಾಗುತ್ತದೆ ಎಂಬ ಯಾಂತ್ರಿಕ ಚಿಂತನೆ ಇನ್ನೂ ಜೀವಂತವಾಗಿದೆ. ಆ ಚಿಂತನೆ ಸತ್ತವರನ್ನು ಮಾತ್ರವಲ್ಲ ಬದುಕಿರುವವರ ಮೌಲ್ಯವನ್ನೂ ಹಿಂಸೆಯ ಮೂಲಕ ನಾಶ ಮಾಡುತ್ತಿದೆ.
ರಾಧಿಕಾ ಯಾದವ್ ಅವಳ ಸಾಧನೆ ಚಿಕ್ಕದಾಗಿರಲಿಲ್ಲ. ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ದಾಖಲೆಗಳ ಪ್ರಕಾರ ಅವಳು ಗರ್ಲ್ಸ್ ಅಂಡರ್-18 ವಿಭಾಗದಲ್ಲಿ 75ನೇ, ವುಮೆನ್ಸ್ ಡಬಲ್ಸ್ನಲ್ಲಿ 53ನೇ ಹಾಗೂ ಸಿಂಗಲ್ಸ್ನಲ್ಲಿ 35ನೇ ಸ್ಥಾನ ಪಡೆದಿದ್ದಳು. ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ವೃತ್ತಿ ಚಟುವಟಿಕೆಗಳಲ್ಲಿ 113ನೇ ಸ್ಥಾನ ಪಡೆದಿದ್ದಳು. ಇವು ಯಾವ ತಂದೆಗೆ ತಾನೇ ಹೆಮ್ಮೆಯಾಗದು? ಆದರೆ ಇಲ್ಲಿ ಕೊಲೆಗೆ ಕಾರಣವಾಯಿತು..!
ಇದು ಕೇವಲ ಒಂದು ಕುಟುಂಬದ ದುರಂತವಲ್ಲ. ಮಹಿಳೆಯರ ಸಾಧನೆ, ಸ್ವಾತಂತ್ರ್ಯ ಮತ್ತು ಕನಸುಗಳ ಹಿಂಸಾತ್ಮಕ ಹತೋಟಿಯ ಮುಖವಾಡವಾಗಿದೆ.
ಸಮಾಜವೆಂದರೆ ನಮ್ಮೆಲ್ಲರ ಪ್ರತಿಫಲನ. ಈ ಘಟನೆ ಏಕಾಏಕಿ ಆಗಿಹೋದ ದುರಂತವಲ್ಲ. ಇದು ಲೈಂಗಿಕ ರಾಜಕೀಯ, ಹೆಣ್ಣುಮಕ್ಕಳ ಮೇಲೇರುವ ಆಧಿಪತ್ಯದ, ಮತ್ತು ಹೆತ್ತವರಾದವರ ಅನಂತ `ಅಹಂ’ನ ಕ್ರಿಯಾತ್ಮಕ ರೂಪ. ಇಂಥ ದೌರ್ಜನ್ಯವನ್ನು ತಡೆಗಟ್ಟಬೇಕೆಂದರೆ ಕಾನೂನಿಗಿಂತ ಮುಂಚೆ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಅಗತ್ಯ. ಇನ್ನುಳಿದಂತೆ ಹೆಣ್ಣುಮಕ್ಕಳ ಕನಸುಗಳೂ ಹತ್ಯೆಯಿಂದ ಕೊನೆಗೊಳ್ಳಬಾರದು. ಅವರು ಬೆಳೆಯುತ್ತಿರುವಾಗ ಹೆಮ್ಮೆಪಡುವ ಹೆತ್ತವರಾಗಬೇಕು. ಕ್ರೂರರಾಗಬಾರದು. ಹೆತ್ತವರ ಯೋಚನೆಯ ಧಾಟಿ ಬದಲಾಗಬೇಕು. ಹೃದಯದೊಳಗೆ ಯಾವತ್ತಿಗೂ ಒಂದು ಆಯ್ಕೆ ಮಾಡಬೇಕಾಗುತ್ತದೆ.
ಇನ್ನೊಂದೆಡೆ ಹೆಣ್ಣು ಮಕ್ಕಳ ಸಾಧನೆ ಅಂದರೆ ಮಗಳ ಸಾಧನೆಯೇ ತನ್ನ ಗೌರವದ ಪ್ರಶ್ನೆ ಎಂಬ ಅಹಂ ನಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎನ್ನುವ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಸಾಂಗ್ಲಿಯದ ಸಾಧನಾ ಭೋಂಸ್ಲೆ ನೀಟ್ ಪರೀಕ್ಷೆಯ ಅಣಕು ಪರೀಕ್ಷೆಯನ್ನು ತೆಗೆದುಕೊಂಡಿದ್ದಳು. ಒಂದು ವರ್ಷದಿಂದ ನೀಟ್ಗಾಗಿ ತಯಾರಿ ನಡೆಸುತ್ತಿದ್ದಳು. ಈ ಬಾರಿ ಮೋಕ್ ಟೆಸ್ಟ್ನಲ್ಲಿ ಕಡಿಮೆ ಅಂಕ ತೆಗೆದು ಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ಮಗಳನ್ನು ಕೊಂದಿದ್ದಾರೆ. ಜೀವನದ ಪರೀಕ್ಷೆಯಲ್ಲಿ ಮಗಳು ಗೆದ್ದು ಸಾಗಲಿ ಎಂದು ಆಶೀರ್ವದಿಸಬೇಕಾಗಿದ್ದ ಅಪ್ಪನೇ ಕೇವಲ ಒಂದು ಪರೀಕ್ಷೆಯ ಅಂಕದ ಹಿಂದೆ ಬಿದ್ದು ಬದುಕುವ ಹಕ್ಕನ್ನೇ ಕಸಿದುಕೊಂಡರು.
ವೃತ್ತಿಯಲ್ಲಿ ಶಿಕ್ಷಕರಾದ ಧೋಂಡಿರಾಮ್ ಭೋಂಸ್ಲೆ ಮಗಳು ಕಡಿಮೆ ಅಂಕಗಳಿಸಿದ್ದಕ್ಕೆ ಆಕೆಯನ್ನು ಸರಿಯಾಗಿ ಥಳಿಸಿದ್ದಾರೆ. ಇದಾದ ನಂತರ ತಂದೆ ಶಾಲೆಯಲ್ಲಿ ವಿಶ್ವ ಯೋಗ ದಿನದಂದು (International Yoga Day) ಶಾಲೆಯಲ್ಲಿ ಯೋಗ ಕಾರ್ಯಕ್ರಮ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅವರು ಸೀದಾ ಶಾಲೆಗೆ ಹೋಗಿದ್ದಾರೆ. ಇತ್ತ ಅಪ್ಪನ ಹೊಡೆತದಿಂದ ಮಗಳು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಶಾಲೆಯಿಂದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ವೇಳೆ ಅಪ್ಪನಿಗೆ ಈ ವಿಚಾರ ತಿಳಿದಿದ್ದು ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಸಾಧನಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ಸಾಧನಾ ಭೋಂಸ್ಲೆ ತಲೆಗೆ ಗಾಯಗಳಾಗಿದ್ದವು. ಅವರನ್ನು ಸಾಂಗ್ಲಿಯ ಉಷಾಕಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಸಿಗುವ ಮೊದಲೇ ಆಕೆ ಸಾವನ್ನಪ್ಪಿದ್ದಳು.
ಕಡಿಮೆ ಅಂಕಗಳು ಬಂದ ಕಾರಣಕ್ಕೆ ಅಪ್ಪನೇ ಆಕೆಗೆ ಹೊಡೆದಿದ್ದರಿಂದ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ತಾಯಿ ಜೂನ್ 22 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ತಂದೆಯನ್ನು ಬಂಧಿಸಲಾಗಿದೆ.
ಶಾಲಾ ಕಾಲೇಜುಗಳ ಅಂಕಗಳ ಹಿಂದೆ ಬೀಳುವ ಹೆತ್ತವರಿಗೆ ಈ ಘಟನೆ ಪಾಠವಾಗಬೇಕು. ಬಾಯಿಪಾಠ ಮಾಡಿ ಅಂಕ ಗಳಿಸುವುದರಲ್ಲೇ ತಮ್ಮ ವಿಧ್ಯಾರ್ಥಿ ಜೀವನ ಕಳೆಯುವ ಮಕ್ಕಳು ಮುಂದೆ ತಮ್ಮ ಪ್ರತಿಭೆಗನುಸಾರವಾಗಿ ಸಾಧನೆ ಮಾಡಿ ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾದೀತು.