ಧಾರವಾಡ: ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಓದುಗರಿಂದ ಧಾರವಾಡದಲ್ಲಿ 25ನೇ ರಜತ ಮಹೋತ್ಸವ ಆಚರಣೆ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಾಡಲಾಯಿತು.
ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣದಲ್ಲಿ ಫೆಬ್ರವರಿ 7ಕ್ಕೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳು:

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ, ಸ್ನೇಹ ಶಿಕ್ಷಣ & ಅಭಿವೃದ್ಧಿ ಸಂಸ್ಥೆಯ ಯೋಜನಾ ಸಂಯೋಜಕಿ ಶ್ರೀಮತಿ ನಾಗರತ್ನ ಎಸ್. ಜಡೇದ, ಪರಿಸರ ರಕ್ಷಣೆ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ| ಪೂರ್ಣಿಮಾ ಗೌರೋಜಿ ಹಾಗೂ ಶಿಕ್ಷಕಿ ಶ್ರೀಮತಿ ಶೋಭಾ ಶಿರಿಯಣ್ಣವರ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಉಪಸಂಪಾದಕಿ ಶ್ರೀಮತಿ ಕುಲ್ಸೂಮ್ ಅಬೂಬಕ್ಕರ್ ವಹಿಸಿದ್ದರು.
ವಿಶೇಷ ಸಂಚಿಕೆ ಬಿಡುಗಡೆ:

ಕಾರ್ಯಕ್ರಮದ ಪ್ರಾರಂಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ಸಿದ್ಧಪಡಿಸಲಾದ ಅನುಪಮ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು
ಮುಖ್ಯ ಅತಿಥಿಗಳ ನಲ್ನುಡಿಗಳು :
ಮುಖ್ಯ ಅತಿಥಿ ಶ್ರೀ ಶಂಕರ ಹಲಗತ್ತಿ ಮಾತನಾಡಿ “ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಭಾಷೆಯು ಒಂದು ಪ್ರಬಲ ಮಾಧ್ಯಮ” ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ನಾಗರತ್ನ ಎಸ್. ಜಡೇದ: “ಹೆಣ್ಣಿನ ಸಬಲೀಕರಣಕ್ಕೆ ಶಿಕ್ಷಣವೇ ಮೂಲಾಧಾರ. ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ” ಎಂದು ಸ್ತ್ರೀಶಕ್ತಿಯ ಮಹತ್ವವನ್ನು ಸಾರಿದರು.

ಶ್ರೀಮತಿ ಶೋಭಾ ಶಿರಯಣ್ಣನವರ್ ಅನುಪಮ ಪತ್ರಿಕೆಯ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, “ಇದು ಕೇವಲ ಬರವಣಿಗೆಯಲ್ಲ, ಜೀವನದ ಹಾದಿಯನ್ನು ಸುಗಮಗೊಳಿಸುವ ಮಾರ್ಗದರ್ಶಿ” ಎಂದು ಶ್ಲಾಘಿಸಿದರು.
ಶ್ರೀಮತಿ ಪೂರ್ಣಿಮಾ ಗೌರೋಜಿ, ಪತ್ರಿಕೆಯ ಸಾಧನೆಯನ್ನು ಪ್ರಶಂಸಿಸಿ, “ಮುಂದಿನ ದಿನಗಳಲ್ಲಿ ಪತ್ರಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.

ಇನ್ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ್ ಅವರು ಮಾತನಾಡಿ, “ಪ್ರತಿಯೊಂದು ಕಾರ್ಯದಲ್ಲೂ ಶ್ರದ್ಧೆ ಇದ್ದಾಗ ಅದು ಪೂಜನೀಯವಾಗುತ್ತದೆ” ಎಂದರು.
ಅಧ್ಯಕ್ಷೀಯ ನುಡಿ:

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕುಲ್ಸೂಮ್ ಅಬೂಬಕರ್ ಅವರು ಮಾತನಾಡಿ, “ಓದುವ ಹವ್ಯಾಸವು ಮನೆಯಿಂದಲೇ ಆರಂಭವಾಗಬೇಕು. ಪಾಲಕರು ಓದಿದರೆ ಮಕ್ಕಳು ಅದನ್ನು ಅನುಕರಿಸಿ ಬೆಳೆಸಿಕೊಳ್ಳುತ್ತಾರೆ. ಭಗವಂತ ನೀಡಿದ ಈ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು” ಎಂದು ಕರೆ ನೀಡಿದರು.
ಸಾಧನೆಗೈದ ಗಣ್ಯರಿಗೆ ಸನ್ಮಾನ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.

UNO Awardee ಶ್ರೀಮತಿ ಬೀಬಿಜಾನ್ ಮೌಲಾಸಾಬ ಹಳೆಮನಿ

Human Right Activist & Educationist ಮಿಸ್ ಲಿನ್ನೆಟ್ ಡಿಸಿಲ್ವಾ,

ರಾಷ್ಟ್ರಪತಿ ಪದಕ ಪಡೆದ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಶ್ರೀ ಎಂ.ಎಂ. ತಹಶೀಲ್ದಾರ

ವಕೀಲರು ಹಾಗೂ ಮಹಿಳಾ ಹೋರಾಟಗಾರರಾದ ಶ್ರೀಮತಿ ಪ್ರಭಾವತಿ ದೇಸಾಯಿ
ಸನ್ಮಾನಿತರಾದ ಗಣ್ಯರು:




ಕಾರ್ಯಕ್ರಮ ಸಂಚಾಲಕತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಧಾರವಾಡ ಶಾಖೆ ಅಧ್ಯಕ್ಷರಾದ ಜನಾಬ್ ಮುಸ್ತಾಕ್ ಅಹ್ಮದ್ ವಹಿಸಿದ್ದರು.
ಧಾರವಾಡದ ನೂರಾರು ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಈ ಕಾರ್ಯಕ್ರಮವು ಲಘು ಉಪಹಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.



