ಬೆಳ್ಳಂಬೆಳಗ್ಗೆ ಏಳುವ, ಮಕ್ಕಳ ಬುತ್ತಿ ಕಟ್ಟಿ
ಶಾಲೆಗೆ ಹೊರಡಿಸುವ, ಪತಿ, ಅತ್ತೆ
ಮಾವನ ಬೇಕು ಬೇಡಗಳನ್ನು ಗಮನಿಸುವ
ಆಕೆಗೂ ಇದೆಯಲ್ಲವೇ ಚಿಕ್ಕಪುಟ್ಟ ಆಸೆಗಳು.
ಬೆಳಗ್ಗಿನ ಚುಮುಚುಮು ಚಳಿಗೆ
ಹೊದ್ದುಕೊಂಡ ಹೊದಿಕೆಯನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು
ಆ ಸವಿನಿದ್ದೆಯನ್ನು ಸಂಪೂರ್ಣವಾಗಿ ಅನುಭವಿಸುವ ಆಸೆ.
ಕಾವಲಿಯಿಂದ ಆಗಷ್ಟೇ ಎದ್ದ,
ಕುರುಕುರು ಎನ್ನುವ ಬಿಸಿಬಿಸಿ ದೋಸೆಯನ್ನು ನೆಮ್ಮದಿಯಿಂದ
ಸವಿಯುವ ಆಸೆ
ಊಟದ ಮೇಜಿನಲ್ಲಿ ಮಧ್ಯದಲ್ಲಿ ಒಮ್ಮೆಯೂ ಏಳದೆ,
ಬಿಸಿಬಿಸಿ ಅನ್ನವ ಸಂತೃಪ್ತಿಯಿಂದ ತಿನ್ನುವ ಆಸೆ
ಬೆಳಗ್ಗೆ, ಮಧ್ಯಾಹ್ನ, ರಾತ್ರಿಯಡಿಗೆಗೆ
ಏನು ಮಾಡಲಿ ಎಂಬ ಚಿಂತೆಯನ್ನು
ಒಂದು ದಿನವಾದರೂ ಬಿಡುವ ಆಸೆ.
ಅಮ್ಮಾ ಅದೆಲ್ಲಿ? ಇವಳೇ ಇದೆಲ್ಲಿ?
ನನ್ನ ಔಷಧಿ ಕೊಡು, ನನ್ನ ಟವಲು ಕೊಡು, ಪುಸ್ತಕ ಕಾಣುತ್ತಿಲ್ಲ,
ಈ ಎಲ್ಲ ದೈನಿಕ ಧಾವಂತದಿಂದ ಒಂದು ದಿನವಾದರೂ ವಿರಾಮ ದೊರೆತರೆ ಎಂಬ ಆಸೆ.
ಬಿಸಿ ಕಾಫಿಯ ಜೊತೆಗೆ,
ಬಾಲ್ಕನಿಯಲ್ಲಿ ಕೂತು ಒಂದರ್ಧ ಗಂಟೆ ಮಳೆ ವೀಕ್ಷಿಸುವ ಆಸೆ.
ಒಂದಿಡೀ ಕಾದಂಬರಿಯನ್ನು ಕೈಯಿಂದ ಕೆಳಗಿಡದೆ
ಸಂಪೂರ್ಣ ಓದಿ ಮುಗಿಸುವ ಆಸೆ.
ದಿನವಿಡೀ ಮನೆ, ಮಕ್ಕಳನ್ನು ಸಂಭಾಳಿಸುವಳು ಆಕೆ
ಒಂದು ಕೆಲಸ ಮುಗಿಯಿತು ಎನ್ನುವಾಗ ಮತ್ತೊಂದು ಧುತ್ತನೆ ಎದುರಾಗುವುದು,
ಪಾತ್ರೆ ತೊಳೆ, ಬಟ್ಟೆ ಒಗೆ,
ಒಣಗಿಸು, ಮಡಚಿಡು,
ಅಲ್ಲಿ ಧೂಳಿದೆ, ಇಲ್ಲಿ ಕಲೆಯಿದೆ,
ಸ್ವಲ್ಪ ಕೂತೊಡನೆ ಮತ್ತೇನೋ ಕೆಲಸ ಕಾಣುತ್ತದೆ.
ಇವೆಲ್ಲವ ಮುಗಿಸಿದರೂ ಕೆಲವೊಮ್ಮೆ ಪ್ರಶ್ನೆ
“ಮನೆಯಲ್ಲಿ ನಿನಗೇನು ಕೆಲಸವಿದೆ?”
ಆಕೆಯೊಂದು ದಿನ ಸುಮ್ಮನೆ ಕುಳಿತರೆ,
ಮೈಬಿಸಿಯೆಂದು ಹೊದ್ದು ಮಲಗಿದರೆ
ತಿಳಿಯಬಹುದು ಆಕೆಯ ಹೊರೆ
ನಗುನಗುತ್ತಾ, ಕೆಲವೊಮ್ಮೆ ಸಿಡುಕುತ್ತಾ ಎಲ್ಲ ನಿಭಾಯಿಸುವ ಆಕೆಗೂ ಬೇಕಿದೆ
ತಿಂಗಳಿಗೆ ಒಂದು ದಿನವಾದರೂ ರಜೆ..