ಇಂದು ನಮ್ಮನ್ನು ಹೆಚ್ಚು ದುಃಖಿತರನ್ನಾಗಿಸುವ ಸುದ್ಧಿಯೆಂದರೆ ಗಾಝಾ(ಫೆಲೆಸ್ತೀನ್) ಜನರ ಬದುಕಿನ ಕರಾಳ ದೃಶ್ಯ. ಶೈತಾನ್ ನೇತ್ಯಾನಾಹುವಿನ ರಕ್ತದಾಹ ಮಿತಿಮೀರುತ್ತಿದೆ. ಒಂದು ಸಮುದಾಯದ ವಂಶವನ್ನೇ ಭೂಮಿಯಿಂದ ಇಲ್ಲವಾಗಿಸುವ ಅವನ ಪ್ರಯತ್ನಕ್ಕೆ ವಿಶ್ವದಲ್ಲಿ ವಿರೋಧದ ಧ್ವನಿಯೂ ಹೆಚ್ಚುತ್ತಿದೆ. ಇಸ್ರೇಲಿನ ಯಹೂದಿಯರೇ ಯುದ್ಧ ನಿಲ್ಲಿಸಲು ಪ್ರತಿಭಟನೆಗೆ ಇಳಿದಿದ್ದಾರೆ. ಆದ್ರೆ… ಈ ರಾಕ್ಷಸ ಮತ್ತು ಆತನ ಝಿಯೋನಿಸ್ಟ್ ಸಮೂಹಕ್ಕೆ ಗಾಝವನ್ನು ಸ್ಮಶಾನ ಮಾಡುವ ಹುಚ್ಚು ಆವೇಶ ಮೈ ಮೇಲೆ ಉಕ್ಕಿದೆ. ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಹಿರಿಯರು ಅಲ್ಲಿ ಸಾಯುತ್ತಿದ್ದಾರೆ. ನಮ್ಮ ಪ್ರತೀ ಪ್ರಾರ್ಥನೆಯಲ್ಲೂ ಅವರಿಗಾಗಿ ಪ್ರಾರ್ಥಿಸುತ್ತೇವೆ.
ಮನುಷ್ಯತ್ವವೇ ಸತ್ತಿದೆ ಇಂದು. ಹಣ, ಅಧಿಕಾರವೇ ಗೆಲ್ಲುತ್ತಿದೆ. ನ್ಯಾಯ, ನೀತಿ ಸೋಲುತ್ತಿದೆ. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಕಣ್ಮರೆಯ ವಿಷಯ ಎದೆಯನ್ನು ನಡುಗಿಸುವುದಿಲ್ಲ! ಪ್ರತಿಷ್ಠೆಯ ವ್ಯಕ್ತಿ ತನ್ನ ಹಣ ಬಲದಿಂದ ನಿರಪರಾಧಿ’ ಅನಿಸಿಕೊಳ್ಳುತ್ತಿದ್ದಾನೆ. ನ್ಯಾಯಧೀಶರು, ಪೊಲೀಸರು, ನ್ಯಾಯಾಲಯ, ಸುದ್ಧಿ ಮಾಧ್ಯಮಗಳು ಇಂದು ಹಣಕ್ಕೆ ತಲೆಬಾಗುತ್ತಿದೆ. ಮಾರಾಟಕ್ಕೆ ತಮ್ಮ ಆತ್ಮಸಾಕ್ಷಿಯನ್ನೂ ಅಡವಿಡುತ್ತಿದಾರೆ. ಪ್ರಾಮಾಣಿಕವಾಗಿ ನ್ಯಾಯದ ಪರ ಕೆಲಸ ಮಾಡಲು ಬಂದ ಸಜ್ಜನರನ್ನೂ ಈ ಅಧಿಕಾರದ ಭ್ರಷ್ಟಾಚಾರಿಗಳು ಬೆದರಿಸುತ್ತದೆ. ಅಭಿಸಾರ್ ಶರ್ಮಾ, ರವೀಶ್ರಂತಹ ಯೂಟ್ಯೂಬ್ ಪತ್ರಕರ್ತರಿಗೂ ಹಣದ ಆಮಿಷ ಹಾಗೂ ಬೆದರಿಕೆಯನ್ನು ನೀಡಲಾಗಿತ್ತು. ಆದ್ರೆ… ಪತ್ರಿಕಾಧರ್ಮ ಪಾಲಕರಾದ ಪ್ರಾಮಾಣಿಕತೆಯ ಈ ಸುದ್ಧಿ ನಿರ್ವಾಹಕರು ಬೆದರಿಕೆ, ಆಮಿಶಕ್ಕೆ ತಲೆಬಾಗಲಿಲ್ಲ. ಸುಳ್ಳು ಇಂದು ವಿಜಯಿಯಾಗಿತ್ತಿದೆ.
ಈ ನಡುವೆ ರಾಹುಲ್ಗಾಂಧಿ ಎಂಬ ನಾಯಕನೂ ಚಕ್ರವ್ಯೂಹದ ಒಳಗೆ ನುಗ್ಗಿದ ಅಭಿಮನ್ಯುವಿನಂತೇ ಒಂಟಿಯಾಗಿ ತನ್ನ ವಿರೋಧಿಗಳೊಂದಿಗೆ ಕಾದಾಡುತ್ತಿದ್ದಾರೆ. ಚುನಾವಣಾ ಆಯೋಗವೂ ಇಂದು ಕುತಂತ್ರದಲ್ಲಿ ಭಾಗಿಯಾಗಿದೆ ಎಂಬ ಧ್ವನಿ ಎದ್ದಿದೆ. ಎಲ್ಲದರಲ್ಲೂ ಭ್ರಷ್ಟಾಚಾರವೇ ತುಂಬಿದೆ. ಆದರಿಂದಲೇ ಈ ದೇಶ ಉದ್ಧಾರ ಆಗಲಾರದು.
ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಅತ್ಯಾಚಾರಿ, ಕೊಲೆಗಾರರು ಜೈಲಿನಲ್ಲಿಯೂ ಮಸ್ತ್ ಮಜಾದಲ್ಲಿದ್ದಾರೆ. ಬುದ್ಧಿ ಮಾಂದ್ಯ, ಮಾತು ಬಾರದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಎಲ್ಲಾಡ್ರಗ್ಸ್’ನ ಮಹಿಮೆ. ಅಪರಾಧಿಗಳು ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕೊಲೆ ಮಾಡಿ ಮೆರೆದಾಡುವಂತಹ ಸ್ವಾತಂತ್ಯ್ರ ಈ ದೇಶದಲ್ಲಿದೆ. ರಾಜಕೀಯ ಪಕ್ಷದ ನಾಯಕರು ಪರಸ್ಪರ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಾರೆ. ಜನರ ಸಮಸ್ಯೆ, ಪರಿಹಾರ, ಕಷ್ಟ ಈ ರಾಜಕಾರಿಣಿಗಳ ಮೆದುಳಿಗೇ ಹೋಗುವುದಿಲ್ಲ. ಜನರಿಗಾಗಿ ಈ ನಾಯಕರು ಇರುವುದಲ್ಲ, ಅವರ ಅಂತಸ್ತು, ಸ್ಥಾನ ಗಟ್ಟಿ ಮಾಡಲೆಂದೇ ಧರ್ಮ ವಿರೋಧಿ ಹೇಳಿಕೆ ಕೊಡುತ್ತಾರೆ.
ಇಂದು ಧರ್ಮದ್ವೇಷದ ಹೇಳೀಕೆಯಲ್ಲಿ ಬಿಜೆಪಿಯ ಶಾಸಕ ಯತ್ನಾಳ್ ಸ್ವಲ್ಪ ಹೆಚ್ಚೇ ಮುಂದೆ ಹೋಗಿದ್ದಾರೆ. ಮುಸ್ಲಿಮ್ ಮಹಿಳೆಯರನ್ನು ಹಿಂದೂ ಪುರುಷರು ಮದ್ವೆ ಆಗಬೇಕೆಂದು ಹೇಳಿಕೆ ನೀಡಿದ್ದಾರೆ. ಯಾರನ್ನು ಯಾರು ಬೇಕಾದರೂ ಮದ್ವೆ ಆಗುವ ಹಕ್ಕು ಈ ದೇಶದ ಸಂವಿಧಾನವೇ ನೀಡಿದೆ. ಮೊದಲು ಈ ಯತ್ನಾಳ್ರವರು ದಲಿತ ಹೆಣ್ಣು ಮಕ್ಕಳನ್ನು ತಮ್ಮ ಸೊಸೆ ಆಗಿ ಮನೆ ತುಂಬಿಕೊಳ್ಳಲಿ. ಮುಸ್ಲಿಮ್ ಹುಡುಗಿಯರಿಗೆ ತಮ್ಮ ಸಮುದಾಯದಲ್ಲಿ ವರ’ಗಳ ಕೊರತೆ ಇಲ್ಲ. ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ, ಅಸ್ಪೃಶ್ಯತೆನೂ ಇಲ್ಲ.
ಈ ತಿಂಗಳಲ್ಲಿ ಶಿಕ್ಷಕರ ದಿನಾಚಣೆಯೂ ಬರುತ್ತಿದೆ. ಒಡಿಶಾದ ವಿದ್ಯಾರ್ಥಿನಿಯೋವಳಿಗೆ ಶಿಕ್ಷಕರೋರ್ವರು ನೀಡಿದ ಲೈಂಗಿಕ ಹಿಂಸೆಯ ವಿರುದ್ಧ ದೂರ ನೀಡಿದ್ದರೂ ಆಕೆಗೆ ನ್ಯಾಯ ಸಿಗದೇ ಆಕೆಯ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದಾಗ ಅವಳು ಆತ್ಮಹತ್ಯೆ ಮಾಡುತ್ತಾಳೆ. ಅವಳು ಬಿಜೆಪಿಯ ಎಲ್ಲಾ ಸಂಸದ, ಮುಖ್ಯಮಂತ್ರಿಯವರೆಗೂ ನ್ಯಾಯ’ ಬೇಡಿದ್ದಳು. ಆದ್ರೆ… ಆಕೆಯ ಮೊರೆ ಯಾರಿಗೂ ಕೇಳಿಸಲಿಲ್ಲ. ನಮ್ಮ ದ. ಕರಾವಳಿಯ ಕಾಲೇಜೊಂದರಲ್ಲಿ ಇಬ್ಬರು ಕಾಲೇಜ್ ಶಿಕ್ಷಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದರು. ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿಗಳು ಎಂಬ ಗೌರವ, ಇಂದು ಉಳಿದಿದೆಯೇ?! ಗುರುವೇ ಶಿಷ್ಯರ ಪಾಲಿಗೆ `ಅಪಾಯಕಾರಿ’ ಆಗುತ್ತಿದ್ದಾರೆ. ಕೋಮುದ್ವೇಷವನ್ನು ಹೆಚ್ಚು ಪ್ರಚಾರ ಮಾಡುವಲ್ಲಿಯೂ ಶಿಕ್ಷಕರ ಪಾಲು ಇದೆ. ಅಮಾಯಕ ಮಕ್ಕಳ ಮನಸ್ಸಿಗೆ ಧರ್ಮದ್ವೇಷಿ ಪಾಠ ಮಾಡುವವರ ವರ್ಗ ಹೆಚ್ಚುತ್ತಿದೆ. ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೋಧಿಸಬೇಕಾದ ಶಿಕ್ಷಕರು ಇಂದು ಆರ್ಎಸ್ಎಸ್ನ ಮುಖವಾಣಿಯಂತೇ ವರ್ತಿಸುತ್ತಿದ್ದಾರೆ. ಇಂತಹವರಿಂದ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ?
ಶಿಸ್ತು, ಗೌರವ, ಸೇವೆ, ಮಾನವೀಯತೆಗೆ ಮಾದರೀಯಾಗಿ ನಾನು ಸದಾ ಕ್ರೈಸ್ತರನ್ನು ಅಭಿನಂದಿಸುತ್ತೇನೆ. ಕಾನ್ವೆಂಟ್ ಶಾಲೆಯಲ್ಲಿ ನಾನಂದು ಕಲಿತ ಪಾಠವನ್ನು ಜೀವನದಲ್ಲಿ ಇಂದೂ ಪಾಲಿಸುತ್ತಿದ್ದೇನೆ.
ಇದು ಮಿಲಾದುನ್ನಬೀ ಪವಿತ್ರ ದಿನದ ತಿಂಗಳು. ನಾವು ಪ್ರವಾದಿಯವರನ್ನು(ಸ) ನಿಜವಾಗಿಯೂ ಪ್ರೀತಿಸುವುದಾದರೆ, ಗೌರವಿಸುವುದಾದರೆ ಅವರ ಜೀವನದ ಆದರ್ಶಗಳನ್ನು ಪಾಲಿಸುವಂತಾಗಬೇಕು. ಇತರ ಧರ್ಮೀಯರನ್ನು ಪ್ರೀತಿಸುವ, ಗೌರವಿಸುವ ವರ್ಗವಾಗಬೇಕು. ಅಶ್ಲೀಲ ಮಾತು, ಪದಗಳು ಉದುರಬಾರದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರಾಗಬೇಕು, ವ್ಯಭಿಚಾರ, ಮೋಸ, ಸುಳ್ಳಿನಿಂದ ಮುಕ್ತವಾಗಿರಬೇಕು.
ಪ್ರವಾದಿಯವರು(ಸ) ಹೇಳಿದರು, “ವಿಧವೆಯ ಮುಂದೆ ನಿಮ್ಮ ಪತ್ನಿಯೊಂದಿಗೆ ಸರಸವಾಡಬೇಡಿ, ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸ ಬೇಡಿರಿ, ಪರನಿಂದೆಯಿಂದ ದೂರವಿರಿ,” ಇಂತಹ ಮಾಣಿಕ್ಯದಂತಹ ಬೋಧನೆಯನ್ನು ಜನರು ಪಾಲಿಸಿದರೆ ಖಂಡಿತಾ ಒಳ್ಳೆಯವರಾಗಿ ಬದುಕಲು ಸಾಧ್ಯ. ಫೇಸ್ಬುಕ್, ವಾಟ್ಸ್ಅಪ್ಗಳಲ್ಲಿ ಅಶ್ಲೀಲ ಪದ, ಬೈದು ಕಮೆಂಟ್ ಹಾಕುವ ಯುವಕರಿಗೆ ಪ್ರವಾದಿವರ್ಯರ(ಸ) ಹೆಸರು ಹೇಳುವ ಯೋಗ್ಯತೆ ಕೂಡಾ ಇಲ್ಲ. ಸಮುದಾಯಕ್ಕೆ ಕಳಂಕ ತರುವ ವರ್ತನೆಗಳು ಸಲ್ಲದು. “ಯಾರದೇ ಧರ್ಮ, ಆಚರಣೆಯನ್ನು ಅಪಹಾಸ್ಯ ಮಾಡದಿರಿ” ಎಂದು ಪ್ರವಾದಿವರ್ಯರು(ಸ) ಹೇಳಿರುವುದನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು.