ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.
“ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.
“ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ”ಎಂದು ಹಾರೈಸಿದರು.